ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದ ವನಿತೆಯರಿಗೆ ಎರಡನೇ ಸ್ಥಾನ

Last Updated 18 ಏಪ್ರಿಲ್ 2011, 19:15 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಮಹಿಳಾ ತಂಡದವರು ಚೆನ್ನೈನಲ್ಲಿ ಭಾನುವಾರ ಮುಕ್ತಾಯವಾದ 56ನೇ ರಾಷ್ಟ್ರೀಯ ಸೀನಿಯರ್ ಬಾಲ್‌ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್ ಅಪ್ ಸ್ಥಾನ ಪಡೆದುಕೊಂಡರು.ಚೆನ್ನೈನ ಸೇಂಟ್ ಜೋಸೆಫ್  ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ನಡೆದ ಈ ಕೂಟದ ಆರಂಭದಿಂದಲೂ ಅತ್ಯುತ್ತಮ ಸಾಮರ್ಥ್ಯ ತೋರಿದ್ದ ಕರ್ನಾಟಕದ ವನಿತೆಯರು ಫೈನಲ್ ಪಂದ್ಯದಲ್ಲಿ ತಮಿಳುನಾಡಿನ ಎದುರು 29-22, 20-29, 3-29 ರಿಂದ ಸೋಲನುಭವಿಸಿ, ಕಳೆದ ವರ್ಷ ತಾವೇ ಗೆದ್ದಿದ್ದ ಟ್ರೋಫಿಯನ್ನು ಈ ಸಲ ಆತಿಥೇಯರಿಗೆ ಒಪ್ಪಿಸಬೇಕಾಯಿತು.

ಕರ್ನಾಟಕದ ಆಟಗಾರ್ತಿಯರು ಲೀಗ್ ಹಂತದಲ್ಲಿ ಜಾರ್ಖಂಡ್, ಉತ್ತರಾಂಚಲ್, ಹರಿಯಾಣ ಮತ್ತು ಚಂಡೀಗಡ ತಂಡಗಳಲ್ಲಿ ಲೀಲಾಜಾಲವಾಗಿ ಸೋಲಿಸಿ ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿದರು. ಎಂಟರ ಘಟ್ಟದಲ್ಲಿ ಕೂಡಾ ಹೈದರಾಬಾದ್ ವಿರುದ್ಧ 29-6, 29-5ರಿಂದ ನಿರಾಯಾಸವಾಗಿ ಗೆದ್ದ ಕರ್ನಾಟಕ, ಸೆಮಿಫೈನಲ್‌ನಲ್ಲಿ ಪ್ರಬಲ ಆಂಧ್ರ ತಂಡವನ್ನು 29-11, 29-1ರಿಂದ ಮಣ್ಣು ಮುಕ್ಕಿಸಿದ್ದರು.

ಮೂಡುಬಿದಿರೆಯ ಕೋಚ್ ಕೆ.ಪ್ರವೀಣ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಮಂಗಳೂರು ವಿವಿ ತಂಡ ಕಳೆದ ವರ್ಷ ಅಖಿಲ ಭಾರತ ಅಂತರ ವಿವಿ ಬಾಲ್‌ಬ್ಯಾಡ್ಮಿಂಟನ್ ಪ್ರಶಸ್ತಿ ಗೆದ್ದಿದ್ದು, ಅವರೇ ರೂಪಿಸಿದ್ದ ಕರ್ನಾಟಕ ರಾಜ್ಯ ತಂಡ ಕಳೆದ ವರ್ಷ ದಶಕದ ನಂತರ ಮೊದಲ ಬಾರಿಗೆ ರಾಜ್ಯಕ್ಕೆ ಟ್ರೋಫಿಯನ್ನು ಗೆದ್ದು ತಂದಿತ್ತು.

“ಅಂತಹ ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದ ತಂಡದಲ್ಲಿದ್ದ ಪ್ರಮುಖ ಆಟಗಾರ್ತಿಯರಾದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸವಿತಾ, ರೇಖಾ ಮತ್ತು ಸ್ಫೂರ್ತಿ ಈ ಸಲ ಮಂಗಳೂರು ವಿವಿ ಪರೀಕ್ಷೆಗೆ ಸಿದ್ಧಗೊಳ್ಳುತ್ತಿದ್ದುದರಿಂದ ಚೆನ್ನೈಗೆ ಬರಲಿಲ್ಲ. ಹೀಗಾಗಿ ಅಂತಿಮ ಪಂದ್ಯದಲ್ಲಿ ಅನುಭವಿ ಆಟಗಾರ್ತಿಯರ ಕೊರತೆಯಿಂದ ಕರ್ನಾಟಕ ನಿರಾಸೆ ಅನುಭವಿಸುವಂತಾಯಿತು” ಎಂದು ಕೋಚ್ ಪ್ರವೀಣ್ ಕುಮಾರ್ ತಿಳಿಸಿದ್ದಾರೆ.

ಪೂರ್ಣಿಮಾಗೆ ‘ಹ್ರಾಟ್ರಿಕ್’: ಈ ಕೂಟದಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಿದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಜಿ ಎಸ್ ಪೂರ್ಣಿಮಾ ಸತತ ಮೂರನೇ ಸಲ ‘ಸ್ಟಾರ್ ಆಫ್ ಇಂಡಿಯಾ’ ಪ್ರಶಸ್ತಿ ಗೆದ್ದುಕೊಂಡ ಹೆಗ್ಗಳಿಕೆಗೆ ಪಾತ್ರರಾದರು.ಪುರುಷರ ವಿಭಾಗದಲ್ಲಿ ಕರ್ನಾಟಕದವರು ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಕರ್ನಾಟಕದ ಕೆನರಾ ಬ್ಯಾಂಕ್ ಉದ್ಯೋಗಿ ಗಿರಿ ಪ್ರಸಾದ್ ‘ಸ್ಟಾರ್ ಆಫ್ ಇಂಡಿಯಾ’ ಪ್ರಶಸ್ತಿ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT