ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಮಾಡಿ ವಜಾಕ್ಕೆ ಟೈಟ್ಲರ್ ಒತ್ತಾಯ

Last Updated 27 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತೀಯ ಒಲಿಂಪಿಕ್ ಸಂಸ್ಥೆಯ (ಐಒಎ) ಅಧ್ಯಕ್ಷ ಸ್ಥಾನಕ್ಕೆ ಸುರೇಶ್ ಕಲ್ಮಾಡಿ ಅವರು ಖುದ್ದಾಗಿ ರಾಜೀನಾಮೆ ನೀಡದಿದ್ದಲ್ಲಿ ಅವರನ್ನು ಆ ಸ್ಥಾನದಿಂದ ವಜಾಗೊಳಿಸಬೇಕು ಎಂದು ಕಾಂಗ್ರೆಸ್ ಮುಖಂಡ ಹಾಗೂ ಸಂಸ್ಥೆಯ ಉಪಾಧ್ಯಕ್ಷ ಜಗದೀಶ್ ಟೈಟ್ಲರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

`ಕಾಮನ್‌ವೆಲ್ತ್ ಕ್ರೀಡಾಕೂಟ ಹಗರಣದಿಂದಾಗಿ ಭಾರತೀಯ ಕ್ರೀಡಾರಂಗ ಅವಮಾವ ಎದುರಿಸುತ್ತಿದೆ. ಇದಕ್ಕೆ ಕಲ್ಮಾಡಿ ಅವರೇ ಕಾರಣರಾಗಿದ್ದು, ಅವರನ್ನು ಯಾರಾದರೂ ಬೆಂಬಲಿಸಿದರೆ ಅವರನ್ನೂ ಕಲ್ಮಾಡಿ ಅವರ `ಕೊಳ್ಳೆ ಹೊಡೆದ ಸಂಪತ್ತಿನಲ್ಲಿ ಭಾಗಿಯಾದವರು ಎಂದೇ ಪರಿಗಣಿಸಬೇಕಾಗುತ್ತದೆ~ ಎಂದು ಟೈಟ್ಲರ್ ಹೇಳಿದ್ದಾರೆ.

`ಭಾರತೀಯ ಕ್ರೀಡಾರಂಗ ಅವಮಾನ ಎದುರಿಸುತ್ತಿರುವುದಕ್ಕೆ ನೈತಿಕ ಹೊಣೆಗಾರಿಕೆ ಹೊತ್ತು ಕಲ್ಮಾಡಿ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು~ ಎಂದು ಟೈಟ್ಲರ್ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

 `ಮೃದುವಾದ ಹೇಳಿಕೆಗಳಿಂದ ಯಾವುದೇ ಪ್ರಯೋಜನವಿಲ್ಲ. ಒಂದು ವೇಳೆ ಕಲ್ಮಾಡಿ ಖುದ್ದು ರಾಜೀನಾಮೆ ನೀಡದಿದ್ದಲ್ಲಿ ಅವರನ್ನು ಬಲವಂತವಾಗಿ ವಜಾ ಮಾಡಲೇಬೇಕು. ಭಾರತ ಇಂಥ ಇನ್ನೊಂದು ಅವಮಾನವನ್ನು ಸಹಿಸುವುದಿಲ್ಲ. ಮಾತ್ರವಲ್ಲ, ಅವಮಾನ ಮಾಡಲೂ ಆಸ್ಪದ ನೀಡುವುದಿಲ್ಲ~ ಎಂದು ಅವರು ಖಾರವಾಗಿ ಹೇಳಿದ್ದಾರೆ.

ಸೆರೆಮನೆಯಿಂದ ಬಿಡುಗಡೆಯಾಗಿರುವ ಕಲ್ಮಾಡಿ ಪುನಃ ಐಒಎ ಅಧ್ಯಕ್ಷರಾಗಿ ಮುಂದುವರಿಯುವುದಕ್ಕೆ ಅಸಮ್ಮತಿ ವ್ಯಕ್ತಪಡಿಸಿರುವ ಕ್ರೀಡಾ ಸಚಿವ ಅಜಯ್ ಮಾಕನ್ ಅವರ ನಿಲುವಿಗೆ ಟೈಟ್ಲರ್ ಸಹಮತ ಸೂಚಿಸಿದ್ದಾರೆ.

`ಹಲವು ವಿಷಯಗಳಲ್ಲಿ ಮಾಕನ್ ಅವರ ಜತೆ ಭಿನ್ನಾಭಿಪ್ರಾಯ ಹೊಂದಿದ್ದರೂ ಈ ವಿಷಯದಲ್ಲಿ ನಾನು ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತೇನೆ~ ಎಂದು ಹೇಳಿದ್ದಾರೆ. ಕಾಮನ್‌ವೆಲ್ತ್ ಹಗರಣಕ್ಕೆ ಸಂಬಂಧಿಸಿದಂತೆ ಸುಮಾರು ಒಂಬತ್ತು ತಿಂಗಳು ಜೈಲಿನಲ್ಲಿದ್ದ ಕಲ್ಮಾಡಿ ಅವರಿಗೆ ದೆಹಲಿ ಹೈಕೋರ್ಟ್, ಈ ತಿಂಗಳ ಆರಂಭದಲ್ಲಿ ಜಾಮೀನು ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT