ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಯೋಣು ಬಾರ

Last Updated 12 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ವಿನೋದ್ 8 ವರ್ಷದ ಹುಡುಗ. ಮೂರನೇ ತರಗತಿ, ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಿದ್ದಾನೆ. ಅವನ ತಂದೆ ತಾಯಿಯ ದೂರು ಮಗು ಚೆನ್ನಾಗಿ ಓದುತ್ತಿಲ್ಲ, ಚೆನ್ನಾಗಿ ಅಂಕಗಳನ್ನು ತೆಗೆಯುತ್ತಿಲ್ಲ ಎನ್ನುವುದು.

ಹಾಗೆಂದು ಶಾಲೆ ಬಿಟ್ಟರೆ ಬೇರೆ ವಿಷಯಗಳಲ್ಲಿ, ಅಂದರೆ ಆಟದಲ್ಲಿ, ಸಾಮಾನ್ಯ ಜ್ಞಾನದಲ್ಲಿ ಮಗು ಬಹಳ ಚುರುಕು. ಮನೆಯಲ್ಲಿ ಹೇಳಿಕೊಟ್ಟ ಪಾಠ ಬಾಯಲ್ಲಿ ಕೇಳಿದರೆ ಚೆನ್ನಾಗಿ ಹೇಳುತ್ತಾನೆ. ಆದರೆ ಬರೆಯಲು ಕುಳಿತರೆ ಹಲವಾರು ತಪ್ಪುಗಳು. ಪೋಷಕರು ತುಂಬಾ ನೊಂದುಕೊಂಡು ನನ್ನಲ್ಲಿ ಬಂದಿದ್ದರು.

ಮೇಲೆ ಹೇಳಿದ ಉದಾಹರಣೆಯಂತೆ, ವಿನೋದ್‌ನಂಥ ಹಲವಾರು ಪುಟ್ಟ ಮಕ್ಕಳಿಗೆ ಈ ರೀತಿಯ ತೊಂದರೆಗಳಿರುತ್ತವೆ. ಕಲಿಕೆಯ ಸಮಸ್ಯೆಗಳು ಮಕ್ಕಳಲ್ಲಿ ಕಾಣಿಸಲು ಬಹಳಷ್ಟು ಕಾರಣಗಳಿರಬಹುದು. ಅವುಗಳಲ್ಲಿ ಮುಖ್ಯವಾದವೆಂದರೆ ಮಗುವಿನಲ್ಲಿ ಬುದ್ಧಿಮಾಂದ್ಯತೆ, ಏಕಾಗ್ರತೆ ಕೊರತೆ, ಕಿವಿ-ಕಣ್ಣುಗಳಿಗೆ ಸಂಬಂಧಪಟ್ಟ ದೋಷಗಳಿರುವುದು ಅಥವಾ ಮನೆಯ ಇಲ್ಲವೇ ಶಾಲೆಯ ಪರಿಸರ ಮಗುವಿನ ಬೆಳವಣಿಗೆಗೆ, ಕಲಿಕೆಗೆ ಪೂರಕವಾಗಿ ಇಲ್ಲದಿರುವುದು.

ಆದರೆ ವಿನೋದ್‌ನಲ್ಲಿ ಈ ಯಾವ ತೊಂದರೆಗಳೂ ಇರಲಿಲ್ಲ. ಅವನಿಗಿದ್ದ ಸಮಸ್ಯೆ, `ನಿರ್ದಿಷ್ಟ ಕಲಿಕಾ ಸಾಮರ್ಥ್ಯದ ಕೊರತೆ~ (ಡಿಸ್ಲೆಕ್ಸಿಯಾ/ ಸ್ಪೆಸಿಫಿಕ್ ಲರ್ನಿಂಗ್ ಡಿಸೆಬಿಲಿಟಿ) ಈ ತರಹದ ನಿರ್ದಿಷ್ಟ ಕಲಿಕಾ ಸಾಮರ್ಥ್ಯದ ಕೊರತೆ ಶೇ 5-15 ರಷ್ಟು ಮಕ್ಕಳಲ್ಲಿ ಕಾಣುತ್ತದೆ. ಇದನ್ನು ಗುರುತಿಸದೆ ಮಕ್ಕಳನ್ನು ಅತಿಯಾದ ಶಿಕ್ಷೆಗೆ, ನಿಂದನೆಗೆ ಒಳಪಡಿಸಿದರೆ ಬೇರೆಯದೇ ರೀತಿಯ ಭಾವನಾತ್ಮಕ ಸಮಸ್ಯೆಗಳು ಅವರಲ್ಲಿ ಕಾಣಿಸಬಹುದು.

ಮಕ್ಕಳನ್ನು ಗುರುತಿಸುವ ಬಗೆ
- ಕೇಳಿದ್ದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇರುತ್ತದೆ. ಆದರೆ ಬರವಣಿಗೆ, ಓದುವ ವಿಷಯಕ್ಕೆ ಬಂದರೆ ಅತ್ಯಂತ ಕಷ್ಟಪಡುತ್ತಾರೆ.

- ಕಾಗುಣಿತ ಅಥವಾ ಸ್ಪೆಲ್ಲಿಂಗ್‌ನಲ್ಲಿ ಕೆಲವು ನಿರ್ದಿಷ್ಟ ತಪ್ಪುಗಳನ್ನು ಮಾಡುತ್ತಾರೆ. ಉದಾ: `ಬಿ~ ಅಕ್ಷರಕ್ಕೆ `ಡಿ~ ಬರೆಯುವುದು.

- ಗಣಿತದಲ್ಲಿ ತೊಂದರೆ ಇರುವವರು ಎಷ್ಟು ಸರಳವಾದ ಲೆಕ್ಕಗಳನ್ನು ಕೊಟ್ಟರೂ ತಪ್ಪು ಮಾಡುತ್ತಾರೆ. ನೀವು ಎಷ್ಟೇ ಬಾರಿ ತಿದ್ದಿದರೂ ಮತ್ತೆ ಮತ್ತೆ ಅದೇ ತಪ್ಪುಗಳನ್ನು ಮಾಡುತ್ತಾರೆ.
 
ಪರಿಹಾರ ಏನು?

ಬಹಳ ಮುಖ್ಯವಾಗಿ ಶಿಕ್ಷಕರು ಮತ್ತು ಪೋಷಕರಿಗೆ ಈ ಸಮಸ್ಯೆಯ ಬಗ್ಗೆ ಮಾಹಿತಿ ಇರಬೇಕು. ಅಂದರೆ ಮಾತ್ರ ಈ ಸಮಸ್ಯೆಯನ್ನು ಬೇಗ ಗುರುತಿಸಲು ಸಾಧ್ಯ. ಮಕ್ಕಳನ್ನು ಯಾವುದೇ ಕಾರಣಕ್ಕೂ ನಿಂದಿಸಬಾರದು. ಈ ಸಮಸ್ಯೆ ಗುರುತಿಸಲಾಗದೇ ಮಕ್ಕಳನ್ನು ದೂಷಿಸಿದರೆ, ಅದು ಖಿನ್ನತೆಯಂತಹ ಮಾನಸಿಕ ಸಮಸ್ಯೆಯ ಪ್ರಾರಂಭಕ್ಕೆ ಬುನಾದಿಯಾಗಬಹುದು. ಮಕ್ಕಳ ಸಾಮರ್ಥ್ಯಕ್ಕೆತಕ್ಕಂತೆನಮಅಪೇಕ್ಷೆ ಇರಲಿ. ಕೆಲವು ನಿರ್ದಿಷ್ಟವಾದ ಬೋಧನಾ ಕ್ರಮಗಳನ್ನು ಹೇಳಿಕೊಟ್ಟರೆ, ಈ ಮಕ್ಕಳಿಗೆ ಕಲಿಕೆ ಸುಲಭವಾಗುತ್ತದೆ.

ಇದನ್ನು ನಿಮ್ಮ ಮನೋವೈದ್ಯರಿಂದ ತಿಳಿಯಿರಿ. ಈ ಮಕ್ಕಳಲ್ಲಿರುವ ಬೇರೆಯ ಪ್ರತಿಭೆಗಳನ್ನು (ಆಟ, ಕಲೆ) ಗುರುತಿಸಿ, ಪ್ರೋತ್ಸಾಹಿಸಿ.

ಶಾಲಾ ಪರೀಕ್ಷೆಗಳ ವಿಷಯಕ್ಕೆ ಬಂದರೆ, ಇಂತಹ ಮಕ್ಕಳಿಗೆ ಸರ್ಕಾರ ಕೆಲವು ವಿಶೇಷ ಸೌಲಭ್ಯಗಳನ್ನು ನೀಡುತ್ತದೆ. ಅವುಗಳನ್ನು ಪಡೆಯಲು ಮಗುವಿಗೆ `ಲರ್ನಿಂಗ್ ಡಿಸೆಬಿಲಿಟಿ~ ಪ್ರಮಾಣಪತ್ರ ~ (L.D. Certificate)  ಆಗಬೇಕು. ಸ್ಟೇಟ್ ಸಿಲೆಬಸ್‌ಗಾದರೆ ಕೆಳಗಿನ ಯಾವುದಾದರೊಂದು ಕೇಂದ್ರಗಳಲ್ಲಿ ಪರೀಕ್ಷೆಯ ನಂತರ ಪ್ರಮಾಣಪತ್ರ ಪಡೆಯಬಹುದು.
- ಬೆಂಗಳೂರಿನ ನಿಮ್ಹೋನ್ಸ್ ಸಂಸ್ಥೆ
- ಸೇಂಟ್ ಜಾನ್ಸ್ ಆಸ್ಪತ್ರೆ, ಬೆಂಗಳೂರು
- ಮೈಸೂರಿನ AIISH  ಸಂಸ್ಥೆ (All India Institute of speech and hearing)
- ಯಾವುದೇ ಸರ್ಕಾರಿ ಸೇವೆಯಲ್ಲಿರುವ ಮನೋವೈದ್ಯರು
- ಮನಃಶಾಸ್ತ್ರಜ್ಞರು (ಕ್ಲಿನಿಕಲ್ ಸೈಕಾಲಜಿಸ್ಟ್) ಜೊತೆಗೆ ಮನೋವೈದ್ಯರಿಂದ ಸಹಿ.

ಈ ಪ್ರಮಾಣಪತ್ರ ಪಡೆದಿರುವ ಮಕ್ಕಳಿಗೆ ರಾಜ್ಯ ಸರ್ಕಾರ ಕೆಲವು ವಿಶೇಷ ಸೌಲಭ್ಯಗಳನ್ನು ಎಲ್ಲ ಸರ್ಕಾರಿ ಶಾಲೆಗಳಲ್ಲಿ ಒಂದರಿಂದ ಹತ್ತನೆಯ  ತರಗತಿವರೆಗೆ ಒದಗಿಸುತ್ತದೆ.
ಉದಾ: ಕ್ಯಾಲ್ಕುಲೇಟರ್ ಬಳಕೆ, ಪರೀಕ್ಷೆ ಬರೆಯಲು ಹೆಚ್ಚಿನ ಸಮಯ, ಪ್ರಶ್ನೆಪತ್ರಿಕೆ ಓದಲು ಬೇರೆಯವರ ಸಹಾಯ, ಮೌಖಿಕ ಪರೀಕ್ಷೆಗೆ ಹೆಚ್ಚಿನ ಪ್ರಾಮುಖ್ಯತೆ ಇತ್ಯಾದಿ.

ಐ.ಸಿ.ಎಸ್.ಸಿ ಸಿಲೆಬಸ್‌ನಲ್ಲಿ ರಾಷ್ಟ್ರೀಯ ಕೌನ್ಸಿಲ್‌ನಿಂದಲೇ ಪ್ರಮಾಣಪತ್ರ ಪಡೆಯಬೇಕು. ಅಂತಹವರಿಗೆ ಕ್ಲಿಷ್ಟ ಎನಿಸಿದ ಒಂದು ಭಾಷೆಯಿಂದ ಮುಕ್ತಿ, ಹೆಚ್ಚಿನ ಸಮಯ, ಬರೆಯುವುದಕ್ಕೆ ಬೇರೆಯವರ ಸಹಾಯ ನೀಡಲಾಗುತ್ತದೆ.

ಕೇಂದ್ರ ಪಠ್ಯಕ್ರಮದಲ್ಲಿ (CBSE) ಆ ಶಾಲೆಯ ಮುಖ್ಯಸ್ಥರು ಪ್ರಮಾಣಪತ್ರವನ್ನು ಮಗುವಿನ ಕಳೆದ ಹತ್ತು ವರ್ಷಗಳ ಸಾಧನೆ ನೋಡಿ ನೀಡಬೇಕು.  ಇದರಲ್ಲೂ ಪ್ರತಿ ವಿಷಯಕ್ಕೆ ಒಂದು ಗಂಟೆ ಹೆಚ್ಚಿನ ಸಮಯ, ಎರಡು ಕಡ್ಡಾಯವಾದ ಭಾಷೆಗಳಲ್ಲಿ ಒಂದರಿಂದ ಮುಕ್ತಿ, ಬರೆಯುವುದಕ್ಕೆ ಬೇರೆಯವರ ಸಹಾಯದಂತಹ ಸೌಲಭ್ಯಗಳು ಇವೆ.

ಎಲ್ಲ ಶಿಕ್ಷಕರು/ ಪೋಷಕರು ಈ ಸಮಸ್ಯೆಯ ಬಗ್ಗೆ ತಿಳಿದಿರಬೇಕು. ಬೇಗ ಗುರುತಿಸಿ, ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ವಿಶೇಷ ತರಬೇತಿ ನೀಡಬೇಕು.  ಸರ್ಕಾರ ನೀಡುತ್ತಿರುವ ವಿಶೇಷ ಸೌಲಭ್ಯಗಳ ಬಗ್ಗೆ ಮಾಹಿತಿ ಹೊಂದಿ, ಅವನ್ನು ಉಪಯೋಗಿಸಿಕೊಳ್ಳುವುದೂ ಅಷ್ಟೇ ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT