ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲುಷಿತ ಚರಂಡಿ ಬಳಿ ಸಂತೆ

Last Updated 7 ಅಕ್ಟೋಬರ್ 2011, 8:15 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ತಾಲ್ಲೂಕಿನಲ್ಲಿ ಏಳು ಪ್ರಮುಖ ಸ್ಥಳಗಳಲ್ಲಿ ವಾರದ ಸಂತೆಗಳು ನಡೆಯುತ್ತವೆ. ಶಿಡ್ಲಘಟ್ಟದಲ್ಲಿ ಸೋಮವಾರ, ಚೀಮಂಗಲದಲ್ಲಿ ಬುಧವಾರ, ಜಂಗಮಕೋಟೆಯಲ್ಲಿ ಗುರುವಾರ, ಬಶೆಟ್ಟಹಳ್ಳಿಯಲ್ಲಿ ಶುಕ್ರವಾರ, ಮೇಲೂರು, ಸಾದಲಿ ಮತ್ತು ಅಬ್ಲೂಡಿನಲ್ಲಿ ಮಂಗಳವಾರ ಸಂತೆ ನಡೆಯುತ್ತದೆ.

ಸಂತೆಯಲ್ಲಿ ಹೆಚ್ಚಿನ ವ್ಯಾಪಾರ- ವಹಿವಾಟು ಮಾಡಬಹುದು ಎಂದು ರೈತರು, ವ್ಯಾಪಸ್ಥರು ಬಂದರೆ, ಕಡಿಮೆ ಬೆಲೆಗೆ ಸೊಪ್ಪು, ತರಕಾರಿ ಮುಂತಾದವುಗಳನ್ನು ಕೊಳ್ಳಬಹುದು ಎಂದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.  ಹಣ್ಣು, ಸೊಪ್ಪು, ತರಕಾರಿ, ಬೀಗ, ಛತ್ರಿ ರಿಪೇರಿ, ಕೃಷಿ ಉಪಕರಣಗಳು, ಬಟ್ಟೆಗಳು, ಎಲೆ ಅಡಿಕೆ ಕಡ್ಡಿಪುಡಿ, ಮೀನು, ಕರಿದ ತಿಂಡಿ, ಕುರಿಗಳು, ಕೋಳಿಗಳು, ಅಕ್ಕಿ ಮುಂತಾದವು ಒಂದೆಡೆ ಸಿಗುತ್ತವೆ. ಮತ್ತೊಂದೆಡೆ ದಿನಸಿ ವಸ್ತುಗಳು, ಎಣ್ಣೆ, ಮಣ್ಣಿನ ಮಡಿಕೆಗಳು, ಸಾಂಬಾರ್ ಪದಾರ್ಥಗಳು, ಬೆತ್ತದ ಬುಟ್ಟಿ ಮಂಕರಿಗಳು, ತೆಂಗಿಕಾಯಿ, ಅರಿಶಿನ ಕುಂಕುಮ ವೈವಿಧ್ಯಮಯ ವಸ್ತುಗಳು ಸಿಗುತ್ತವೆ. ಗಿಣಿ ಶಾಸ್ತ್ರದವರು, ದೊಂಬರಾಟದವರು, ಹಚ್ಚೆ ಹಾಕುವವರು, ಚಾಕು ಕತ್ತರಿ ಚೂಪು ಮಾಡುವವರು, ಗುಜರಿ ವ್ಯಾಪಾರಸ್ಥರು ಕೂಡ ಸಂತೆಯಲ್ಲಿ ಕಾಣಿಸಿಕೊಳ್ಳುತ್ತಾರೆ.

 ಶಿಡ್ಲಘಟ್ಟದಲ್ಲಿ ಬಸ್ ನಿಲ್ದಾಣದಿಂದ ಆರಂಭಗೊಂಡು ಗಾರ್ಡನ್ ರಸ್ತೆಯವರೆಗೂ ಸಂತೆ ನಡೆಯುತ್ತದೆ.  ಸಂತೆ ಮೈದಾನದಲ್ಲಿ ಶೀಟ್ ಹೊದಿಸಿರುವ ಎರಡು ದೊಡ್ಡ ಮಂಟಪಗಳಿದ್ದರೂ ಸ್ಥಳ ಸಾಲದೇ ಜನರು ರಸ್ತೆಯ ಇಬ್ಬದಿಗಳಲ್ಲೂ ಅಂಗಡಿಗಳನ್ನು ಹಾಕಿರುತ್ತಾರೆ. ಸಂತೆ ನಡೆಯುವ ಸ್ಥಳದ ಹಿಂಭಾಗದಲ್ಲಿ ಕಲುಷಿತ ಮಡುವಾಗಿರುವ ಗೌಡನ ಕೆರೆಯ ಭಾಗವಿದ್ದರೆ, ಇನ್ನೊಂದು ಬದಿಯಲ್ಲಿ ತ್ಯಾಜ್ಯ ತುಂಬಿಕೊಂಡಿರುವ ಚರಂಡಿಯಿದೆ. ಒಂದು ಮೂಲೆಯಲ್ಲಿ ಟ್ರಾನ್ಸ್‌ಫಾರ್ಮರ್ ಇದ್ದರೆ, ಮುಂಭಾಗದಲ್ಲಿ ಕೆಸರು ತುಂಬಿರುವ ರಸ್ತೆಯಿದೆ.

 `ಶಿಡ್ಲಘಟ್ಟದ ಪುರಸಭೆ 2.85 ಲಕ್ಷ ರೂಪಾಯಿ ಸಂತೆಯ ಸುಂಕ ವಸೂಲಿಗಾಗಿ ಟೆಂಡರ್ ಕರೆದು ವಾರ್ಷಿಕ ಗುತ್ತಿಗೆ ನೀಡಿದೆ. ಟೆಂಡರ್‌ನಲ್ಲಿ ಗುತ್ತಿಗೆ ಪಡೆದವರು 25ರಿಂದ 60 ರೂಪಾಯಿವರೆಗೆ ಸುಂಕ ವಸೂಲಿ ಮಾಡುತ್ತಾರೆ. ಆದರೆ ಇತ್ತ ಸುಂಕದವರೂ ಅತ್ತ ಪುರಸಭೆ ಇಲ್ಲಿಗೆ ಬೇಕಾದ ಮೂಲಸೌಲಭ್ಯ ಒದಗಿಸಿಲ್ಲ. ಮಳೆ ಬಂದಾಗ ಕೆಸರ ನಡುವೆಯೇ ವ್ಯಾಪಾರ ಮಾಡಬೇಕು. ಕಸ ತುಂಬಿರುವ ತೊಟ್ಟಿಯಿಂದ ಕೆಟ್ಟ ವಾಸನೆ ಬರುತ್ತದೆ. ಅದರ ಮೇಲೆ ನಾವೇ ಪ್ಲಾಸ್ಟಿಕ್ ಶೀಟ್ ಹೊದಿಸಿ ವ್ಯಾಪಾರ ಮಾಡಬೇಕಿದೆ. ಸರಿಯಾದ ನೆರಳಿರುವ ಜಾಗ ಕಡಿಮೆ. ಹಾಗಾಗಿ ನಾವೇ ನೆಲವನ್ನು ಸರಿಪಡಿಸಿ ಮೇಲೆ ಶೀಟ್ ಹಾಕಿಕೊಳ್ಳುತ್ತೇವೆ. ಸುತ್ತಮುತ್ತ ಸಾಕಷ್ಟು ಗಲೀಜಿದೆ~ ಎಂದು ಸಂತೆಯಲ್ಲಿ ದಿನಸಿ ಅಂಗಡಿಯಿಡುವ ಮುನಾವರ್ `ಪ್ರಜಾವಾಣಿ~ಗೆ ತಿಳಿಸಿದರು.

 `ಸಣ್ಣ ಗುಡಿ ಕೈಗಾರಿಕೆಯವರಿಗೆ, ಸಣ್ಣ ಬೆಳೆಗಾರರಿಗೆ, ರೈತರಿಗೆ, ಮಧ್ಯಮ ವರ್ಗದವರಿಗೆ, ಬಡವರಿಗೆ ಸಂತೆಯಿಂದ ತುಂಬ ಉಪಯುಕ್ತವಿದೆ. ಹಾಗಾಗಿ ತಾಲ್ಲೂಕು ಕೇಂದ್ರಗಳಲ್ಲಿ ಮತ್ತು ಪ್ರಮುಖ ಗ್ರಾಮಗಳಲ್ಲಿ ಸಂತೆಗೆ ಸಂಬಂಧಪಟ್ಟವರು ಅನುಕೂಲ ಕಲ್ಪಿಸಿ ಪ್ರೋತ್ಸಾಹಿಸಬೇಕು. ಸಂತೆಗೆ ಹಳೆಯ ಇತಿಹಾಸವಿದೆ. ಚಿಂತಾಮಣಿ ತಾಲ್ಲೂಕಿನ ಕೈವಾರದಲ್ಲಿ ಪತ್ತೆಯಾದ 1362ನೇ ಇಸವಿ ಶಾಸನದಲ್ಲಿ ರಾಚಯ್ಯದೇವನು ನಡೆಸುತ್ತಿದ್ದ ಸಂತೆಯ ಉಲ್ಲೇಖವಿದೆ. ತಾಲ್ಲೂಕಿನ ಸಾದಲಿಯಲ್ಲಿ ನಡೆಯುತ್ತಿದ್ದ ಸಂತೆಯ ಬಗ್ಗೆ 1408 ಇಸವಿಯ ಶಾಸನದಲ್ಲಿ ತಿಳಿಸಲಾಗಿದೆ. ನಗರಗಳಲ್ಲಿ ಇಂದು ಸಂತೆಯ ಉದ್ದೇಶ ಮತ್ತು ಸ್ವರೂಪ ಬದಲಾಗಿದೆ. ಆದರೆ ಬಡವರ ಹಾಗೂ ಜನಸಾಮಾನ್ಯರ ಅಗತ್ಯ ಪೂರೈಸುವ ಸಂತೆ ಅತ್ಯಗತ್ಯವಿದೆ~ ಎಂದು ಹಿರಿಯರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT