ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾವಿದರಿಗೆ ಚಪ್ಪಾಳೆಗಳೇ ಸ್ಫೂರ್ತಿ

Last Updated 25 ಜನವರಿ 2012, 6:50 IST
ಅಕ್ಷರ ಗಾತ್ರ

ಧಾರವಾಡ: “ಶಬ್ದ, ಬೆಳಕು ಮತ್ತು ಬಣ್ಣ ಈ ಮೂರು ಕಲಾವಿದರಿಗೆ ಜೀವಾಳವಾಗಿವೆ. ಅಲ್ಲದೇ ಈ ಮೂರು ನಾಟಕಗಳಿಗೆ ಅತೀ ಮುಖ್ಯವಾಗಿವೆ. ಕೇವಲ ಕಲಾವಿದರ ಮುಖದ ಮೇಲೆ ಬೆಳಕು ಚೆಲ್ಲಿದರೆ ಸಾಲದು, ಜೊತೆಗೆ ಪ್ರೇಕ್ಷಕರ ಮುಖದ ಮೇಲೂ ಬೆಳಕು ಚೆಲ್ಲುವುದರಿಂದ ಕಲಾವಿದರಿಗೆ ಹುಮ್ಮಸ್ಸು ಬರುತ್ತದೆ.

ಕಲಾವಿದರಿಗೆ ಚಪ್ಪಾಳೆಗಳು ಸ್ಪೂರ್ತಿ ತುಂಬುತ್ತವೆ” ಎಂದು ಚಿತ್ರನಟ ಲೋಹಿತಾಶ್ವ ಹೇಳಿದರು.

ಇಲ್ಲಿನ ರಂಗಾಯಣದಲ್ಲಿ ಹಮ್ಮಿಕೊಂಡಿರುವ ಬಹುರೂಪಿ ನಾಟಕ ಸಪ್ತಾಹದ ಉದ್ಘಾಟನೆಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಭಾಷೆಯಲ್ಲಿ ಸತ್ವ ಹಾಗೂ ಶಕ್ತಿ ಇದೆ. ಇಂಥ ಭಾಷೆಯನ್ನು ಬಳಸಿಕೊಂಡು ಮಾಡಿದ ನಾಟಕಗಳು ಜನತೆಯನ್ನು ಎಚ್ಚೆತ್ತುಕೊಳ್ಳುವಂತೆ ಮತ್ತು ಅವರಲ್ಲಿ ಜ್ಞಾನ ತುಂಬುವಂಥ ಕಾರ್ಯವನ್ನು ಮಾಡುತ್ತಾ ಬಂದಿವೆ ಎಂದರು.

ಇಲ್ಲಿನ ರಂಗಾಯಣವನ್ನು ಏಣಗಿ ನಟರಾಜ ಅವರು ಉತ್ತಮ ರೀತಿಯಲ್ಲಿ ನಡೆಸುವುದಷ್ಟೇ ಅಲ್ಲದೇ ತಮ್ಮ ಅವಧಿಯಲ್ಲಿ ಮತ್ತೊಬ್ಬ ಏಣಗಿ ನಟರಾಜ ಅವರನ್ನು ಸೃಷ್ಟಿಸುವುದು ಅವರ ಕರ್ತವ್ಯವಾಗಿದೆ ಎಂದು ಹೇಳಿದರು.

ಪ್ರೊ. ಚಂದ್ರಶೇಖರ ಪಾಟೀಲ ಉದ್ಘಾಟಿಸಿ, ರಂಗಾಯಣದ ನಿರ್ದೇಶಕ ಏಣಗಿ ನಟರಾಜ ಅವರು ಏಣಗಿ ಬಾಳಪ್ಪನವರ ಪರಂಪರೆಯನ್ನು ಉಳಿಸಿಕೊಂಡು ಹೋಗುತ್ತಿದ್ದಾರೆ. ಇಂದಿನ ದಿನಗಳಲ್ಲಿ ಶಿಷ್ಟ ನಾಟಕಗಳ ಬಗ್ಗೆ ಹೆಚ್ಚು ಉಲ್ಲೇಖಗಳು ಬರುತ್ತಿವೆ. ಆದರೆ ಕಂಪೆನಿ ನಾಟಕಗಳಲ್ಲಿ ಇರುವಷ್ಟು ಸ್ವಾಂತಂತ್ರದ ಕಿಚ್ಚು ಈ ಶಿಷ್ಟ ನಾಟಕಗಳಲ್ಲಿ ಇರುವುದಿಲ್ಲ. ಜನರಲ್ಲಿ ಸ್ವಾತಂತ್ರದ ಕಿಚ್ಚು ಹೊತ್ತಿಸುವ ಹಾಗೂ ಬ್ರಿಟಿಷರ ವಿರುದ್ಧ ಹೋರಾಡಿದಂಥ ಸಂಗತಿಗಳನ್ನು ತೋರಿಸುವ ನಾಟಕಗಳತ್ತ ಗಮನಹರಿಸಬೇಕು ಎಂದರು.

ಆರ್ಯ ಆಚಾರ್ಯ ಅಧ್ಯಕ್ಷತೆ ವಹಿಸಿ, ಆಧುನಿಕ ರಂಗ ಚಿಂತನೆಯಲ್ಲಿ ಹೊಸದನ್ನು ಸೃಷ್ಟಿಸಿ ದೇಶಕ್ಕೆ ಮತ್ತು ನಾಡಿಗೆ ಕೀರ್ತಿ ತರುವಂಥಹ ನಾಟಕಗಳು ಸಮಾಜಕ್ಕೆ ಬೇಕಾಗಿವೆ. ಈ ನಿಟ್ಟಿನಲ್ಲಿ ವೃತ್ತಿರಂಗಭೂಮಿ ಮತ್ತು ನವ್ಯ ರಂಗಭೂಮಿಯ ಬಗ್ಗೆ ಚರ್ಚೆ ನಡೆಯಬೇಕಾಗಿದೆ ಎಂದು ಹೇಳಿದರು.

ರಂಗಾಯಣದ ನಿರ್ದೇಶಕ ಏಣಗಿ ನಟರಾಜ ಪ್ರಾಸ್ತಾವಿಕವಾಗಿ ಮಾತನಾಡಿ, ಉಳಿದ ರಂಗಾಯಣಗಳಿಗೆ ನೀಡುವ ಅನುದಾನವನ್ನು ಇಲ್ಲಿಗೂ ನೀಡಿದರೆ ಮುಂಬರುವ ದಿನಗಳಲ್ಲಿ ಈ ಬಹುರೂಪಿ ನಾಟಕವನ್ನು ವಿಭಿನ್ನ ರೀತಿಯಲ್ಲಿ ಮಾಡಲಾಗುವುದು ಎಂದರು.

ಪ್ರೊ. ಶ್ರೀಶೈಲ ಹುದ್ದಾರ ಸ್ವಾಗತಿಸಿದರು. ಬಸವರಾಜ ಹೊಂಗಲ ವಂದಿಸಿದರು.

ಸಪ್ತಾಹದ ಅಂಗವಾಗಿ ಸುವರ್ಣ ಸಾಂಸ್ಕೃತಿಕ ಸಮುಚ್ಛಯದಲ್ಲಿ ಆಯೋಜಿಸಿರುವ ವೃತ್ತಿ ರಂಗಭೂಮಿಯ ಭಾವಚಿತ್ರಗಳು, ಆಧುನಿಕ ಗೊಂಬೆಯಾಟದ ಗೊಂಬೆಗಳು, ಕನ್ನಡದ ಕೆಲವು ಪ್ರಮುಖ ನಾಟಕಕಾರರು ಹಾಗೂ ರಂಗಭಿತ್ತಿಚಿತ್ರ ಪ್ರದರ್ಶನವನ್ನು ಅರವಿಂದ ಕುಲಕರ್ಣಿ ಬೆಳಿಗ್ಗೆ ಉದ್ಘಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT