ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಕೆಗೆ ಮಿತಿ ಇಲ್ಲ: ಡಾ. ಸುಬೀರ್ ಗೋಕರ್ಣ್

Last Updated 12 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಅಲ್ಲಿ ನೆರೆದವರ ಮನದಲ್ಲಿ ಸಾರ್ಥಕ ಭಾವ ಮೂಡಿತ್ತು. ಪದವಿ ಸ್ವೀಕರಿಸುವಾಗ ಅವರ ಸಂಭ್ರಮಕ್ಕೆ ಕೊನೆ ಇರಲಿಲ್ಲ. ಎರಡು ವರ್ಷಗಳ ಕಠಿಣ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲದಿಂದ ರೋಮಾಂಚಿತರಾಗಿದ್ದರು. ಮಕ್ಕಳ ಸಾಧನೆಯಿಂದ ಪೋಷಕರು ಸಹಜವಾಗಿಯೇ ಪುಳಕಗೊಂಡಿದ್ದರು. ಒಂದು ಕ್ಷಣ ಭಾವುಕರಾದರು.

ನಗರದ ಎಲೆಕ್ಟ್ರಾನಿಕ್ ಸಿಟಿ ಬಳಿಯ ಝೇವಿಯರ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಂಡ್ ಎಂಟರ್‌ಪ್ರಿನರ್‌ಷಿಪ್ ಸಂಸ್ಥೆಯಲ್ಲಿ ಶನಿವಾರ ನಡೆದ 16ನೇ ವಾರ್ಷಿಕ ಘಟಿಕೋತ್ಸವದಲ್ಲಿ ಕಂಡುಬಂದ ಉಲ್ಲಾಸದ ವಾತಾವರಣವಿದು. ಸಹಪಾಠಿಗಳು ಪದವಿ ಪ್ರಮಾಣಪತ್ರ ಸ್ವೀಕರಿಸುವಾಗ ತಾವೇ ಪದವಿ ಸ್ವೀಕರಿಸಿದ್ದೇವೆ ಎಂಬ ಭಾವ ವ್ಯಕ್ತಪಡಿಸಿದರು. ಗೆಳೆಯರ ಸಾಧನೆಗೆ ಬೆನ್ನು ತಟ್ಟಿದರು.

ಪರಸ್ಪರ ಶುಭಕೋರಿದರು. `ಆಪ್ತಮಿತ್ರ~ರೊಂದಿಗೆ ಭವಿಷ್ಯದ ಯೋಜನೆಗಳನ್ನು ಹಂಚಿಕೊಂಡರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಿಸರ್ವ್ ಬ್ಯಾಂಕಿನ ಉಪ ಗವರ್ನರ್ ಡಾ.ಸುಬೀರ್ ಗೋಕರ್ಣ್ ಮಾತನಾಡಿ, `ಸಂಸ್ಥೆಯ ಯಶಸ್ವಿ ನಿರ್ವಹಣೆಗೆ ಎಲ್ಲ ಸಿಬ್ಬಂದಿಯಿಂದ ಉತ್ತಮ ಕಾರ್ಯನಿರ್ವಹಣೆ ಅಗತ್ಯ. ನಾಯಕ ಒಬ್ಬನಾದರೂ ನಾಯಕತ್ವದಲ್ಲಿ ಸಾಮೂಹಿಕ ಜವಾಬ್ದಾರಿ ಇದೆ. ಸಿಬ್ಬಂದಿಯ ಜ್ಞಾನ, ಕೌಶಲ ಗಮನಿಸಿ ಉತ್ತಮ ಸೇವೆ ಪಡೆಯುವವರು ಉತ್ತಮ ನಾಯಕ ಎನಿಸಿಕೊಳ್ಳುತ್ತಾರೆ~ ಎಂದರು.

`ಕಲಿಕೆ ಇಲ್ಲಿಗೆ ಸೀಮಿತ ಅಲ್ಲ. ಜೀವನದ ಪ್ರತಿ ಕ್ಷಣದಲ್ಲೂ ಹೊಸ ವಿಚಾರಗಳನ್ನು ಕಲಿಯುವ ಮನೋಭಾವ ಬೆಳೆಸಿಕೊಂಡು ಮುಂದುವರಿಯಿರಿ~ ಎಂದು ಪದವೀಧರರಿಗೆ ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಡಾ.ಜೆ.ಫಿಲಿಪ್ ಮಾತನಾಡಿ, `ದೇಶದಲ್ಲಿ 4,000 ಆಡಳಿತ ನಿರ್ವಹಣೆ ಶಿಕ್ಷಣ ಸಂಸ್ಥೆಗಳಿದ್ದು, ಹೆಚ್ಚಿನ ಸಂಸ್ಥೆಗಳಲ್ಲಿ ಸಿಬ್ಬಂದಿಯ ಸಂಖ್ಯೆ ಹಾಗೂ ಅವರ ಗುಣಮಟ್ಟ ದೊಡ್ಡ ಸಮಸ್ಯೆಯಾಗಿದೆ. ಆರಂಭದಲ್ಲಿ ನಾವು ಈ ಸಮಸ್ಯೆ ಎದುರಿಸ್ದ್ದಿದೇವು. ಇತ್ತೀಚಿನ ದಿನಗಳಲ್ಲಿ ಸಂಸ್ಥೆಗೆ ಅತ್ಯುತ್ತಮ ಯುವ ಉಪನ್ಯಾಸಕರ ಸೇರ್ಪಡೆಯಾಗಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಯು ದೇಶದ ಅಗ್ರ 25 ಸಂಸ್ಥೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಬೇಕು~ ಎಂದು ಆಶಿಸಿದರು. 

`ಈ ಬಾರಿ ಪದವಿ ಸ್ವೀಕರಿಸಿದವರಲ್ಲಿ ಶೇ 90 ಮಂದಿಗೆ ಈಗಾಗಲೇ ಉದ್ಯೋಗ ದೊರಕಿರುವುದು ಸಂಸ್ಥೆಯ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ. ಅವರು ವೃತ್ತಿಜೀವನದ ಆರಂಭದಲ್ಲೇ ರೂ 6.25 ಲಕ್ಷ ವಾರ್ಷಿಕ ವೇತನ ಪಡೆಯಲಾರಂಭಿಸಿದ್ದಾರೆ. ಶೇ 60 ವಿದ್ಯಾರ್ಥಿಗಳು ಇನ್ಫೋಸಿಸ್, ವಿಪ್ರೊ ಸಂಸ್ಥೆಗಳಲ್ಲಿ ಉದ್ಯೋಗಸ್ಥರಾಗಿದ್ದಾರೆ. ಉಳಿದ ಶೇ 10 ಮಂದಿಗೆ ಶೀಘ್ರದಲ್ಲಿ ಉದ್ಯೋಗ ದೊರಕುವ ವಿಶ್ವಾಸವಿದೆ~ ಎಂದು ಅವರು ತಿಳಿಸಿದರು.

ಸಂಸ್ಥೆಯ ಮುಖ್ಯಸ್ಥ ಕೆ.ಸಿ. ಮೋಹನ್ ಮಾತನಾಡಿ, `ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ವಲಯಗಳು ತಪ್ಪು ಹಾದಿಯಲ್ಲಿ ಸಾಗುತ್ತಿವೆ. ದೆಹಲಿ ಮೆಟ್ರೊ ರೈಲು ನಿಗಮದ ಕಾರ್ಯದಕ್ಷತೆ ಇದಕ್ಕೆ ಅಪವಾದ. ಉತ್ತಮ ನಾಯಕತ್ವ ಇಡೀ ವ್ಯವಸ್ಥೆ ಬದಲಿಸಬಲ್ಲದು~ ಎಂದು ಅಭಿಪ್ರಾಯಪಟ್ಟರು.

ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಡಾ.ಜೆ. ಅಲೆಕ್ಸಾಂಡರ್, ಉಪ ಪ್ರಾಂಶುಪಾಲ ವಿ.ಒ. ಸೆಬಾಸ್ಟಿಯನ್, ಡೀನ್ ತ್ಯಾಗರಾಜ್ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭ 148 ವಿದ್ಯಾರ್ಥಿಗಳಿಗೆ ಪಿಜಿಡಿಎಂ ಪ್ರದಾನ ಮಾಡಲಾಯಿತು. ವಿದ್ಯಾರ್ಥಿಗಳಾದ ಮಾಧುರಿ ಮೂರ್ತಿ, ನಥನ್ ಅಕ್ಷಿತ್ ಪ್ರಕಾಶ್, ಸೈನಿ ಬರ್ಮನ್, ಜ್ಞಾನ ಶಂಕರ್ ಅವರಿಗೆ `ಎಕ್ಸಲೆನ್ಸ್ ಅವಾರ್ಡ್~ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT