ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಪ್ಪಯ್ಯ ದೇವರ ಜಾತ್ರೆ 18ರಿಂದ

Last Updated 17 ಏಪ್ರಿಲ್ 2011, 6:05 IST
ಅಕ್ಷರ ಗಾತ್ರ

ಕೊಲ್ಹಾರ: ಕೆನೆ ಮೊಸರಿನ ಖ್ಯಾತಿಯ ಕೊಲ್ಹಾರ ಪಟ್ಟಣದ ಪವಾಡಯೋಗಿ ಕಲ್ಲಪ್ಪಯ್ಯನವರ ದಿಗಂಬರಮಠ ಭಕ್ತರ ಆಶ್ರಯ ತಾಣ.
ನಾಡಿನ ಜನರ ನಂಬಿಕೆಯ ಶಕ್ತಿ ಸ್ಥಳ. ವಾಕ್‌ಸಿದ್ಧಿ ಪುರುಷನಾದ ಕಲ್ಲಪ್ಪಯ್ಯನವರು ಭಕ್ತರ ಪಾಲಿಗೆ ಸಾಕ್ಷಾತ್ ಶಿವನ ಸ್ವರೂಪಿಗಳಾಗಿ ಭಕ್ತ ಕೋಟಿಯ ಅಜ್ಞಾನ, ಮೂಢನಂಬಿಕೆ ಗಳನ್ನು ಕಳೆದು ಸಮಾಜೋದ್ಧಾರ ಕ್ಕಾಗಿ ಹಗಲಿರುಳು ಶ್ರಮಿಸಿದವರು. ಸಂಸಾರದ ದುಃಖಸಾಗರದಲ್ಲಿ ಬಳಲಿ ಬೆಂಡಾಗಿ ಶಾಂತಿ ನೆಮ್ಮದಿ ಬಯಸಿ ಶ್ರಿಮಠಕ್ಕೆ ಬರುತ್ತಿದ್ದ ಸಹಸ್ರಾರು ಜನರಿಗೆ ತಮ್ಮ ಪ್ರೀತಿ ತುಂಬಿದ ಹಿತವಚನಗಳ ಮೂಲಕ ಶಾಂತಿ ನೆಮ್ಮದಿಯನ್ನು ಉಂಟು ಮಾಡುವು ದಲ್ಲದೇ, ಅಂತಃಕರಣಪೂರಿತ ದಿವ್ಯ ದೃಷ್ಟಿಯಿಂದ ಕಷ್ಟವನ್ನು ಕಳೆಯು ತ್ತಿದ್ದರು. ಇದರಿಂದಾಗಿ ಈ ಭಾಗದ ಭಕ್ತ ಜನತೆ ಅವರನ್ನು ‘ಕೊಲ್ಹಾರದ ಕಲ್ಪವೃಕ್ಷ’ ಎಂದು ಅಭಿಮಾನದಿಂದ ಕರೆಯುತ್ತಿದ್ದರು.

 ಒಂದು ಬಾರಿ ಕಲ್ಲಪ್ಪಯ್ಯ ದೇವರು ಬೀಳಗಿ ತಾಲ್ಲೂಕಿನ ಮನ್ನಿಕೇರಿ ಗ್ರಾಮದ ಭಕ್ತ ಯಮನಪ್ಪ ಕರಿಗೊಂಡರ ಆಹ್ವಾನದ ಮೇರೆಗೆ ಪ್ರಸಾದ ಸ್ವೀಕರಿಸಲು ಹೋಗಿದ್ದರು. ಪ್ರಸಾದ ಸ್ವೀಕರಿಸಿ ಭಕ್ತನನ್ನು ಹರಿಸಿ, ಮರಳಿ ಕೊಲ್ಹಾರಕ್ಕೆ ತೆರಳಬೇಕೆನ್ನು ವಷ್ಟರಲ್ಲಿ ಕುಂಭದ್ರೋಣ ಮಳೆ ಸುರಿಯಿತು. ಶ್ರಿಗಳು ಸಮೀಪದ ಕೊರ್ತಿ ಗ್ರಾಮಕ್ಕೆ ಬರುವಷ್ಟರಲ್ಲಿ ಕೃಷ್ಣಾ ನದಿ ತುಂಬಿ ಹರಿಯುತ್ತಿತ್ತು. ಪರಿಣಾಮವಾಗಿ ಹಳೇ ಕೊಲ್ಹಾರದ ದಂಡಿನ ಸೇತುವೆ ನೀರಲ್ಲಿ ಮುಳುಗಿ ಸುಮಾರು 5 ಅಡಿ ನೀರು ಹರಿಯು ತ್ತಿತ್ತು. ಆಗ ಭಕ್ತನ ಎದುರೇ ಹೆಗಲ ಮೇಲಿನ ಕಂಬಳಿ ತೆಗೆದು ಹರಿಯುವ ನೀರಿನ ಮೇಲೆ ತೆಪ್ಪದಂತೆ ಹಾಕಿ, ಭಕ್ತನ ಸಮೇತ ಕುಳಿತುಕೊಂಡು ಹೊಳೆ ದಾಟಿ ಬಂದು ಮಠ ತಲುಪಿ ದರಂತೆ. ಇಂತಹ ಪವಾಡಕ್ಕೆ ಪ್ರಮುಖ ಸಾಕ್ಷಿಯಾದ ಭಕ್ತ ಯಮನಪ್ಪ ಶ್ರಿ ಮಠಕ್ಕೆ ದ್ವಾರಬಾಗಿಲು ಕಟ್ಟಿಸಿದ ನಲ್ಲದೇ, ಪ್ರತಿವರ್ಷದ ಜಾತ್ರೆಯಲ್ಲಿ ಮಠಕ್ಕೆ ಬಂದು ಒಂದು ಚೀಲ ಕಡಲೆ ಬೇಳೆಯ ಹೋಳಿಗೆ ಮಾಡಿಸಿ, ಕೊಲ್ಹಾರದ ಜನತೆಗೆ ದಾಸೋಹ ಏರ್ಪಡಿಸುತ್ತಿದ್ದ. ಇದನ್ನು ಈಗ ಅವರ ಕುಟುಂಬ ಪ್ರತಿ ವರ್ಷ ಮುಂದುವರಿಸಿ ಕೊಂಡು ಹೋಗುತ್ತಿದೆ. ಹೀಗೆ ಮಹಾನ್ ಪವಾಡಯೋಗಿಯಾದ ಕಲ್ಲಪ್ಪಯ್ಯನವರು ಜನರ ಕಷ್ಟ ಕಳೆಯುತ್ತ ಅವರ ಉದ್ಧಾರಕ್ಕಾಗಿ ಶ್ರಮಿಸಿದರು. ಅಲ್ಲದೇ ಪ್ರತಿವರ್ಷ ‘ದವನದ ಹುಣ್ಣಿಮೆ’ ಯಂದು ಜಾತ್ರೆ ಜರುಗುವಂತೆ ಮಾಡಿ, ಭಕ್ತರಲ್ಲಿ ಸಾಮರಸ್ಯ, ಭಾವೈಕ್ಯತೆ ಮೂಡಿಸಿ ಹಿಂದು- ಮುಸ್ಲಿಮರ ಒಗ್ಗಟ್ಟಿಗೆ ಶ್ರಮಿಸಿದರು. ಇಂಥ ಮಹಾನ್ ಪವಾಡಯೋಗಿಯ ಜನ್ಮ ಶತಮಾನೋತ್ಸವ ಹಾಗೂ ಜಾತ್ರೆ ಏ.18ರಿಂದ 5 ದಿನ ಜರುಗಲಿದೆ.

ಜಾತ್ರೆಯ ವಿವರ: ದವನದ ಹುಣ್ಣಿಮೆ (18ರಂದು) ಬೆಳಿಗ್ಗೆ 6ಕ್ಕೆ ದಿಗಂಬರೇಶ್ವರ ಕರ್ತೃ ಗದ್ದುಗೆಗೆ ಮಹಾ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಧ್ಯಾಹ್ನ ಪಲ್ಲಕ್ಕಿ ಉತ್ಸವ, ಸಂಜೆ 5ಗಂಟೆಗೆ ಮಹಾ ರಥೋತ್ಸವ ಜರುಗುವುದು. ನಿತ್ಯ ಸಂಜೆ 7ಕ್ಕೆ ಗೀಗೀ ಪದ, ರಾತ್ರಿ 10 ಗಂಟೆಗೆ ದಿಗಂಬರೇಶ್ವರ ನಾಟ್ಯ ಸಂಘದವರಿಂದ ‘ಸೇಡಿಟ್ಟ ಶ್ರಿರಾಮ’ ಎಂಬ ನಾಟಕ ಪ್ರದರ್ಶನ ಹಾಗೂ ಐದು ದಿನಗಳ ಕಾಲ ನಿರಂತರ ಅನ್ನ ದಾಸೋಹ ನಡೆಯಲಿದೆ.

19ರಂದು ಬೆಳಿಗ್ಗೆ 8ಕ್ಕೆ ಮಹಾ ಕುಂಭೋತ್ಸವ, 10ಕ್ಕೆ ಶ್ರಿಗಳ ಪಲ್ಲಕ್ಕಿ ಉತ್ಸವ, ಸಂಜೆ 5 ಗಂಟೆಗೆ ಹಾಲೋಕುಳಿ ನಡೆಯಲಿದೆ. ರಾತ್ರಿ 10 ಗಂಟೆಗೆ ಕಲ್ಲಪ್ಪಯ್ಯ ಮಹಾ ಶಿವಯೋಗಿಗಳ ನಾಟ್ಯ ಸಂಘದ ವರಿಂದ ‘ಬಡವ ಸಾಕಿದ ಬಹದ್ದೂರ ಹುಲಿ’ ಎಂಬ ನಾಟಕ ಪ್ರದರ್ಶನ ನಡೆಯಲಿದೆ.

20ರಂದು ಬೆಳಿಗ್ಗೆ 8 ಗಂಟೆಗೆ ಸೈಕಲ್ ಸ್ಪರ್ಧೆ,  ಸಂಜೆ ಸಿಡಿಮದ್ದು ಪ್ರದರ್ಶನ, ರಾತ್ರಿ 10 ಗಂಟೆಗೆ ‘ಸೇಡಿನ ಕಿಡಿಗೆ ಬಾಡಿ ಹೋದ ಸಂಸಾರ’ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.

21ರಂದು ಬೆಳಿಗ್ಗೆ 8 ಗಂಟೆಗೆ ಎತ್ತಿನ ಗಾಡಿ ಓಟದ ಸ್ಪರ್ಧೆ, ಮಧ್ಯಾಹ್ನ 3 ಗಂಟೆಗೆ ಟಗರಿನ ಕಾಳಗ ನಡೆಯಲಿದೆ. ರಾತ್ರಿ ‘ಮನ ಮೆಚ್ಚಿದ ಮಡದಿ’ ಎಂಬ ನಾಟಕ ಪ್ರದರ್ಶನ ಆಗಲಿದೆ.

ಏ. 22ರಂದು ಬೆಳಿಗ್ಗೆ 10 ಗಂಟೆಗೆ ವಿಜಾಪುರ ಎ.ಪಿ.ಎಂ.ಸಿ. ಸಹಯೋಗ ದೊಂದಿಗೆ ಉತ್ತಮ ಜಾನುವಾರು ಗಳಿಗೆ ರಜತ ಪದಕ ಹಾಗೂ ಬಹುಮಾನ ವಿತರಿಸಲಾಗುವುದು. ಸಂಜೆ 5ಕ್ಕೆ ದಿಗಂಬರೇಶ್ವರ ರಥೋತ್ಸವ ಕಳಸ ಇಳಿಸುವುದ ರೊಂದಿಗೆ ಜಾತ್ರೆ ಕೊನೆಗೊಳ್ಳುವುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT