ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದ ಆಟಗಾರ್ತಿಯಾಗಿದ್ದೇ ತಪ್ಪಾ?

Last Updated 11 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಒಲಿಂಪಿಕ್ಸ್‌ಗೆ ತೆರಳುವ ಕ್ರೀಡಾಪಟುಗಳನ್ನು ಆಂಧ್ರಪ್ರದೇಶ ಸರ್ಕಾರ ಸನ್ಮಾನಿಸಿ ಶುಭ ಕೋರಿದೆ. ಕರ್ನಾಟಕದವಳಾಗಿದ್ದರೂ ನನ್ನನ್ನು ಅವರು ಸನ್ಮಾನಿಸಿದರು. ಆದರೆ ನಮ್ಮ ರಾಜ್ಯದಲ್ಲಿ ಇದುವರೆಗೆ ನನಗೆ ಒಂದು ಶುಭಾಶಯ ಕೂಡ ಹೇಳಿಲ್ಲ.  ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಕ್ಕೆ ಸಾಕ್ಷಿ ತೋರಿಸಿ ಎಂದು ನನ್ನ ತಂದೆಯನ್ನು ಕ್ರೀಡಾ ಇಲಾಖೆಯವರು ಕೇಳಿ ಮುಜುಗರ ಉಂಟು ಮಾಡಿದರು. ನಾನು ಕರ್ನಾಟಕದ ಆಟಗಾರ್ತಿಯಾಗಿದ್ದೇ ತಪ್ಪಾಯಿತಾ?~

-ನೋವಿನಿಂದ ಇಂತ ಪ್ರಶ್ನೆ ಕೇಳಿದ್ದು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಕರ್ನಾಟಕದ ಬ್ಯಾಡ್ಮಿಂಟನ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ. ಅವರು ಹೈದರಾಬಾದ್‌ನ ಜ್ವಾಲಾ ಗುಟ್ಟಾ ಜೊತೆಗೂಡಿ ಡಬಲ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ.

ಎರಡೂವರೆ ವರ್ಷದಿಂದ ವಿಶ್ವ ಮಹಿಳೆಯರ ಡಬಲ್ಸ್‌ನಲ್ಲಿ ಜೊತೆಗೂಡಿ ಆಡುತ್ತಿರುವ ಅಶ್ವಿನಿ ಹಾಗೂ ಜ್ವಾಲಾ ಮೂಡಿಸಿರುವ ಭರವಸೆ ಅದ್ಭುತ. ನವದೆಹಲಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿದ್ದ ಈ ಜೋಡಿ ಈಗ ಒಲಿಂಪಿಕ್ಸ್ ಪದಕದ ಮೇಲೆ ಕಣ್ಣಿಟ್ಟಿದೆ. 2011ರಲ್ಲಿ ಲಂಡನ್‌ನಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಡಬಲ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದು ಸ್ಮರಣೀಯ ಕ್ಷಣ.

ಏಕೆಂದರೆ 28 ವರ್ಷಗಳ ಬಳಿಕ ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ಪದಕ ತಂದುಕೊಟ್ಟ ಸಾಧನೆ ಅದು. ಅದಕ್ಕೂ ಮೊದಲು 1983ರಲ್ಲಿ ಡೆನ್ಮಾರ್ಕ್‌ನಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್‌ನ ಪುರುಷರ ಸಿಂಗಲ್ಸ್‌ನಲ್ಲಿ ಪ್ರಕಾಶ್ ಪಡುಕೋಣೆ ಕಂಚಿನ ಪದಕ ಜಯಿಸಿದ್ದರು. ಹಾಗಾಗಿ ಒಲಿಂಪಿಕ್ಸ್‌ನಲ್ಲಿ ಅವರ ಮೇಲೆ ನಿರೀಕ್ಷೆಯ ಭಾರವಿದೆ.

ತರಬೇತಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಹೈದರಾಬಾದ್‌ನಲ್ಲಿರುವ 23 ವರ್ಷ ವಯಸ್ಸಿನ ಅಶ್ವಿನಿ ರಾಷ್ಟ್ರೀಯ ಕೋಚ್ ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿ ಅಭ್ಯಾಸ ಪಡೆಯುತ್ತಿದ್ದಾರೆ. `ಪ್ರಜಾವಾಣಿ~ಗೆ ನೀಡಿದ ಸಂದರ್ಶನದಲ್ಲಿ ಅವರು ಹಲವು ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

* ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ನಿಮಗೆ ಕ್ರೀಡಾ ಇಲಾಖೆಯಿಂದ ಯಾವ ರೀತಿಯ ಪ್ರತಿಕ್ರಿಯೆ ಲಭಿಸಿದೆ?
ಸರ್ಕಾರ ಸಹಾಯ ಮಾಡುತ್ತೆ ಎಂದುಕೊಂಡು ನಾನು ಬ್ಯಾಡ್ಮಿಂಟನ್ ಅಂಗಳಕ್ಕೆ ಇಳಿದಿಲ್ಲ. ಯಾರ ನೆರವು ಇಲ್ಲದೇ ನಾನು ಈ ಹಂತಕ್ಕೆ ಬಂದು ತಲುಪಿದ್ದೇನೆ. ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪದಕ ಜಯಿಸಿದ್ದೇನೆ. ಎಲ್ಲಕ್ಕಿಂತ ಮುಖ್ಯವಾಗಿ ನಾನು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದೇನೆ. ಇದೆಲ್ಲಾ ಸರ್ಕಾರದ ನೆರವಿನಿಂದ ಆಗಿದ್ದೇ? ನನ್ನ ಪೋಷಕರೇ ನನಗೆ ಆಧಾರಸ್ತಂಭ. ಅವರಿಂದಾಗಿ ನಾನು ಈ ಮಟ್ಟಕ್ಕೆ ಬಂದು ತಲುಪಿದ್ದೇನೆ. ಹಾಗೇ, ಕೋಚ್‌ಗಳು ಹಾಗೂ ಸಹ ಆಟಗಾರರು ಕೂಡ ನನ್ನ ಈ ಬೆಳವಣಿಗೆಗೆ ಕಾರಣ.



* ಹೈದರಾಬಾದ್‌ನಲ್ಲಿ ನೆಲೆಸಿರುವ ಉದ್ದೇಶ?
ತರಬೇತಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ನಾನು ಹೈದರಾಬಾದ್‌ನಲ್ಲಿ ಇದ್ದೇನೆ. ಇಲ್ಲಿಯೇ ಕೋಚಿಂಗ್ ಶಿಬಿರಗಳು ನಡೆಯುತ್ತಿರುತ್ತವೆ. ಅತ್ಯುತ್ತಮ ಕೋಚ್‌ಗಳು ಇಲ್ಲಿದ್ದಾರೆ.

* ಒಲಿಂಪಿಕ್ಸ್‌ಗೆ ನಿಮ್ಮ ತರಬೇತಿ ಹೇಗಿದೆ?
ಇದು ನನ್ನ ಮೊದಲ ಒಲಿಂಪಿಕ್ಸ್. ಈ ಕ್ರೀಡಾ ಉತ್ಸವದಲ್ಲಿ ಪಾಲ್ಗೊಳ್ಳಲು ನನಗೆ ಒಂದು ಅವಕಾಶ ಸಿಕ್ಕಿದೆ. ಅದು ಸಹಜವಾಗಿಯೇ ನನ್ನಲ್ಲಿ ಖುಷಿ ಉಂಟು ಮಾಡಿದೆ. ನಾನು ಹಾಗೂ ಜ್ವಾಲಾ ಒಲಿಂಪಿಕ್ಸ್ ಉದ್ದೇಶ ಇಟ್ಟುಕೊಂಡೇ ತರಬೇತಿ ನಡೆಸುತ್ತಿದ್ದೇವೆ. ತರಬೇತಿ ಅಂತಿಮ ಹಂತದಲ್ಲಿದೆ. ಜುಲೈ 24ಕ್ಕೆ ನಾವಿಬ್ಬರೂ ಲಂಡನ್‌ಗೆ ತೆರಲಿದ್ದೇವೆ.

ಖುಷಿ ನೀಡಿದ ಕ್ಷಣ...
ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದು. ಅದೊಂದು ನನ್ನ ಬ್ಯಾಡ್ಮಿಂಟನ್ ಜೀವನಕ್ಕೆ ತಿರುವು ನೀಡಿದ ಕ್ಷಣ. ಇಂತಹ ಸಾಧನೆ ಮಾಡಲು ನನಗೆ ಸಾಧ್ಯವಾಯಿತಲ್ಲ ಎಂಬುದೇ ದೊಡ್ಡ ಖುಷಿ. ಇದೊಂದು ನನಗೆ ಸ್ಫೂರ್ತಿ ನೀಡಿದ ಕ್ಷಣ ಕೂಡ. ಈಗ ಒಲಿಂಪಿಕ್ಸ್ ನಮ್ಮ ಎದುರಿದೆ. ಈ ಬಾರಿ ಅದಕ್ಕಿಂತ ಉತ್ತಮ ಪದಕ ಜಯಿಸುವ ವಿಶ್ವಾಸದಲ್ಲಿ ನಾವಿದ್ದೇವೆ.ಆದರೆ ಅತಿಯಾದ ಭರವಸೆಯನ್ನೇನು ಇಟ್ಟುಕೊಂಡಿಲ್ಲ. ಜೊತೆಗೆ ಒತ್ತಡವಿರುವುದು ಸಹಜ. ಏಕೆಂದರೆ ಉತ್ತಮ ಪ್ರದರ್ಶನ ನೀಡಬೇಕೆಂದು ಪ್ರತಿಯೊಬ್ಬರೂ ನಿರೀಕ್ಷಿಸುತ್ತಾರೆ.

-ಅಶ್ವಿನಿ ಪೊನ್ನಪ್ಪ
* ಜ್ವಾಲಾ ಗುಟ್ಟಾ ಹಾಗೂ ನಿಮ್ಮ ನಡುವಿನ ಯಶಸ್ಸಿನ ಗುಟ್ಟೇನು?
* ಇಂಗ್ಲೆಂಡ್‌ನಲ್ಲಿ ಆಡಿದ ಅನುಭವ ನೆರವಿಗೆ ಬರಬಹುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT