ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾಪ ಪಟ್ಟಿಗೆ ವಿಷಯ ಸೇರ್ಪಡೆ: ಸರ್ಕಾರ ಸೂಚನೆ

Last Updated 9 ಫೆಬ್ರುವರಿ 2012, 19:25 IST
ಅಕ್ಷರ ಗಾತ್ರ

ಬೆಂಗಳೂರು:  ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆ ಕರೆಯುವ ವಿಚಾರದಲ್ಲಿ ರಾಜ್ಯ ಸರ್ಕಾರವು ಮಧ್ಯೆ ಪ್ರವೇಶಿಸಿದೆ. ಶನಿವಾರ (ಫೆ. 11) ಕರೆದಿರುವ ಸಭೆಯ ಕಲಾಪ ಪಟ್ಟಿಗೆ ಸಿಂಡಿಕೇಟ್ ಸದಸ್ಯರು ಈಗಾಗಲೇ  ಒತ್ತಾಯಿಸಿರುವ ಪ್ರಮುಖ ವಿಷಯಗಳನ್ನು ಪಟ್ಟಿಯಲ್ಲಿ ಸೇರಿಸಬೇಕೆಂದು ಉನ್ನತ ಶಿಕ್ಷಣ ಇಲಾಖೆಯು ಕುಲಪತಿಗೆ ಸೂಚಿಸಿದೆ.

ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಬುಧವಾರ ಕುಲಪತಿಯವರನ್ನು ಉದ್ದೇಶಿಸಿ ಹೊರಡಿಸಿರುವ ಸೂಚನಾ ಪತ್ರದಲ್ಲಿ, `ಕರ್ನಾಟಕ ವಿ.ವಿ. ಕಾಯ್ದೆ- 2000ದ ಸೆಕ್ಷನ್ 28 (3)ರ ಪ್ರಕಾರ ಈ ನಿರ್ದೇಶನ ನೀಡಲಾಗಿದೆ~ ಎಂದು ತಿಳಿಸಲಾಗಿದೆ.

`ಶನಿವಾರದ ಸಭೆಯನ್ನು ಸ್ಮಾರ್ಟ್ ಕಾರ್ಡ್ ಆಧಾರಿತ ಇ- ಆಡಳಿತ ಪರಿಹಾರಗಳು ಮತ್ತು ಸ್ಥಳೀಯ ಪರಿಶೀಲನಾ ಸಮಿತಿಗಳಿಗೆ ಸಿಂಡಿಕೇಟ್ ಸದಸ್ಯರ ನೇಮಕ ಕುರಿತು ಚರ್ಚಿಸಲು ಕರೆದಿರುವುದಾಗಿ ತಿಳಿದು ಬಂದಿದೆ. ಆದರೆ ವಿ.ವಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಗಂಭೀರ ಮತ್ತು ಮಹತ್ವದ ವಿಚಾರಗಳನ್ನು ಚರ್ಚಿಸುವ ಸಲುವಾಗಿ ವಿಶೇಷ ಸಿಂಡಿಕೇಟ್ ಸಭೆ ಕರೆಯುವಂತೆ ಅನೇಕ ಸಿಂಡಿಕೇಟ್ ಸದಸ್ಯರು ಡಿಸೆಂಬರ್ 5 ಮತ್ತು ಜನವರಿ 16ರಂದು ಪತ್ರ ನೀಡಿ ಒತ್ತಾಯಿಸಿದ್ದಾರೆ. ಅವರು ಪ್ರಸ್ತಾಪಿಸಿರುವ ವಿಷಯಗಳನ್ನೂ ಸಭೆಯಲ್ಲಿ ಚರ್ಚಿಸಬೇಕು~ ಎಂದು ಇಲಾಖೆ ತಾಕೀತು ಮಾಡಿದೆ.

`ಕೋಲಾರದ ಸ್ನಾತಕೋತ್ತರ ಕೇಂದ್ರದ ಕಟ್ಟಡ ನಿರ್ಮಾಣ ಮತ್ತು ವಿತ್ತಾಧಿಕಾರಿಗಳ ನೇಮಕ, ಕಾನೂನು ಕೋಶ ಮುಖ್ಯಸ್ಥರ ನೇಮಕ, ರಾಮಕೃಷ್ಣ ವಿಚಾರಣಾ ಸಮಿತಿ, ವಿ.ವಿ. ಜಮೀನಿನ ಸಂರಕ್ಷಣೆ, ಹಾಸ್ಟೆಲ್‌ಗಳ ದುರಸ್ತಿ ಮತ್ತು ಮೂಲಸೌಕರ್ಯಗಳ ನಿರ್ಮಾಣ, ಶಿಕ್ಷಕ ಮತ್ತು ಶಿಕ್ಷಕೇತರ ಬಡ್ತಿ- ಮೊದಲಾದ ವಿಷಯಗಳ ಬಗ್ಗೆ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸುವ ಅಗತ್ಯ ಇದೆ ಎಂಬುದು ಸರ್ಕಾರಕ್ಕೆ ಕಂಡು ಬಂದಿದೆ~ ಎಂದು ಇಲಾಖೆ ಅಭಿಪ್ರಾಯಪಟ್ಟಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT