ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾಗಂಗೋತ್ರಿ ರಂಗ ಸಂಭ್ರಮ

Last Updated 19 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನ್ನಡ ರಂಗಭೂಮಿಯಲ್ಲಿ ಕಲಾಗಂಗೋತ್ರಿ ಹೆಸರು ಚಿರಪರಿಚಿತ. ‘ಮೈಸೂರು ಮಲ್ಲಿಗೆ’, ‘ಮಂದ್ರ’, ‘ಮೂಕಜ್ಜಿಯ ಕನಸುಗಳು’ ಕೃತಿಗಳನ್ನು ಅಚ್ಚುಕಟ್ಟಾಗಿ ರಂಗದ ಮೇಲೆ ತಂದ ಹಿರಿಮೆ ಕಲಾಗಂಗೋತ್ರಿಯದ್ದು. ‘ಕಲಾಗಂಗೋತ್ರಿ’ ಕಲಾವಿದರು ಅಭಿನಯಿಸಿದ ‘ಮುಖ್ಯಮಂತ್ರಿ’, ‘ಮೂಕಿಟಾಕಿ’, ‘ವಿಗಡ ವಿಕ್ರಮರಾಯ’ ನಾಟಕಗಳು ಕಲಾಗಂಗೋತ್ರಿಯ ಬ್ರಾಂಡ್‌ಗಳು ಎಂಬಷ್ಟರ ಮಟ್ಟಿಗೆ ಪ್ರಸಿದ್ಧಿ ಪಡೆದಿವೆ.

ಮುಖ್ಯಮಂತ್ರಿ ನಾಟಕವಂತೂ ಮುಖ್ಯಮಂತ್ರಿ ಚಂದ್ರು ಅವರಿಗೆ ಅನ್ವರ್ಥವಾದ ನಾಟಕ. ಕಲಾಗಂಗೋತ್ರಿ ನೇಪಥ್ಯದಲ್ಲಿ ಮುಖ್ಯ ಹೆಸರು ಬಿ.ವಿ.ರಾಜಾರಾಂ. ೧೯೭೧ರಲ್ಲಿ ಎಂಟು- ಹತ್ತು ಮಂದಿ ರಂಗಾಸಕ್ತರು ಸೇರಿ ಆರಂಭಿಸಿದ ಕಲಾಗಂಗೋತ್ರಿ, ಅನೇಕ ಉತ್ತಮ ನಟರನ್ನು ತಯಾರು ಮಾಡಿದ ರಂಗಸಂಸ್ಥೆ. ಕಲಾಗಂಗೋತ್ರಿಗೆ ೪೦ ತುಂಬಿದರೆ ಅದರೊಟ್ಟಿಗೇ ಬೆಳೆದ ಬಿ.ವಿ.ರಾಜಾರಾಂ ಹಾಗೂ ಮುಖ್ಯಮಂತ್ರಿ ಚಂದ್ರು ಅವರಿಗೆ ಈಗ ೬೦ರ ಹರೆಯ.

ಈ ಸಂದರ್ಭದ ನೆನಪಿಗಾಗಿ ಕಲಾಗಂಗೋತ್ರಿ ತಂಡದ ಗೆಳೆಯರು ‘ಕಲಾಗಂಗೋತ್ರಿ ರಂಗ ಸಂಭ್ರಮ’ ಹಾಗೂ ಈ ಇಬ್ಬರು ರಂಗ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಶುಕ್ರವಾರದಿಂದ (ಡಿ.೨೦) ೧೦ ದಿನ ನಗರದಲ್ಲಿ ಕಲಾಗಂಗೋತ್ರಿ ನಾಟಕ ಹಬ್ಬ ನಡೆಯಲಿದೆ.ನಾಟಕ ಹಬ್ಬದ ಮೊದಲ ದಿನ ಮುಖ್ಯಮಂತ್ರಿ ಚಂದ್ರು ಅಭಿನಯದ ‘ಮುಖ್ಯಮಂತ್ರಿ’ ನಾಟಕ ಪ್ರದರ್ಶನವಿದೆ. ೫೦೦ಕ್ಕೂ ಹೆಚ್ಚು ಪ್ರದರ್ಶನ ಪೂರೈಸಿರುವ ಈ ನಾಟಕಕ್ಕೆ ಚಂದ್ರು ೬೦ನೇ ವಯಸ್ಸಿನ ಬಣ್ಣ ಹಚ್ಚಲಿದ್ದಾರೆ.

ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ ಸಂಜೆ ೬ಕ್ಕೆ ನಾಟಕ ಪ್ರದರ್ಶನವಿದೆ. ಬಿ.ವಿ.ರಾಜಾರಾಂ ಅವರಿಗೆ ಶನಿವಾರ ಹಾಗೂ ಮುಖ್ಯಮಂತ್ರಿ ಚಂದ್ರು ಅವರಿಗೆ ಭಾನುವಾರ ಅಭಿನಂದನೆ ನಡೆಯಲಿದೆ. ಈ ಸಂದರ್ಭದಲ್ಲಿ ಈ ಇಬ್ಬರ ಕುರಿತು ಹೊರತಂದಿರುವ ಅಭಿನಂದನಾ ಗ್ರಂಥಗಳ ಬಿಡುಗಡೆಯೂ ಆಗಲಿದೆ. ನಾಟಕ ಹಬ್ಬದಲ್ಲಿ ಬಿ.ವಿ.ರಾಜಾರಾಂ ನಿರ್ದೇಶನದ ನಾಟಕಗಳು ಪ್ರದರ್ಶನಗೊಳ್ಳಲಿವೆ.

ಸೋಮವಾರದವರೆಗೆ ‘ಮಂದ್ರ’, ‘ಎಚ್.ಎನ್.ಮೇಷ್ಟ್ರು-೮೫’, ‘ಮೂಕಿಟಾಕಿ ನಾಟಕಗಳು’ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಳ್ಳಲಿವೆ. ಮಂಗಳವಾರದಿಂದ ಭಾನುವಾರ ದವರೆಗೆ ಜೆ.ಪಿ.ನಗರದ ರಂಗಶಂಕರದಲ್ಲಿ ‘ಮೈಸೂರು ಮಲ್ಲಿಗೆ’, ‘ಮೂಕಜ್ಜಿಯ ಕನಸುಗಳು’ ನಾಟಕಗಳ ಪ್ರದರ್ಶನವಿದೆ.

ಜತೆಗೆ ೨೧ರಂದು ೧೦೦ ರಂಗ ಕಲಾವಿದರಿಗೆ ಸನ್ಮಾನ, ೨೨ರಂದು ಕನ್ನಡ, ಕನ್ನಡಿಗ, ಕರ್ನಾಟಕ ಮತ್ತು ರಾಜಕೀಯ ಸ್ಥಿತ್ಯಂತರಗಳು ವಿಷಯ ಕುರಿತ ವಿಚಾರ ಸಂಕಿರಣ ನಡೆಯಲಿದೆ. ಈ ಮೂಲಕ ಹತ್ತು ದಿನಗಳ ನಾಟಕ ಹಬ್ಬವನ್ನು ಬಣ್ಣಗಾಣಿಸಲು ಕಲಾಗಂಗೋತ್ರಿ ಮುಂದಾಗಿದೆ. ಅಂದಹಾಗೆ ಈ ನಾಟಕ ಹಬ್ಬವೂ ರವೀಂದ್ರ ಕಲಾಕ್ಷೇತ್ರ- ೫೦ರ ನೆನಪಿನ ಒಂದು ಭಾಗ.

ಸಾವಿರ ನಾಟಕ ಕೃತಿಗಳ ಪ್ರದರ್ಶನ
ನಾಟಕ ಪ್ರದರ್ಶನದ ಜತೆಗೆ ಅಪರೂಪದ ಕನ್ನಡ ನಾಟಕ ಕೃತಿಗಳ ಪ್ರದರ್ಶನ ಹಾಗೂ ಮಾರಾಟವನ್ನೂ ಆಯೋಜಿಸಲಾಗಿದೆ. ನಾಡಿನ ವಿವಿಧ ಪ್ರಕಾಶನ ಸಂಸ್ಥೆಗಳು ಹೊರತಂದಿರುವ ಸುಮಾರು ಒಂದು ಸಾವಿರ ನಾಟಕ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟವನ್ನು ರವೀಂದ್ರ ಕಲಾಕೇತ್ರದ ಆವರಣದಲ್ಲಿ ಆಯೋಜಿಸಲಾಗಿದೆ.

ನಾಟಕ ಹಬ್ಬದ ಜತೆಗೆ ಅಪರೂಪದ ನಾಟಕ ಪುಸ್ತಕಗಳನ್ನು ರಂಗಾಸಕ್ತರಿಗೆ ತಲುಪಿಸಬೇಕೆಂಬ ಉದ್ದೇಶದಿಂದ ಈ ಪುಸ್ತಕ ಪ್ರದರ್ಶನ ಮತ್ತು ಮಾರಾಟವನ್ನು ಆಯೋಜಿಸಿದ್ದೇವೆ ಎನ್ನುತ್ತಾರೆ ಕಲಾಗಂಗೋತ್ರಿ ಸಂಸ್ಥಾಪಕರಲ್ಲಿ ಒಬ್ಬರಾದ ಬಿ.ಕೆ.ನಂಜುಂಡಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT