ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲೆಯನ್ನು ಭ್ರಷ್ಟಗೊಳಿಸುವುದೇ ಡಬ್ಬಿಂಗ್!

Last Updated 2 ಜೂನ್ 2011, 19:30 IST
ಅಕ್ಷರ ಗಾತ್ರ

`ರೀಮೇಕ್ ಸಿನಿಮಾ ಎಂದರೆ ಬೌದ್ಧಿಕ ದಾರಿದ್ರ್ಯ ಎಂದರ್ಥ. ಡಬ್ಬಿಂಗ್ ಎಂದರೆ ಕಲೆಯನ್ನು ಭ್ರಷ್ಟಗೊಳಿಸುವುದಲ್ಲದೆ ಬೇರೇನೂ ಅಲ್ಲ~. ಹೀಗೆ, ಕನ್ನಡ ಚಿತ್ರೋದ್ಯಮದಲ್ಲಿ ವ್ಯಾಪಕವಾಗಿರುವ ರೀಮೇಕ್ ಚಟ ಹಾಗೂ ಹಿಂಬಾಗಿಲಲ್ಲಿ ಪದೇಪದೇ ಇಣುಕುತ್ತಿರುವ ಡಬ್ಬಿಂಗ್ ಸಂಸ್ಕೃತಿಯನ್ನು ಕಟುವಾಗಿ ಟೀಕಿಸಿದ್ದು ಹಿರಿಯ ಕಾದಂಬರಿಕಾರ ಎಸ್.ಎಲ್.ಭೈರಪ್ಪ.

ರಾಷ್ಟ್ರಪ್ರಶಸ್ತಿ ಮತ್ತು ರಾಜ್ಯಪ್ರಶಸ್ತಿ ವಿಜೇತರಿಗೆ `ಚಿತ್ರಸಮೂಹ~ ಬಳಗ ಏರ್ಪಡಿಸಿದ್ದ ಅಭಿನಂದನಾ ಸಮೂಹದಲ್ಲಿ ಮಾತನಾಡುತ್ತಿದ್ದ ಭೈರಪ್ಪ, ಕನ್ನಡ ಚಿತ್ರೋದ್ಯಮದಲ್ಲಿ ಹೆಚ್ಚುತ್ತಿರುವ ಬೌದ್ಧಿಕ ದಾರಿದ್ರ್ಯದ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಅವರ ಮಾತುಗಳ ಸಾರ ಸಂಗ್ರಹವಿಷ್ಟು:

* ಹಣ ಎಲ್ಲಿರುತ್ತದೆಯೋ ಅಲ್ಲಿ ಸೃಜನಶೀಲತೆ ಸಾಯುತ್ತದೆ.

* ಸಿನಿಮಾ ಮಂದಿ ಒಂದೇ ರೀತಿಯ ಸಿದ್ಧಾಂತಕ್ಕೆ ಕಟ್ಟು ಬೀಳಬಾರದು. ಹೊಸ ಹೊಸ ಹೊಳಹುಗಳೊಂದಿಗೆ ಅವರು ಸಿನಿಮಾ ನಿರ್ಮಿಸಬೇಕು.

* ಸಿನಿಮಾಗಳು ದುಡ್ಡು ಮಾಡುವುದಿಲ್ಲ ಎಂದು ಹೇಳುವವರು ಸಿನಿಮಾ ಮಾಡುವುದನ್ನು ಬಿಟ್ಟು ಇಟ್ಟಿಗೆ, ಸಿಮೆಂಟು ಅಥವಾ ಕಬ್ಬಿಣದ ವ್ಯಾಪಾರ ಮಾಡಲಿ. ಅವರೇಕೆ ಕಲಾ ವಲಯವನ್ನು ಭ್ರಷ್ಟಗೊಳಿಸಬೇಕು.

* ಜನಪ್ರಿಯ ನಾಯಕರ ಸಿನಿಮಾಗಳಲ್ಲಿ ನಿರ್ದೇಶಕರ ಸೃಜನಶೀಲತೆಗೆ ಕೆಲಸವೇ ಇರುವುದಿಲ್ಲ.

* ಒಳ್ಳೆಯ ಅಭಿರುಚಿಯನ್ನು ಬೆಳೆಸುವ `ಚಿತ್ರಸಮೂಹ~ದಂಥ ಬಳಗಗಳು ಹೆಚ್ಚಾಗಬೇಕು.

* ಜಾಹಿರಾತು ಮತ್ತು ಕೆಲವು ಕಾರ್ಯಕ್ರಮಗಳಲ್ಲಿ ರಾಜಸ್ತಾನಿ ಸಂಸ್ಕೃತಿ ಇಣುಕುತ್ತಿದೆ. ನಮ್ಮ ಸಂಸ್ಕೃತಿ ಶ್ರೀಮಂತವಾಗಿರುವಾಗ ಈ ಅನುಕರಣೆ ಯಾಕೆ?

* ಹಟ ತೊಟ್ಟು ಸಿನಿಮಾ ನಿರ್ಮಾಣದ ವೆಚ್ಚಗಳನ್ನು ತಗ್ಗಿಸಬೇಕು.

* ಕಲಾತ್ಮಕ ಚಿತ್ರಗಳಲ್ಲಿ ಸತ್ಯದ ಹುಡುಕಾಟ ಇರುತ್ತದೆ. ಈ ಅನ್ವೇಷಣೆ ಕಮರ್ಷಿಯಲ್ ಸಿನಿಮಾಗಳಲ್ಲಿ ಕಾಣಲು ಸಾಧ್ಯವಿಲ್ಲ.

ಇದೇ ಸಂದರ್ಭದಲ್ಲಿ ಮಾತನಾಡಿದ `ಚಿತ್ರಸಮೂಹ~ದ ಗಿರೀಶ ಕಾಸರವಳ್ಳಿ, ಆರ್ಥಿಕ ಅನನುಕೂಲಗಳ ನಡುವೆಯೂ ಭಿನ್ನವಾಗಿ ಯೋಚಿಸುವವರು ಸಿನಿಮಾ ರಂಗದಲ್ಲಿನ್ನೂ ಇದ್ದಾರೆ ಎನ್ನುವುದನ್ನು ಒತ್ತಿ ಹೇಳಿದರು. ಕಳೆದೊಂದು ವರ್ಷದಿಂದ ಚಿತ್ರಸಮೂಹ ನಡೆಸಿಕೊಂಡು ಬರುತ್ತಿದ್ದ ಪ್ರಯೋಗಶೀಲ ಚಿತ್ರಗಳ ಪ್ರದರ್ಶನದ `ಚಿತ್ರವರ್ಷ~ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯಗೊಂಡಿದೆ ಎಂದೂ ಕಾಸರವಳ್ಳಿ ಹೇಳಿದರು.

ಇತ್ತೀಚೆಗೆ ನಿಧನರಾದ ಹಿರಿಯ ಛಾಯಾಗ್ರಾಹಕ ರಾಮಚಂದ್ರ ಐತಾಳ್ ಅವರನ್ನು ನೆನಪಿಸಿಕೊಂಡ ಅವರು, ಐತಾಳರ ನಿಧನ ಚಿತ್ರರಂಗಕ್ಕಾದ ಬಹುದೊಡ್ಡ ನಷ್ಟ ಎಂದು ಅಭಿಪ್ರಾಯಪಟ್ಟರು.

ಸಾಧಕರಿಗೆ ಗೌರವ
ರಾಷ್ಟ್ರಪ್ರಶಸ್ತಿ ಪಡೆದ `ಬೆಟ್ಟದ ಜೀವ~, `ಹೆಜ್ಜೆಗಳು~, `ಪುಟ್ಟಕ್ಕನ ಹೈವೇ~ ಚಿತ್ರಗಳ ಸಾಧಕರಿಗೆ ಹಾಗೂ ವಿಮರ್ಶಕ ಮನು ಚಕ್ರವರ್ತಿ `ಚಿತ್ರಸಮೂಹ~ ತಂಡದ ಅಭಿನಂದನೆಗೆ ಪಾತ್ರರಾದರು. ಇದೇ ಸಂದರ್ಭದಲ್ಲಿ ರಾಜ್ಯಪ್ರಶಸ್ತಿ ಪಡೆದ `ಕಬಡ್ಡಿ~, `ಜೋಶ್~, `ಶಂಕರ ಪುಣ್ಯಕೋಟಿ~ ಹಾಗೂ `ಮುಖಪುಟ~ ಚಿತ್ರಗಳ ಸಾಧಕರನ್ನೂ ಅಭಿನಂದಿಸಲಾಯಿತು.

ಅಭಿನಂದನಾ ಸಮಾರಂಭಕ್ಕೂ ಮುನ್ನ, ಪರಿಸರ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ಪಿ.ಶೇಷಾದ್ರಿ ನಿರ್ದೇಶನದ `ಬೆಟ್ಟದ ಜೀವ~ (ಶಿವರಾಮ ಕಾರಂತರ ಕಾದಂಬರಿ ಆಧರಿತ) ಚಿತ್ರವನ್ನು ಪ್ರದರ್ಶಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT