ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಿನಲ್ಲಿ ಕೆತ್ತುವ ಹೆಸರು ಬೇಡ

Last Updated 25 ಜನವರಿ 2011, 10:05 IST
ಅಕ್ಷರ ಗಾತ್ರ

ಕೊರಟಗೆರೆ: ತಾಲ್ಲೂಕಿನ ಕೋಳಾಲ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯೆ ಪ್ರೇಮ ಮಹಾಲಿಂಗಪ್ಪ ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನ.

* ರಾಜಕೀಯಕ್ಕೆ ಬರಲು ಪ್ರೇರಣೆ?
ಅತ್ಯಂತ ಬಡ ಕುಟುಂಬದ ಹಿನ್ನೆಲೆಯಿಂದ ಬಂದ ಪತಿ ಮಹಾಲಿಂಪ್ಪ ವಿದ್ಯಾರ್ಥಿ ಜೀವನದಿಂದಲೂ ನಾಯಕತ್ವ ಬೆಳೆಸಿಕೊಂಡು ಬಂದವರು. ವಿದ್ಯುತ್ ಗುತ್ತಿಗೆದಾರರಾಗಿ ಸಾಕಷ್ಟು ಸಮಾಜಸೇವೆಯಲ್ಲಿ ಗುರುತಿಸಿಕೊಂಡಿದ್ದರು. ಅವರ ಸಲಹೆ, ಸಹಕಾರ ಎಲ್ಲದಕ್ಕೂ ಮಿಗಿಲಾಗಿ ಬಡ ಕುಟುಂಬದಿಂದ ಮೇಲೆ ಬಂದ ನಮಗೆ ಬಡ ಜನರ ಸೇವೆ ಮಾಡಬೇಕೆಂಬ ಹಂಬಲ ರಾಜಕೀಯಕ್ಕೆ ಬರಲು ಪ್ರೇರಣೆ ನೀಡಿತು.

* ಕ್ಷೇತ್ರದ ಸಮಸ್ಯೆಗಳ ಅರಿವು?
ಈಗಾಗಲೇ ಕ್ಷೆತ್ರ ಪ್ರವಾಸ ಮುಗಿಸಿದ್ದೇನೆ. ಮುಖ್ಯವಾಗಿ ಕುಡಿಯುವ ನೀರಿನ ಸಮಸ್ಯೆ ಇದೆ, ರಸ್ತೆ ಅಭಿವೃದ್ಧಿಯಾಗಿಲ್ಲ. ಹನುಮಂತಗಿರಿ ಭೋವಿ ಕಾಲೋನಿಯಲ್ಲಿ 50 ಮನೆಗಳು ಕಾಡಿನಲ್ಲಿದ್ದು, ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಈ ಗ್ರಾಮಕ್ಕೆ ರಸ್ತೆ ಇಲ್ಲದೆ ಇಂದಿಗೂ ಕಾಲು ದಾರಿಯಲ್ಲೇ ನಡೆದು ಬರಬೇಕು. ಸೈಕಲ್ ಕೂಡ ಓಡಾಡಲು ಸಾಧ್ಯವಿಲ್ಲ.

* ಗೆಲುವಿಗೆ ಕಾರಣ?
ನಮ್ಮ ಪತಿ ಮೊದಲಿನಿಂದಲೂ ಸಮಾಜ ಕಾರ್ಯದಲ್ಲಿ ತೊಡಗಿದ್ದರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೇಲಿನ ಅಭಿಮಾನ ಹಾಗೂ ಅವರ ಬೆಂಬಲ, ಕ್ಷೇತ್ರ ಜನತೆಯ ಸಹಕಾರ ಸಲಹೆ ಗೆಲುವಿಗೆ ಕಾರಣವಾಯಿತು.ಕ್ಷೇತ್ರದ ಜನತೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ರಾಜಕಾರಣಿಗಳ ಹೆಸರನ್ನು ಕಲ್ಲಿನಲ್ಲಿ ಕೆತ್ತಿಸುವ ಬದಲು ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವ ಮಹದಾಸೆ ಇದೆ.

* ಸಮಸ್ಯೆಗಳಿಗೆ ಪರಿಹಾರ?
ಹಾಲಗನಹಳ್ಳಿ ಕ್ರಾಸ್‌ನಿಂದ ಮಲಗನಹಳ್ಳಿಯಿಂದ ಕೋಳಾಲಕ್ಕೆ ಬರಲು ಇಂದಿಗೂ ರಸ್ತೆ ಇಲ್ಲ. 4 ಕಿ.ಮೀ. ದೂರ ಶಾಲಾ ಮಕ್ಕಳು ಸೇರಿದಂತೆ ಗ್ರಾಮಸ್ಥರು ಪ್ರತಿದಿನ ನಡೆದುಕೊಂಡೇ ಬರಬೇಕಾಗಿದೆ. ರಸ್ತೆ ಇಲ್ಲದೆ ಬಸ್ ಸೌಕರ್ಯವಿಲ್ಲ. ಉಲುವಂಗಲ, ಬೈರಗೊಂಡ್ಲು, ಬೈಚೇನಹಳ್ಳಿ, ಎಸ್.ಗೊಲ್ಲಹಳ್ಳಿ ಭಾಗಗಳಲ್ಲಿ ನೀರಿನ ಸಮಸ್ಯೆ ಇದೆ. ಈಗಿರುವ ಮಿನಿ ವಾಟರ್ ಟ್ಯಾಂಕ್, ಸಿಸ್ಟನ್ ಸಾಕಾಗುತ್ತಿಲ್ಲ. ಓವರ್ ಹೆಡ್ ಟ್ಯಾಂಕ್ ನಿರ್ಮಿಸಿ ಪೈಪ್ ಲೈನ್ ಮೂಲಕ ನೀರು ಪೂರೈಕೆ ಮಾಡುವ ಯೋಜನೆ ಇದೆ.

* ಕ್ಷೇತ್ರ ಪರಿಚಯ?
ಕ್ಷೇತ್ರ ತೀರಾ ಹಿಂದುಳಿದಿದ್ದು ಶಿಕ್ಷಣಕ್ಕೆ ಮೊದಲ ಆದ್ಯತೆ. ಬಹಳಷ್ಟು ಕಡೆಗಳಲ್ಲಿ ಅಂಗನವಾಡಿ ಕೇಂದ್ರಗಳ ಸಮಸ್ಯೆ ಇದೆ. ತಿಮ್ಮಸಂದ್ರ, ತಿಮ್ಮನಾಯ್ಕನಹಳ್ಳಿ, ಸಂಕೇನಹಳ್ಳಿ, ಗೊಲ್ಲರಹಟ್ಟಿ, ಹನುಮಂತಪುರ ಗ್ರಾಮಗಳಲ್ಲಿ ಇಂದಿಗೂ ಅಂಗನವಾಡಿ ಕಟ್ಟಡವಿಲ್ಲದೆ ದೇವಸ್ಥಾನ, ಹಳೇ ಚಾವಡಿ, ಗುಡಿಸಲುಗಳಲ್ಲಿ ನಡೆಯುತ್ತಿವೆ.

ಕೆಲವೆಡೆ ಅಂಗನವಾಡಿ ಕೇಂದ್ರಗಳಿದ್ದರೂ ಶಿಥಿಲಗೊಂಡಿವೆ. ಹೆಚ್ಚುವರಿ ಶಾಲಾ ಕೊಠಡಿಗಳ ನಿರ್ಮಾಣ, ಶಿಥಿಲಾವಸ್ಥೆಯಲ್ಲಿರುವ ಶಾಲಾ ಕೊಠಡಿಗಳ ದುರಸ್ತಿಗೆ ಆದ್ಯತೆ ನೀಡಲಾಗುವುದು. ಇತ್ತೀಚೆಗೆ ನಿರ್ಮಾಣ ಮಾಡಿರುವ ಕೊಠಡಿಗಳು ಕಳಪೆ ಕಾಮಗಾರಿಯಿಂದ ಶಿಥಿಲಗೊಂಡಿರುವುದು ಸಾಕಷ್ಟು ಕಡೆಗಳಲ್ಲಿ ಸಮಸ್ಯೆಯಾಗಿದೆ.

ಕಂತೆವಡೇರಹಳ್ಳಿಗೆ ಯಾವ ಕಡೆಯಿಂದಲೂ ರಸ್ತೆ ಇಲ್ಲ. ಬಿದರಕಟ್ಟೆ, ಮಿಟ್ರಹಳ್ಳಿ ಮಲಗನಹಳ್ಳಿಯಿಂದ ಕೋಳಾಲಕ್ಕೆ ಬರಲು 2 ಸೇತುವೆ ನಿರ್ಮಾಣ ಅತ್ಯಗತ್ಯವಾಗಿದೆ.
ಕ್ಷೇತ್ರದ ಬಹುತೇಕ ಕಡೆಗಳಲ್ಲಿ ಫ್ಲೋರೈಡ್ ನೀರು ಇರುವುದರಿಂದ ಕುಡಿಯಲು ಫ್ಲೋರೈಡ್ ಮುಕ್ತವಾದ ನೀರು ಒದಗಿಸುವುದು. ಮಾಟಗಾನಹಳ್ಳಿ,ವೆಂಗಳಮ್ಮನಹಳ್ಳಿಯಲ್ಲಿ ಹೆಚ್ಚು ಫ್ಲೋರೋಸಿಸ್ ಸಮಸ್ಯೆ ಇದೆ. ಈ ಬಗ್ಗೆ ಈಗಾಗಲೇ ಆರ್ಗ್ಯಂ ಸಂಸ್ಥೆಯೊಂದಿಗೆ ಚರ್ಚಿಸಿದ್ದು, ಶೀಘ್ರ ಪರಿಹಾರ ಕ್ರಮ ಕೈಗೊಳ್ಳಲಾಗುವುದು.

* ಮಹಿಳೆಯರಿಗೆ ನಿಮ್ಮ ಕೊಡುಗೆ?
ಸ್ತ್ರೀಶಕ್ತಿ ಸಂಘ, ಸ್ವಸಹಾಯ ಗುಂಪುಗಳಿಗೆ ಸರ್ಕಾರದಿಂದ ಬರುವ ಅನುದಾನವನ್ನು ಸಂಪೂರ್ಣವಾಗಿ ಹಾಗೂ ನೇರವಾಗಿ ತಲುಪುವಂತೆ ಕ್ರಮ ಕೈಗೊಳ್ಳುವುದು. ಸ್ವಯಂ ಉದ್ಯೋಗ, ಕುರಿಸಾಕಾಣಿಕೆ, ಉಪಕಸುಬುಗಳಿಗೆ ಉತ್ತೇಜನ ನೀಡುವ ಮೂಲಕ ಸ್ತ್ರೀಯರನ್ನು ಆರ್ಥಿಕ ಸದೃಢರನ್ನಾಗಿ ಮಾಡುವುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT