ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಿದ್ದಿಲು ಆಮದು ಸುಂಕ ರದ್ದು: ರಾಜ್ಯದ ಒತ್ತಾಯ

Last Updated 18 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಕಲ್ಲಿದ್ದಲು ಸಮಸ್ಯೆಯಿಂದ ಸಂಕಷ್ಟಕ್ಕೆ ಸಿಕ್ಕಿರುವ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಸರಾಗವಾಗಿ ಮತ್ತು ಸ್ಪರ್ಧಾತ್ಮಕ ದರದಲ್ಲಿ ಕಚ್ಚಾ ವಸ್ತು ದೊರೆಯಲು ಸಾಧ್ಯವಾಗುವಂತೆ ಕಲ್ಲಿದ್ದಲು ಆಮದು ಸುಂಕವನ್ನು ಮುಂದಿನ ಬಜೆಟ್‌ನಲ್ಲಿ ಸಂಪೂರ್ಣ ರದ್ದು ಮಾಡಬೇಕೆಂದು ರಾಜ್ಯ ಸರ್ಕಾರವು ಕೇಂದ್ರವನ್ನು ಆಗ್ರಹಿಸಿದೆ.

  ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಸಚಿವರ `ಬಜೆಟ್ ಪೂರ್ವ ಸಮಾಲೋಚನಾ ಸಭೆ~ಯಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಈ ಸಲಹೆ ಮಾಡಿದ್ದಾರೆ. ಗೌಡರ ಅನುಪಸ್ಥಿತಿಯಲ್ಲಿ ವಿಶೇಷ ದೆಹಲಿ ಪ್ರತಿನಿಧಿ ಧನಂಜಯಕುಮಾರ್ ರಾಜ್ಯ ಸರ್ಕಾರದ ಸಲಹೆಗಳನ್ನು ಕೇಂದ್ರದ ಮುಂದೆ ಇಟ್ಟರು.

 ಸ್ಥಳೀಯ ಕಲ್ಲಿದ್ದಲು ಉತ್ಪಾದನೆ ಮತ್ತು ಸಾಗಣೆ ಸಮಸ್ಯೆಯಿಂದಾಗಿ ವಿದ್ಯುತ್ ಕಂಪೆನಿಗಳು ದುಬಾರಿ ದರ ಪಾವತಿಸಿ ಕಲ್ಲಿದ್ದಲು ಆಮದು ಮಾಡಿಕೊಳ್ಳುತ್ತಿದೆ. ಅಂತಿಮವಾಗಿ ಈ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕಲ್ಲಿದ್ದಲು ಆಮದು ಸುಂಕವನ್ನು ರದ್ದು ಮಾಡಬೇಕೆಂದು ರಾಜ್ಯ ಒತ್ತಾಯಿಸಿದೆ.

ರೇಷ್ಮೆ ಗೂಡು ಹಾಗೂ ನೂಲಿನ ದರ ಕುಸಿತದಿಂದ ರಾಜ್ಯದ ರೇಷ್ಮೆ ಬೆಳೆಗಾರರು ಆತಂಕಗೊಂಡಿದ್ದಾರೆ. ಪರಿಸ್ಥಿತಿ ಹೀಗೇ ಮುಂದುವರಿದರೆ ರೈತರು ರೇಷ್ಮೆ ಕೃಷಿಯಿಂದಲೇ ದೂರ ಸರಿಯುವ ಅಪಾಯವಿದೆ. ಜೀವನಾಧಾರಕ್ಕೆ ರೇಷ್ಮೆಯನ್ನು ಅವಲಂಬಿಸಿರುವ 1.3ಲಕ್ಷ ಕುಟುಂಬಗಳನ್ನು ಸಂಕಷ್ಟದಿಂದ ಪಾರು ಮಾಡಲು ಬಜೆಟ್‌ನಲ್ಲಿ `ವಿಶೇಷ ಪ್ಯಾಕೇಜ್~ ಪ್ರಕಟಿಸುವಂತೆ ಆಗ್ರಹ ಮಾಡಿದೆ.

ರೇಷ್ಮೆ ಆಮದು ಸುಂಕವನ್ನು ಶೇ 30ರಿಂದ ಐದಕ್ಕೆ ಇಳಿಸಿರುವುದರಿಂದ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡು ಹಾಗೂ ನೂಲಿನ ದರ ಕುಸಿದಿದೆ. ಬಜೆಟ್‌ನಲ್ಲಿ ಆಮದು ಸುಂಕವನ್ನು ಮೊದಲಿನ ಪ್ರಮಾಣಕ್ಕೆ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿದೆ.

ಹಣದುಬ್ಬರ ಸಮಸ್ಯೆಯಿಂದ ಬಡವರ ಬದುಕು ದುಬಾರಿಯಾಗಿದೆ. ಅಭಿವೃದ್ಧಿ ಫಲ ಅವರಿಗೆ ದಕ್ಕದಂತಾಗಿದೆ. ಹಣದುಬ್ಬರವನ್ನು ಪರಿಣಾಮಕಾರಿಯಾಗಿ ತಡೆಯುವ ಮೂಲಕ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು.

ಸಾರ್ವಜನಿಕ ಖರ್ಚುವೆಚ್ಚಗಳಿಗೆ ಹೊಣೆಗಾರಿಕೆ ನಿಗದಿ ಮಾಡಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಡಾ.ರಂಗರಾಜನ್ ಸಮಿತಿ ಮಹತ್ವದ ಶಿಫಾರಸು ಮಾಡಿದ್ದು, ತಕ್ಷಣ ಜಾರಿಗೆ ತರಬೇಕು ಎಂದು ಸಲಹೆ ಮಾಡಿದೆ.
ರಾಜ್ಯಗಳಿಗೆ ಬರುವ ಕೇಂದ್ರದ ನೆರವಿಗೆ ಸಂಬಂಧಿಸಿದ ಷರತ್ತುಗಳನ್ನು ಸಡಿಲಗೊಳಿಸಬೇಕು. `ವಸ್ತುನಿಷ್ಠ ವಿತರಣಾ ಸೂತ್ರ~ದ ಆಧಾರದ ಮೇಲೆ ರಾಜ್ಯಗಳಿಗೆ ನೆರವು ಹಂಚಿಕೆ ಆಗಬೇಕು. ಆದ್ಯತೆ ಗುರುತಿಸುವ ಸ್ವಾತಂತ್ರ್ಯ ರಾಜ್ಯಗಳಿಗೆ ಇರಬೇಕು. ಅತಿ ಹೆಚ್ಚು ಜನ ಅವಲಂಬಿಸಿದ ಕೃಷಿಯಿಂದ ಬರುತ್ತಿರುವ ಆದಾಯ ಅತ್ಯಲ್ಪವಾಗಿದ್ದು ಗ್ರಾಮೀಣ ಯುವಕರನ್ನು  ಕೈಗಾರಿಕೆ ಮತ್ತು ಸೇವಾವಲಯದಂಥ ಪ್ರಮುಖ ಕ್ಷೇತ್ರಗಳಲ್ಲಿ ತೊಡಗಿಸಲು ಅನುಕೂಲವಾಗುವಂತೆ ವೃತ್ತಿ ನೈಪುಣ್ಯತೆ ತರ   ಬೇತಿಗೆ ಹೆಚ್ಚು ಹಣ ಒದಗಿಸಬೇಕು.

ದೇಶದ ಮಾಹಿತಿ ತಂತ್ರಜ್ಞಾನ ಸ್ವರ್ಗವಾದ ಬೆಂಗಳೂರಿನ ಮೂಲ ಸೌಲಭ್ಯ ಅಭಿವೃದ್ಧಿಗೆ ಹೆಚ್ಚು ಹಣ ಕೊಡಬೇಕು. ಎರಡನೇ ಹಂತದ ನಗರಗಳ ಮೇಲೂ ಒತ್ತಡ ಹೆಚ್ಚುತ್ತಿದ್ದು, ಈ ನಗರಗಳ ಅಭಿವೃದ್ಧಿಗೆ ಗಮನ ಕೊಡಬೇಕು. ಮೂಲ ಸೌಲಭ್ಯ ಯೋಜನೆಗಳಿಗೆ ದೀರ್ಘಾವಧಿ ಸಾಲ ಸೌಲಭ್ಯ ನೀಡುವ ಸಂಸ್ಥೆಗಳನ್ನು ಉತ್ತೇಜಿಸುವ ಕೆಲಸ ಮಾಡಬೇಕು ಎಂದು ರಾಜ್ಯ ಸರ್ಕಾರ ಸಲಹೆ ಮಾಡಿದೆ.

ಸೇವಾ ತೆರಿಗೆ ವ್ಯಾಪ್ತಿ ವಿಸ್ತರಿಸುವ ತೀರ್ಮಾನ ಮಾಡುವ ಮುನ್ನ ರಾಜ್ಯಗಳ ಜತೆ ಚರ್ಚಿಸಬೇಕು. ಆದಾಯ ಹೆಚ್ಚಳಕ್ಕೆ ಸೇವಾ ತೆರಿಗೆ ವ್ಯಾಪ್ತಿ ವಿಸ್ತರಣೆ ಅನಿವಾರ್ಯ. ಕೆಲವೊಮ್ಮೆ ಇದು ರಾಜ್ಯಗಳ ಆದಾಯದ ಮೇಲೆ ಪರಿಣಾಮ ಬೀರುತ್ತದೆ ಎಂದು ರಾಜ್ಯ ಸರ್ಕಾರ ಹೇಳಿದೆ. ರಾಜ್ಯಗಳಿಗೂ ಆಮದು ಪದಾರ್ಥಗಳ ಮೇಲೆ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಹಾಕಲು ಅವಕಾಶ ಇರಬೇಕು. ಇದರಿಂದ ಆಮದು ಮೇಲೆ ನಿಯಂತ್ರಣ ಹೊಂದಲು ಸಾಧ್ಯವಾಗಲಿದೆ.

 ಬೇಕಾದರೆ ಕೇಂದ್ರ ಸರ್ಕಾರವೇ ಹೆಚ್ಚುವರಿ ವಿಶೇಷ ಸುಂಕ ಹಾಕಿ ಅದನ್ನು ರಾಜ್ಯಗಳಿಗೆ ವಸ್ತುನಿಷ್ಠ ಆಧಾರದಲ್ಲಿ ಹಂಚಿಕೆ ಮಾಡಬೇಕು. ಸರ್ಕಾರಿ ಸ್ವಾಮ್ಯದ ಪ್ರಯಾಣಿಕರ ವಾಹನಗಳಿಗೆ ಅಬಕಾರಿ ಸುಂಕದಿಂದ ವಿನಾಯ್ತಿ ನೀಡಬೇಕೆಂಬ ಬೇಡಿಕೆಗಳನ್ನು ರಾಜ್ಯ ಸರ್ಕಾರ ಕೇಂದ್ರದ ಮುಂದಿಟ್ಟಿದೆ. ಈ ಅಂಶಗಳನ್ನು ಬಜೆಟ್ ಸಿದ್ಧಪಡಿಸುವ ವೇಳೆ ಗಣನೆಗೆ ತೆಗೆದುಕೊಳ್ಳಬೇಕೆಂದು  ರಾಜ್ಯ ಸರ್ಕಾರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT