ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದ ಟೆನಿಸ್ ಬದಲಾವಣೆಯ ಗಾಳಿ

Last Updated 7 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ರೋಜರ್ ಫೆಡರರ್, ರಫೆಲ್ ನಡಾಲ್, ಮರಿಯಾ ಶರ್ಪೋವಾ... ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಗಳಲ್ಲಿ ಈ ಘಟಾನುಘಟಿ ಸ್ಪರ್ಧಿಗಳ ಆಟ ನೋಡುವುದೇ ಚೆಂದ. ಟೆನಿಸ್ ಕ್ರೀಡೆಯ ಸೌಂದರ್ಯವನ್ನು ಇವರು ತಮ್ಮ ಆಟದ ಮೂಲಕ ಮತ್ತಷ್ಟು ಹೆಚ್ಚಿಸಿದ್ದಾರೆ.

ಗ್ರ್ಯಾನ್‌ಸ್ಲಾಮ್ ಟೂರ್ನಿ ಸಂದರ್ಭ ಭಾರತದ ಟೆನಿಸ್ ಪ್ರೇಮಿಗಳು ಕೂಡಾ ಫೆಡರರ್, ನಡಾಲ್, ಶರ್ಪೋವಾ ಅಥವಾ ಸೆರೆನಾ ವಿಲಿಯಮ್ಸಗೆ ಬೆಂಬಲ ಸೂಚಿಸುವರು. ಏಕೆಂದರೆ ಇಂತಹ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ತಾಕತ್ತು ಹೊಂದಿರುವ ಸ್ಪರ್ಧಿ ಭಾರತದಲ್ಲಿ ಇಲ್ಲ. ಈ ಕಾರಣ ವಿದೇಶದ ಆಟಗಾರ ಅಥವಾ ಆಟಗಾರ್ತಿಯರಿಗೆ ಬೆಂಬಲ ನೀಡುವ ಅನಿವಾರ್ಯತೆ ಇದೆ.

ಲಿಯಾಂಡರ್ ಪೇಸ್, ಮಹೇಶ್ ಭೂಪತಿ ಮತ್ತು ರೋಹನ್ ಬೋಪಣ್ಣ ಡಬಲ್ಸ್ ವಿಭಾಗದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಸಿಂಗಲ್ಸ್‌ನಲ್ಲಿ ಭಾರತ ತೀರಾ ಹಿಂದೆ ಉಳಿದುಕೊಂಡಿದೆ. ಆದರೆ ಇದಕ್ಕಾಗಿ ನಿರಾಸೆ ಹೊಂದಬೇಕಿಲ್ಲ. ಮುಂದಿನ ದಿನಗಳಲ್ಲಿ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚು ಹರಿಸುವ ತಾಕತ್ತು ಹೊಂದಿರುವ ಯುವ ಆಟಗಾರು ಇಲ್ಲಿ ಬೆಳೆದುಬರುತ್ತಿದ್ದಾರೆ. ಅದರಲ್ಲಿ ಕರ್ನಾಟಕದ ಸ್ಪರ್ಧಿಗಳೂ ಸಾಕಷ್ಟು ಸಂಖ್ಯೆಯಲ್ಲಿರುವುದು ಸಂತಸದ ಸಂಗತಿ.

ಈಗ ಸುದ್ದಿಯಲ್ಲಿರುವ ರಾಜ್ಯದ ಟೆನಿಸ್ ಆಟಗಾರನೆಂದರೆ ರೋಹನ್ ಬೋಪಣ್ಣ. ಕೊಡಗಿನ ಈ ಆಟಗಾರ ಲಂಡನ್ ಒಲಿಂಪಿಕ್ಸ್‌ನ ಡಬಲ್ಸ್‌ನಲ್ಲಿ ಮಹೇಶ್ ಭೂಪತಿ ಜೊತೆ ಆಡಿದ್ದರು. ಚೆನ್ನೈ ಮೂಲದ ಭೂಪತಿ ಕೂಡಾ ಹಲವು ವರ್ಷಗಳಿಂದ ಬೆಂಗಳೂರಿನಲ್ಲೇ ನೆಲೆಸಿದ್ದಾರೆ.

ರಾಜ್ಯದ ಇವರಿಬ್ಬರು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದರೆ, ಇದೇ ಹಾದಿಯಲ್ಲಿ ಮುನ್ನಡೆಯುವ ವಿಶ್ವಾಸವನ್ನು ಇತರ ಹಲವರು ಮೂಡಿಸಿರುವರು. ಜೂನಿಯರ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಬಿ.ಆರ್. ನಿಕ್ಷೇಪ್, ಸೂರಜ್ ಪ್ರಭೋದ್ ಈಗಾಗಲೇ ಸಾಕಷ್ಟು ಪ್ರಶಸ್ತಿಗಳನ್ನು ಕೂಡಿಹಾಕಿದ್ದಾರೆ.

ರಾಜ್ಯದ ಯುವ ಆಟಗಾರರ ಜೊತೆ ಆಟಗಾರ್ತಿಯರೂ ಸುದ್ದಿಮಾಡುತ್ತಿದ್ದಾರೆ. ಭಾರತದ ಮಹಿಳಾ ಟೆನಿಸ್‌ನಲ್ಲಿ ಕಳೆದ ಒಂದು ದಶಕದಿಂದ ಕೇಳಿಬರುತ್ತಿರುವ ಏಕೈಕ ಹೆಸರು ಸಾನಿಯಾ ಮಿರ್ಜಾ ಅವರದ್ದು ಮಾತ್ರ. ಅವರ ಹಾದಿಯಲ್ಲಿ ಸಾಗಲು ಭಾರತದ ಇತರ ಯಾರಿಗೂ ಸಾಧ್ಯವಾಗಿಲ್ಲ.

ಆದರೆ ಸಾನಿಯಾ ಅವರಂತೆ ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ಆಡಬೇಕೆಂಬ ಕನಸು ಹೊತ್ತುಕೊಂಡಿರುವ ಸಾಕಷ್ಟು ಯುವ ಆಟಗಾರ್ತಿಯರು ರಾಜ್ಯದಲ್ಲಿದ್ದಾರೆ. ಪೂಜಾಶ್ರೀ ವೆಂಕಟೇಶ್, ಸ್ಫೂರ್ತಿ ಶಿವಲಿಂಗಯ್ಯ, ಶರ್ಮದಾ ಬಾಲು, ವಾರುಣ್ಯ ಚಂದ್ರಶೇಖರ್... ಪಟ್ಟಿ ಹೀಗೆಯೇ ಬೆಳೆಯುತ್ತದೆ. ಇವರಲ್ಲಿ ಎಲ್ಲರಿಗೂ ಸಾನಿಯಾ ಏರಿದಷ್ಟು ಎತ್ತರಕ್ಕೇರಲು ಸಾಧ್ಯವಿಲ್ಲ. ಆದರೆ, ಕೆಲವರಾದರೂ ಅಂತಹ ಭರವಸೆ ಮೂಡಿಸಿದ್ದಾರೆ.

ಇಂದಿನ ದಿನಗಳಲ್ಲಿ ಟೆನಿಸ್ ಅಕಾಡೆಮಿಗಳ ಸಂಖ್ಯೆ ಹೆಚ್ಚುತ್ತಿರುವುದು ಕೂಡಾ ಯುವ ಸ್ಪರ್ಧಿಗಳಿಗೆ ನೆರವು ನೀಡಿದೆ. ಈ ಹಿಂದೆ ಟೆನಿಸ್ ಚಟುವಟಿಕೆಗಳು ಬೆಂಗಳೂರಿಗೆ ಮಾತ್ರ ಸೀಮಿತಗೊಂಡಿದ್ದವು.

ಈಗ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಟೆನಿಸ್‌ಅನ್ನು ಜನಪ್ರಿಯಗೊಳಿಸುವ ಕೆಲಸ ನಡೆಯುತ್ತಿದೆ. ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್‌ಎಲ್‌ಟಿಎ) ಅದಕ್ಕಾಗಿ ವಿಶೇಷ ಯೋಜನೆಗಳನ್ನು ರೂಪಿಸುತ್ತಿವೆ.

ಈ ಬಾರಿ ಐಟಿಎಫ್ ಕ್ಯಾಲೆಂಡರಿನ 10 ಟೂರ್ನಿಗಳನ್ನು ನಡೆಸುವ ಅವಕಾಶ ಕರ್ನಾಟಕಕ್ಕೆ ಲಭಿಸಿರುವುದು ಕೂಡಾ ಪ್ರಮುಖ ಬೆಳವಣಿಗೆ. ಅಂತರರಾಷ್ಟ್ರೀಯ ಟೆನಿಸ್ ವೇಳಾಪಟ್ಟಿಯಲ್ಲಿ ಕರ್ನಾಟಕವನ್ನೂ ಪ್ರಮುಖ ಕೇಂದ್ರವನ್ನಾಗಿಸುವುದು ಕೆಎಸ್‌ಎಲ್‌ಟಿಎಯ ಗುರಿ. ಐಟಿಎಫ್ ಟೂರ್ನಿಯ ಆತಿಥ್ಯ ದೊರೆತಿರುವುದು ಆ ನಿಟ್ಟಿನಲ್ಲಿ ಲಭಿಸಿದ ಬಲುದೊಡ್ಡ ಯಶಸ್ಸು ಎನ್ನಬಹುದು.

ಐಟಿಎಫ್ ಟೆನಿಸ್ ಟೂರ್ನಿಗಳು ಮಂಡ್ಯ, ಮೈಸೂರು, ಬೆಂಗಳೂರು, ಬೀದರ್ ಮತ್ತು ಗುಲ್ಬರ್ಗದಲ್ಲಿ ಈಗಾಗಲೇ ನಡೆದಿವೆ. ದಾವಣಗೆರೆ, ಧಾರವಾಡ, ಬೆಳಗಾವಿ, ಉಡುಪಿ ಮತ್ತು ಶಿವಮೊಗ್ಗದಲ್ಲಿ ಮುಂದಿನ ದಿನಗಳಲ್ಲಿ ಈ ಟೂರ್ನಿ ನಡೆಯಲಿವೆ.

ಇಂತಹ ಟೂರ್ನಿಗಳನ್ನು ನಡೆಸಲು ಸುಸಜ್ಜಿತ ಕೋರ್ಟ್‌ಗಳು ಅತ್ಯಗತ್ಯ. ಇದೀಗ ರಾಜ್ಯದ ಹೆಚ್ಚಿನ ಜಿಲ್ಲಾ ಕೇಂದ್ರಗಳು ಅಂತರರಾಷ್ಟ್ರೀಯ ಗುಣಮಟ್ಟದ ಕೋರ್ಟ್‌ಗಳನ್ನು ಹೊಂದಿವೆ. ಅದೇ ರೀತಿ ಪ್ರಮುಖ ಕಾಲೇಜುಗಳು ಕೂಡಾ ತನ್ನದೇ ಆದ ಟೆನಿಸ್ ಕೋರ್ಟ್‌ಗಳನ್ನು ಹೊಂದುತ್ತಿರುವುದು ಒಳ್ಳೆಯ ಬೆಳವಣಿಗೆ.

ಇತ್ತೀಚಿನ ವರ್ಷಗಳಲ್ಲಿ ರಾಜ್ಯದ ಟೆನಿಸ್‌ನಲ್ಲಿ ಸಾಕಷ್ಟು ಬದಲಾವಣೆ ಕಂಡುಬಂದಿದೆ. ಟೆನಿಸ್ ಆಟಗಾರ ಅಥವಾ ಆಟಗಾರ್ತಿಯಾಗುವ ಕನಸು ಹೊಂದಿರುವವರಿಗೆ ಉತ್ತಮ ಸೌಲಭ್ಯ, ಸೂಕ್ತ ಬೆಂಬಲ ಲಭಿಸುತ್ತಿವೆ ಎಂಬುದು ಮಾಜಿ ಡೇವಿಸ್ ಕಪ್ ಆಟಗಾರ ಪ್ರಹ್ಲಾದ್ ಶ್ರೀನಾಥ್ ಅಭಿಪ್ರಾಯ.

`ನಾವು ಟೆನಿಸ್ ಆಟ ಆರಂಭಿಸಿದ್ದ ಸಂದರ್ಭಕ್ಕೆ ಹೋಲಿಸಿದರೆ, ಈಗ ಹೆಚ್ಚಿನ ಸೌಲಭ್ಯ ಲಭಿಸುತ್ತಿವೆ. ಆದರೆ ಇದರಲ್ಲಿ ಇನ್ನೂ ಸುಧಾರಣೆಗೆ ಅವಕಾಶವಿದೆ~ ಎಂದು ಬೆಂಗಳೂರಿನಲ್ಲಿ ಟೆನಿಸ್ ಅಕಾಡೆಮಿ ನಡೆಸುತ್ತಿರುವ ಶ್ರೀನಾಥ್ ನುಡಿಯುವರು.

`ರಾಜ್ಯದಲ್ಲಿ ನಡೆಯುವ ಐಟಿಎಫ್ ಮತ್ತು ಎಐಟಿಎ ಟೂರ್ನಿಗಳ ಸಂಖ್ಯೆ ಹೆಚ್ಚುತ್ತಿವೆ. ಜೂನಿಯರ್ ವಿಭಾಗದಲ್ಲಿ 10-12 ಟೂರ್ನಿಗಳು ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ.

ಇಂತಹ ಟೂರ್ನಿಗಳಲ್ಲಿ ಆಡಲು ಆಗಮಿಸುವ ಇತರ ರಾಜ್ಯಗಳ ಹಾಗೂ ವಿದೇಶದ ಸ್ಪರ್ಧಿಗಳಿಗೆ ಉತ್ತಮ ಸೌಲಭ್ಯ ಕಲ್ಪಿಸಬೇಕು. ಹಾಗಾದಲ್ಲಿ ಅವರು ಮತ್ತೆ ಇಲ್ಲಿ ಆಡಲು ಇಷ್ಟಪಡುವರು~ ಎಂಬುದು ಅವರ ಹೇಳಿಕೆ.

`ಯುವ ಆಟಗಾರರು ಕನಸು ಕಾಣುವುದನ್ನು ಬಿಟ್ಟು ಕಠಿಣ ಪರಿಶ್ರಮ ನಡೆಸಬೇಕು. ಒಂದೆರಡು ವರ್ಷಗಳಲ್ಲೇ ಚಾಂಪಿಯನ್ ಆಗಬೇಕೆಂಬುದು ಹೆಚ್ಚಿನವರ ಬಯಕೆ. ಆದರೆ ಅದು ಸುಲಭವಲ್ಲ~ ಎಂಬುದು ಯುವ ಸ್ಪರ್ಧಿಗಳಿಗೆ ಅವರು ನೀಡುವ ಸಂದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT