ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾಪ ಹಾಳು, ಮತ್ತೆ ಸಭಾತ್ಯಾಗ

Last Updated 15 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಇಬ್ಬರು ಪುತ್ರರು ಟ್ರಸ್ಟಿಗಳಾಗಿರುವ ಪ್ರೇರಣಾ ಶಿಕ್ಷಣ ಮತ್ತು ಸಾಮಾಜಿಕ ಟ್ರಸ್ಟ್ (ಪಿಇಎಸ್)ಗೆ ಅಕ್ರಮ ದೇಣಿಗೆ ಸಂದಾಯವಾಗಿದ್ದು, ಈ ಕುರಿತು ಸಿಬಿಐ ತನಿಖೆಗೆ ಒತ್ತಾಯಿಸಿ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ವಿಧಾನಸಭೆಯಲ್ಲಿ ಮಂಗಳವಾರವೂ ಧರಣಿ ನಡೆಸಿದರು. ವಿಧಾನ ಪರಿಷತ್‌ನಲ್ಲೂ ಈ ವಿಷಯ ಪ್ರತಿಧ್ವನಿಸಿ, ಪ್ರತಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿದರು.

ಧರಣಿ ಹಿನ್ನೆಲೆಯಲ್ಲಿ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರು ಎರಡು ಬಾರಿ ವಿಧಾನಸಭೆ ಕಲಾಪ ಮುಂದೂಡಿದರು. ಮಧ್ಯಾಹ್ನ ಪುನಃ ಸೇರಿದರೂ ಪ್ರತಿಪಕ್ಷಗಳು ಧರಣಿ ಕೈಬಿಡಲಿಲ್ಲ. ಹೀಗಾಗಿ ಸದನವನ್ನು ಬುಧವಾರಕ್ಕೆ ಮುಂದೂಡಲಾಯಿತು. ಉಳಿದಂತೆ ಇಡೀ ದಿನ ಬೇರೆ ಯಾವ ಕಲಾಪಗಳೂ ನಡೆಯಲಿಲ್ಲ. ಪ್ರಶ್ನೋತ್ತರ, ಶೂನ್ಯವೇಳೆ ಮತ್ತು ಮಸೂದೆಗಳ ಅಂಗೀಕಾರ ಸೇರಿದಂತೆ ಇತರ ವಿಷಯಗಳು ಮಂಗಳವಾರದ ಕಾರ್ಯಕಲಾಪಗಳ ಪಟ್ಟಿಯಲ್ಲಿ ಸೇರಿತ್ತು. ಬೆಳಿಗ್ಗೆ ಸದನ ಸೇರುತ್ತಿದ್ದಂತೆ ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಳ್ಳಲು ಸಭಾಧ್ಯಕ್ಷರು ಮುಂದಾದರು.

ಇದಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿ, ‘ಪಿಇಎಸ್ ಟ್ರಸ್ಟ್‌ಗೆ ಕೋಟಿಗಟ್ಟಲೆ ಹಣ ಸಂದಾಯವಾಗಿದ್ದು, ಈ ಕುರಿತು ಮುಖ್ಯಮಂತ್ರಿ ಕೊಟ್ಟಿರುವ ಉತ್ತರ ತೃಪ್ತಿ ತಂದಿಲ್ಲ. ನಮ್ಮ ಆಕ್ಷೇಪಗಳಿಗೆ ಸ್ಪಷ್ಟವಾದ ವಿವರಣೆ ನೀಡಿಲ್ಲ. ಹೀಗಾಗಿ ಸತ್ಯ ಗೊತ್ತಾಗಲು ಸಿಬಿಐ ತನಿಖೆ ಆಗಬೇಕು. ಈ ತಕ್ಷಣವೇ ಯಡಿಯೂರಪ್ಪ ರಾಜೀನಾಮೆ ನೀಡಬೇಕು’ ಎಂದು ಆಗ್ರಹಪಡಿಸಿದರು.

‘ಈ ಪ್ರಕರಣ ಕುರಿತು ಸೋಮವಾರವೇ ಎಲ್ಲವೂ ಚರ್ಚೆಯಾಗಿದೆ. ಅದಕ್ಕೆ ಮುಖ್ಯಮಂತ್ರಿ ಉತ್ತರವೂ ನೀಡಿದ್ದಾರೆ. ಹೀಗಾಗಿ ಪುನಃ ಆ ಬಗ್ಗೆ ಚರ್ಚೆ ಬೇಡ’ ಎಂದು ಸಭಾಧ್ಯಕ್ಷರು ಸೂಚಿಸಿದರು. ಈ ನಡುವೆ ಜೆಡಿಎಸ್‌ನ ಎಚ್.ಡಿ.ರೇವಣ್ಣ ಕೂಡ ಸಿಬಿಐ ತನಿಖೆಯಾಗಬೇಕೆಂದು ಪಟ್ಟುಹಿಡಿದರು.

ಎಷ್ಟೇ ಪಟ್ಟು ಹಿಡಿದರೂ ಸಭಾಧ್ಯಕ್ಷರು ಪ್ರತಿಪಕ್ಷಗಳ ಬೇಡಿಕೆಗೆ ಸ್ಪಂದಿಸಲಿಲ್ಲ. ಬದಲಿಗೆ, ‘ನೀವು ಹೇಳಿದ ರೀತಿಯಲ್ಲೇ ತನಿಖೆ ಮಾಡಿ ಎಂದು ಸರ್ಕಾರಕ್ಕೆ ಸೂಚಿಸಲು ಸಾಧ್ಯವಿಲ್ಲ. ಕಲಾಪ ನಡೆಸಲು ಸಹಕರಿಸಿ’ ಎಂದು ಕೋರಿದರು.
ಸಂಸದೀಯ ವ್ಯವಹಾರಗಳ ಸಚಿವ ಸುರೇಶಕುಮಾರ್ ಮಾತನಾಡಿ, ‘ತನಿಖೆಯನ್ನು ಸಿಬಿಐಗೆ ವಹಿಸುವುದಿಲ್ಲ ಎನ್ನುವುದನ್ನು ಈಗಾಗಲೇ ಸ್ಪಷ್ಟಪಡಿಸಲಾಗಿದೆ ಎಂದರು.

ಇದು ನಮ್ಮ ಪಕ್ಷದ ನಿಲುವು ಕೂಡ. ಸಿಬಿಐ ಇವತ್ತು ‘ಕಾಂಗ್ರೆಸ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್’ ಆಗಿದೆ. ಹೀಗಾಗಿ ಅದಕ್ಕೆ ಕೊಟ್ಟು ನಾವು ಅದರ ಮುಂದೆ ಕೈಕಟ್ಟಿ ನಿಲ್ಲಬೇಕೇ? ಅದು ಎಷ್ಟು ನಿಷ್ಪಕ್ಷಪಾತವಾಗಿ ತನಿಖೆ ಮಾಡುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ’ ಎಂದು ತರಾಟೆಗೆ ತೆಗೆದುಕೊಂಡರು.

ಸಚಿವರ ಈ ಹೇಳಿಕೆಯಿಂದ ಮತ್ತಷ್ಟು ಕೋಪಗೊಂಡ ಪ್ರತಿಪಕ್ಷ ಸದಸ್ಯರು ಧರಣಿ ನಡೆಸಲು ಸಭಾಧ್ಯಕ್ಷರ ಪೀಠದ ಮುಂದೆ ಧಾವಿಸಿದರು. ಮುಖ್ಯಮಂತ್ರಿ ಮತ್ತು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ನಡುವೆ ಬಿಜೆಪಿಯ ಸಿ.ಟಿ.ರವಿ, ಸಿದ್ದು ಸವದಿ ಅವರು ಅಮಾನತ್ ಬ್ಯಾಂಕಿನ ಅಕ್ರಮಗಳ ಬಗ್ಗೆಯೂ ಚರ್ಚೆ ನಡೆಸಬೇಕಿದ್ದು, ಅವಕಾಶ ನೀಡಿ ಎನ್ನುವ ಬೇಡಿಕೆ ಸಲ್ಲಿಸಿದರು. ಈ ಅಕ್ರಮದಲ್ಲಿ ಕಾಂಗ್ರೆಸ್ಸಿನ ಮುಖಂಡರೇ ಭಾಗಿಯಾಗಿದ್ದಾರೆ ಎಂದೂ ದೂರಿದರು.

ಕೋಲಾಹಲ, ಗದ್ದಲ ಹೆಚ್ಚಾದ ತಕ್ಷಣ ಸಭಾಧ್ಯಕ್ಷರು ಸದನವನ್ನು ಅರ್ಧ ಗಂಟೆ ಕಾಲ ಮುಂದೂಡಿದರು. ಪುನಃ ಸದನ ಸೇರಿದಾಗಲೂ ಪ್ರತಿಪಕ್ಷಗಳ ಧರಣಿ ಮುಂದುವರೆಯಿತು. ಆಗ ಸದನವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಯಿತು.

ಮಧ್ಯಾಹ್ನವೂ ಮುಂದುವರಿದ ಧರಣಿ:
ಮಧ್ಯಾಹ್ನ 4.20ಕ್ಕೆ ಕಲಾಪ ಆರಂಭವಾಯಿತು. ಆಗಲೂ ಪ್ರತಿಪಕ್ಷಗಳ ಸದಸ್ಯರು ಧರಣಿ ಮುಂದುವರಿಸಿದರು. ಗಮನ ಸೆಳೆಯುವ ಸೂಚನೆಗಳನ್ನು ಕೈಗೆತ್ತಿಕೊಳ್ಳಲು ಸ್ಪೀಕರ್ ಮುಂದಾದರು. ಆಗ ಸಭಾಧ್ಯಕ್ಷರ ಪೀಠದ ಎದುರಿನಲ್ಲಿದ್ದ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಏರಿದ ದನಿಯಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಧರಣಿ ನಿಲ್ಲಿಸುವಂತೆ ಸ್ಪೀಕರ್ ಮನವಿ ಮಾಡಿಕೊಂಡರು. ಆದರೆ ಪಟ್ಟು ಸಡಿಲಿಸದ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಧರಣಿ ಮುಂದುವರಿಸಿದರು. ಗದ್ದಲ ಹೆಚ್ಚಿದ ಹಿನ್ನೆಲೆಯಲ್ಲಿ ಸದನದ ಕಲಾಪವನ್ನು ಬುಧವಾರ ಮಧ್ಯಾಹ್ನ 12 ಗಂಟೆಗೆ ಮುಂದೂಡಿದರು.

ಮೇಲ್ಮನೆಯಲ್ಲೂ ಕೋಲಾಹಲ:
ಪ್ರೇರಣಾ ಶಿಕ್ಷಣ ಟ್ರಸ್ಟ್‌ಗೆ ಸಂದಾಯವಾದ ದೇಣಿಗೆ ಹಣದ ವಿಷಯವು ವಿಧಾನ ಪರಿಷತ್ತಿನಲ್ಲಿಯೂ ಕೋಲಾಹಲ ಸೃಷ್ಟಿಸಿತು. ಮುಖ್ಯಮಂತ್ರಿ ಅವರ ಉತ್ತರದಿಂದ ತೃಪ್ತರಾಗದ ವಿರೋಧ ಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು.

ನಿಯಮ 68ರ ಅಡಿಯಲ್ಲಿ ನಡೆದ ಚರ್ಚೆಯಲ್ಲಿ ವಿರೋಧ ಪಕ್ಷಗಳ ಸದಸ್ಯರ ಒತ್ತಾಯಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ‘ಪ್ರೇರಣಾ ಟ್ರಸ್ಟ್‌ಗೆ ಜಿಂದಾಲ್ ಸ್ಟೀಲ್ಸ್, ಆದರ್ಶ ಡೆವಲಪರ್ಸ್‌ ಸೇರಿದಂತೆ ಇತರ ಸಂಸ್ಥೆಗಳು 27 ಕೋಟಿ ರೂಪಾಯಿ ದೇಣಿಗೆ ಕೊಟ್ಟಿರುವುದು ನಿಜ.

ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಟ್ರಸ್ಟಿನ ಹಣಕಾಸಿನ ವ್ಯವಹಾರ ಪಾರದರ್ಶಕವಾಗಿದೆ. ಆದ್ದರಿಂದ ಸಿಬಿಐ ಅಷ್ಟೇ ಅಲ್ಲ, ಯಾವುದೇ ತನಿಖಾ ಸಂಸ್ಥೆಗಳಿಂದಲೂ ತನಿಖೆ ನಡೆಸಲ್ಲ’ ಎಂದು ಖಡಾಖಂಡಿತವಾಗಿ ಹೇಳಿದರು.

‘ಜಿಂದಾಲ್ ಕಂಪೆನಿಯು ಹತ್ತು ಹಲವು ಶಿಕ್ಷಣ ಸಂಸ್ಥೆಗಳಿಗೆ ದೇಣಿಗೆ ನೀಡಿದೆ. ಅದರಲ್ಲಿ ಪ್ರೇರಣಾ ಕೂಡ ಒಂದು. ಹಾಗಂತ ನಾನು ಯಾವುದೇ ರೀತಿಯಲ್ಲಿ ಕಂಪೆನಿಗೆ ಸಹಾಯ ಮಾಡಿಲ್ಲ.

ಹಾಗೆಯೇ ಆದರ್ಶ ಡೆವಲಪರ್ಸ್‌ ಕಂಪೆನಿಗೂ ಕೂಡ ಯಾವುದೇ ರೀತಿಯಲ್ಲಿ ಸಹಾಯ ಮಾಡಿಲ್ಲ’ ಎಂದು ಪುನರುಚ್ಚರಿಸಿದರು. 

‘ಮುಖ್ಯಮಂತ್ರಿ ಅವರ ಉತ್ತರ ಸಮರ್ಪಕವಾಗಿಲ್ಲ. ನಮಗೆ ಹಾಗೂ ರಾಜ್ಯದ ಜನರಿಗೆ ತೃಪ್ತಿ ತಂದಿಲ್ಲ’ ಎಂದು ಎಂದು ಜೆಡಿಎಸ್‌ನ ಎಂ.ಸಿ. ನಾಣಯ್ಯ ಪ್ರತಿಭಟಿಸಿದರು.

ಇದಕ್ಕೆ ದನಿಗೂಡಿಸಿದ ಕಾಂಗ್ರೆಸ್ಸಿನ ಮೋಟಮ್ಮ, ‘ನಷ್ಟದಲ್ಲಿರುವ ಕಂಪೆನಿ ಹೇಗೆ ಕೋಟ್ಯಂತರ ರೂಪಾಯಿ ದೇಣಿಗೆ ನೀಡಲು ಸಾಧ್ಯ? ಬೇರೆ ಯಾವ ಟ್ರಸ್ಟ್‌ಗಳಿಗೂ ಹಣ ನೀಡದ ಈ ಕಂಪೆನಿಗಳು ಪ್ರೇರಣಾ ಟ್ರಸ್ಟ್‌ಗೆ ಏಕೆ ನೀಡಿವೆ?

ಮುಖ್ಯಮಂತ್ರಿ ಅವರಿಂದ ಬೇರೊಂದು ರೂಪದಲ್ಲಿ ಇವು ಲಾಭ ಗಿಟ್ಟಿಸಿಕೊಂಡಿವೆಯೇ ಎನ್ನುವುದನ್ನು ಸಿಬಿಐನಿಂದಲೇ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

ವಿರೋಧ ಪಕ್ಷಗಳ ಸದಸ್ಯರು ಸಭಾತ್ಯಾಗ ನಡೆಸಿದ್ದರಿಂದ ಪರಿಷತ್ತಿನ ಸಭಾಧ್ಯಕ್ಷ ಡಿ.ಎಚ್. ಶಂಕರಮೂರ್ತಿ ಅವರು ಕಲಾಪವನ್ನು ಬುಧವಾರಕ್ಕೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT