ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್‍ಕಂಡ್ ಬನ್ನಿ, ಹೊತ್ಕೊಂಡ್ ಹೋಗಿ!

Last Updated 29 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಅಲ್ಲ ಗುರೂ ಮಾತಿಗೆ ಕೇಳ್ತೀನಿ, ಈ ಪೋಲೀಸ್‌ನೋರು ಕಳ್ಳ-ಕಾಕರನ್ನ ಹಿಡಿಯೋದು ಬಿಟ್ಟು ಸೀರೆ-ಚಪ್ಲಿ ವ್ಯವಹಾರ ಯಾವಾಗ ಶುರು ಹಚ್ಕಂಡ್ರು ಅಂತ. ಪೇಪರ್ ನೋಡಿ ನನಗಂತೂ ಆಶ್ಚರ್ಯ ಆತಪ...  ಪರಮೇಶಿ ವಗ್ಗರಣೆ ಮಂಡಕ್ಕಿ ಪ್ಯಾಕೆಟ್ ಬಿಚ್ಚುತ್ತ ಕೇಳಿದಾಗ ಹರಟೆ ಕಟ್ಟೆಯ ಘನ ಅಧ್ಯಕ್ಷತೆ ವಹಿಸಿದ್ದ ತೆಪರೇಸಿ ನೀನು ಯಾವ ಪೋಲೀಸರ ಬಗ್ಗೆ ಹೇಳ್ತಾ ಇದೀಯ? ಎಂದು ಪ್ರಶ್ನಿಸಿದ.

 ಅದೇ ಕಣಲೇ, ತಮಿಳ್ನಾಡು ಪೋಲೀಸರು ನಮ್ಮ ಜಯಮ್ಮನ ಮನೆ ಒಳಕ್ಕೆ ಹೋಗಿ ಸೀರೆ-ಚಪ್ಲಿ ಇಟ್ಟು ಬಂದಿದ್ರಂತಲ್ಲ ಅದು ಎಂದ ಪರಮೇಶಿ.

 ಯಾವ ಜಯಮ್ಮ?  ತೆಪರೇಸಿಗೆ ಅರ್ಥವಾಗಲಿಲ್ಲ.  ನಿನ್ತೆಲಿ, ಇವನಿಗೆ ಎಲ್ಲ ಬಿಡಿಸಿ ಹೇಳಬೇಕು. ಇನ್ಯಾರು? ಜಗತ್ತಿಗೊಬ್ಬರೇ ಜೈಲಲಿತಾ! ಗೊತ್ತಾತ? ಪರಮೇಶಿ ರೇಗಿದ.
 ಓ ಅದಾ... ಕರೆಕ್ಟ್. ಅಕ್ರಮ ಆಸ್ತಿ ಮಾಡ್ಕಂಡಿರೋ ಬಗ್ಗೆ ಜಯಮ್ಮ ಕೋರ್ಟ್‌ನಲ್ಲಿ ಕೊಡ್ತಾ ಇದ್ದ ಉತ್ತರಗಳು ನಂಗಂತೂ ಬಲೇ ಮಜ ಅನಿಸ್ತು.

ನಿಮ್ಮತ್ರ 3 ಸಾವಿರ ಸೀರೆ ಎಲ್ಲಿಂದ ಬಂದ್ವು? 
ಪೋಲೀಸರು ತಂದು ಇಟ್ಟಿದ್ರು...

ನಿಮ್ಮತ್ರ 750 ಜೊತೆ ಚಪ್ಲಿ ಇದ್ದವಂತಲ್ಲ?
ಪೋಲೀಸರು ತಂದು ಇಟ್ಟಿದ್ರು

ನಿಮ್ಮ ಮನೇಲಿ 300 ಗೌನ್ ಅದಾವಂತೆ?
ಪೋಲೀಸರು ತಂದು ಇಟ್ಟು ಅವರೇ ಕೇಸ್ ಹಾಕಿದಾರೆ...

ಬರೀ ಇವೇ ಉತ್ತರ. ಪಾಪ ಪೋಲೀಸ್‌ನೋರು ತಮ್ಮ ಹೆಂಡತಿಗೆ ಒಂದು ಸೀರೆ ತಗಂಡು ಹೋಗೋದೇ ಕಷ್ಟ. ಅಂಥದ್ರಲ್ಲಿ 3 ಸಾವಿರ ಸೀರೆ, 750 ಜತಿ ಚಪ್ಲಿ, ಗೌನು ಇವನ್ನೆಲ್ಲ ತಗಂಡ್ ಹೋಗಿ ಜಯಮ್ಮನ ಮನೆಗೆ ಯಾಕಿಟ್ರು ಅಂತ... ತೆಪರೇಸಿ ನಕ್ಕ.

 ಪೋಲೀಸ್‌ನೋರು ಅಷ್ಟೊಂದು ಸೀರೆ ಅಲ್ಲಿಡೋ ಬದ್ಲು ನಮ್ಮನೆಗೂ ಒಂದತ್ತು ಸೀರೆ ಕಳಿಸಿದ್ರೆ ಅವರ ಹೆಸರು ಹೇಳಿ ಉಟ್ಕಂತಿದ್ನೆಪ...  ಮಿಸ್ಸಮ್ಮ ನಕ್ಕಳು.

 ಆಹಾ ಆಸೆ ನೋಡು ಎಂದ ಗುಡ್ಡೆ.  ನಂಗೆ ಒಂದು ಅನುಮಾನ, ಈ ಪೋಲೀಸ್‌ನೋರಿಗೆ ಜಯಮ್ಮನ ಚಪ್ಲಿ ಸೈಜು ಹೆಂಗೆ ಸಿಕ್ತು ಅಂತ...  ಎಂದ.

 ಹೆಂಗೆ ಅಂದ್ರೆ? ಯಾವಾಗ್ಲೋ ಅವರ ಕಾಲಿಗೆ ಬಿದ್ದಾಗ ಅಳತೆ ತಗಂಡಿರ‌್ತಾರೆ ಬಿಡಲೆ...  ಎಂದ ದುಬ್ಬೀರ.

 ಅದ್ಸರೀ ಜಯಮ್ಮ ಪರಪ್ಪನ ಕೋರ್ಟ್‌ಗೆ ಬಂದಿದ್ದಾಗ ಯಡ್ಯೂರಪ್ಪ ಅವರ‌್ನ ಮೀಟ್ ಮಾಡಲಿಲ್ವ ಅಂತ...  ಕೊಟ್ರೇಶಿ ವಿಚಿತ್ರವಾಗಿ ನಕ್ಕ.

 ಇಲ್ಲ, ಆ ಟೈಮಲ್ಲಿ ಯಡ್ಯೂರಪ್ಪ ತಪಸ್ಸಿಗೆ ಕುಂತಿದ್ರಂತೆ. ಪಾಪ ಅಗ್ರಹಾರಕ್ಕೆ ಅವರೀಗ ಒಗ್ಗಿ ಹೋಗಿದಾರೆ ಅನ್ಸುತ್ತೆ. ಮೊನ್ನೆ ಅಲ್ಲಿಂದ್ಲೇ ಎಲ್ಲರಿಗೂ ದೀಪಾವಳಿ ಶುಭಾಶಯ ಕೋರಿದ್ರಂತಪ ಎಂದ ದುಬ್ಬೀರ.

 ಬಹಳ ಜನ ಯಡ್ಯೂರಪ್ಪೋರಿಗೂ  ನಿಮ್ ಬದುಕು ಹಿಂಗೇ ಸುಂದರವಾಗಿ, ಕಲರ್‌ಪುಲ್ ಆಗಿ ಇರ‌್ಲಿ  ಅಂತ ಶುಭಾಶಯ ಹೇಳಿದ್ರಂತಪ. ಕೆಲ ಸ್ವಾಮೀಜಿಗಳು ಜೈಲಿಗೆ ಹೋಗಿ ಅವರನ್ನ ಭೇಟಿ ಆಗಿದ್ರಲ್ಲ... ಅವರು ಯಡ್ಯೂರಪ್ಪೋರಿಗೆ ನಿಮ್ ಮೇಲಿನ ಆಪಾದನೆಗಳೆಲ್ಲ ಠುಸ್‌ಮುರಗಿ ಪಟಾಕಿಗಳ ಥರ ಠುಸ್ ಆಗ್ಲಿ, ನಿಮ್ಮ ಕಷ್ಟಗಳೆಲ್ಲ ರಾಕೆಟ್ ಪಟಾಕಿ ಥರ ಹಾರಿ ಹೋಗ್ಲಿ, ನಿಮ್ಮ ವಿರೋಧಿಗಳೆಲ್ಲ ಲಕ್ಷ್ಮಿ ಪಟಾಕಿ ಥರ  ಢಂ  ಅಂದು ನೆಗೆದು ಬೀಳ್ಲಿ, ನೀವು ಮತ್ತೆ ಮುಖ್ಯಮಂತ್ರಿಯಾಗಿ ನಮ್ಮ ಮಠಗಳಿಗೆ ಹಾವಿನ ಪಟಾಕಿ ಥರ ಸರಸರಸರ ದುಡ್ಡು ಹರಿದು ಬರಲಿ...  ಅಂತ ಪಟಾಕಿ ಶುಭಾಶಯ ಹಾರೈಸಿದ್ರಂತಪ ಗುಡ್ಡೆ ನಗುತ್ತ ಹೇಳಿದ.
 ಯಾಕೋ ಭೂಚಕ್ರ ಮರೆತಂಗೆ ಕಾಣ್ತತಿ?  ಮಿಸ್ಸಮ್ಮ ಕೊಂಕಿದಳು.

 ಭೂಚಕ್ರಕ್ಕೆ ಸಿಕ್ಕೇ ಇವತ್ತು ಎಲ್ರೂ ಈ ಸ್ಥಿತಿಗೆ ಬಂದಿರೋದು. ಲಂಚ ತಗಳಾಕೆ ಹೋಗಿ ಮೊನ್ನೆ ಮತ್ತೊಬ್ಬ ಎಮ್ಮೆಲ್ಲೆ ಸಂಪಂಗಿ ಸಾಹೇಬ್ರು ಜೈಲಿಗೆ ಬಂದ್ರಲ್ಲ, ಸದಾನಂದಗೌಡ್ರು ಚಳಿಗಾಲದ ಅಧಿವೇಶನಾನ ಪರಪ್ಪನ ಅಗ್ರಹಾರದಲ್ಲೇ ನಡೆಸಬಹುದು ಅನ್ಸುತ್ತಪ್ಪ... ಎಂದ ಗುಡ್ಡೆ.

 ಏನೇ ಆಗ್ಲಿ ನಮ್ಮ ಸ್ವಾಮೀಜಿಗಳು ಜೈಲಿಗೆ ಹೋಗಿ ಇಂಥ ರಾಜಕಾರಣಿಗಳನ್ನೆಲ್ಲ ಭೇಟಿ ಆಗಬಾರದಿತ್ತಪ್ಪ, ನೀವೇನಂತೀರಿ?  ತೆಪರೇಸಿ ಕೇಳಿದ.

 ನಾವೂ ಅದೇ ಅಂತೀವಿ ಬಿಡಲೆ ಎಂದ ಗುಡ್ಡೆ, ಇದನ್ನ ಒಂದೇ ಮಾತಲ್ಲಿ ಹೇಳಬಹುದು ಅಂದ್ರೆ  ರಾಜಕಾರಣಿಗಳು ಮಠಗಳಿಗೆ ಹೋದರು, ಮಠಾಧೀಶರು ಜೈಲಿಗೆ ಬಂದರು ಸರೀನಾ? ಎಂದ.

 ಕರೆಕ್ಟ್ ಹೇಳಿದೆ ಮಗಾ ಎಂದ ತೆಪರೇಸಿ, ನಮ್ಮ ಇತಿಹಾಸ, ಸಂಸ್ಕೃತಿ ಕತೆ ಎಲ್ಲಿಗೆ ಬಂತು ನೋಡು. ಎಲ್ಲರೂ ಸಾಲುಸಾಲಾಗಿ ಜೈಲು ಸೇರ‌್ತಾ ಅದಾರೆ. ನಮ್ಮದು ಹರಪ್ಪ ಮಹೆಂಜಾದಾರೋ ಸಂಸ್ಕೃತಿ ಅಂತ ಪ್ರೈಮರಿ ಸ್ಕೂಲ್‌ನಲ್ಲಿ ಓದಿದ್ದೆ. ಹರಪ್ಪ ಹೋಗಿ ಈಗ ಪರಪ್ಪನ ಹತ್ರಕ್ಕೆ ನಮ್ಮ ಇತಿಹಾಸ ಬಂದು ನಿಂತೈತಿ. ಮುಂದೆ ಇನ್ನೂ ಏನಾಗ್ತತೋ ಏನೋ...  ಎಂದ.

 ಹರಪ್ಪನೋ ಪರಪ್ಪನೋ ಒಟ್ಟಾರೆ ತಪ್ಪು ಮಾಡೋರಿಗೆ ಇದೊಂದು ಎಚ್ಚರಿಕೆ ಗಂಟೆ ಆದಂಗಾತು. ಲಂಚ ಹೊಡಿಯೋರು,ಭೂಮಿ ನುಂಗೋರಿಗೆ ಈಗ ಒಂದು ಬ್ರೇಕ್... ಗುಡ್ಡೆ ಟಿ.ವಿ. ನ್ಯೂಸ್ ಓದೋರ ಸ್ಟೈಲಲ್ಲಿ ಹೇಳಿ  ಈಗ ಜೈಲಲ್ಲಿ ದೀಪಾವಳಿ ಆಚರಿಸಿದೋರ ಬಗ್ಗೆ ಒಂದು ಚುಟುಕ ಹೇಳ್ತೀನಿ ಕೇಳ್ರಪ್ಪ  ಅಂದ.

ಜೈಲೂ ನಿನ್ನದೆ, ಬೇಲೂ ನಿನ್ನದೆ
ಬರಲಿ ಬಿಡುಗಡೆಯ ಬೆಳಕು
ತುಪ್ಪವು ನಿನ್ನದೆ, ಹೋಳಿಗೆಯು ನಿನ್ನದೆ
ಡಯಾಬಿಟೀಸು ಬದುಕು!

 ಚೆನ್ನಾಗಿ ಹೇಳಿದೆ ಮಗಾ, ಈಗ ವಿಧಾನಸೌಧದ ಮೇಲೆ  ಸರ್ಕಾರದ ಕೆಲಸ ದೇವರ ಕೆಲಸ ಅಂತ ಹಾಕಿದಾರಲ್ಲ, ಅದೇ ತರ ಪರಪ್ಪನ ಅಗ್ರಹಾರದ ಮೇಲೂ ಏನಾದ್ರು ಹಾಕಿಸಬೇಕಲ್ಲ?  ಎಂದ ದುಬ್ಬೀರ.

 ಈ ರಾಜಕಾರಣಿಗಳನ್ನ ಜೈಲಿಗೆ ಕರ‌್ಕಂಡ್ ಬರ‌್ತಿದ್ದಂಗೆ ಅವರು ಬಾಗಿಲಲ್ಲೇ ದಬಾರ್  ಅಂತ ಬೀಳ್ತಾರೆ. ಆಮೇಲೆ ಅವರನ್ನ ಹೊತ್ಕಂಡು ಆಸ್ಪತ್ರೆಗೆ ಸೇರಿಸ್ತಾರೆ. ಅದಕ್ಕೆ ಹಿಂಗೆ ಬರೆಸಿದ್ರೆ ಹೆಂಗೆ? 

 ಹೆಂಗೆ?
 ಕರ‌್ಕಂಡ್ ಬನ್ನಿ, ಹೊತ್ಕಂಡ್ ಹೋಗಿ!
ಗುಡ್ಡೆ ಮಾತಿಗೆ ಹರಟೆಕಟ್ಟೆಯಲ್ಲಿ ನಗುವಿನ ಅಲೆ ತೇಲಿತು. ಅಷ್ಟರಲ್ಲಿ ಶಾಕಿಂಗ್ ನ್ಯೂಸ್!  ವಿದ್ಯುತ್ ಬೆಲೆಯಲ್ಲಿ ಹೆಚ್ಚಳ! 

 ಆಹಾ ಏನು ಸರ್ಕಾರನೋ, ಎಲ್ಲರೂ ಇರೋ ವಸ್ತುವಿಗೆ ರೇಟ್ ಹೆಚ್ಚಿಸಿದ್ರೆ ಇವರು ಇಲ್ಲದ ಕರೆಂಟಿಗೆ ರೇಟ್ ಹೆಚ್ಚಿಸ್ತಾರೆ. ಮಾತೆತ್ತಿದ್ರೆ ಸಿಂಗಲ್ ಫೇಸ್ ಕೊಡ್ತೀವಿ, ತ್ರೀಫೇಸ್ ಕೊಡ್ತೀವಿ ಅಂತಾರೆ. ಯಾವ ಫೇಸ್ ಇಟ್ಕಂಡು ಈ ಮಾತು ಹೇಳ್ತಾರಿವರು?  ಮಿಸ್ಸಮ್ಮ ಸಿಡಿಮಿಡಿಗೊಂಡಳು.
 ಯಾವ ಫೇಸಾ? ನೋ ಫೇಸ್... ಎಂದ ಗುಡ್ಡೆ. ಎಲ್ಲರೂ ಗೊಳ್ಳಂತ ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT