ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಿದ್ದಲು ಗಣಿ ಹಂಚಿಕೆ ಅಕ್ರಮ: ಸಿಬಿಐ ತನಿಖೆಗೆ ಸಹಕರಿಸಲು ಪ್ರಧಾನಿ ಸೂಚನೆ

Last Updated 3 ಜುಲೈ 2012, 8:35 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹರಾಜು ರಹಿತವಾಗಿ 2006ರಿಂದ 2009ರವರೆಗೆ ಕಲ್ಲಿದ್ದಲು ಗಣಿಗಳನ್ನು ಮಂಜೂರು ಮಾಡುವಲ್ಲಿ ನಡೆದ ಅಕ್ರಮ ಆರೋಪಗಳಿಗೆ ಸಂಬಂಧಿಸಿದಂತೆ ಸಿಬಿಐ ನಡೆಸುತ್ತಿರುವ ತನಿಖೆಯಲ್ಲಿ ಸಹಕರಿಸುವಂತೆ ಪ್ರಧಾನ ಮಂತ್ರಿಗಳ ಸಚಿವಾಲಯವು ಕಲ್ಲಿದ್ದಲು ಇಲಾಖೆಗೆ ಸೂಚನೆ ನೀಡಿದೆ.

~ಸ್ವತಃ ಪ್ರಧಾನಿಯವರೇ ಪ್ರತಿಯೊಂದು ಅಂಶಗಳ ಬಗೆಗೂ ತನಿಖೆ ನಡೆಯಬೇಕು ಎಂದು ಬಯಸಿದ್ದಾರೆ. ತನಿಖೆಯಲ್ಲಿ ಸಹಕರಿಸಬೇಕು ಎಂಬುದಾಗಿ ಪ್ರಧಾನ ಮಂತ್ರಿಯವರ ಸಚಿವಾಲಯ ಸೂಚನೆ ನೀಡಿದೆ~ ಎಂದು ಕಲ್ಲಿದ್ದಲು ಸಚಿವ ಶ್ರೀಪ್ರಕಾಶ್ ಜೈಸ್ವಾಲ್ ಪಿಟಿಐಗೆ ತಿಳಿಸಿದರು.

ತನಿಖೆಯಲ್ಲಿ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ನೆರವಾಗಲು ಕಲ್ಲಿದ್ದಲು ಸಚಿವಾಲಯವು ಹಿರಿಯ ಅಧಿಕಾರಿಗಳನ್ನು ನೇಮಕ ಮಾಡಿದೆ ಎಂದು ಅವರು ನುಡಿದರು.

ಹರಾಜು ರಹಿತವಾಗಿ ಕಲ್ಲಿದ್ದಲು ಗಣಿಗಳನ್ನು ಪಡೆದ 100ಕ್ಕೂ ಹೆಚ್ಚಿನ ಸಂಸ್ಥೆಗಳ ಪೈಕಿ 68 ಕಂಪೆನಿಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ತನಿಖಾ ಸಂಸ್ಥೆಯು ಈವರೆಗೆ ಸಂಗ್ರಹಿಸಿದೆ ಎಂದು ಕಲ್ಲಿದ್ದಲು ಸಚಿವಾಲಯ ಮೂಲಗಳು ಹೇಳಿದವು.

ಕೇಂದ್ರೀಯ ಜಾಗೃತಾ ಆಯೋಗವು ಒಪ್ಪಿದ ಬಳಿಕ ಸಿಬಿಐಯು, 2006ರಿಂದ 2009ರ ನಡುವಣ ಅವಧಿಯಲ್ಲಿ ನಡೆಯಿತನ್ನಲಾಗಿರುವ ಕಲ್ಲಿದ್ದಲು ಗಣಿ ಹಂಚಿಕೆಯಲ್ಲಿ ನಡೆದ ಅಕ್ರಮಗಳ ತನಿಖೆಯನ್ನು ನಡೆಸುತ್ತಿದೆ. ಈ ಅವಧಿಯಲ್ಲಿ ಕಲ್ಲಿದ್ದಲು ಸಚಿವಾಲಯವು ಪ್ರಧಾನಿಯವರ ಉಸ್ತುವಾರಿಯಲ್ಲಿ ಇತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT