ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಗುಂಡಿಯ ಸ್ವರ್ಣಗೌರಿ

Last Updated 8 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕು ಕಣಕಟ್ಟೆ ಹೋಬಳಿಯ ಸಮೀಪದ ಪುಣ್ಯಕ್ಷೇತ್ರ ಕಲ್ಗುಂಡಿ. ಈ ಗ್ರಾಮದಲ್ಲಿ ಒಟ್ಟು 16 ದೇವಾಲಯಗಳಿವೆ. ನಿಂತ ಭಂಗಿಯಲ್ಲಿರುವ ಭೂತಾಳೆ ಸ್ವರ್ಣ ಗೌರಮ್ಮನ ಮೂರ್ತಿ ಇಲ್ಲಿಯ ವಿಶೇಷ. ಸಾಮಾನ್ಯವಾಗಿ ಸ್ವರ್ಣಗೌರಿಯ ನಿಂತ ಭಂಗಿ ವಿರಳ.

ಈ ಗೌರಮ್ಮನ ಮೂರ್ತಿಯನ್ನು ಅಪರೂಪದ ದೈವೀ ಶಕ್ತಿಯನ್ನು ಹೊಂದಿರುವ ಭೂತಾಳೆ ಮರದಿಂದ ತಯಾರಿಸಲಾಗಿದೆ. ಹೀಗಾಗಿ ಈಕೆಗೆ ವಿಶೇಷ ಶಕ್ತಿ ಎನ್ನುವುದು ಭಕ್ತರ ನಂಬಿಕೆ. ದೇವಿಗೆ ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ. ಭಾದ್ರಪದ ತದಿಗೆಯ ಗೌರೀ ಹಬ್ಬದಂದು ಗೌರಮ್ಮನ ಗುಡಿಯಲ್ಲಿ ಶಿರಸ್ಸಿನ ರೂಪದಲ್ಲಿ ಗೌರಮ್ಮನ ಮೂರ್ತಿ ಪ್ರತಿಷ್ಠಾಪಿಸಿ ಗ್ರಾಮಸ್ಥರು 18 ದಿನ ಸರದಿಯ ಪ್ರಕಾರ ಪಲ್ಲಾರದ ಕಾಳು, ಹಣ್ಣು, ಹೂವು, ಕಾಯಿ ಕೊಟ್ಟು ಪೂಜಿಸುತ್ತಾರೆ.

18 ದಿನಗಳ ನಂತರ ಮೂರು ದಿನ ಭೂತಾಳೆ ಗೌರಮ್ಮನನ್ನು ಕಡಲೆಹಿಟ್ಟು ಮತ್ತು ಬೆಣ್ಣೆಯಿಂದ ತಿದ್ದಿ ಸ್ವರ್ಣಗೌರಿ ರೂಪ ಕೊಟ್ಟು ನಿಂತ ಭಂಗಿಯಲ್ಲಿ ನಿಲ್ಲಿಸುತ್ತಾರೆ. ಸಾಕ್ಷಾತ್ ಆದಿಶಕ್ತಿ ಅನ್ನಪೂರ್ಣೇಶ್ವರಿಯ ರೂಪವನ್ನು ಇದು ಹೋಲುತ್ತದೆ. ಮರುದಿನ ದೇವಾಲಯದಲ್ಲಿ ದೀಪಾಲಂಕಾರ, ಹೂವಿನ ಅಲಂಕಾರ, ಹೋಮ ಹವನಗಳು. ಜೊತೆಗೆ ಮಹಾಮಂಗಳಾರತಿ. ಅಂದಿನ ರಾತ್ರಿ ಗ್ರಾಮದೇವತೆ ಕಲ್ಲುಕೋಡಮ್ಮನವರ ಸಮ್ಮುಖದಲ್ಲಿ ವೀರಭದ್ರ ಸ್ವಾಮಿಯವರ ಗುಗ್ಗಳ ಮಹೋತ್ಸವ ನಡೆಯುತ್ತದೆ.

ಮರು ದಿನ ಬೆಳಿಗ್ಗೆ ಗೌರಮ್ಮನನ್ನು ಪದ್ಮಾಸನ ರೂಪದಲ್ಲಿ ಕುಳ್ಳಿರಿಸಲಾಗುತ್ತದೆ. ನಂತರ ದೇವಿಯನ್ನು ಆಸನದಿಂದ ಎತ್ತಿ ಮುತ್ತಿನ ಪಲ್ಲಕ್ಕಿಯ ಅಂಬಾರಿಯಲ್ಲಿ (484 ಕಿಲೊ ತೂಕ) ಕುಳ್ಳಿರಿಸಿ ಹೆಗಲ ಮೇಲೆ ಹೊತ್ತು ದಾಸೋಹದ ನೈವೇದ್ಯವನ್ನು ಸಮರ್ಪಿಸುತ್ತಾರೆ.

ಗ್ರಾಮದ ಒಳಿತಿಗಾಗಿ ಒಂದು ಪ್ರದಕ್ಷಿಣೆ ಹಾಕಿ ಚಂದ್ರಮಂಡಲದ ಮೇಲೆ ಪಲ್ಲಕ್ಕಿಯನ್ನು ಇಡುತ್ತಾರೆ. ನಂತರ ಸ್ವರ್ಣಗೌರಮ್ಮನ ಗುಗ್ಗಳ ಸೇವೆ ನಡೆಯುತ್ತದೆ. ಇದಾದ ನಂತರ ಚಂದ್ರಮಂಡಲದಿಂದ ಭಕ್ತರು ಪಲ್ಲಕ್ಕಿಯನ್ನು ಹೆಗಲ ಮೇಲೆ ಹೊತ್ತು ಊರಿನ ಎಲ್ಲಾ ದೇವಾಲಯಕ್ಕೆ ಹೋಗುತ್ತಾರೆ.

ನಂತರ, ನಡೆಯುವುದೇ `ತಲವು~ (ಭಕ್ತರು ದೇವಿಯನ್ನು ಕೇಳಿಕೊಳ್ಳುವ) ಕಾರ್ಯಕ್ರಮ. ಮಕ್ಕಳ ಬೇಡಿಕೆ, ಕೋರ್ಟ್ ಕಚೇರಿ ವಿವಾದ, ವಿವಾಹ ಇತ್ಯರ್ಥಗಳ ಬಗ್ಗೆ ತಮ್ಮ ಇಷ್ಟಾರ್ಥ ಕೈಗೂಡುವುದೋ ಇಲ್ಲವೋ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ತಿಳಿಯುವುದೇ ಈ ಕಾರ್ಯಕ್ರಮ. ತಮ್ಮ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಅಂದು ಜನಸಾಗರವೇ ಹರಿದು ಬರುತ್ತದೆ.

ದೇವಿಯನ್ನು ಸ್ಮರಿಸಿ, ಪ್ರಶ್ನೆಗಳನ್ನು ಮನಸ್ಸಿನಲ್ಲಿಯೇ ಕೇಳಿಕೊಂಡು ದೇವಿಯಿಂದಲೇ ಪರೋಕ್ಷ ಉತ್ತರ ಪಡೆಯಲಾಗುತ್ತದೆ. ತಮ್ಮ ಬೇಡಿಕೆ ಕೈಗೂಡುವುದಾದರೆ ಇಂಥ ಜಾಗ, ಕೈಗೂಡದಿದ್ದರೆ ಇನ್ನೊಂದು ಜಾಗ ತೋರಿಸು ಎಂದು ಕೇಳಿಕೊಂಡಾಗ ದೇವಿಯನ್ನು ಹೆಗಲ ಮೇಲೆ ಹೊತ್ತಿರುವವರ ಸಮೇತ ಇಡೀ ಪಲ್ಲಕ್ಕಿಯ ಅಂಬಾರಿಯೇ ಆಯಾ ಸ್ಥಳದತ್ತ ಹೋಗಿ ನಿಲ್ಲುತ್ತದೆ. `ತಲವು~ ಕಾರ್ಯಕ್ರಮದ ನಂತರ ಸ್ವರ್ಣಗೌರಮ್ಮನನ್ನು ಗ್ರಾಮದ ಕಲ್ಯಾಣಿಯಲ್ಲಿ ವಿಸರ್ಜಿಸಲಾಗುತ್ತದೆ.

ಕಲ್ಗುಂಡಿ ಕ್ಷೇತ್ರದ ಸ್ವರ್ಣಗೌರಮ್ಮ ಜಾತ್ಯತೀತತೆಗೂ ಹೆಸರಾಗಿದೆ. ಮುಸ್ಲಿಂ, ಕ್ರೈಸ್ತರು ಸೇರಿದಂತೆ ಎಲ್ಲ ಧರ್ಮೀಯರು ಈ ದೇವಿಯ ಭಕ್ತರಾಗಿ ಪೂಜೆ ಮಾಡಿಸಿ ಹರಕೆ ಹೊರುತ್ತಾರೆ. ಅಲ್ಲದೆ ನೆರೆಯ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಇತ್ಯಾದಿ ಕಡೆಗಳಿಂದಲೂ ಸಾಕಷ್ಟು ಭಕ್ತರು ಬರುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT