ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾತ್ಮಕ ಪುಷ್ಕರಣಿ ಗ್ರಾಮಕ್ಕೆ ಬೇಕು ಕಾಯಕಲ್ಪ

Last Updated 26 ಮಾರ್ಚ್ 2011, 9:40 IST
ಅಕ್ಷರ ಗಾತ್ರ

ಕಲಾತ್ಮಕ ಪುಷ್ಕರಣಿ ಇರುವ ಐತಿಹಾಸ ಪ್ರಸಿದ್ಧ ಗ್ರಾಮ ಸಂತೇಬೆನ್ನೂರು. ಚನ್ನಗಿರಿಯಿಂದ 22 ಕಿ.ಮೀ. ಹಾಗೂ ಜಿಲ್ಲಾ ಕೇಂದ್ರದಿಂದ 40 ಕಿ.ಮೀ. ದೂರದಲ್ಲಿರುವ ಈ ಗ್ರಾಮ ಚನ್ನಗಿರಿ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ.

 ಒಂದು ಕಾಲದಲ್ಲಿ ಫುಟ್‌ಬಾಲ್ ಕ್ರೀಡೆಗೆ ಸಂತೇಬೆನ್ನೂರು ಹೆಸರಾಗಿತ್ತು. ಇಂದು ಮಾವಿನ ಕೃಷಿಗೆ ಪ್ರಸಿದ್ಧಿ ಪಡೆದಿದೆ. ಕೃಷಿ, ತೋಟಗಾರಿಕೆ, ವ್ಯಾಪಾರ-ವಹಿವಾಟಿನ ಜತೆಗೆ ಶಿಕ್ಷಣ, ಸಾಹಿತ್ಯದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. 17 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಹೋಬಳಿ ಕೇಂದ್ರ ತಾಲ್ಲೂಕು ಕೇಂದ್ರವಾಗುವ ಎಲ್ಲ ಲಕ್ಷಣಗಳನ್ನು ಹೊಂದಿದೆ.

ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, 6 ಪ್ರಾಥಮಿಕ ಶಾಲೆಗಳು, 3 ಪ್ರೌಢಶಾಲೆ, ಒಂದು ಪದವಿಪೂರ್ವ ಕಾಲೇಜು, ಒಂದು ಪದವಿ ಕಾಲೇಜು 2 ಐಟಿಐ ಕಾಲೇಜುಗಳು ಇಲ್ಲಿವೆ. 4 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಹಂತದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಗ್ರಾಮದ ಸಾಕ್ಷರತೆ ಶೇ. 58.

ಸಂತೇಬೆನ್ನೂರು ಗ್ರಾ.ಪಂ. 25 ಸದಸ್ಯರನ್ನು ಒಳಗೊಂಡ ದೊಡ್ಡ ಪಂಚಾಯ್ತಿಯಾಗಿದೆ. ಪಂಚಾಯ್ತಿಯಲ್ಲಿ 11 ಮಹಿಳಾ ಸದಸ್ಯರಿದ್ದಾರೆ. ಗ್ರಾಮದಲ್ಲಿ 41 ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ಇರುವುದು ವಿಶೇಷ. ಗ್ರಾಮದಲ್ಲಿ ಮುಸ್ಲಿಂ, ಲಿಂಗಾಯತ, ಕುರುಬ, ಉಪ್ಪಾರ, ನಾಯಕ, ಬ್ರಾಹ್ಮಣ ಹಾಗೂ ಪರಿಶಿಷ್ಟ ಜಾತಿಯ ಜನರು ಇದ್ದಾರೆ. ಎಲ್ಲ ಜಾತಿ, ಜನಾಂಗದ ಜನರು ಸೌಹಾರ್ದಯುತವಾಗಿ ವಾಸಿಸುವ ವಿಶಿಷ್ಟ ತಾಣ ಸಂತೇಬೆನ್ನೂರು.

ಇತಿಹಾಸ, ಹಿನ್ನೆಲೆ
ಸಂತೇಬೆನ್ನೂರು ಎಂದರೆ ಥಟ್ಟನೆ ನೆನಪಾಗುವುದು ಸುಂದರವಾದ ಪುಷ್ಕರಣಿ. ಗ್ರಾಮದ ಇತಿಹಾಸವೂ ಈ ಪುಷ್ಕರಣಿಯಿಂದಲೇ ಆರಂಭವಾಗುತ್ತದೆ. ಮೊದಲು ವಿಜಯನಗರ ಅರಸರ ಆಳ್ವಿಕೆಗೆ ಒಳಪಟ್ಟಿದ್ದು, ನಂತರ ಪಾಳೆಗಾರರ ಆಳ್ವಿಕೆಗೆ ಸೇರಿತು. 16ನೇ ಶತಮಾನದಲ್ಲಿ ಪಾಳೆಗಾರ ಕೆಂಗಹನುಮಪ್ಪ ನಾಯಕ ಇಲ್ಲಿ ರಾಮಚಂದ್ರ ದೇವಸ್ಥಾನ ನಿರ್ಮಿಸಿ, ಅದರ ಮುಂದೆ ಪುಷ್ಕರಣಿ ನಿರ್ಮಿಸಿದ. ಸಂತೇಬೆನ್ನೂರಿನ ಮೇಲೆ ದಾಳಿ ನಡೆಸಿದ ರಣದುಲ್ಲಾಖಾನ್ ನೇತೃತ್ವದ ಬಿಜಾಪುರ ಸುಲ್ತಾನನ ಸೈನ್ಯ ದೇವಸ್ಥಾನವನ್ನು ಧ್ವಂಸಗೊಳಿಸಿದರು ಎಂದು ಇತಿಹಾಸದಿಂದ ತಿಳಿದುಬರುತ್ತದೆ. ಇಲ್ಲಿರುವ ಮಸೀದಿ ಹಾಗೂ ರಾಮಚಂದ್ರ ದೇವಾಲಯ ಇಂದಿಗೂ ಭಾವೈಕ್ಯತೆಯನ್ನು ಬಿಂಬಿಸುತ್ತವೆ.

ಮೂಲಸೌಕರ್ಯ ಕೊರತೆ
ಗ್ರಾಮದಲ್ಲಿ 17 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದರೂ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತದೆ. ಒಂದೂವರೆ ವರ್ಷದಿಂದ ಸೂಳೆಕೆರೆ ಕುಡಿಯುವ ನೀರಿನ ಯೋಜನೆ ನೆನೆಗುದಿಗೆ ಬಿದ್ದಿದ್ದು, ನೀರಿಗೆ ನಿತ್ಯವೂ ಪರದಾಡುವ ಸ್ಥಿತಿ ಇಲ್ಲಿನ ಜನರದಾಗಿದೆ.

ಬಹುತೇಕ ರಸ್ತೆಗಳು ಡಾಂಬರು ಕಾಣದೇ ಗುಂಡಿಗಳಿಂದ ಕೂಡಿದ್ದು, ಸುಗಮ ಸಂಚಾರ ವ್ಯವಸ್ಥೆಗೆ ಧಕ್ಕೆಯಾಗಿದೆ. ಚರಂಡಿಗಳು ತ್ಯಾಜ್ಯ ತುಂಬಿಕೊಂಡು ದುರ್ನಾತ ಬೀರುತ್ತಿವೆ. ಇದೆಲ್ಲದರ ಜತೆಗೆ ವಿದ್ಯುತ್ ಸಮಸ್ಯೆಯೂ ಸೇರಿಕೊಂಡು ಜನರನ್ನು ಹೈರಾಣಾಗಿಸಿವೆ.

ಗ್ರಾಮ ಪಂಚಾಯ್ತಿ, ನಾಡ ಕಚೇರಿ, ಪ್ರಥಮದರ್ಜೆ ಕಾಲೇಜು, ಗ್ರಂಥಾಲಯ, ಅಂಚೆ ಕಚೇರಿ, ದೂರ ಸಂಪರ್ಕ ಕಚೇರಿಯೂ ಸೇರಿದಂತೆ ಹಲವು ಇಲಾಖೆಗಳಿಗೆ ಸ್ವಂತ ಕಟ್ಟಡವಿಲ್ಲ. ಇನ್ನೊಂದೆಡೆ ಹಳೇ ಸರ್ಕಾರಿ ಆಸ್ಪತ್ರೆ, ಪ್ರವಾಸಿ ಮಂದಿರ, ವಸತಿ ಗೃಹಗಳು ಪಾಳು ಬಿದ್ದವೆ.

ಅಭಿವೃದ್ಧಿ ಕಾಮಗಾರಿ
ಗ್ರಾಮ ಪಂಚಾಯ್ತಿಗೆ ಈಚಿನ ದಿನಗಳಲ್ಲಿ ಸಾಕಷ್ಟು ಅನುದಾನ ಬರುತ್ತಿದೆ. ಉದ್ಯೋಗ ಖಾತ್ರಿಯಲ್ಲಿ 39.60 ಲಕ್ಷ ರೂ ವಿವಿಧ ಕಾಮಗಾರಿಗಳಿಗೆ ಬಳಸಲಾಗಿದೆ. ಸುವರ್ಣ ಗ್ರಾಮ ಯೋಜನೆಯಲ್ಲಿ 2.40 ಕೋಟಿಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ. ಗ್ರಾಮ ಸ್ವರಾಜ್ ಅಡಿ 6.34 ಲಕ್ಷ, 13ನೇ ಹಣಕಾಸು ಯೋಜನೆ ಅಡಿ ಕುಡಿಯುವ ನೀರಿಗೆ 6.88 ಲಕ್ಷ ಬಳಸಲಾಗಿದೆ ಎಂದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಕೆ.ಎಚ್. ಗೋಪಾಲಕೃಷ್ಣ ಮಾಹಿತಿ ನೀಡುತ್ತಾರೆ. ಪೂರಕ ಮಾಹಿತಿ ಹಾಗೂ ಚಿತ್ರಗಳು: ವೀರೇಂದ್ರ ಪ್ರಸಾದ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT