ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾವಿದೆಯ ಹುಡುಕಾಟ

ಕಲಾಪ
Last Updated 10 ಜನವರಿ 2014, 19:30 IST
ಅಕ್ಷರ ಗಾತ್ರ

ನೋವು ನಲಿವುಗಳ ಹೆಣಿಗೆ ಬದುಕು. ಜೀವನದಲ್ಲಿ ಎದುರಾಗುವ ದ್ವಂದ್ವಗಳಿಗೆ ಉತ್ತರ ಹುಡುಕುವುದರಲ್ಲೇ ಎಷ್ಟೋ ಅಮೂಲ್ಯ ಕ್ಷಣಗಳನ್ನು ನಾವು ಕಳೆಯುತ್ತೇವೆ. ಆದರೆ ಕಲಾವಿದೆ ಕಾಂತಿ ವಿ. ತನ್ನನ್ನು ಕಾಡುವ ಗೊಂದಲಗಳಿಗೆ ಚಿತ್ರಕಲೆಯ ಮೂಲಕ ಉತ್ತರ ಹುಡುಕುವ ಪ್ರಯತ್ನ ನಡೆಸಿದ್ದಾರೆ. ಅರೆತೆರೆದ ಕಣ್ಣು, ಬುದ್ಧನ ಶಾಂತ ಭಾವ ಬಿಂಬಿಸುವ ಮುಖ, ಉದ್ದನೆ ಚೂಪು ಮೂಗು, ಪ್ರಕೃತಿಯ ರೂಪದಲ್ಲಿ ಕಾಣುವ ಎಲೆಗಳು, ಬಣ್ಣಗಳ ಚಿತ್ತಾರ ಇವರ ಕಲೆಯನ್ನು ಸಮೃದ್ಧವಾಗಿಸಿದೆ.

ಚೆನ್ನೈ ಮೂಲದವರಾಗಿರುವ ಇವರು ನಾಲ್ಕು ವರ್ಷದಿಂದ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಕಲಾಭಿವೃದ್ಧಿಗೆ ಇದು ಸೂಕ್ತ ಜಾಗ ಎನ್ನುವ ಅವರಲ್ಲಿ ಚಿಕ್ಕವಯಸ್ಸಿನಿಂದಲೇ ಕಲಾಪ್ರೀತಿ ಬೆಳೆದಿತ್ತು. ಓದಿದ್ದು ಅರ್ಥಶಾಸ್ತ್ರವಾದರೂ ಹವ್ಯಾಸವಾಗಿ ಕೈಹಿಡಿದಿದ್ದು ಇದೇ ಚಿತ್ರಕಲೆ. ಭಾರತ ಹಾಗೂ ಪ್ರಪಂಚದ ನಾನಾ ಕಡೆಗೆ ಸುತ್ತುವ ಅವಕಾಶ ಸಿಕ್ಕಿರುವುದರಿಂದ ಕಲಾಭಿವ್ಯಕ್ತಿಗೆ ಹೆಚ್ಚಿನ ಆಯಾಮ ದೊರೆತಿದೆ ಎಂಬುದನ್ನು ಅವರೇ ಹೇಳಿಕೊಳ್ಳುತ್ತಾರೆ.

‘ಕಲಾವಿದೆಯಾಗಬೇಕೆಂಬ ಕನಸು ಕಂಡವಳೇನಲ್ಲ. ಆದರೆ ಮನಸ್ಸಿಗೆ ಬಂದಿದ್ದನ್ನು ಲೇಖನಿ ಹಿಡಿದು ಚಿತ್ರಿಸುತ್ತಿದ್ದೆ. ನನ್ನಲ್ಲಿ ಕಲೆ ಇದೆ ಎಂದು ತಿಳಿದ ಮೇಲೆ ಮತ್ತೆ ಅದನ್ನು ಬಿಡುವ ಮನಸ್ಸಾಗಲೇ ಇಲ್ಲ. ಬದುಕಿನ ಗೊಂದಲ, ಅನುಭವ, ಸುಖ, ದುಃಖ ಎಲ್ಲವನ್ನೂ ನಾನು ಹಿಡಿದಿಡುವುದು ಈ ಚಿತ್ರಗಳ ಮೂಲಕ’ ಎನ್ನುತ್ತಾರೆ ಕಾಂತಿ. ತಾನು ರಚಿಸಿದ ಎಲ್ಲಾ ಚಿತ್ರಗಳು ನೋಡುಗರಿಗೆ ಏನನ್ನಾದರೂ ನೀಡುವಂತಿರಬೇಕು, ಅವರಲ್ಲಿ ಹೊಸ ಚಿಂತನೆಯನ್ನು ಹುಟ್ಟುಹಾಕುವಂತಿರಬೇಕು ಎಂಬ ಕಾಳಜಿ ಇವರದ್ದು. ಹೀಗಾಗಿಯೇ ಪ್ರತಿಯೊಬ್ಬರೂ ಮನೆಯಲ್ಲಿ ಕಲಾಕೃತಿಗಳನ್ನು ಇಟ್ಟುಕೊಳ್ಳಬೇಕು. ಬೆಳಿಗ್ಗೆ ಎದ್ದು ನೋಡುತ್ತಿದ್ದಂತೆ ಹೊಸತನ ಮೂಡಿಸುವ ಚಿತ್ರಗಳು ಬದುಕನ್ನು ಬದಲಿಸಬಲ್ಲುದು ಎಂಬುದು ಅವರ ನಂಬಿಕೆ.

ಎಂ.ಸಿ. ದೊಡ್ಡಮನಿ ಅವರಿಂದ ಕಲಾಪಾಠವನ್ನು ಹೇಳಿಸಿಕೊಳ್ಳುತ್ತಿರುವ ಇವರಿಗೆ ಸ್ಫೂರ್ತಿ ಗುರುಗಳೆ. ತನ್ನಲ್ಲಿರುವ ಕಲಾತ್ಮಕತೆಯನ್ನು ಗುರುತಿಸುವುದಕ್ಕೆ, ಅಭಿವ್ಯಕ್ತಿಗೊಳಿಸುವುದಕ್ಕೆ ಹೇಳಿಕೊಟ್ಟಿದ್ದು ಗುರುಗಳೇ ಎನ್ನುತ್ತಾರೆ. ತ್ರಿವೇಂಡ್ರಂನ ಎಂ.ಡಿ. ದತ್ತನ್‌, ಚೆನ್ನೈನ ಎ.ವಿ. ಎಲಂಗೊ, ಕೊಚ್ಚಿಯ ನಂದನ್‌ ಅವರಂಥ ಕಲಾವಿದರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದೂ ತನ್ನನ್ನು ಬೆಳೆಸಿದೆ ಎಂದು ವಿನಮ್ರವಾಗಿ ನುಡಿಯುತ್ತಾರೆ. ಅಂದಹಾಗೆ ಇವರು ಕ್ಯಾನ್ವಾಸ್ ಮೇಲೆ ಆಕ್ರಿಲಿಕ್‌ ಕಲೆಯನ್ನು ಮೂಡಿಸಿದ್ದಾರೆ.

ತನ್ನ ಬದುಕಿಗೆ ಅರ್ಥ ನೀಡುವುದೇ ಈ ಕಲೆ ಎಂದು ಹೇಳುವ ಕಾಂತಿ ರಚಿಸುವ ಕಲೆ ಅರ್ಥಪೂರ್ಣವಾಗಿರಲಿ ಹಾಗೂ ಇನ್ನೋಬ್ಬರಿಗೆ ಸ್ಫೂರ್ತಿ ನೀಡುವಂತೆ ಚಿತ್ರ ರಚಿಸಿ ಎಂದು ಯುವಕಲಾವಿದರಿಗೆ ಸಲಹೆ ನೀಡುತ್ತಾರೆ. ‘ಇದುವರೆಗೆ ನಾನು ನಾಲ್ಕೈದು ಪ್ರದರ್ಶನ ನೀಡಿದ್ದೇನೆ. ಈ ಬಾರಿಯ ಪ್ರದರ್ಶನದ ಹೆಸರು ಎಟರ್ನಲ್‌ ಸರ್ಚ್‌ ಎಂದಾಗಿದೆ. ಬದುಕಿನ ಬಗ್ಗೆ ಮೂಡುವ ಪ್ರಶ್ನೆಗಳ ಬಗ್ಗೆ ಕುರಿತಾದ ಚಿಂತನೆ ಇದು. ಪ್ರತಿ ಚಿತ್ರದಲ್ಲೂ ಉತ್ತರ ಹುಡುಕುವ ನಿಟ್ಟಿನಲ್ಲಿ ನನ್ನ ಹೋರಾಟವನ್ನು ಚಿತ್ರದಲ್ಲಿ ಮೂಡಿಸಿದ್ದೇನೆ’ ಎಂದು ಮಾಹಿತಿ ನೀಡುತ್ತಾರೆ.

ಅಂದಹಾಗೆ ಕಾಂತಿ ಅವರ ಚಿತ್ರಕಲಾ ಪ್ರದರ್ಶನವು ಆಟ ಗಲಾಟಾ, 1ನೇ ಮುಖ್ಯರಸ್ತೆ, ಕೆ.ಎಚ್‌.ಬಿ.ಕಾಲೊನಿ, 1ನೇ ಎ ಅಡ್ಡರಸ್ತೆ, 5ನೇ ಬ್ಲಾಕ್‌, ಕೋರಮಂಗಲ ಇಲ್ಲಿ ನಡೆಯುತ್ತಿದೆ. ಜ.12ರವರೆಗೆ ನಡೆಯಲಿರುವ ಈ ಪ್ರದರ್ಶನವನ್ನು ವೀಕ್ಷಿಸಲು ಬೆಳಿಗ್ಗೆ 11ರಿಂದ ರಾತ್ರಿ 7.30ರವರೆಗೆ ಅವಕಾಶವಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT