ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಿದ್ದಲು ತಕ್ಷಣ ಪೂರೈಕೆ: ಸಚಿವ ಜೈಸ್ವಾಲ್

Last Updated 17 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯದ ರಾಯಚೂರು ಉಷ್ಣ ವಿದ್ಯುತ್ ಸ್ಥಾವರ (ಆರ್‌ಟಿಪಿಎಸ್) ಕ್ಕೆ ಕೊರತೆ ಆಗಿರುವ ಕಲ್ಲಿದ್ದಲನ್ನು ತಕ್ಷಣ ಪೂರೈಕೆ ಮಾಡುವುದಾಗಿ ಕೇಂದ್ರದ ಯುಪಿಎ ಸರ್ಕಾರ ಪ್ರಕಟಿಸಿರುವ ಹಿನ್ನೆಲೆಯಲ್ಲಿ `ಲೋಡ್ ಶೆಡ್ಡಿಂಗ್~ಗೆ ತೆರೆ ಬೀಳುವ ಸಾಧ್ಯತೆಗಳಿವೆ.

`ಆರ್‌ಟಿಪಿಎಸ್~ ಒಳಗೊಂಡಂತೆ ವಿವಿಧ ರಾಜ್ಯಗಳ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಪ್ರತಿದಿನ ಸರ್ಕಾರಿ ಸ್ವಾಮ್ಯದ `ಕೋಲ್ ಇಂಡಿಯಾ~ದಿಂದ 143 ಗೂಡ್ಸ್ ಗಾಡಿಗಳಲ್ಲಿ ಕಲ್ಲಿದ್ದಲು ಪೂರೈಕೆ ಮಾಡಲಾಗುತ್ತಿದೆ.

ರಾಜ್ಯಕ್ಕೆ ಕೊರತೆ ಆಗಿರುವ ಕಲ್ಲಿದ್ದಲನ್ನು ಮುಂದಿನ ಮೂರು ದಿನಗಳಲ್ಲಿ ಸರಿಪಡಿಸಲಾಗುವುದು ಎಂದು ಕಲ್ಲಿದ್ದಲು ಸಚಿವ ಶ್ರೀಪ್ರಕಾಶ್ ಜೈಸ್ವಾಲ್ ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ   ತಿಳಿಸಿದರು.

ತೆಲಂಗಾಣ ಪ್ರತ್ಯೇಕ ರಾಜ್ಯಕ್ಕಾಗಿ ನಡೆಯುತ್ತಿರುವ ಹೋರಾಟದಲ್ಲಿ ಸಿಂಗರೇಣಿ ಕಲ್ಲಿದ್ದಲು ಗಣಿ ಕಾರ್ಮಿಕರೂ ಭಾಗವಹಿಸಿರುವ ಹಿನ್ನೆಲೆಯಲ್ಲಿ ಒರಿಸ್ಸಾದ ಮಹಾನದಿ ಮತ್ತು ಮಹಾರಾಷ್ಟ್ರದ ವೆಸ್ಟರ್ನ್ ಗಣಿಗಳಿಂದ ಕಲ್ಲಿದ್ದಲು ಪೂರೈಕೆ ಮಾಡಲಾಗುತ್ತಿದೆ ಎಂದು ಜೈ ಸ್ವಾಲ್ ಸ್ಪಷ್ಟಪಡಿಸಿದರು.

ಆಂಧ್ರದಲ್ಲಿ ಚಳವಳಿ ನಡೆದಿರುವ ಹಿನ್ನೆಲೆಯಲ್ಲಿ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ, ನಿಗದಿಯಾಗಿದ್ದ ಕಲ್ಲಿದ್ದಲಿನಲ್ಲಿ ಆರ್ ಲಕ್ಷ ಟನ್ ಕಡಿಮೆ ಬಂದಿದೆ. ಸಿಂಗರೇಣಿ ಬದಲಿಗೆ ಮಹಾನದಿ ಮತ್ತು ವೆಸ್ಟರ್ನ್ ಗಣಿಗಳಿಂದ ಕಲ್ಲಿದ್ದಲು ಸರಬರಾಜು ಮಾಡುವಂತೆ ಗಣಿ ಸಚಿವರಿಗೆ ರಾಜ್ಯದ ವಿದ್ಯುತ್ ಸಚಿವರು ಕಳೆದ ವಾರ ಮನವಿ ಮಾಡಿದ್ದರು.

ಕಲ್ಲಿದ್ದಲು ಕೊರತೆಯಿಂದ ರಾಯಚೂರಿನ ಎಂಟು ಘಟಕಗಳ ಪೈಕಿ ಮೂರು ಉತ್ಪಾದನೆ ಸ್ಥಗಿತಗೊಳಿಸಿದ್ದು, ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಕೊರತೆ ಕಲ್ಲಿದ್ದಲನ್ನು ಪೂರೈಸುವ ಭರವಸೆಯನ್ನು ಸಚಿವರು ನೀಡಿದ್ದಾರೆ. ರಾಜ್ಯ ಕೇಳಿದ  13 ಲಕ್ಷ ಟನ್ ಹೆಚ್ಚುವರಿ ಕಲ್ಲಿದ್ದಲನ್ನು ಇ- ಹರಾಜಿನಲ್ಲಿ ಭಾಗವಹಿಸಿ ಪಡೆಯುವಂತೆ ಸೂಚಿಸಿದ್ದಾರೆ.  ಸಿಐಎಲ್ ಸದ್ಯದಲ್ಲೇ ಇ- ಹರಾಜು ಪ್ರಕ್ರಿಯೆಗೆ ಚಾಲನೆ          ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT