ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದ ಗೆಲುವಿಗೆ ವೇದಿಕೆ ಸಜ್ಜು

ರಣಜಿ ಕ್ರಿಕೆಟ್‌: ನಾಯಕ ವಿನಯ್ ಕುಮಾರ್‌ ಚೊಚ್ಚಲ ಶತಕ, ಪಂಜಾಬ್‌ ಪರದಾಟ
Last Updated 16 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಿಕೆಟ್‌ ಕೀಪರ್‌ ಸಿ.ಎಂ.ಗೌತಮ್‌ ಬಲಕ್ಕೆ ಜಿಗಿದು ಚೆಂಡನ್ನು ಹಿಡಿತಕ್ಕೆ ತೆಗೆದುಕೊಂಡಾಗ ಪಂಜಾಬ್‌ ನಾಯಕ ಮನ್‌ದೀಪ್ ಸಿಂಗ್‌ ಪೆವಿಲಿಯನ್‌ ಕಡೆಗೆ ಭಾರವಾದ ಹೆಜ್ಜೆ ಇಟ್ಟುಕೊಂಡು ಬಂದರು. ಅವರು ಡ್ರೆಸಿಂಗ್‌ ಕೊಠಡಿ ಸೇರುವಾಗ ಯಾವ ಆಟಗಾರನ ಮುಖದಲ್ಲೂ ಕಳೆ ಇರಲಿಲ್ಲ. ಸೋಲಿನ ದವಡೆಯಲ್ಲಿ ಸಿಲುಕಿದ್ದ ತಂಡವನ್ನು ಕಾಪಾಡುವುದು ಅಸಾಧ್ಯ ಎಂಬುದು ಅವರಿಗೆ ಆಗಲೇ ಮನವರಿಕೆಯಾಗಿತ್ತು.

ಶತಕವೀರ ಮನೀಶ್‌ ಪಾಂಡೆ ಮತ್ತು ಅಮೋಘ ಆಟ ಪ್ರದರ್ಶಿಸಿದ ಕೆ.ಎಲ್‌.ರಾಹುಲ್‌ ಹಾಕಿಕೊಟ್ಟ ಭದ್ರ ಬುನಾದಿಯ ಮೇಲೆ ಚೊಚ್ಚಲ ಶತಕ ದೊಂದಿಗೆ ಭರವಸೆಯ ಮಹಲು ಕಟ್ಟಿದ ನಾಯಕ ವಿನಯ್‌ ಕುಮಾರ್‌ ಇಲ್ಲಿನ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ನಡೆಯುತ್ತಿರುವ ಎ ಗುಂಪಿನ ರಣಜಿ ಪಂದ್ಯದಲ್ಲಿ ಕರ್ನಾಟಕವನ್ನು ಹ್ಯಾಟ್ರಿಕ್‌ ಜಯದ ಹೊಸ್ತಿಲಿಗೆ ತಂದು ನಿಲ್ಲಿಸಿದ್ದಾರೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಮಂಗಳವಾರ ಆತಿಥೇಯರು ಜಯದ ಕೇಕೆ ಹಾಕಲಿದ್ದಾರೆ.

ದಾಂಪತ್ಯಕ್ಕೆ ಕಾಲಿಟ್ಟ ನಂತರ ಮೊದಲ ಪಂದ್ಯ ಆಡಿದ ಆರ್‌.ವಿನಯ್ ಕುಮಾರ್‌ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಗಳಿಸಿದ ಮೊದಲ ಶತಕ ಸೋಮವಾರದ ಆಟದ ಗಮನಾರ್ಹ ಅಂಶ. ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಿದ ವಿನಯ್‌ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಸಹಕಾರದಿಂದ ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿ ಗಳಿಸಿದ ಅಜೇಯ 105 ರನ್‌ಗಳ ಬೆಂಬಲ ದೊಂದಿಗೆ ಕರ್ನಾಟಕ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 505 ರನ್‌ ಗಳಿಸಿ ಭೋಜನ ವಿರಾಮದ ವೇಳೆ ಡಿಕ್ಲೇರ್‌ ಮಾಡಿಕೊಂಡಿತು. ಈ ಮೂಲಕ ತಂಡ 331 ರನ್‌ ಮುನ್ನಡೆ ಗಳಿಸಿತು.

ಬಿರು ಬಿಸಿಲಿನಲ್ಲೂ ರನ್‌ ಗುಡ್ಡದ ಮುಂದೆ ನಿಂತು ನಡುಗುತ್ತಲೇ ಕ್ರೀಸ್‌ಗೆ ಇಳಿದ ಪಂಜಾಬ್‌ ಮೂರನೇ ದಿನದಾಟ ಮುಕ್ತಾಯಗೊಂಡಾಗ 156 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಳೆದು ಕೊಂಡಿದ್ದು ಇನ್ನೂ 175 ರನ್‌ ಹಿಂದೆ ಉಳಿದಿದೆ.

ವಿನಯ್‌ ಮಿಂಚು
ಭಾನುವಾರ ತಂಡ 193 ರನ್‌ ಮುನ್ನಡೆ ಸಾಧಿಸಿದ್ದಾಗ ಕ್ರೀಸ್‌ ಬಿಟ್ಟಿದ್ದ ಕರ್ನಾಟಕದ ಬ್ಯಾಟ್ಸ್‌ಮನ್‌ಗಳು ಸೋಮವಾರ ಕನಿಷ್ಠ 300 ರನ್‌ ಮುನ್ನಡೆ ಗಳಿಸುವ ಸ್ಪಷ್ಟ ಗುರಿಯೊಂದಿಗೆ ಬ್ಯಾಟಿಂಗ್‌ ಮುಂದುವರಿಸಿದರು. ಸಂದೀಪ್ ಶರ್ಮಾ ಎಸೆದ ದಿನದ ಮೊದಲ ಓವರ್‌ನ ಎರಡನೇ ಎಸೆತವನ್ನು ಸ್ಟಿಯರ್‌ ಮಾಡಿ ಪಾಯಿಂಟ್‌ ಮೂಲಕ ಬೌಂಡರಿ ಗಳಿಸಿದ ವಿನಯ್‌ ನಾಲ್ಕನೇ ಎಸೆತದಲ್ಲಿ ಕವರ್‌ ಡ್ರೈವ್‌ ಮೂಲಕ ಮತ್ತೊಂದು ಬೌಂಡರಿ ಬಾರಿಸಿದರು; ತಂಡದ ಉದ್ದೇಶವನ್ನು ಬ್ಯಾಟ್‌ ಮೂಲಕ ಸಾರಿ ಹೇಳಿದರು. ಈ ಓವರ್‌ನಲ್ಲಿ ಒಟ್ಟು ಹತ್ತು ರನ್‌ ಕದ್ದು ತಂಡದ ಮುನ್ನಡೆಯನ್ನು 200 ದಾಟಿಸಿದರು.

ಮುಂದಿನ ಎರಡೂವರೆ ತಾಸು ವಿನಯ್‌ ಮೈದಾನದಲ್ಲಿ ಮಿಂಚು ಹರಿಸಿದರು. ಮಿಥುನ್‌, ಅಪ್ಪಣ್ಣ ಮತ್ತು ಶರತ್‌ ನೆರವು ಪಡೆದು ಬೌಲರ್‌ಗಳ ಮೇಲೆ ನಿರಂತರ ದಾಳಿ ನಡೆಸಿದ ‘ದಾವಣಗೆರೆ ಎಕ್ಸ್‌ಪ್ರೆಸ್‌’ 9ನೇ ವಿಕೆಟ್‌ ಬಿದ್ದ ನಂತರ ಎಚ್‌.ಎಸ್‌.ಶರತ್‌ ಅವರನ್ನು ಒಂದು ತುದಿಯಲ್ಲಿ ಉಳಿಸಿಕೊಂಡು ‘ಸಾಹಸ’ದ 37 ರನ್‌ ಗಳಿಸಿ ಶತಕ ಪೂರೈಸಿದರು.

ದಿನದ ಮೂರನೇ ಓವರ್‌ನಲ್ಲೇ ಉದಯ್‌ ಕೌಲ್‌ ಚುರುಕಿನ ಫೀಲ್ಡಿಂಗ್‌ಗೆ ಮಿಥುನ್‌ ರನೌಟ್‌ ಆದ ನಂತರ ಕೆ.ಪಿ.ಅಪ್ಪಣ್ಣ ಜೊತೆ 67 ರನ್‌ ಗಳನ್ನು ಸೇರಿಸಿದ ವಿನಯ್‌ ಆರು ಬಾರಿ ಚೆಂಡನ್ನು ಮೈದಾನದ ಆಚೆ ಅಟ್ಟಿ ವೈಯಕ್ತಿಕ ಬೌಂಡರಿಗಳ ಸಂಖ್ಯೆಯನ್ನು ಹತ್ತಕ್ಕೆ ಏರಿಸಿದರು. 134ನೇ ಓವರ್‌ನಲ್ಲಿ ಸ್ಪಿನ್ನರ್‌ ವಿ.ಎಂ.ಚೌಧರಿ ಎಸೆತವನ್ನು ಎರಡು ಹೆಜ್ಜೆ ಮುಂದೆ ನುಗ್ಗಿ ನೇರವಾಗಿ ಬಾರಿಸಿದ ಬೌಂಡರಿ ಹಾಗೂ 37ನೇ ಓವರ್‌ನಲ್ಲಿ ಗುರ್‌ ಕೀರತ್‌ ಸಿಂಗ್‌ ಎಸೆತವನ್ನು ರಿವರ್ಸ್‌ ಹಿಟ್‌ ಮೂಲಕ ಬೌಂಡರಿಗೆ ಅಟ್ಟಿದ ರೀತಿ ಪ್ರೇಕ್ಷಕರ ಮನದಿಂದ ಬೇಗ ಮಾಯವಾಗಲಾರದು.

99 ರನ್‌ ಗಳಿಸಿದ್ದಾಗ ಮನ್‌ಪ್ರೀತ್‌ ಗೋನಿ ಎಸೆತವನ್ನು ಸ್ಕ್ವೇರ್‌ಲೆಗ್‌ ಕ್ಷೇತ್ರಕ್ಕೆ ಡ್ರೈವ್ ಮಾಡಿ ಒಂಟಿ ರನ್‌ ಗಳಿಸಿದ ವಿನಯ್‌ ಹೆಲ್ಮೆಟ್‌ ತೆಗೆದು ಬ್ಯಾಟ್‌ ಎತ್ತಿ ಸಂಭ್ರಮಿಸಿದರು.

218 ನಿಮಿಷ ಕ್ರೀಸ್‌ನಲ್ಲಿದ್ದು 180 ಎಸೆತ ಎದುರಿಸಿದ ಅವರ ಈ ರನ್‌ ತಂಡದ ಮೊತ್ತವನ್ನು 500 ದಾಟಿಸಿತು. ಮೊದಲ ಅವಧಿಯ ಆಟ ಮುಕ್ತಾಯಗೊಳ್ಳಲು ಒಂದು ಓವರ್‌ ಬಾಕಿ ಇದ್ದಾಗ ವಿ.ಎಂ.ಚೌಧರಿ ಎಸೆತವನ್ನು ಫೈನ್‌ಲೆಗ್‌ಗೆ ಹುಕ್‌ ಮಾಡಿದ ವಿನಯ್‌, ಇನಿಂಗ್ಸ್‌ ಡಿಕ್ಲೇರ್‌ ಮಾಡಿಯೇ ಊಟಕ್ಕೆ ತೆರಳಿದರು.

ಸ್ಫೋಟಿಸಿದ ಅಪ್ಪಣ್ಣ
ನಾಯಕನ ಶತಕಕ್ಕೆ ಅಪ್ಪಣ್ಣ (45 ರನ್‌, 46 ಎಸೆತ, 8 ಬೌಂಡರಿ) ಕೂಡ ಉತ್ತಮ ಕಾಣಿಕೆ ನೀಡಿದರು. ಕ್ರೀಸ್‌ಗೆ ಬಂದ ನಂತರ ಎರಡನೇ ಓವರ್‌ನಲ್ಲೇ ವೇಗಿ ಸಂದೀಪ್‌ ಶರ್ಮಾಗೆ ಎರಡು ಬೌಂಡರಿ ಬಾರಿಸಿದ ಅವರು ಇದೇ ಬೌಲರ್‌ನ ಮುಂದಿನ ಓವರ್‌ನಲ್ಲಿ ಪಂಚ್‌ ಮತ್ತು ಫ್ಲಿಕ್‌ ಮೂಲಕ ಎರಡು ಬಾರಿ ಚೆಂಡನ್ನು ಗಡಿಯಿಂದ ಹೊರಗೆ ದಾಟಿಸಿದರು. ಒಂದಿಂಚೂ ಕದಲದೆ ಥರ್ಡ್‌ಮ್ಯಾನ್‌ಗೆ ಚೆಂಡನ್ನು ಡ್ರಾಪ್‌ ಮಾಡಿ ಬೌಂಡರಿ ಬಾರಿಸಿದ ಅವರ ಡ್ರೈವ್‌ಗಳು ಕೂಡ ಗಮನ ಸೆಳೆದವು. ಆದರೆ ಎಡಗೈ ಸ್ಪಿನ್ನರ್‌ ಚೌಧರಿ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ವಿಕೆಟ್‌ ಕಳೆದುಕೊಂಡರು.

ಮಿಥುನ್‌ ಬಿರುಗಾಳಿ
ಪಂಜಾಬ್‌ನ ಎರಡನೇ ಇನಿಂಗ್ಸ್‌ನಲ್ಲಿ ಆರಂಭದಲ್ಲೇ ನಡುಕ ಹುಟ್ಟಿಸುವಂತೆ ಮಾಡಿದ್ದು ವೇಗಿ ಅಭಿಮನ್ಯು ಮಿಥುನ್‌. ಇನಿಂಗ್ಸ್‌ನ ಆರನೇ ಓವರ್‌ನಲ್ಲಿ ಮೊದಲ ವಿಕೆಟ್‌ ಎಚ್‌.ಎಸ್‌.ಶರತ್‌ ಕಬಳಿಸಿದರು. ಆದರೆ ಅಪಾಯಕಾರಿ ಜೀವನ್‌ ಜ್ಯೋತ್‌ ಸಿಂಗ್‌ ಸೇರಿದಂತೆ ಪ್ರಮುಖ ಮೂರು ವಿಕೆಟ್‌ ಉರುಳಿಸಿದ್ದು ಮಿಥುನ್‌. ಒಂಬತ್ತನೇ ಓವರ್‌ನಲ್ಲಿ ಶಾರ್ಟ್‌ ಬಾಲ್‌ ಎಸೆದು ಎಡಗೈ ಬ್ಯಾಟ್ಸ್‌ಮನ್‌ ಉದಯ್‌ ಕೌಲ್‌ ಅವರನ್ನು ಶಾರ್ಟ್‌ಲೆಗ್‌ನಲ್ಲಿದ್ದ ಗಣೇಶ್‌ ಸತೀಶ್ ಕೈಗಳಿಗೆ ತಲುಪಿಸಿದ ಮಿಥುನ್‌ 13ನೇ ಓವರ್‌ನಲ್ಲಿ ನಾಯಕ ಮನ್‌ದೀಪ್‌ ವಿಕೆಟ್‌ ಕಬಳಿಸಿದರು. ಜೀವನ್‌ಜ್ಯೋತ್‌ ಸಿಂಗ್‌ ಅವರನ್ನು ಎಲ್‌ಬಿಡಬ್ಲ್ಯುಗೆ ಕೆಡವಿದಾಗ ಸಹ ಆಟಗಾರರ ಸಂಭ್ರಮ ಮುಗಿಲು ಮುಟ್ಟಿತ್ತು. ಫುಲ್‌ ಲೆಂಗ್ತ್‌ ಎಸೆತವನ್ನು ಬ್ಯಾಕ್‌ಫುಟ್‌ನಲ್ಲಿ ಆಡಲು ಶ್ರಮಿಸಿದ ಜೀವನ್‌ಜ್ಯೋತ್‌ ಸಿಂಗ್‌ ಪ್ಯಾಡ್‌ಗೆ ಚೆಂಡು ಮುತ್ತಿಕ್ಕಿದಾಗ ಕೈ ಮೇಲೆತ್ತಲು ಅಂಪೈರ್‌ ಸುರೇಶ್‌ ಶಾಸ್ತ್ರಿ ಒಂದು ಕ್ಷಣವೂ ಯೋಚಿಸಲಿಲ್ಲ. ಇನಿಂಗ್ಸ್‌ನ 44ನೇ ಓವರ್‌ನಲ್ಲಿ ತರುವಾರ್‌ ಕೊಹ್ಲಿ ಆಫ್‌ಸ್ಟಂಪ್‌ ಎಗರಿಸಿದ ವಿನಯ್‌ ಕುಮಾರ್‌ ಅಂತಿಮ ದಿನದ ಕೆಲಸವನ್ನು ಇನ್ನಷ್ಟು ಸುಲಭಗೊಳಿಸಿದ್ದು ಅರ್ಧಶತಕ (56 ರನ್‌; 74 ಎಸೆತ, 7 ಬೌಂಡರಿ) ಬಾರಿಸಿರುವ ಗುರ್‌ಕೀರತ್‌ ಸಿಂಗ್‌ ಮೇಲೆ ಪಂಜಾಬ್‌ ಇರಿಸಿರುವ ಭರವಸೆಯನ್ನು ಕರ್ನಾಟಕ ಎಷ್ಟು ಬೇಗ ಭಗ್ನಗೊಳಿಸುತ್ತದೆ ಎಂಬುದು ಮಾತ್ರ ಕೊನೆಯ ದಿನದ ಕುತೂಹಲ.

ಮತ್ತೊಂದು ಸುದ್ದಿ...
*ರಿಚಾ ಅದೃಷ್ಟಕ್ಕೆ ಒಲಿದ ಶತಕ


ಸ್ಕೋರ್ ವಿವರ
ಪಂಜಾಬ್‌ ಮೊದಲ ಇನಿಂಗ್ಸ್‌ 174

ಕರ್ನಾಟಕ ಮೊದಲ ಇನಿಂಗ್ಸ್‌: 156 ಓವರ್‌ಗಳಲ್ಲಿ
9 ವಿಕೆಟ್‌ಗಳಿಗೆ 505 ಡಿಕ್ಲೇರ್‌
(ಭಾನುವಾರ 117 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 367)
ವಿನಯ್‌ ಕುಮಾರ್‌ ನಾಟೌಟ್‌ 105
ಅಭಿಮನ್ಯು ಮಿಥುನ್‌ ರನೌಟ್‌ ಉದಯ್‌ ಕೌಲ್‌  12
ಕೆ.ಪಿ.ಅಪ್ಪಣ್ಣ ಬೌಲ್ಡ್‌ ವಿ.ಎಂ.ಚೌಧರಿ  45
ಎಚ್‌.ಎಸ್‌.ಶರತ್‌ ನಾಟೌಟ್‌  12
ಇತರೆ: (ನೋಬಾಲ್‌–6, ವೈಡ್‌–2, ಲೆಗ್‌ಬೈ–6)  14
ವಿಕೆಟ್‌ ಪತನ: 8–382 (ಅಭಿಮನ್ಯು ಮಿಥುನ್‌, 119.2), 9–449 (ಕೆ.ಪಿ.ಅಪ್ಪಣ್ಣ, 131.2)
ಬೌಲಿಂಗ್‌: ಸಂದೀಪ್‌ ಶರ್ಮಾ 33–3–121–1 (1ನೋಬಾಲ್‌), ವಿ.ಆರ್‌.ವಿ.ಸಿಂಗ್‌ 27–4–83–1 (2 ನೋಬಾಲ್‌, 1 ವೈಡ್‌), ತರುವಾರ್‌ ಕೊಹ್ಲಿ 11–2–42–0, ಮನ್‌ಪ್ರೀತ್‌ ಗೋನಿ 41–4–98–3 (3 ನೋಬಾಲ್‌, 1 ವೈಡ್‌), ವಿ.ಎಂ.ಚೌಧರಿ 39–6–112–1, ಗುರ್‌ಕೀರತ್‌ ಸಿಂಗ್‌ ಮಾನ್‌ 15–1–43–2
ಪಂಜಾಬ್‌ ಎರಡನೇ ಇನಿಂಗ್ಸ್‌ 51 ಓವರ್‌ಗಳಲ್ಲಿ
5 ವಿಕೆಟ್‌ಗಳಿಗೆ 156
ಎಂ.ಎಸ್‌.ವೊಹ್ರಾ ಸಿ ಗಣೇಶ್‌ ಸತೀಶ್‌ ಬಿ. ಎಚ್‌.ಎಸ್‌.ಶರತ್‌  4
ಜೀವನ್‌ಜ್ಯೋತ್‌ ಸಿಂಗ್‌ ಎಲ್‌ಬಿಡಬ್ಲ್ಯು ಮಿಥುನ್‌  32
ಉದಯ್‌ ಕೌಲ್‌ ಸಿ ಗಣೇಶ್‌ ಸತೀಶ್‌ ಬಿ. ಅಭಿಮನ್ಯು ಮಿಥುನ್‌  3
ಮನ್‌ದೀಪ್‌ ಸಿಂಗ್‌ ಸಿ ಸಿ.ಎಂ.ಗೌತಮ್‌ ಬಿ. ಮಿಥುನ್‌  12
ತರುವಾರ್‌ ಕೊಹ್ಲಿ ಬಿ  ವಿನಯ್‌ ಕುಮಾರ್‌  30
ಗುರ್‌ಕೀರತ್‌ ಸಿಂಗ್‌ ಬ್ಯಾಟಿಂಗ್‌  56
ಜಿ.ಎಚ್‌.ಖೇರಾ ಬ್ಯಾಟಿಂಗ್‌  13
ಇತರೆ: (ಬೈ 4, ನೋಬಾಲ್‌ 2)  06
ವಿಕೆಟ್‌ ಪತನ: 1–18 (ಎಂ.ಎಸ್‌.ವೊಹ್ರಾ, 5.1), 2–21 (ಉದಯ್‌ ಕೌಲ್‌, 8.1), 3–35 (ಮನ್‌ದೀಪ್‌ ಸಿಂಗ್‌, 12.2), 4–72 (ಜೀವನ್‌ಜ್ಯೋತ್‌ ಸಿಂಗ್‌, 26.1), 5–115 (ತರುವಾರ್‌ ಕೊಹ್ಲಿ, 43.3).
ಬೌಲಿಂಗ್‌: ಆರ್‌.ವಿನಯ್‌ ಕುಮಾರ್‌ 10–3–25–1, ಅಭಿಮನ್ಯು ಮಿಥುನ್‌ 11–3–26–3 (1 ನೋಬಾಲ್‌), ಎಚ್‌.ಎಸ್‌.ಶರತ್‌ 13–39–1, ಸ್ಟುವರ್ಟ್‌ ಬಿನ್ನಿ 7–1–28–0, ಕೆ.ಪಿ.ಅಪ್ಪಣ್ಣ 9–3–25–0 (1 ನೋಬಾಲ್‌), ಕರುಣ್‌ ನಾಯರ್‌ 1–0–9–0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT