ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲುಷಿತಗೊಂಡ ಕೆಮ್ಮಣ್ಣುನಾಲೆ

Last Updated 22 ಜನವರಿ 2013, 10:14 IST
ಅಕ್ಷರ ಗಾತ್ರ

ಮದ್ದೂರು: ಪಟ್ಟಣದ ಹೃದಯ ಭಾಗದಲ್ಲಿ ಹಾದು ಹೋಗುವ ಕೆಮ್ಮಣ್ಣುನಾಲೆ ಪುರಸಭೆಯ ನಿರ್ಲಕ್ಷ್ಯದಿಂದಾಗಿ ಕೊಳಚೆ ನಾಲೆಯಾಗಿ ಪರಿವರ್ತನೆಯಾಗಿದೆ.

ಹೌದು. ಸಿದ್ಧಾರ್ಥನಗರ, ಚನ್ನೇಗೌಡನಗರ ಸೇರಿದಂತೆ ಹಲವು ಬಡಾವಣೆಗಳ ಜನರು ಬಟ್ಟೆ, ಪಾತ್ರೆ ತೊಳೆಯಲು ಇದೇ ನಾಲೆಯನ್ನು ಆಶ್ರಯಿಸಿದ್ದಾರೆ. ಕೆಲವರು ನಾಲೆಯ ನೀರನ್ನು ಸ್ನಾನ ಮಾಡಲು ಬಳಸುತ್ತಿದ್ದು, ಹಲವು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿದ್ದಾರೆ.

ದೊಡ್ಡಿಬೀದಿಯ ಬಹುತೇಕ ಮನೆಗಳ ಶೌಚಾಲಯದ ನೀರು ಈ ನಾಲೆ ಸೇರುತ್ತಿದೆ. ಅಲ್ಲದೆ ಸರ್.ಎಂ.ವಿಶ್ವೇಶ್ವರಯ್ಯನಗರ, ಚನ್ನೇಗೌಡನಗರ ಹಾಗೂ ಸಿದ್ದಾರ್ಥನಗರಗಳ ಒಳಚರಂಡಿಯ ನೀರನ್ನು ಪುರಸಭೆಯು ಈ ನಾಲೆಗೆ ಬಿಟ್ಟಿದೆ. ಹೀಗಾಗಿ, ಈ ಹಿಂದೆ ಸ್ವಚ್ಛ ನೀರಿನಿಂದ ಕಂಗೊಳಿಸುತ್ತಿದ್ದ ಕೆಮ್ಮಣ್ಣುನಾಲೆ ಈಗ ಕೊಳಚೆ ನಾಲೆಯಾಗಿ ಪರಿವರ್ತನೆಯಾಗಿದೆ. ಈ ನೀರನ್ನೇ ಸಮೀಪದ ಹಲವು ಗ್ರಾಮಗಳ ಜನರು ಬಳಕೆ ಮಾಡುತ್ತಿದ್ದು, ಜನ ಜಾನುವಾರುಗಳಿಗೆ ಚರ್ಮವ್ಯಾಧಿ ಕಾಡುತ್ತಿದೆ.

ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಈಗಾಗಲೇ ಪುರಸಭೆಗೆ ಪತ್ರ ಬರೆದಿದ್ದಾರೆ. ಒಳಚರಂಡಿ ಸಂಪರ್ಕ ಮುಚ್ಚುವಂತೆ ಸೂಚಿಸಿದ್ದಾರೆ. ಆದರೆ ಇಲ್ಲಿವರೆಗೂ ಯಾವುದೇ ಪ್ರಯೋಜನವಾಗಿಲ್ಲ.  ಶಿಂಷಾನದಿ ದಂಡೆಯಲ್ಲಿ ಒಳಚರಂಡಿ ಮಲೀನ ನೀರಿನ ಸಂಗ್ರಹಗಾರ ನಿರ್ಮಿಸಲಾಗಿದೆ. ಆದರೆ ಇದು ಪಟ್ಟಣದ ಒಳಚರಂಡಿ ನೀರಿನ ಸಂಗ್ರಹ ಸಾಮರ್ಥ್ಯಕ್ಕೆ ಸಾಲದ ಕಾರಣ ಹೆಚ್ಚುವರಿ ನೀರನ್ನು ಶಿಂಷಾನದಿಗೂ ಹರಿಯಬಿಡಲಾಗುತ್ತಿದೆ.

ಸಮೀಪದ ವೈದ್ಯನಾಥಪುರದಲ್ಲಿ ಭಕ್ತರು ಇದೇ ಕೊಳಚೆ ನೀರಿನಲ್ಲಿ ಮಿಂದು ವೈದ್ಯನಾಥೇಶ್ವರನಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಈ ಕುರಿತು ಅಲ್ಲಿನ ಪ್ರಸನ್ನ ಪಾರ್ವತಾಂಭ ವೈದ್ಯನಾಥೇಶ್ವರ ಟ್ರಸ್ಟ್ ಪುರಸಭೆಗೆ ನೀರು ಹರಿಯಬಿಡದಂತೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಪಟ್ಟಣದ ನಾಗರಿಕರಿಗೆ ಶುಚಿತ್ವದ ಪಾಠ ಹೇಳಬೇಕಾದ ಪುರಸಭೆಯೇ ಕೆಮ್ಮಣ್ಣುನಾಲೆ ಹಾಗೂ ಶಿಂಷಾನದಿಗೆ ಒಳಚರಂಡಿ ನೀರನ್ನು ಹರಿಯಬಿಟ್ಟಿರುವುದು ಸರಿಯಲ್ಲ.  ಕೂಡಲೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಪುರಸಭೆಗೆ ಅಗತ್ಯ ಸೂಚನೆ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT