ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾತಪಸ್ವಿಯ ವಿಶಿಷ್ಟ ನೆನಪು

Last Updated 18 ಜನವರಿ 2011, 11:30 IST
ಅಕ್ಷರ ಗಾತ್ರ

ಕನ್ನಡ ನಾಡು ಕಂಡ ಅಪ್ರತಿಮ ಕಲಾವಿದರಲ್ಲಿ ಕಲಾತಪಸ್ವಿ ಕೆ. ವೆಂಕಟಪ್ಪ (1886-1965) ಒಬ್ಬರು. ತಮ್ಮ ಬಾಳನ್ನೇ ಕಲಿಕೆಗಾಗಿ ಮೀಸಲಿಟ್ಟ ಅವರು ಅಕ್ಷರಶಃ ಕಲಾತಪಸ್ವಿ. ಚಿತ್ರಕಲೆಯೊಂದಿಗೆ ಸಂಗೀತದಲ್ಲೂ ಅವರಿಗೆ ಪರಿಣತಿಯಿತ್ತು. ವೆಂಕಟಪ್ಪನವರ ವ್ಯಕ್ತಿತ್ವ ಅವರ ಕಲೆಯಷ್ಟೇ ಸ್ವಾರಸ್ಯವಾದುದು. ಮೂಗಿನ ತುದಿಯಲ್ಲೇ ಕೋಪ ಹೊಂದಿದ್ದ ಅವರನ್ನು ‘ಬೆಂಕಿ ನವಾಬ’ ಎನ್ನಲಾಗುತ್ತಿತ್ತು.

‘ಕಲೆಯೆ ಅವನಿಗೆ ಮಡದಿ, ಕಲೆಯೆ ಅವನಿಗೆ ಮಕ್ಕಳು’ ಎಂದು ಗುರು ಅವನೀಂದ್ರನಾಥರು ವೆಂಕಟಪ್ಪನವರ ವಿಚಾರವಾಗಿ ಹೇಳುತ್ತಿದ್ದರಂತೆ. ಮದುವೆಯಾದರೆ ಸಂಸಾರದ ನಿರ್ವಹಣೆಯಲ್ಲಿ ಕಲೆಯ ಕಡೆ ಗಮನ ಕಡಿಮೆಯಾದೀತೆಂಬ ಭಯದಿಂದ ಅವರು ಮದುವೆಯಾಗಲೇ ಇಲ್ಲ.  ‘ನಾನು ಕಲಾವಿದನಲ್ಲ, ಕಲಾವಿದ್ಯಾರ್ಥಿಯಷ್ಟೇ!’ ಎನ್ನುವ ವಿನಯ ವೆಂಕಟಪ್ಪನವರದು.

ಗೌಳಿಯಾಗಲಿ, ಕೂಲಿಯಾಳಾಗಲಿ, ಬಡಗಿಯಾಗಲಿ ತಮ್ಮ ಕಲಾಕೃತಿಗಳನ್ನು ನೋಡಬಯಸಿದರೆ ಎಲ್ಲವನ್ನೂ ತೋರಿಸಿ ವಿವರಿಸಿ ಕಳುಹಿಸುವ ತಾಳ್ಮೆ ವೆಂಕಟಪ್ಪನವರಿಗೆ ಇತ್ತು. ಶ್ರೀಮಂತಿಕೆಯ ತೋರಿಕೆಗೆ ಒಲಿದವರನ್ನು ಕಂಡರೆ ಅವರಿಗೆ ಆದರವೇನೂ ಇರಲಿಲ್ಲ. ಇಂಥ ವಿಶಿಷ್ಟ- ವಿಕ್ಷಿಪ್ತ ಕಲಾವಿದನ ಸಾಧನೆ-ಬದುಕಿನ ಕುರಿತು ಪ್ರೊ.ಸಾ.ಕೃ.ರಾಮಚಂದ್ರರಾವ್ ‘ಕಲಾತಪಸ್ವಿ ವೆಂಕಟಪ್ಪ’ ಎನ್ನುವ ಒಳ್ಳೆಯ ಪುಸ್ತಕ ಬರೆದಿದ್ದಾರೆ. ವೆಂಕಟಪ್ಪನವರನ್ನು ಭಿನ್ನ ನೆಲೆಯಲ್ಲಿ ಪರಿಚಯಿಸುವ ಮತ್ತೊಂದು ಪುಸ್ತಕ ಕೆ.ವಿ.ಸುಬ್ರಹ್ಮಣ್ಯಂ ಅವರ ‘ವೆಂಕಟಪ್ಪ: ಸಮಕಾಲೀನ ಪುನರವಲೋಕನ’ ಕೃತಿ.

ಸುಬ್ರಹ್ಮಣ್ಯಂ ಅವರು ವಿವರಗಳ ಮೂಲಕ ವೆಂಕಟಪ್ಪನವರನ್ನು ಪರಿಚಯಿಸುವ ಪ್ರಯತ್ನ ಮಾಡಿಲ್ಲ. ಬದಲಿಗೆ, ವೆಂಕಟಪ್ಪನವರ ದಿನಚರಿಯ ಉಲ್ಲೇಖಗಳನ್ನು ಬಳಸಿಕೊಂಡು ಹಾಗೂ ಪತ್ರಗಳ ಮೂಲಕ ಕಲಾವಿದನನ್ನು ಕಾಣಿಸಲು ಪ್ರಯತ್ನಿಸಿದ್ದಾರೆ. ಈ ಉಲ್ಲೇಖಗಳು ವೆಂಕಟಪ್ಪನವರ ಬದುಕಿನ ತುಣುಕುಗಳೊಂದಿಗೆ, ಆ ಕಾಲದ ಸಾಂಸ್ಕೃತಿಕ ಮಹತ್ವವನ್ನೂ ಹೇಳುವಂತಿವೆ.

ಕುವೆಂಪು ಅವರು ವೆಂಕಟಪ್ಪನವರಿಗೆ ಬರೆದ ಪತ್ರದ (ಮೇ 12, 1955) ಆಯ್ದ ಸಾಲುಗಳು ಹೀಗಿವೆ: ‘ತಮ್ಮ ವರ್ಣಶಿಲ್ಪದ ಮಹಾಕೃತಿಗಳನ್ನು ದರ್ಶಿಸಿ ಅದ್ಭುತ ರಸಾನುಭವವನ್ನು ಪಡೆದಿರುವ ಅನೇಕ ವ್ಯಕ್ತಿಗಳಲ್ಲಿ ನಾನೂ ಒಬ್ಬನೆಂದು ತಮಗೆ ಗೊತ್ತಿರುವ ವಿಷಯವೇ ಆಗಿದೆ. ನಿಮ್ಮ ಬದುಕು ಕೆಲಸ ಎಲ್ಲ ನಿತ್ಯ ಜೀವಿಗಳು. ಆದರೆ ಸೂರ್ಯನಿಗೆ ಸೂರ್ಯನೇ ಅಡ್ಡ ನಿಂತ ಹಾಗೆ ಆಗಿದೆ! ಅಷ್ಟೇ!!... ನೀಲಗಿರಿ ಚಿತ್ರ ಸಂಕುಲದ ಮಧುರ ಪರಿಚಯ... ಆ ಪುಣ್ಯ ಮುಹೂರ್ತವನ್ನೇ ಎದುರು ನೋಡುತ್ತಿರುವ...’

ದಿನಚರಿಯ ತುಣುಕುಗಳು, ಪತ್ರಗಳೊಂದಿಗೆ ವೆಂಕಟಪ್ಪನವರ ಕೆಲವು ಚಿತ್ರಗಳೂ ಇಲ್ಲಿವೆ. ಸುಬ್ರಹ್ಮಣ್ಯಂ ಅವರು ವೆಂಕಟಪ್ಪನವರ ಕುರಿತು ಬರೆದಿರುವ ಲೇಖನವೂ ಪರಿಣಾಮಕಾರಿಯಾಗಿದೆ.ಸ್ಮೃತಿಗಳ ಹಂಗು ಕಳೆದುಕೊಳ್ಳುತ್ತಿರುವ ಈ ಕಾಲದಲ್ಲಿ ವೆಂಕಟಪ್ಪನವರ ನೆನಪು ಬೇರುಗಳ ಬಗ್ಗೆ ಪ್ರೀತಿ ಮೂಡಿಸುವಂತಹದ್ದು.
 

ವೆಂಕಟಪ್ಪ: ಸಮಕಾಲೀನ ಪುನರವಲೋಕನ; ಲೇ: ಕೆ.ವಿ.ಸುಬ್ರಹ್ಮಣ್ಯಂ; ಪು: 160; ಬೆ: ರೂ.75; ಪ್ರ: ಕರ್ನಾಟಕ ಲಲಿತಾಕಲಾ ಅಕಾಡೆಮಿ, ಕನ್ನಡ ಭವನ, ಬೆಂಗಳೂರು- 560 002

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT