ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾವಾಹಿನಿ, ಯೋಧರಿಂದ ಸಾಹಸ, ನೃತ್ಯ ವೈಭವ

Last Updated 24 ಅಕ್ಟೋಬರ್ 2011, 11:00 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ವೀರ ಯೋಧರು ಮೈಮರೆತು ಲೇಜಿಮ್ ನೃತ್ಯ ಪ್ರದರ್ಶಿಸುತ್ತಿದ್ದರೆ, 1824ರ ಅಕ್ಟೋ ಬರ್ 23ರಂದು ಬ್ರಿಟಿಷರ ವಿರುದ್ಧ ರಣಕಹಳೆ ಮೊಳಗಿದ್ದ ರಾಣಿ ಚನ್ನಮ್ಮನ ವಿಜಯೋತ್ಸವ ಆಚರಿಸಿದ ಅಮೃತ ಘಳಿಗೆಗೆ ಜನಸಾಗರವನ್ನು ಕೊಂಡೊಯ್ಯುತ್ತಿತ್ತು. ಮಲ್ಲಕಂಬದ ಮೇಲೆ ನಡೆಸಿದ ಕಸರತ್ತು ಭಾರತೀಯ ಯೋಧರ ಸಾಹಸವನ್ನು ಸಾರಿ ಸಾರಿ ಹೇಳುತ್ತಿದ್ದವು.

ಕಿತ್ತೂರು ಉತ್ಸವದ ಅಂಗವಾಗಿ ಚೆನ್ನಮ್ಮನ ವೃತ್ತದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅದ್ದೂರಿ ಜಾನಪದ ಕಲಾವಾಹಿನಿ ಮೆರವಣಿಗೆಗೆ ಚಾಲನೆ ನೀಡುವ ಮುನ್ನ ಬೆಳಗಾವಿಯ ಮರಾಠಾ ಲೈಟ್ ಇನ್‌ಫೆಂಟ್ರಿ ರೆಜಿಮೆಂಟ್ ಕೇಂದ್ರದ ರಿಕ್ರೂಟಿಂಗ್ ಯೋಧರು ಪ್ರದರ್ಶಿಸಿದ ಸಾಹಸ, ನೃತ್ಯ ವೈಭವವು ಮೈನವಿರೇಳಿಸಿತು.

ರಾಣಿ ಚೆನ್ನಮ್ಮನ ಪ್ರತಿಮೆಯ ಎದುರು ವೀರ ಯೋಧರು ಮಲ್ಲಕಂಬದ ಮೇಲೆ ಬಗೆ ಬಗೆಯ ಕಸರತ್ತು ಪ್ರದರ್ಶಿಸುವ ಮೂಲಕ ಈ ಬಾರಿಯ ಕಿತ್ತೂರು ಉತ್ಸವದ ಮೆರವಣಿಗೆ ಮೆರುಗು ಹೆಚ್ಚಿಸಿದರು. ಮೂರು ಮಲ್ಲಕಂಬಗಳ ಮೇಲೆ ಯಾವುದೇ ರೀತಿಯ ಭಯವಿಲ್ಲದೇ ಸಾಹಸ ಪ್ರದರ್ಶನ ನೀಡಿರುವುದನ್ನು ಕಂಡ ಜನಸಾಗರದಿಂದ ಹೊರ ಹೊಮ್ಮಿದ ಕರತಾಡನದ ಕಹಳೆ ಮುಗಿಲು ಮುಟ್ಟುತ್ತಿತ್ತು.
 
ಸತಾರಾದ ರಿಕ್ರೂಟಿಂಗ್ ಯೋಧ ಸಾಯಿನಾಥ ಮೋರೆ ಮಲ್ಲಕಂಬದ ತುತ್ತತುದಿಯಲ್ಲಿ ಬಗೆ ಬಗೆಯ ಯೋಗಾಸನ ಪ್ರದರ್ಶನ ಮೂಡಿಸುವ ಮೂಲಕ ಬೆರಗು ಗೊಳಿಸಿದರು. ಮಲ್ಲಕಂಬವನ್ನು ಸುತ್ತುಹಾಕುವ ಮೂಲಕ ಮೈಯನ್ನು ರಬ್ಬರಿನಂತೆ ಬಾಗಿಸುವ ಮೂಲಕ ಅಚ್ಚರಿ ಮೂಡಿಸಿದರು. 47 ಯೋಧರು  ಮಲ್ಲಕಂಬ ಸಾಹನವನ್ನು ಪ್ರದರ್ಶಿಸಿದರು.

ಸಾಂಸ್ಕೃತಿಕ ವೈಭವ: ಯುದ್ಧದಲ್ಲಿ ಗೆದ್ದು ಯೋಧರು ವಾಪಸ್ ಆದಾಗ ಅವರನ್ನು ಸಂಭ್ರಮದಿಂದ ಸ್ವಾಗತಿಸುವ `ಲೇಜಿಮ್~ ನೇತ್ಯ ಪ್ರದರ್ಶನ ಬ್ರಿಟಿಷರ ವಿರುದ್ಧ ರಾಣಿ ಚನ್ನಮ್ಮ ಗೆಲುವು ಸಾಧಿಸಿದಾಗ ಕಿತ್ತೂರಿನಲ್ಲಿ ನಡೆದ ವಿಜಯೋತ್ಸವವನ್ನು ನೆನಪಿಸಿದವು. ಈ ನೃತ್ಯದ ನಡುವೆಯೇ ಯೋಧರು ಕ್ರಿಕೆಟ್ ಆಡುವ ದೃಶ್ಯಗಳನ್ನು ಪ್ರದರ್ಶಿಸಿದರು.

ಕರ್ನಾಟಕ ಹಾಗೂ ಮಹಾರಾಷ್ಟ್ರ ಸಂಪ್ರದಾಯವನ್ನು ಬಿಂಬಿಸುವ ಜಾಂಜ್ ನೃತ್ಯವು ಮೆರವಣಿಗೆಯ ಕಳೆ ಹೆಚ್ಚಿಸಿದವು. ಜಾಂಜ್ ನೃತ್ಯದ ನಡುವೆಯೇ 41 ಯೋಧರು ಮಂದಿರ ನಿರ್ಮಿಸಿ ಗಣೇಶನ ಕೂರಿಸಿ ಪೂಜಿಸಿದ ದೃಶ್ಯವನ್ನು ಕಟ್ಟಿಕೊಟ್ಟರು. ನೃತ್ಯದ ನಡುವೆಯೇ ಮಾನವ ಪಿರಾಮಿಡ್ ನಿರ್ಮಿಸಿ ಮರಾಠಾ ರೆಜಿಮೆಂಟ್‌ನ ಧ್ಯೇಯ ವಾಕ್ಯವಾದ `ಕರ್ತವ್ಯ, ಗೌರವ ಹಾಗೂ ಧೈರ್ಯ~ದ ಸಂದೇಶವನ್ನು ಸಾರಿದರು. ಸಿಲ್ವರ್ ಬ್ಯಾಂಡ್ ಹಾಗೂ ಪೈಪರ್ ಬ್ಯಾಂಡ್‌ಗಳನ್ನು ಯೋಧರು ಸಮಧುರವಾಗಿ ನುಡಿಸಿದರು.

ಲೆಫ್ಟಿನೆಂಟ್ ಕರ್ನಲ್ ಗೋವಿಂದ ಚೌಧರಿ ಹಾಗೂ ಸುಬೇದಾರ್ ಪರಶುರಾಮ್ ಕೊಲೇಕಾರ ಮಾರ್ಗ ದರ್ಶನದಲ್ಲಿ ಪಾಲ್ಗೊಂಡಿದ್ದ ಸುಮಾರು 180 ಯೋಧರು ಭಾರತೀಯ ಸಂಸ್ಕೃತಿಯ ವೈವಿಧ್ಯತೆಯನ್ನು ಸಾರಿ ಹೇಳಿದರು. ಗಾಳಿ ಪ್ರತಿಕೂಲ ವಾಗಿದ್ದರಿಂದ ವಿಶೇಷವಾದ `ಪ್ಯಾರಾ ಸೇಲಿಂಗ್ ಜಂಪ್~ ನೋಡುವ ಅವಕಾಶವನ್ನು ಜನರು ಕಳೆದು ಕೊಳ್ಳಬೇಕಾಯಿತು. ಆದರೆ, ಸಂಜೆಯ ವೇಳೆಗೆ ಪ್ಯಾರಾಚೂಟ್‌ನಲ್ಲಿ ಹಾರುವ ಮೂಲಕ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT