ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕಲಾಮಂದಿರ'ದಿಂದ ಕಣ್ಮರೆಯಾದ `ಮೂರ್ತಿ'

Last Updated 18 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: ತಿದ್ದಿ-ತೀಡಿ ಮಾಡಿದಂತಹ ಬಿಳಿಯ ಗಡ್ಡ, ಇನ್ನೇನು ಬಿದ್ದು ಬಿಡುತ್ತದೆ ಎನ್ನುವಂತೆ ಮೂಗಿನ ಮೇಲೆ ಕುಳಿತ ಚೌಕಾಕಾರದ ಕನ್ನಡಕ, ಮೈಮೇಲೆ ಖಾದಿ ಜುಬ್ಬಾ, ಹೆಗಲ ಮೇಲೊಂದು ನಾಟಕ ಕೃತಿ-ಕರಪತ್ರಗಳೇ ತುಂಬಿಕೊಂಡ ಜೋಳಿಗೆ!

ಹಿರಿಯ ರಂಗಕರ್ಮಿ ಎ.ಎಸ್. ಮೂರ್ತಿ ಅವರನ್ನು ಎಂತಹ ಅಪರಿಚಿತರೂ ಗುರುತಿಸುವುದು ಸುಲಭವಾಗಿತ್ತು. ಮೂರ್ತಿ ಅವರ ಬೀದಿ ನಾಟಕಗಳಂತೆ ಅವರ ವ್ಯಕ್ತಿತ್ವವೂ ನಿರಾಡಂಬರವಾಗಿತ್ತು. ಅನನ್ಯ ಹಾಸ್ಯಪ್ರಜ್ಞೆಗೆ ಹೆಸರಾಗಿದ್ದ ಈ `ನಾಟಕದ ಮೇಷ್ಟ್ರು', ಆಕಾಶವಾಣಿ `ಈರಣ್ಣ'ನಾಗಿ ಕನ್ನಡಿಗರ ಮನೆ ಮಾತಾಗಿದ್ದರು.

ವರ್ಷದ 12 ತಿಂಗಳು ಸದಾ ಒಂದಿಲ್ಲೊಂದು ರಂಗ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುತ್ತಿದ್ದರು ರಂಗದ ಈ ಅಜ್ಜ. ಇಳಿ ವಯಸ್ಸಿನಲ್ಲೂ ಹೊಸ ರಂಗ ತಂಡ ಕಟ್ಟುವ, ಹಳೆಯ ಚೌಕಟ್ಟು ಮುರಿಯುವ, ನವ ಮನ್ವಂತರಕ್ಕೆ ನಾಂದಿ ಹಾಡುವ ಉತ್ಸಾಹ ಅವರಲ್ಲಿ ಪುಟಿದೇಳುತ್ತಿತ್ತು.

ಮೂರ್ತಿ ಅವರ ಗರಡಿಯಲ್ಲಿ ಪಳಗಿದವರು ಚಿತ್ರ ನಟರಾಗಿದ್ದಾರೆ, ಟಿ.ವಿ ಕಲಾವಿದರಾಗಿದ್ದಾರೆ, ನಿರ್ದೇಶನದಲ್ಲಿ ಒಂದು ಕೈ ನೋಡಿದ್ದಾರೆ, ನಾಟಕ ಕೃತಿಗಳನ್ನೂ ರಚಿಸಿದ್ದಾರೆ. ಒಂದು ದೊಡ್ಡ ರಂಗ ಸಮುದಾಯವನ್ನೇ ಕಟ್ಟಿದ ಖ್ಯಾತಿ ಅವರ ಬೆನ್ನಿಗಿದೆ. ಮೂರ್ತಿ ಅವರೇ ಕಟ್ಟಿ ಬೆಳೆಸಿದ `ಅಭಿನಯ ತರಂಗ'ದಲ್ಲಿ ಬೆಳೆದ ಹುಡುಗ ಪ್ರಕಾಶ ರೈ, ಈಗ ದಕ್ಷಿಣ ಭಾರತವೇ ಮೆಚ್ಚುಗೆಯಿಂದ ನೋಡುವ ನಟ.

1929ರ ಆಗಸ್ಟ್ 16ರಂದು ಬೆಂಗಳೂರಿನಲ್ಲಿ ಜನಿಸಿದ ಮೂರ್ತಿ, ಸ್ವಾತಂತ್ರ್ಯ ಹೋರಾಟವನ್ನು ಬಾಲ್ಯದ ವಿಸ್ಮಯದಿಂದ ಕಂಡವರು. ಅವರ ತಂದೆ ಎ.ಎನ್. ಸುಬ್ಬರಾವ್ ಅವರದ್ದೂ ಕಲಾ ಜಗತ್ತಿನಲ್ಲಿ ಹಿರಿದಾದ ಹೆಸರು. ಅಂದಿನ ದಿನಗಳಲ್ಲಿ ರಂಗ ಚಟುವಟಿಕೆಗಳಿಗೆ ನೆಲೆ ಒದಗಿಸಲು ಹನುಮಂತನಗರದಲ್ಲಿ ಅವರು `ಕಲಾಮಂದಿರ'ವನ್ನೇ ನಿರ್ಮಿಸಿದರು. ಅವರ ನಿವಾಸ ಇರುವ ರಸ್ತೆಗೆ ಪಾಲಿಕೆ, ಸುಬ್ಬರಾವ್ ಅವರ ಹೆಸರು ಇಟ್ಟಿದೆ.

`ಕಲೆಯ ಉದ್ಧಾರಕ್ಕಾಗಿ 91 ವರ್ಷಗಳ ಕಾಲ ಸೈಕಲ್ ತುಳಿಯುತ್ತಲೇ ಬದುಕಿದವರು ನಮ್ಮಪ್ಪ. ಅವರ ಕಸುವು ಅರಿಯಲು ಕಲಾಮಂದಿರಕ್ಕೆ ಡಿವಿಜಿ ಅವರಂತಹ ಹಿರಿಯರು ಬರುತ್ತಿದ್ದರು. ನನ್ನ ಪ್ರಜ್ಞೆ ಜಾಗೃತವಾಗಲು ಅಂಥವರ ಒಡನಾಟವೇ ಕಾರಣ' ಎಂದು ಹೇಳುತ್ತಿದ್ದ ಮೂರ್ತಿ, `ಆಕಾಶವಾಣಿಯಲ್ಲಿ 25 ವರ್ಷದ ದುಡಿಮೆ, ಜನಸಾಮಾನ್ಯರ ನಾಡಿಮಿಡಿತ ಅರಿಯಲು ಸಾಧ್ಯವಾಯಿತು' ಎಂದು ನೆನೆಯುತ್ತಿದ್ದರು.

ಬಾಲ್ಯದಲ್ಲಿ ಕಂಡ ರಾಷ್ಟ್ರೀಯ ಚಳವಳಿ ಪ್ರಭಾವವೇನೋ, ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಲೇ ಬದುಕು ಸಾಗಿಸಿದವರು ಮೂರ್ತಿ. ನಾಟಕ ಶಿಬಿರ, ಚಲನಚಿತ್ರ ತರಬೇತಿ, ರಂಗ ಕೃತಿ ಪ್ರಕಟಣೆಯಂತಹ ಹತ್ತು-ಹಲವು ಗೀಳುಗಳನ್ನು ಹಚ್ಚಿಕೊಂಡಿದ್ದ ಅವರು, ತಮ್ಮ ಬಹುಪಾಲು ಸಂಪಾದನೆಯನ್ನು ಅದಕ್ಕಾಗಿ ಖರ್ಚು ಮಾಡುತ್ತಿದ್ದರು. ನಿಜ ಜೀವನದಲ್ಲಿ ಪತ್ರಕರ್ತನ `ಪಾತ್ರ'ವನ್ನೂ ಯಶಸ್ವಿಯಾಗಿ ಅಭಿನಯಿಸಿದವರು ಅವರು.

ರಾಜ್ಯದಲ್ಲಿ ಬೀದಿ ನಾಟಕ ಚಳವಳಿ ಜನಮನಕ್ಕೆ ಹತ್ತಿರವಾಗಲು ಮೂರ್ತಿ ಕಟ್ಟಿ ಬೆಳೆಸಿದ ಚಿತ್ರಾ ತಂಡವೂ ಕಾರಣ. ನೂರಕ್ಕೂ ಅಧಿಕ ರೇಡಿಯೊ ಹಾಗೂ ರಂಗ ನಾಟಕಗಳನ್ನು ಅವರು ರಚಿಸಿದ್ದಾರೆ. ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆ ಕುರಿತ ವ್ಯಂಗ್ಯ, ವಿಡಂಬನೆ ಅವರ ನಾಟಕಗಳ ವಸ್ತು. ಮಕ್ಕಳ ನಾಟಕಕ್ಕೆ `ಬಿಂಬ' ಎಂಬ ನಾಟಕ ಶಾಲೆ ತೆರೆದವರು ಮೂರ್ತಿ. ರಂಗ ಸಜ್ಜಿಕೆ ಮೇಲೆ ಅವರು ಅಭಿನಯಿಸದೆ ಇರದ ಪಾತ್ರವೇ ಇಲ್ಲ. ಎಂತಹ ಪಾತ್ರಕ್ಕೂ ಜೀವ ತುಂಬುವ ಕಲೆ ಅವರಿಗೆ ಸಿದ್ಧಿಸಿತ್ತು. ಮಾತಿನಿಂದ ಮೋಡಿ ಮಾಡುತ್ತಿದ್ದ ಅವರಿಗೆ ಆಂಗಿಕ ಅಭಿನಯ ಮತ್ತು ವಾಚಿಕ ಪ್ರತಿಭೆ ಒಲಿದಿತ್ತು.

`ಒಂದು ಮೂಲೇಲಿ ಕೂತು ಪುಸ್ತಕ ಬರೆದರೆ ಕ್ರಾಂತಿ ಆಗುತ್ತೆ ಅಂತ ನಾನೆಣಿಸಿದೆ. ಆದರೆ, ನನಗನ್ನಿಸುತ್ತದೆ, ಕ್ರಾಂತಿ ಇಂಥ ಬೀದಿ ನಾಟಕಗಳಿಂದ ಆಗಬಹುದೂಂತ' ಎಂದು ಕಾದಂಬರಿಕಾರ ತರಾಸು, ಮೂರು ದಶಕಗಳ ಹಿಂದೆಯೇ ಮೂರ್ತಿ ಅವರ ಹೊಸ ಪ್ರಯೋಗಕ್ಕೆ ಬೆನ್ನು ತಟ್ಟಿದ್ದರು. ಕನ್ನಡ ನಾಟಕ ಪ್ರಪಂಚವನ್ನು ವಿಡಂಬನೆ, ವ್ಯಂಗ್ಯಗಳಿಂದ ಕೂಡಿದ `ವೈನೋದಿಕ' ನಾಟಕಗಳ ಕೊರತೆ ಕಾಡುತ್ತಿದ್ದ ದಿನಗಳಲ್ಲಿ ಅದನ್ನು ಸಮರ್ಥವಾಗಿ ತುಂಬಿಕೊಟ್ಟವರು ಮೂರ್ತಿ. ಸಾಮಾಜಿಕ ಪಲ್ಲಟಗಳನ್ನು ಅವರ ನಾಟಕಗಳು ಹಲವು ಬಗೆಗಳಲ್ಲಿ ಯಶಸ್ವಿಯಾಗಿ ಹಿಡಿದಿಟ್ಟಿವೆ.

ಆ ಮನಿ - ಈ ಮನಿ, ಗುಮ್ಮ, ನಕ್ಷತ್ರಮಾಲೆ, ಹೋರಾಟದ ಹಾದಿಯಲ್ಲಿ, ಒಂದು ಮಾತು, ಆ ಗಾಂಧಿ - ಈ ಗಾಂಧಿ, ಬಸ್ ಸ್ಟಾಪ್, ಒಳ್ಳೇವ್ರಪ್ಪ ಒಳ್ಳೇವ್ರ, ಹೇಳತೇನ ಕೇಳ, ಹಾಯ್ ಮೊನಾಲಿಸಾ ಮೊದಲಾದವು ಅವರ ಜನಪ್ರಿಯ ನಾಟಕಗಳು. ರಾಜ್ಯೋತ್ಸವ ಪ್ರಶಸ್ತಿ, ನಾಟಕ ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಪಡೆದಿರುವುದಕ್ಕಿಂತ ಹೆಚ್ಚಿನದನ್ನೇ ಅವರು ಸಮಾಜಕ್ಕೆ ಕೊಟ್ಟಿದ್ದಾರೆ.

`ಕಳೆದ ಮೂರು ದಿನಗಳಿಂದ ಬೇರೆಯದೇ ಲೋಕದಲ್ಲಿದ್ದರು. ಡಿವಿಜಿ ಬಂದಿದ್ದಾರೆ, ಏನೋ ಹೇಳುತ್ತಿದ್ದಾರೆ, ನಾನು ಹೊರಟೆ, ರಂಗಭೂಮಿ ಬೆಳೆಯಬೇಕು ಎಂಬ ಕನವರಿಕೆಯಲ್ಲಿ ಮುಳುಗಿ ಹೋಗಿದ್ದರು' ಎಂದು ಮೂರ್ತಿ ಅವರ ಎರಡನೇ ಮಗಳು ಗೌರಿ, ಅಪ್ಪನ ಕಡೆ ಕ್ಷಣಗಳನ್ನು ನೆನೆಯುತ್ತಾರೆ.

ರಂಗಕರ್ಮಿ ಎ.ಎಸ್. ಮೂರ್ತಿ ಇನ್ನಿಲ್ಲ
ಬೆಂಗಳೂರು:
ಬೀದಿ ನಾಟಕಗಳಿಗೆ ಹೊಸ ಭಾಷ್ಯ ಬರೆದ ಹಿರಿಯ ರಂಗಕರ್ಮಿ ಎ.ಎಸ್. ಮೂರ್ತಿ (84) ಹನುಮಂತನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಬೆಳಿಗ್ಗೆ ನಿಧನ ಹೊಂದಿದರು. ಅವರಿಗೆ ಮೂವರು ಪುತ್ರಿಯರು ಹಾಗೂ ಒಬ್ಬ ಪುತ್ರ ಇದ್ದಾರೆ.  ಇಳಿ ವಯಸ್ಸಿನಲ್ಲೂ ಕ್ರಿಯಾಶೀಲರಾಗಿದ್ದ ಅವರು, 3 ದಿನಗಳಿಂದ ಹಾಸಿಗೆ ಹಿಡಿದಿದ್ದರು. ಬನಶಂಕರಿ ಚಿತಾಗಾರದಲ್ಲಿ ಸಂಜೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT