ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಸುಮೇಲೋಗರ (ಚಿತ್ರ: ಶ್ರೀ ಕ್ಷೇತ್ರ ಆದಿಚುಂಚನಗಿರಿ)

Last Updated 7 ಜುಲೈ 2012, 19:30 IST
ಅಕ್ಷರ ಗಾತ್ರ

ನಿರ್ಮಾಪಕ: ಬಿ.ವಿ. ನರಸಿಂಹಯ್ಯ
ನಿರ್ದೇಶಕ: ಓಂ ಸಾಯಿಪ್ರಕಾಶ್
ತಾರಾಗಣ: ಶ್ರೀಮುರಳಿ, ಅಂಬರೀಷ್, ಶ್ರುತಿ, ರಾಮ್‌ಕುಮಾರ್, ಪದ್ಮಾ ವಾಸಂತಿ, ರಮೇಶ್ ಭಟ್, ಹರೀಶ್ ರಾಜ್, ಶಿವಕುಮಾರ್, ಮೋಹನ್ ಜುನೇಜಾ, ಅನುಪ್ರಭಾಕರ್ ಮುಂತಾದವರು.

ಆದಿಚುಂಚನಗಿರಿ ಕ್ಷೇತ್ರದ ಪೌರಾಣಿಕ, ಐತಿಹಾಸಿಕ ಐತಿಹ್ಯಗಳು ಹಾಗೂ ಪ್ರಸ್ತುತದ ಕಥೆಗಳನ್ನು ಸೇರಿಸಿ ಹೆಣೆದ ಚಿತ್ರ `ಶ್ರೀಕ್ಷೇತ್ರ ಆದಿಚುಂಚನಗಿರಿ~. ಕ್ಷೇತ್ರ ಮಹಾತ್ಮೆಯನ್ನು ಪ್ರಚುರ ಪಡಿಸುವುದಷ್ಟೆ ಈ ಚಿತ್ರದ ಉದ್ದೇಶ.
 
ಪುರಾಣ, ಚರಿತ್ರೆ ಮತ್ತು ವರ್ತಮಾನದ ಕುರಿತು ಇರುವ ನಂಬಿಕೆಗಳನ್ನು ಬಿಡಿಬಿಡಿಯಾಗಿ ಹರಡಿದ್ದಾರೆ ನಿರ್ದೇಶಕ ಓಂ ಸಾಯಿಪ್ರಕಾಶ್. ಹೀಗಾಗಿ ಸಿನಿಮಾ ಮತ್ತು ಸಾಕ್ಷ್ಯಚಿತ್ರ ಎರಡರ ಸಾಲಿಗೂ ಈ ದೃಶ್ಯಾವಳಿಗಳನ್ನು ಸೇರಿಸುವುದು ಕಷ್ಟ.

ಮಠದ ಅಂಗಳದಲ್ಲಿ ಹುಟ್ಟಿದ ಕಥೆಯನ್ನು ಸಿನಿಮಾ ರೂಪಕ್ಕಿಳಿಸುವಲ್ಲಿ ಓಂ ಸಾಯಿಪ್ರಕಾಶ್ ಸಾಕಷ್ಟು ಹೆಣಗಾಡಿದ್ದಾರೆ. ಆದಿ ಚುಂಚನಗಿರಿ ಸ್ಥಳ ಮಹಿಮೆ ಬಗ್ಗೆ ಕಥೆ- ಉಪಕಥೆಗಳು ಸಾಕಷ್ಟಿವೆ. ಗಂಗಾಧರ ಎಂಬ ಪದವೀಧರ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಆಗಿ ಬೆಳೆದ ಘಟನೆಗೂ ಹಿನ್ನೆಲೆಯಿದೆ.
 
ಇದೆಲ್ಲವನ್ನೂ ಆದಿಚುಂಚನಗಿರಿ ಮಠ ಮತ್ತು ಸ್ಥಳದ ವಾಪ್ತಿಗೆ ಸೀಮಿತಗೊಳಿಸಿದ್ದರೆ ಸುಂದರ ಸಾಕ್ಷ್ಯಚಿತ್ರವಾಗಿ ಇದು ಹೊರಹೊಮ್ಮುತ್ತಿತ್ತು. ಇಲ್ಲವೇ ಒಂದು ಎಳೆಯನ್ನಿಟ್ಟುಕೊಂಡು ಅದನ್ನು ಸಿನಿಮಾ ಚೌಕಟ್ಟಿನಲ್ಲಿ ಬೆಳೆಸಿ ಭಕ್ತಿ ಪ್ರಧಾನ ಸಿನಿಮಾ ಸೃಷ್ಟಿಸಬಹುದಾಗಿತ್ತು. ಎರಡರ ಕಾರ್ಯವೂ ಇಲ್ಲಿ ಆಗಿಲ್ಲ. ಅರ್ಧಗಂಟೆಗೊಂದರಂತೆ ಎದುರಾಗುವ ಉಪಕಥೆಗಳು ಧಾರಾವಾಹಿ ವೀಕ್ಷಿಸಿದ ಅನುಭವ ನೀಡುತ್ತವೆ.

ಸ್ಥಳದ ಮಹಿಮೆಯನ್ನು ದೃಶ್ಯರೂಪದಲ್ಲಿ ನೋಡುವಾಗಲೂ ಕೌತುಕ ಮೂಡಿಸುವುದಿಲ್ಲ. ಈ ಕಥನದ ನಿರೂಪಣೆಯೂ ನೀರಸ. ಅದರ ಹಿನ್ನೆಲೆ ಕಾಲಕ್ಕನುಗುಣವಾಗಿ ಒಂದರ ನಂತರ ಮತ್ತೊಂದು ಕಥೆಯ ರೂಪದಲ್ಲಿ ಎದುರಾಗಿದ್ದರೆ ಅದಕ್ಕೊಂದು ಅರ್ಥ ಸಿಗುತ್ತಿತ್ತು.
ವರ್ತಮಾನದ ಘಟನಾವಳಿಗೆ ಮೊದಲ ಪ್ರಾಶಸ್ತ್ಯ ನೀಡಿರುವುದು ಸರಿ. ನಂತರ ಇತಿಹಾಸದ ಕಥೆ ಮೊದಲು ಬಂದು ಆನಂತರ ಪುರಾಣಕ್ಕೆ ಮರಳುತ್ತದೆ. ತ್ರೇತಾಯುಗದ ಕಥೆ ಮಧ್ಯದಲ್ಲಿ ಬಂದು ಹೋದರೆ, ದ್ವಾಪರ ಯುಗಕ್ಕೆ ಚಿತ್ರವೂ ಅಂತ್ಯವಾಗುತ್ತದೆ.
ವರ್ತಮಾನ ಮರೆಯಾಗುತ್ತದೆ.
 
ಹೀಗೆ ಹರಿದು ಹಂಚಿಹೋದ ಸಂಗತಿಗಳು ಒಂದಕ್ಕೊಂದು ಪೂರಕವಾಗಿರದ ಕಾರಣ ಅಪೂರ್ಣ ಕಥಾನಕದಂತೆ ಭಾಸವಾಗುತ್ತದೆ. ಆತ್ಮಸ್ತುತಿಯ ಮತ್ತು ಕ್ಷೇತ್ರವನ್ನು ಒಂದು ವರ್ಗಕ್ಕೆ ಸೀಮಿತಗೊಳಿಸುವ ಪ್ರಯತ್ನವೂ ಇಲ್ಲಿದೆ. ಹೊಗಳಿಕೆಯಲ್ಲಿಯೇ ಮುಳುಗಿ ಹೋಗುವ ಸಂಭಾಷಣೆ ಕಿರಿಕಿರಿ ಉಂಟುಮಾಡುತ್ತದೆ.

ಕೆಲವು ಶಾಸಕರು ಸಹ ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ. ಶ್ರೀ ಮುರಳಿ, ಅಂಬರೀಷ್, ಶಿವಕುಮಾರ್, ರಾಮ್‌ಕುಮಾರ್ ಮತ್ತಿತರ ಕಲಾವಿದರ ಅಭಿನಯ ಗಮನಾರ್ಹ. ಸುಂದರನಾಥ ಸುವರ್ಣ ಛಾಯಾಗ್ರಹಣ ಮತ್ತು ಗುರುಕಿರಣ್ ಸಂಗೀತ ಶ್ರಮ ಮೆಚ್ಚುವಂತಹದ್ದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT