ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿತ ಶಾಲೆಯಲ್ಲೇ ಬಾಲಕಾರ್ಮಿಕ!

Last Updated 6 ಡಿಸೆಂಬರ್ 2012, 6:42 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯಲ್ಲಿ ನ. 16ರಿಂದ ಮಕ್ಕಳ ಹಕ್ಕುಗಳ ಗ್ರಾಮ ಸಭೆಗಳು ಆರಂಭವಾಗಿವೆ. ಕೊಪ್ಪಳ ತಾಲ್ಲೂಕಿನಲ್ಲಿ ಡಿ. 3ರಂದು ಈ ಸಭೆಗಳು ಮುಕ್ತಾಯಗೊಂಡಿವೆ. ಉಳಿದ ತಾಲ್ಲೂಕುಗಳಲ್ಲಿ ಸಭೆಗಳು ಇನ್ನೂ ನಡೆದಿವೆ.

ಆದರೆ, ಮಕ್ಕಳ ಹಕ್ಕುಗಳನ್ನೇ ಅಣಕಿಸುವಂತಹ ಘಟನೆಗಳು ಮಾತ್ರ ನಡೆಯುತ್ತಲೇ. ಇಂತಹ ಘಟನೆಗಳ ಬಗ್ಗೆ ಸಂಬಂಧಪಟ್ಟವರ ನಿರ್ಲಕ್ಷ್ಯ ಧೋರಣೆಯೂ ಮುಂದುವರಿಯುತ್ತಿದೆ.

ಶಿಕ್ಷಣ ಪಡೆಯುವ ಹಕ್ಕಿನಿಂದ ಬಾಲಕನೊಬ್ಬ ವಂಚಿತನಾಗಿದ್ದಲ್ಲದೇ, ತಾನು ಕಲಿತ ಶಾಲೆಯಲ್ಲಿಯೇ ಕಟ್ಟಡ ನಿರ್ಮಾಣ ಕಾಯಕದಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ.

ಆದರೆ, ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಯ ಸಕಾಲಿಕ ಕಾರ್ಯಾಚರಣೆ ಫಲವಾಗಿ ಬಾಲಕ ಈಗ ದುಡಿಮೆಯಿಂದ ಮುಕ್ತಿ ಹೊಂದಿ, ನಗರದಲ್ಲಿರುವ ಬಾಲಕರ ಬಾಲಮಂದಿರದಲ್ಲಿ ಆಶ್ರಯ ಪಡೆದಿದ್ದಾನೆ.

ತಾಲ್ಲೂಕಿನ ಹ್ಯಾಟಿ ಗ್ರಾಮದ ಮರ್ದಾನಲಿ ಇಮಾಮ್‌ಸಾಬ ಹಾದರಮಗ್ಗಿ (11) ಎಂಬ ಬಾಲಕನೇ ಈಗ ದುಡಿಮೆಯಿಂದ ಮುಕ್ತಿ ಹೊಂದಿ, ಶಿಕ್ಷಣ ಪಡೆಯುವ ಅವಕಾಶ  ಪಡೆದಿದ್ದಾನೆ.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 4ನೇ ತರಗತಿ ವರೆಗೆ ಓದಿ, ಅರ್ಧಕ್ಕೆ ಶಾಲೆಯನ್ನು ಬಿಟ್ಟಿರುವ ಮರ್ದಾನಲಿ, ಅದೇ ಶಾಲೆಯಲ್ಲಿ ಕೊಠಡಿಯೊಂದರ ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದಾನೆ.

ಮಕ್ಕಳ ರಕ್ಷಣಾ ಘಟಕದ ಕ್ಷೇತ್ರ ಕಾರ್ಯಕರ್ತ ರವಿ ಬಡಿಗೇರ, ವಾಹನ ಚಾಲಕ ಮಲ್ಲಿಕಾರ್ಜುನಯ್ಯ ಹಿರೇಮಠ ಅವರು ಈ ಬಾಲಕ ಶಾಲೆಯಲ್ಲಿಯೇ ದುಡಿಯುತ್ತಿರುವುದನ್ನು ಗಮನಿಸಿ, ಮಾಹಿತಿ ಸಂಗ್ರಹಿಸಿದ್ದಾರೆ.

ನಂತರ ಬಾಲಕನನ್ನು ದುಡಿಮೆಯಿಂದ ಬಿಡಿಸಿ, ನಗರದಲ್ಲಿರುವ ಬಾಲಕರ ಬಾಲಮಂದಿರದಲ್ಲಿ ಸೇರಿಸಿದ್ದಾರೆ.
ಬಾಲಕನ ಅಕ್ಷರ ಜ್ಞಾನ ಹಾಗೂ ಕಲಿಕಾ ಸಾಮರ್ಥ್ಯದ ಆಧಾರದ ಮೇಲೆ ಯಾವ ತರಗತಿಗೆ ಸೇರಿಸಬೇಕು ಎಂಬುದನ್ನು ನಿರ್ಧರಿಸ                            ಲಾಗುವುದು.

ನಂತರ ಶಾಲೆಗೆ ಸೇರಿಸಿ ಮರ್ದಾನಲಿ ಸಹ ಶಿಕ್ಷಣದ ಮುಖ್ಯವಾಹಿನಿಗೆ ಬರುವಂತೆ ನೋಡಿಕೊಳ್ಳಲಾಗುವುದು ಎಂದು ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ ರಕ್ಷಣಾ ಅಧಿಕಾರಿ (ಸಾಂಸ್ಥಿಕ) ಡಾ.ಸುಮಲತಾ ಆಕಳವಾಡಿ `ಪ್ರಜಾವಾಣಿ'ಗೆ ತಿಳಿಸಿದರು.

ತಾಲ್ಲೂಕಿನ ವಣಬಳ್ಳಾರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ವ ಶಿಕ್ಷಣ ಅಭಿಯಾನದಡಿ ನಿರ್ಮಿಸಲಾಗಿರುವ ಎರಡು ಕೊಠಡಿಗಳಿಗೆ 9 ವರ್ಷದ ಬಾಲಕನೊಬ್ಬ ಬಣ್ಣ ಬಳಿಯುತ್ತಿದ್ದ.

15 ದಿನಗಳ ಕಾಲ ಅದೇ ಶಾಲೆಯಲ್ಲಿ ಈ ಕಾಯಕದಲ್ಲಿ ತೊಡಗಿದ್ದರೂ ಬಾಲಕನ ಶಿಕ್ಷಣದ ಬಗ್ಗೆ ಶಾಲೆಯ ಮುಖ್ಯಶಿಕ್ಷಕರಾಗಲಿ, ಸಹಶಿಕ್ಷಕರಾಗಲಿ ಗಮನ ಹರಿಸಿರಲಿಲ್ಲ. ಕೊನೆಗೆ ಶಿಕ್ಷಣ ಸಂಯೋಜಕ ಸೋಮಶೇಖರ ಹರ್ತಿ, ಯೂನಿಸೆಫ್ ಸಿಬ್ಬಂದಿ ಪ್ರಯತ್ನದಿಂದಾಗಿ ಬಾಲಕ ಆಲಂ ನಗರದಲ್ಲಿ ಬಾಲಕರ ಬಾಲಮಂದಿರ ಸೇರಿದ್ದಾನೆ.

ಈ ಎರಡೂ ಪ್ರಕರಣಗಳಲ್ಲಿ ಎಸ್‌ಡಿಎಂಸಿ ಸದಸ್ಯರೇ ಕಟ್ಟಡ ನಿರ್ಮಾಣ ಹಾಗೂ ಬಣ್ಣ ಬಳಿಯುವ ಕಾರ್ಯದ ಗುತ್ತಿಗೆ ಪಡೆದಿದ್ದರು ಎಂದು ತಿಳಿದು ಬಂದಿದೆ.

ಹಾಗಾದರೆ, ಮಕ್ಕಳ ಹಕ್ಕುಗಳ ರಕ್ಷಣೆ ಬಗ್ಗೆ ಕೇವಲ ಸಭೆ-ಸಮಾರಂಭ ಮಾಡಿದರೆ ಸಾಕೇ? ಮಕ್ಕಳನ್ನು ದುಡಿಸಿಕೊಳ್ಳುವ ಮೂಲಕ ಕಾನೂನು ಉಲ್ಲಂಘನೆ ಮಾಡಿರುವ ಎಸ್‌ಡಿಎಂಸಿ ಸದಸ್ಯರ ವಿರುದ್ಧ, ಕಣ್ಣೆದುರಿಗೇ ಬಾಲಕ ದುಡಿಯುತ್ತಿದ್ದರೂ ಸುಮ್ಮನಿರುವ ಸಂಬಂಧಪಟ್ಟ ಶಾಲೆಗಳ ಮುಖ್ಯಶಿಕ್ಷಕರ ವಿರುದ್ಧ ಕ್ರಮ ಇಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT