ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲೆ ಎಲ್ಲರ ಸ್ವತ್ತು...

Last Updated 28 ಜುಲೈ 2016, 19:30 IST
ಅಕ್ಷರ ಗಾತ್ರ

‘ಹೆಣ್ಣು ಮಕ್ಕಳೇ ನಮ್ಮನ್ನು ದ್ವೇಷಿಸಿದಾಗ ತುಂಬಾ ಬೇಸರವಾಗುತ್ತದೆ...’
–ಕಲಾವಿದೆ ಮಂಜಮ್ಮ ಜೋಗತಿ ತಮ್ಮ ಒಡಲಾಳದ ಸಂಕಟವನ್ನು ಬಿಚ್ಚಿಟ್ಟಾಗ ಒಂದು ಕ್ಷಣ ಮಾತು ಹೊರಡದಾಯಿತು.

‘ನಾವೂ ನಿಮ್ಮಂತೆಯೇ. ಈ ಹಿಂದೆ ನಾವು ಲಿಂಗದ ಕಾರಣದಿಂದ ಗಂಡಾಗಿರಬಹುದು. ಆದರೆ, ಈಗ ಮಾನಸಿಕ ಮತ್ತು ದೈಹಿಕವಾಗಿ ಹೆಣ್ಣಾಗಿದ್ದೇವೆ. ನಮ್ಮನ್ನೂ ನಿಮ್ಮಂತೆಯೇ ಕಾಣಿ’ ಎನ್ನುವ ಅವರ ಅಂತರಾಳದ ದನಿ ಎಂಥವರ ಅಂತರಾತ್ಮವನ್ನೂ ತಟ್ಟದಿರದು.

ತಮ್ಮನ್ನು ‘ತೃತೀಯ ಲಿಂಗಿಗಳು’ ಎಂದು ಗುರುತಿಸಿಕೊಳ್ಳಲು ಇಷ್ಟಪಡದ ಮಂಜಮ್ಮ ಜೋಗತಿ, ಆ ಸಮುದಾಯದ ಪ್ರಾತಿನಿಧಿಕ ದನಿಯಾಗಿ ನಿಲ್ಲುತ್ತಾರೆ.
‘ನೋಡಿ ಕಲೆಗೆ ಯಾವುದೇ ಲಿಂಗಭೇದವಿಲ್ಲ. ನಾನು ಜೋಗತಿ ನೃತ್ಯ ಮಾಡುವಾಗ ಪ್ರೇಕ್ಷಕರು ಅದನ್ನೊಂದು ಕಲೆಯನ್ನಾಗಿ ಆಸ್ವಾದಿಸುತ್ತಾರೆಯೇ ಹೊರತು, ನಾನು ಹೆಣ್ಣು ಅಥವಾ ಗಂಡು ಅಂತಲ್ಲ, ಕಲೆ ಎಲ್ಲರ ಸ್ವತ್ತು’ ಎನ್ನುವುದು ಮಂಜಮ್ಮ ಅವರ ದೃಢ ನುಡಿ.

ಅಂದ ಹಾಗೆ ಮಂಜಮ್ಮ ಜೋಗತಿ ಇದೇ ಜುಲೈ 29ರಿಂದ 31ರವರೆಗೆ ನಗರದಲ್ಲಿ ನಡೆಯಲಿರುವ ‘ಇಂಟರ್‌ ನ್ಯಾಷನಲ್‌ ಟ್ರಾನ್ಸ್‌ ಆರ್ಟ್ಸ್‌ ಫೆಸ್ಟಿವಲ್‌’ನಲ್ಲಿ ಜೋಗತಿ ನೃತ್ಯ ಪ್ರದರ್ಶಿಸಲಿದ್ದಾರೆ.

ಇದೇ ಮೊದಲ ಬಾರಿಗೆ ತಮ್ಮಂತೆಯೇ ಇರುವ ಅನೇಕ ಕಲಾವಿದರು ಒಂದೇ ವೇದಿಕೆಯಲ್ಲಿ ಕಲಾ ಪ್ರದರ್ಶನ ಮಾಡುತ್ತಿರುವುದು ಅವರಿಗೆ ಸಂತಸ ತಂದಿದೆ.

‘ಬಳ್ಳಾರಿ ಭಾಗದಲ್ಲಿ ನಮ್ಮದೊಂದೇ ತಂಡವಿತ್ತು. ಈಗ ಉತ್ಸವದಲ್ಲಿ ನಮ್ಮಂತೆಯೇ ಬೇರೆ ಕ್ಷೇತ್ರದ ಕಲಾವಿದರನ್ನು ನೋಡುವ ಅವಕಾಶ ದೊರೆಯುತ್ತಿರುವುದು ಸಂತಸ ತಂದಿದೆ. ಅವರಂತೆಯೇ ನಮ್ಮವರೂ ಕಲಿಯಲು ಇಷ್ಟಪಟ್ಟಲ್ಲಿ, ಈ ನಿಟ್ಟಿನಲ್ಲಿ ಅವರನ್ನು ತರಬೇತುಗೊಳಿಸಬಹುದು. ಕಲಾಕ್ಷೇತ್ರದಲ್ಲಿ ಸಾಧನೆ ಮಾಡಲು ಇತರರಿಗೂ ಇದು ಪ್ರೇರಣೆಯಾಗಬಲ್ಲದು’ ಎನ್ನುತ್ತಾರೆ ಮಂಜಮ್ಮ.

ಇದೇ ಮೊದಲ ಬಾರಿಗೆ ಬೃಹತ್ ಮಟ್ಟದ ವೇದಿಕೆಯಲ್ಲಿ ತೃತೀಯ ಲಿಂಗಿಗಳ ಕಲಾ ಪ್ರದರ್ಶನಕ್ಕೆ ವೇದಿಕೆ ಮಾಡಿಕೊಟ್ಟಿದೆ  ಇಂಟರ್‌ನ್ಯಾಷನಲ್ ಆರ್ಟ್ಸ್‌ ಅಂಡ್‌ ಕಲ್ಚರಲ್ ಫೌಂಡೇಷನ್.

‘ಕಲೆಗೆ ಯಾವುದೇ ಲಿಂಗಭೇದವಿಲ್ಲ, ಲಿಂಗಭೇದದ ಆಚೆಗೆ ಕಲಾಪ್ರದರ್ಶನ’ ಎನ್ನುವ ಆಶಯವನ್ನು ಈ ಉತ್ಸವ  ಹೊಂದಿದೆ ಎನ್ನುತ್ತಾರೆ ಫೌಂಡೇಷನ್‌ನ ವ್ಯವಸ್ಥಾಪಕ ಟ್ರಸ್ಟಿ, ಹಿರಿಯ ಛಾಯಾಗ್ರಾಹಕ ಶ್ರೀವತ್ಸ ಶಾಂಡಿಲ್ಯ.

ಉತ್ಸವದಲ್ಲಿ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿಯ ಮಂಜಮ್ಮ ಜೋಗತಿ, ರಾಮವ್ವ ಜೋಗತಿ, ಸಿಂಗಪುರದ ಖ್ಯಾತ ನೃತ್ಯ ಕಲಾವಿದೆ ಮಾಲಿಕಾ ಪಣಿಕ್ಕರ್, ಕೇರಳದ ಭರತನಾಟ್ಯ ಕಲಾವಿದೆ ಲಕ್ಷ್ಯಾ, ಮಲೇಷ್ಯಾದ ಕುಚುಪುಡಿ ವರ್ಷಾ ಅಂಥೋನಿ, ಚೆನ್ನೈನ ಭರತನಾಟ್ಯ ಕಲಾವಿದೆ ಹಾಗೂ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ನರ್ತಕಿ ನಟರಾಜ್‌ ತಮ್ಮ ಕಲಾಪ್ರದರ್ಶನ ನೀಡುವರು.

ಮೂರು ದಿನಗಳ ಉತ್ಸವದಲ್ಲಿ ಬಿ.ಎಸ್.ಲಿಂಗದೇವರು ನಿರ್ದೇಶಿಸಿದ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಿನಿಮಾ ‘ನಾನು ಅವನಲ್ಲ, ಅವಳು’ ಚಿತ್ರ ಪ್ರದರ್ಶನ ಹಾಗೂ ಸಂವಾದವೂ ನಡೆಯಲಿದೆ.
*
ಆತ್ಮಗೌರವದ ಪ್ರಶ್ನೆ 
ನಾನು ಒಮ್ಮೆ ಆಟೊದಲ್ಲಿ ಹೊರಟಿದ್ದೆ. ನಾಲ್ಕೈದು ಜನರು ಬಂದು ನನ್ನ ಹತ್ತಿರ ಹಣ ಕೇಳಿದರು. ‘ನನ್ನ ಹತ್ತಿರವೇ ಬಂದು ಭಿಕ್ಷೆ ಕೇಳುತ್ತಿರಾ?’ ಎಂದು ಅವರನ್ನು ಕೇಳಿದೆ. ಆಗವರು ‘ಅಯ್ಯೋ ನೀನು ನಮ್ಮ ಜಾತಿಯವಳಾ? ಗೊತ್ತೇ ಆಗಲಿಲ್ಲ. ನಿನ್ನನ್ನು ಬೇರೆ ಹೆಣ್ಣು ಅಂತ ಅಂದುಕೊಂಡಿದ್ದೆವು’ ಅಂದರು.

‘ಹೌದು ನಾನೂ ನಿಮ್ಮಂತೆಯೇ. ಆದರೆ, ನೀವು ಈ ರೀತಿ ಭಿಕ್ಷೆ ಬೇಡಿ, ನಮ್ಮ ಜಾತಿಗೇ ಅವಮಾನ ಮಾಡ್ತಾ ಇದ್ದೀರಾ’ ಎಂದು ನಾನು ಹೇಳಿದೆ.
ನಾವು ತೃತೀಯ ಲಿಂಗಿಗಳು ಎಂದು  ಬೇರೆಯವರ ಬಳಿ ಅನುಕಂಪ ಗಳಿಸಿ, ಹಣ ಗಳಿಸುವುದು ಸುಲಭದ ಕೆಲಸ. ಆದರೆ, ಅದಕ್ಕೆ ನನ್ನ ಮನಸು ಒಪ್ಪದು. ನಾವೂ ಇತರರಂತೆಯೇ ದುಡಿದು ತಿನ್ನಬೇಕು. ಕಲಾವಿದೆಯಾಗಿ ನನಗೆ ಶ್ರಮ ಸಂಸ್ಕೃತಿಯಲ್ಲಿ ನಂಬಿಕೆಯಿದೆ.

ಭಾವನೆಗಳನ್ನು ಪ್ರತಿಪಾದಿಸಲು ಲಿಂಗ ಅಡ್ಡಿಯಾಗದು. ಹೆಣ್ಣಾಗಿರುವುದಕ್ಕೆ ನನಗೆ ಹೆಮ್ಮೆಯಿದೆ. ಒಂದೇ ಜನ್ಮದಲ್ಲಿ ನನಗೆ ಎರಡು ಲಿಂಗಗಳನ್ನು ಅನುಭವಿಸುವ ಭಾಗ್ಯ ಸಿಕ್ಕಿದೆ. ಇದು ದೇವರ ಕೊಡುಗೆ ಎಂದು ನಾನು ಭಾವಿಸುತ್ತೇನೆ.

ನಾನು ಏನು ಎಂಬುದನ್ನು ಸ್ಪಷ್ಟವಾಗಿ ಕಂಡುಕೊಂಡಿದ್ದೇನೆ. ನಾವು ಕಲಾವಿದರು ಯಾವ ಪಾತ್ರ ಮಾಡಿದರೂ ಅದರಲ್ಲಿಯೇ ತಲ್ಲೀನರಾಗುತ್ತೇವೆ. ನನ್ನ ಪ್ರಕಾರ ಕಲೆಗೆ ಯಾವುದೇ ಲಿಂಗಭೇದವಿಲ್ಲ.

ನಾನು ಸಿಂಗಪುರದಲ್ಲಿ ತೃತೀಯ ಲಿಂಗಿ ಕಲಾವಿದೆ ಎಂದು ಹೆಸರು ಪಡೆದಿಲ್ಲ. ಹೆಣ್ಣು ಎಂದೇ ಅಲ್ಲಿನ ಜನರು ಗುರುತಿಸುತ್ತಾರೆ. ಇದು ನಿಜಕ್ಕೂ ನನ್ನ ಭಾಗ್ಯ. ಹೆಣ್ಣಾಗಿಯೇ ನಾನು ಕಲಾಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ ತೃತೀಯ ಲಿಂಗಿಯಾಗಿ ಅಲ್ಲ.
ಮಾಲಿಕಾ ಪಣಿಕ್ಕರ್,
ನೃತ್ಯಕಲಾವಿದೆ, ಸಿಂಗಪುರ
*
ಕಲಾಮಂಗಳ ಉತ್ಸವ
ಸಂಜೆ 4 ಗಂಟೆಗೆ ಉದ್ಘಾಟನೆ– ಶಾಲಿನಿ ರಜನೀಶ್‌. ಉಪಸ್ಥಿತಿ– ಆರ್‌. ವೆಂಕಟರಾವ್‌. 4.15ಕ್ಕೆ ಶಾಸ್ತ್ರೀಯ ಮತ್ತು ಅರೆ ಶಾಸ್ತ್ರೀಯ ನೃತ್ಯ. 5ಕ್ಕೆ ಮಂಜಮ್ಮ ಜೋಗತಿ ಅವರಿಂದ ಜೋಗತಿ ನೃತ್ಯ,  ರಾಮವ್ವ ಜೋಗತಿ ಅವರಿಂದ ಚೌಡಿಕೆ ಪದಗಳು. 6ಕ್ಕೆ ವಾಸುಕಿ ಅವರಿಂದ 3ಡಿ ಬೆಳಕಿನ ಸಂಗೀತ ಕಾರ್ಯಕ್ರಮ. ಆಯೋಜಕರು– ಅಂತರರಾಷ್ಟ್ರೀಯ ಕಲೆ ಮತ್ತು ಸಂಸ್ಕೃತಿ ಫೌಂಡೇಷನ್‌. ಸ್ಥಳ: ರಾಷ್ಟ್ರೀಯ ಆಧುನಿಕ ಕಲಾ ಸಂಗ್ರಹಾಲಯ. ಅರಮನೆ ರಸ್ತೆ, ಮಾಣಿಕ್ಯವೇಲು ಮ್ಯಾನ್‌ಷನ್‌.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT