ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾತ್ಮಕ ಚಿತ್ರಗಳಿಂದಲೇ ಹೆಸರು: ಗಿರೀಶ್ ಕಾಸರವಳ್ಳಿ

Last Updated 1 ಸೆಪ್ಟೆಂಬರ್ 2013, 20:01 IST
ಅಕ್ಷರ ಗಾತ್ರ

ಬೆಂಗಳೂರು: `ಕನ್ನಡ ಚಿತ್ರರಂಗಕ್ಕೆ ಜಾಗತಿಕ ಮಟ್ಟದಲ್ಲಿ ಹೆಸರು ತಂದಿರುವುದು ಕಲಾತ್ಮಕ ಚಿತ್ರಗಳೇ ಹೊರತು ಕೋಟಿ ಹಣದ ಚಿತ್ರಗಳಲ್ಲ' ಎಂದು ನಿರ್ದೇಶಕ ಗಿರೀಶ್ ಕಾಸರವಳ್ಳಿ ಅಭಿಪ್ರಾಯಪಟ್ಟರು.

ಟೋಟಲ್ ಕನ್ನಡ ಸಂಸ್ಥೆಯು ನಗರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ `ಚೋಮನ ದುಡಿ', `ಅರಿವು', `ಕೆಂಡದ ಮಳೆ', `ನರಸಜ್ಜನ ನರ್ಸರಿ' ಚಲನಚಿತ್ರಗಳ ಡಿವಿಡಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

`ಈ ಕಲಾತ್ಮಕ ಚಿತ್ರಗಳನ್ನು ಡಿವಿಡಿ ರೂಪದಲ್ಲಿ ಬಿಡುಗಡೆ ಮಾಡುವ ಮೂಲಕ ಹೊಸ ಅಲೆಯ ಪರಂಪರೆಯನ್ನು ಜೀವಂತವಾಗಿರಿಸಲು ಸಾಧ್ಯವಾಗುತ್ತದೆ. ಚಿತ್ರಗಳ ಜತೆಯಲ್ಲಿ ಅದರಲ್ಲಿ ಅಭಿನಯಿಸಿದ ಪ್ರಮುಖ ಪಾತ್ರಧಾರಿಗಳು, ಛಾಯಾಗ್ರಾಹಕರು ಹಾಗೂ ಕತೆಗಾರರನ್ನು ಕೂಡ ನೆನಪಿಸಿಕೊಳ್ಳುವುದು ಕೂಡ ಸಂತೋಷ ತಂದಿದೆ' ಎಂದು ಹೇಳಿದರು.

`ಚೋಮನ ದುಡಿಯಲ್ಲಿ ಚೋಮನ ಪಾತ್ರ ನಿರ್ವಹಿಸಿದ್ದ ವಾಸುದೇವರಾವ್ ಅವರಲ್ಲಿ ಪ್ರತಿಭೆಯಿದ್ದರೂ ಕೂಡ ಉತ್ತಮ ಅವಕಾಶಗಳು ದೊರೆತಿರಲಿಲ್ಲ. ಈ ಬಗ್ಗೆ ಅವರ ಪತ್ನಿಗೂ ಬೇಸರವಿತ್ತು. ಚೋಮನ ಪಾತ್ರ ದಕ್ಕಿದ ನಂತರ ಖುಷಿಯಾಗಿದ್ದರು. ಅಲ್ಲದೇ ಛಾಯಾಗ್ರಾಹಕ ಎಸ್.ರಾಮಚಂದ್ರ ಅವರು ನಾಯಕಿಯ ಸೌಂದರ್ಯವೆಂಬುದು ಪ್ರಾದೇಶಿಕ ಸತ್ವವನ್ನು ತಿಳಿಸುವ ನಿಟ್ಟಿನಲ್ಲಿ ಪೂರಕವಾಗಿರಬೇಕು ಎಂದು ಹೇಳುತ್ತಿದ್ದರು' ಎಂದು ಅವರು ನೆನಪಿಸಿಕೊಂಡರು.

ಸಾಹಿತಿ ಕುಂ.ವೀರಭದ್ರಪ್ಪ, `ಕಿಚ್ಚ, ಮಚ್ಚ, ಹುಚ್ಚದಂತಹ ಸಿನಿಮಾಗಳ ನಡುವೆಯೂ ಸಮಾಜವನ್ನು ಚಿಕಿತ್ಸಕ ದೃಷ್ಟಿಯಿಂದ ನೋಡುವ ಕಲಾತ್ಮಕ ಚಿತ್ರಗಳು ಡಿವಿಡಿ ರೂಪದಲ್ಲಿ ಜನರ ಕೈ ಸೇರುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ' ಎಂದು ತಿಳಿಸಿದರು.

`ಜಾತಿ ಹಾಗೂ ಮತಕ್ಕೆ ಸಂಬಂಧಿಸಿದಂತೆ ಮನುಷ್ಯನಲ್ಲಿ ಇರಬಹುದಾದ ಕ್ರೌರ್ಯ ತೀರಾ ಅಪಾಯಕಾರಿಯಾಗಿದ್ದು. ಈ ಅಂಶದ ಮೇಲೆ ರಚಿತವಾದ ನನ್ನ `ಕೆಂಡದ ಮಳೆ' ಕಾದಂಬರಿಯನ್ನು ಉತ್ತಮ ಸಿನಿಮಾ ಮಾಡಿದ್ದಾರೆ' ಎಂದು ತಿಳಿಸಿದರು.

`ಇಂದಿಗೂ ಕನ್ನಡದಲ್ಲಿ ಉತ್ತಮ ಕತೆಗಳು ಬರುತ್ತಿಲ್ಲ ಎಂದು ನಿರ್ದೇಶಕರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಆದರೆ ನಿಜವಾಗಲೂ ಬರುವ ಅತ್ಯುತ್ತಮ ಕತೆಗಳನ್ನು ನಿರ್ದೇಶಕರು ಓದುತ್ತಿಲ್ಲ. ಓದುವ ಹಾಗೂ ಕಲ್ಪನೆಗೆ ದಕ್ಕಿಸಿಕೊಳ್ಳುವ ವ್ಯವಧಾನ ನಿರ್ದೇಶಕರಲ್ಲಿ ಉಳಿದಿಲ್ಲ' ಎಂದು ದೂರಿದ ಅವರು, `ಎಲ್ಲ ಭಾಷೆಗಳ ಉತ್ತಮ ಅಭಿರುಚಿಯುಳ್ಳ ಸಿನಿಮಾ ವೀಕ್ಷಣೆಯಿಂದ ಸೃಜನಶೀಲತೆ ಹೆಚ್ಚುವುದಲ್ಲದೇ ಸಮಾಜವನ್ನು ಅರಿಯಲು ಸಾಧ್ಯವಾಗುತ್ತದೆ. ಡಾ. ರಾಜ್‌ಕುಮಾರ್ ಅಭಿನಯದ ಪಾತ್ರಗಳು ಉತ್ತಮ ಮನುಷ್ಯನಾಗುವುದರ ಬಗ್ಗೆ ಪ್ರೇಕ್ಷಕರಿಗೆ ನಿರ್ದೇಶನ ನೀಡುತ್ತದೆ' ಎಂದು ಶ್ಲಾಘಿಸಿದರು.
 

`ಮಳೆ' ನಂತರ ಭಟ್ಟರ ಪ್ರತಿಭೆ ತೊಳೆದು ಹೋಯ್ತು!

`ಕಲಾತ್ಮಕ ಚಿತ್ರಗಳಿಗೆ ಹಣ ತೊಡಗಿಸಲು ಯಾವ ನಿರ್ಮಾಪಕರೂ ಮುಂದೆ ಬರುವುದಿಲ್ಲ. ಪ್ರಶಸ್ತಿಗಳ ಸುರಿಮಳೆಯೇ ಬೇಕು, ಆದರೆ ಸಾಮಾಜಿಕ ಬದ್ಧತೆ ಬೇಡ ಎನ್ನುವ ನಿರ್ಮಾಪಕರಿದ್ದಾರೆ' ಎಂದು ಕುಂ.ವೀರಭದ್ರಪ್ಪ ಆಕ್ಷೇಪಿಸಿದರು.

`ಗಿರೀಶ್ ಕಾಸರವಳ್ಳಿ ನಿರ್ದೇಶನದ ಕಲಾತ್ಮಕ ಸಿನಿಮಾಕ್ಕೆ ಹಣ ತೊಡಗಿಸುತ್ತೀರಾ? ಎಂದು ಪರಿಚಯವಿದ್ದ ನಿರ್ಮಾಪಕರೊಬ್ಬರಲ್ಲಿ ಕೇಳಿದಾಗ ಮೂಗು ಮುರಿದರು. ಅವರಿಗೆ ಯೋಗರಾಜಭಟ್ಟರ ನಿರ್ದೇಶನದಲ್ಲಿ ಪುನೀತ್‌ರಾಜ್‌ಕುಮಾರ್ ಅವರನ್ನು ನಾಯಕರನ್ನಾಗಿಸಿಕೊಂಡು ಸಿನಿಮಾ ಮಾಡಬೇಕೆಂಬ ಉದ್ದೇಶವಿತ್ತಂತೆ. ಆದರೆ, `ಮಳೆ'ಯ ನಂತರ ಯೋಗರಾಜಭಟ್ಟರ ಪ್ರತಿಭೆಯು ತೊಳೆದುಕೊಂಡು ಹೋಗಿದೆ' ಎಂದು ವ್ಯಂಗ್ಯವಾಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT