ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾವಿದರ ಮಾಸಾಶನ ಹೆಚ್ಚಿಸಲು ಆಗ್ರಹ

Last Updated 4 ಡಿಸೆಂಬರ್ 2013, 8:03 IST
ಅಕ್ಷರ ಗಾತ್ರ

ಗದಗ: ರಂಗಭೂಮಿ ಕಲಾವಿದರ ಮಾಸಾಶನವನ್ನು ರೂ.  3 ಸಾವಿರಕ್ಕೆ  ಹೆಚ್ಚಿಸಬೇಕು ಹಾಗೂ ಮಹಿಳಾ ಕಲಾವಿದರ ಮಾಸಾಶನ ವಯೋಮಿತಿ 50 ಕ್ಕೆ ಇಳಿಸುವಂತೆ ಆರ್. ಎನ್. ಕೆ. ಮಿತ್ರ ಮಂಡಳಿ ಹಾಗೂ ಚಿನ್ಮಯ ಸಾಂಸ್ಕೃತಿಕ ಅಕಾಡೆಮಿ ಕಲಾವಿದರು ಆಗ್ರಹಿಸಿದರು.

ಈ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ  ಉಮಾಶ್ರೀ ಅವರಿಗೆ ಮನವಿ ಅರ್ಪಿಸಿದ ಕಲಾವಿದರು, ದುಬಾರಿ ದಿನಗಳಲ್ಲಿ ರಂಗಕಲೆ ನಂಬಿ ಬದುಕುತ್ತಿರುವ ಕಲಾವಿದರ ಜೀವನ ನಿರ್ವಹಣೆ ಕಷ್ಟವಾಗಿದೆ. ಕಲಾವಿದರು ರಂಗಭೂಮಿಯಿಂದ ವಿಮುಖರಾಗಿ ಬೇರೆ  ವೃತ್ತಿಗೆ ತೆರಳುತ್ತಿದ್ದಾರೆ. ರಂಗಕಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನೀಡುತ್ತಿರುವ ಮಾಸಾಶನವನ್ನು ರೂ. 1 ಸಾವಿರದಿಂದ ರೂ. 3 ಸಾವಿರಗಳಿಗೆ ಹೆಚ್ಚಿಸಬೇಕು. 40 ರಿಂದ 45 ವಯೋಮಿತಿ ದಾಟಿದ ಕಲಾವಿದೆಯರಿಗೆ ವೃತ್ತಿ ಬೇಡಿಕೆ ಕಡಿಮೆಯಾಗಿ ಜೀವನ ನಿರ್ವಹಣೆ ಅಸಾಧ್ಯವಾಗುತ್ತಿದೆ ಎಂದು ಅಳಲು ತೋಡಿಕೊಂಡರು.

ಮಾಸಾಶನಕ್ಕಾಗಿ ನಿಗದಿಪಡಿಸಿರುವ ವಯೋಮಿತಿಯನ್ನು 50 ಕ್ಕೆ ಇಳಿಕೆ ಮಾಡಬೇಕು. ರಂಗ ಕಲಾವಿದರಿಗೆ ಇಲಾಖೆ ಯಶಸ್ವಿನಿ ಕಾರ್ಡ್‌, ಜೀವ ವಿಮೆ ,ಗುರುತಿನ ಚೀಟಿ ನೀಡಬೇಕು. ರಂಗ ಕಲಾವಿದರ ಮಕ್ಕಳ ಶಿಕ್ಷಣಕ್ಕೆ ವಿಶೇಷ ಪ್ರೋತ್ಸಾಹ ಧನ ನೀಡಬೇಕು. ಆಶ್ರಯ, ಅಂಬೇಡ್ಕರ್, ಬಸವ ಮುಂತಾದ ವಸತಿ  ಯೋಜನೆಗಳಲ್ಲಿ ರಂಗ ಕಲಾವಿದರಿಗೆ ಆದ್ಯತೆ ನೀಡಬೇಕು. ಮಾಸಾಶನ ಮಂಜೂರಿಯಲ್ಲಿ ಆಗುತ್ತಿರುವ ವಿಳಂಬ ತಪ್ಪಿಸಲು ಕ್ರಮ ಕೈಗೊಳ್ಳಬೇಕು, ನಾಟಕ ಅಕಾಡೆಮಿಗೆ ಸದಸ್ಯತ್ವ, ಅಕಾಡೆಮಿ ಪ್ರಶಸ್ತಿ, ರಂಗ ಪರಿಕರ ಪ್ರೋತ್ಸಾಹಧನ ನೀಡುವಾಗ ಯೋಗ್ಯರಿಗೆ ಹಾಗೂ ಅಕಾಡೆಮಿ ಸದಸ್ಯತ್ವವನ್ನು ಆಯಾ ಜಿಲ್ಲೆಯಲ್ಲಿ ರಂಗ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿರುವವರನ್ನು ಗುರುತಿಸಿ ನೇಮಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಚಿನ್ಮಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಮೌನೇಶ ಬಡಿಗೇರ, ಹಿರಿಯ ರಂಗ ಕಲಾವಿದರಾದ ಅಂದಾನೆಪ್ಪ ವಿಭೂತಿ, ಎಸ್. ಬಿ ಕುಲಕರ್ಣಿ, ಎಂ.ಎಸ್. ಕುಲಕರ್ಣಿ, ಐ. ಕೆ. ಕಮ್ಮಾರ,  ಗಾಯತ್ರಿ ಹಿರೇಮಠ, ಮುರುಳಿಧರ ಸಂಕನೂರ,  ಸುವರ್ಣ ಹಿರೇಮಠ, ನಾಗಪ್ಪ ಬಸಪ್ಪ ಜಂಗಮನಿ, ವಿಜಯಕುಮಾರ ಜಿ. ಸುತಾರ, ಜಿ. ಜಿ. ಸುತಾರ, ಅ. ದ. ಕಟ್ಟಿಮನಿ, ಎಚ್. ಜಿ. ಸಜ್ಜನರ, ಎಸ್. ವಿ. ಶರೂಳ, ಎಸ್. ಬಿ. ಮಳಗಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT