ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾಕಲಿಕೆಯ ಇ-ರೀತಿ

Last Updated 4 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಜಲವರ್ಣ ಪೇಂಟಿಂಗ್‌ಲೋಕದಿಂದ ಮರೆಯಾಗುತ್ತಿದೆಯೇ? ಆಕ್ರಿಲಿಕ್‌ನ ಸರಳತೆ ಹಾಗೂ ತಪ್ಪು ಮುಚ್ಚುವ ಗುಣದಿಂದ ಜಲವರ್ಣಗಳು ಬಣ್ಣಗೆಡುತ್ತಿವೆಯೇ? ಇಂಥ ಚರ್ಚೆಗಳು ಕುಂಚ ಲೋಕದಲ್ಲಿ ಆಗಾಗ ಆಗುತ್ತಲೇ ಇರುತ್ತವೆ.

ಜಲವರ್ಣದಲ್ಲಿ ಮಿನುಗು ಮಿಂಚು ಇರುವುದಿಲ್ಲ. ಇವು ನಿಸರ್ಗದಷ್ಟೇ ಚೆಂದ, ಪ್ರಾಕೃತಿಕ. ಆದರೆ ಅದಮ್ಯವಾದ ಛಲ ಮತ್ತು ಪರಿಣತಿ ಬೇಕು. ಅಚಲವಾದ ಸಂಯಮ ಬೇಕು. ಆಗ ಮಾತ್ರ ಜಲವರ್ಣದಲ್ಲಿ ಏನಾದರೂ ಸಾಧಿಸಲು ಸಾಧ್ಯ ಎನ್ನುವುದು ಕಲಾವಿದ ಕಾಂತರಾಜ್ ಅವರ ಅಭಿಪ್ರಾಯವಾಗಿದೆ.

ಬೆಂಗಳೂರು ಮೂಲದ ಕಾಂತರಾಜ್ ಎನ್. ತಾವೇ ಹೇಳಿಕೊಳ್ಳುವಂತೆ ಸಂಯಮ, ಸಹಜತನ ಹಾಗೂ ಪರಿಶ್ರಮ ಇರುವ ತಪಸ್ವಿ. ಹಾಗಾಗಿಯೇ ಜಲವರ್ಣ ಅವರ ನೆಚ್ಚಿನ ಮಾಧ್ಯಮವಾಗಿದೆ.

ಅವರು ಕಳೆದ ಎಂಟು ತಿಂಗಳಿಂದ ಬೆಂಗಳೂರಿನಲ್ಲಿ ಜಲವರ್ಣ ಕಲೆಯನ್ನು ಎತ್ತಿಹಿಡಿಯುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿ ಭಾನುವಾರ ಬೆಂಗಳೂರಿನ ಒಂದೊಂದು ಪ್ರೇಕ್ಷಣೀಯ ಸ್ಥಳಗಳಲ್ಲಿ ಜನಸಂದಣಿ ಇರದೇ ಇರುವಂಥ ಸ್ಥಳಗಳಲ್ಲಿ ಆಸಕ್ತರಿಗೆ ಪಾಠ ಮಾಡುತ್ತಾರೆ.

ತಾವಿಲ್ಲಿ ಗುರುಗಳ ಪಾತ್ರ ನಿರ್ವಹಿಸುತ್ತಿರುವಿರಾ ಎಂಬ ಪ್ರಶ್ನೆಗೆ ನಕ್ಕು ಸುಮ್ಮನಾಗುವ ಕಾಂತರಾಜ್, ನಿಧಾನವಾಗಿ ತಮ್ಮ ನಗೆಗೆ ಕಾರಣವನ್ನೂ ಕೊಡುತ್ತಾರೆ: `ಜಲವರ್ಣದಲ್ಲಿ ಗುರು ಕಲಿಸುವಂಥದ್ದು ಏನೂ ಇಲ್ಲ. ನಾನಿಲ್ಲಿ ತಂತ್ರಗಳನ್ನು ಹೇಳಿಕೊಡುತ್ತೇನೆ.

ಮಾರ್ಗದರ್ಶಕನಾಗಿ ಕಲಿಕಾರ್ಥಿಗಳೊಂದಿಗೆ ಇರುತ್ತೇನೆ. ಅಂತಿಮವಾಗಿ ಕ್ಯಾನ್ವಾಸ್ ಮೇಲೆ ಮೂಡುವುದು ಅವರ ಪರಿಕಲ್ಪನೆ ಹಾಗೂ ಅವರ ಹಸ್ತ ಕೌಶಲ. ಗಂಭೀರವಾಗಿ ಆಸಕ್ತಿಯುಳ್ಳವರು ಖಂಡಿತವಾಗಿಯೂ ಕಲಿಕೆಯ ಈ ಪರಿಯನ್ನು ಒಪ್ಪಿಕೊಂಡಿದ್ದಾರೆ. ಇದು ಅವರವರ ಆಸ್ಥೆ ಹಾಗೂ ಆಸಕ್ತಿಯನ್ನು ಅವಲಂಬಿಸಿರುವಂಥದ್ದು~.

ಕಳೆದ ವರ್ಷ ರಾಷ್ಟ್ರೀಯ ಆರ್ಟ್ ಗ್ಯಾಲರಿಯಲ್ಲಿ ಜಲವರ್ಣ ಕಲೆಯ ಕಲಾಶಿಬಿರವನ್ನು ಏರ್ಪಡಿಸಲಾಗಿತ್ತು. ಅಲ್ಲಿಯ ಕಲಾ ಶಿಬಿರ ಮುಗಿದ ನಂತರವೂ ಕಲಿಕಾರ್ಥಿಗಳು ಇವರಿಗೆ ತರಗತಿಗಳನ್ನು ತೆಗೆದುಕೊಳ್ಳಲು ಒತ್ತಾಯಿಸಿದರು.

ಆದರೆ ಈ ಹಿಂದೆಯೂ ಕಲಿಸಲು ಆರಂಭಿಸಿದ ಕಾಂತರಾಜ್ ಅವರಿಗೆ ವಿದ್ಯಾರ್ಥಿಗಳ ಅಸಡ್ಡೆ, ಕೆಲವು ದಿನಗಳ ನಂತರ ಆಸಕ್ತಿ ಕಳೆದುಕೊಳ್ಳುವ ಮನೋಭಾವ, ಪರಿಣತಿ ಬಯಸಿದರೆ ಬೇಕೆಂದೇ ವಿಳಂಬ ಮಾಡುವ ರೀತಿಯಿಂದ ಬೇಸತ್ತಿದ್ದರು. ನಂತರ ಈ ಕಲಿಸುವ ಗೋಜು ಬೇಡವೆಂದುಕೊಂಡೇ ವೃತ್ತಿ ಬದುಕಿನತ್ತ ಹೆಚ್ಚು ಗಮನ ಕೊಟ್ಟರು. ಆದರೆ ಕಲೆಯ ಪ್ರೀತಿ ಬಿಡಲಿಲ್ಲ.

ಕೇಳಿಕೊಂಡು ಬಂದವರಿಗೆ ಇಲ್ಲ ಎನ್ನದೆ ಹೇಳಿಕೊಡಲಾರಂಭಿಸಿದರು. ಕಲಾ ಗ್ಯಾಲರಿಯಲ್ಲಿ ಈ ಮಾಧ್ಯಮವನ್ನು ಗಂಭೀರವಾಗಿ ಪರಿಗಣಿಸಿದ ಕೆಲವರ ಪರಿಚಯವಾಯಿತು. ಅಂಥವರಿಗಾದರೂ ಸಹಾಯವಾಗಲಿ ಎಂಬಂತೆ ಈ ಭಾನುವಾರದ ಕಲಿಕೆಯನ್ನು ಆರಂಭಿಸಿದರು. ಎಲ್ಲರೊಂದಿಗೆ ಸಂಪರ್ಕ ಸೇತುವಾಗಿ ಸಹಾಯ ಮಾಡಿದ್ದು, `ಫೇಸ್‌ಬುಕ್~ ಸಾಮಾಜಿಕ ಜಾಲತಾಣ.

ಫೇಸ್‌ಬುಕ್‌ನಲ್ಲಿ ಇವರು ಒಂದು ಅಕೌಂಟ್ ತೆರೆದರು. ಪ್ರತಿ ಶನಿವಾರ, ಭಾನುವಾರದ ಶಿಬಿರ ಎಲ್ಲಿ ಎಂಬುದರ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಆಸಕ್ತಿ ಇದ್ದವರು ಬಂದು ಕಲಿಯಬಹುದು. ಈ ತಾಣವನ್ನು ಲಕ್ಷ್ಮಣ ಕಾಬಾಡಿ ನಿರ್ವಹಿಸುತ್ತಿದ್ದಾರೆ.

ಕಾಂತರಾಜ್ ಅವರ ಯತ್ನಕ್ಕೆ ಇನ್ನೂ ಕೆಲವು ಕಲಾವಿದರು ಕೈಗೂಡಿಸಿದ್ದಾರೆ. ಸ್ತನ ಕ್ಯಾನ್ಸರ್ ಜಾಗೃತಿಗಾಗಿ ಇವರ ತಂಡದ 30 ಕಲಾವಿದರು ವಿವಿಧ ಬಗೆಯ ಕಲಾಕೃತಿಗಳನ್ನು ರಚಿಸಿ ನೀಡಿದ್ದಾರೆ. ಜಲವರ್ಣ ಪ್ರಕಾರವು ಮತ್ತೆ ಜನರ ನಡುವೆ ಬರುತ್ತಿರುವ ಬಗ್ಗೆ ಸಂತಸ ವ್ಯಕ್ತ ಪಡಿಸುತ್ತಾರೆ.

ಕೆಲವರು ಬಿಟ್ಟಿ ಕಲಿಕೆ ಎಂಬ ಮನೋಭಾವದಿಂದಲೇ ಬರುತ್ತಾರೆ. ಕೆಲವರು ಹಣ ಏನೂ ಕೊಡಬೇಕಾಗಿಲ್ಲ. ಕಲಿತರೆ ತೊಂದರೆ ಇಲ್ಲ ಎಂಬಂತೆ ಬರುತ್ತಾರೆ. ಇನ್ನು ಕೆಲವರು ಇದನ್ನು ಗಂಭೀರವಾಗಿ ಅಭಿವ್ಯಕ್ತಿ ಮಾಧ್ಯಮವೆಂದು ಪರಿಗಣಿಸಿಯೇ ಬರುತ್ತಾರೆ. ಅವರು ಕಲಿಕೆಯಲ್ಲಿ ತೋರುವ ಆಸಕ್ತಿಯಿಂದಲೇ ಪತ್ತೆಮಾಡಬಹುದು; ಈ ಕಲಾಯಾನದಲ್ಲಿ ಸಹ ಪ್ರಯಾಣಿಕರು ಯಾರಾಗಬಹುದೆಂದು?

ಈವರೆಗೆ ಕೆಲವು ಗೃಹಿಣಿಯರೂ ಗಂಭೀರವಾಗಿ ಬಂದು ಕಲಿತು ಹೋಗಿದ್ದಾರೆ. ಕಾರ್ಪೊರೇಟ್ ಜಗತ್ತಿನವರು ಬಂದು ತಮ್ಮ ಒತ್ತಡ ನಿವಾರಣೆಯ ಮಾಧ್ಯಮವಾಗಿ ಕಲೆಯನ್ನು ಎತ್ತಿಕೊಳ್ಳುತ್ತಿದ್ದಾರೆ. ಅಂಥವರೆಲ್ಲ ಕ್ರಮೇಣ ಜಲವರ್ಣ ಕಲೆಯತ್ತ ವಾಲುತ್ತಿದ್ದಾರೆ ಅಥವಾ ಕಲೆ ಅವರ ಪರಿಶ್ರಮಕ್ಕೆ ಒಲಿಯುತ್ತಿದೆ.

`ಈಗ ಭಾನುವಾರದ ಶಿಬಿರದಲ್ಲಿ 30 ಜನ ಕಲಾವಿದರು ಗಂಭೀರವಾಗಿ ಪಾಲ್ಗೊಳ್ಳುತ್ತಿದ್ದಾರೆ. ಅವರಲ್ಲಿ ಕಲೆಗೆ ಬೇಕಿರುವ ಸಂಯಮವಿದೆ. ಸೃಜನಶೀಲ ಮನಸಿದೆ. ಕಲಿಸುವ ಮನಸಿಗೆ ಕಲಿಯುವ ಜನರು ದೊರೆತಾಗಲೇ ಸಾರ್ಥಕ್ಯ ಎನಿಸುತ್ತದೆ~ ಎನ್ನುತ್ತಾರೆ ಕಾಂತರಾಜ್. ಹೆಚ್ಚಿನ ಮಾಹಿತಿಗೆ 9444300600 ಇಲ್ಲವೇ http://www.facebook.com/pages/Plein-Air-Painters-Bangalore/342908892396601?sk=photos_stream

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT