ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲು, ಕಾವ್ಯ ಮತ್ತು ಮಳೆ!

Last Updated 1 ಜೂನ್ 2013, 19:59 IST
ಅಕ್ಷರ ಗಾತ್ರ

ಬೊಗಸೆ ನೀರಿಗೂ ತತ್ವಾರ ಇರುವ ಬಯಲು ಸೀಮೆಯಲ್ಲಿ ಜಲಪಾತ ಕಾಣಲು ಸಾಧ್ಯವೇ? ಈ ಪ್ರಶ್ನೆ ಹಾಕುವವರಿಗೆ ಬಳ್ಳಾರಿ ಜಿಲ್ಲೆಯಲ್ಲೊಂದು ಉತ್ತರವಿದೆ. ಬಳ್ಳಾರಿ ಜಿಲ್ಲೆಯ ಹಂಪಿ ಮಡಿಲಲ್ಲಿ ಅತಿ ರಮಣೀಯ ಜಲಪಾತವೊಂದಿದೆ. ಅಂದಹಾಗೆ, ಇದು ಮಳೆಗಾಲದ ಜಲಪಾತ. ಮಳೆಗಾಲ ಅಡಿ ಇಟ್ಟರೆ ಸಾಕು ಜಲಪಾತ ಜಗತ್ತಿಗೆ ತೆರೆದುಕೊಳ್ಳುತ್ತದೆ. ಕಡಿದಾದ ಬಂಡೆಗಳ ನಡುವಿನ ನೀರಿನ ಓಟ, ಹಾಲ್ನೊರೆಯ ಹಾಗೆ ಧುಮ್ಮಿಕುವ ಜಲಧಾರೆ ನೋಡುಗರ ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ.

ಅದು ಸುತ್ತಲೂ ಕಲ್ಲುಬಂಡೆಗಳಿಂದ ಕೂಡಿದ ಬೆಟ್ಟಗುಡ್ಡಗಳ ಸಾಲು. ನಡುವೆ ಮೈವೆತ್ತ ಹಸಿರಿನ ಸಿರಿ. ಈ ಸಿರಿಗೆ ಮತ್ತಷ್ಟು ಮೆರಗು ನೀಡುವುದೇ ಈ ಜಲಧಾರೆ. ಕಲ್ಲು ಬಂಡೆಗಳ ನಡುವೆ ಬಳಕುತ್ತಾ, ವಯ್ಯಾರ ಮಾಡುತ್ತಾ ಸಾಗುವ ನೀರಿನ ರಭಸಕ್ಕೆ, ಜುಳು ಜುಳು ನಿನಾದಕ್ಕೆ ಸಹೃದಯರ ಮನಸೂರೆ ಹೋಗುವುದು. ಸುಮಾರು 25 ಅಡಿ ಎತ್ತರದಿಂದ, ರುದ್ರಗಾಂಭೀರ್ಯದಿಂದ ಧುಮ್ಮಿಕ್ಕುವ ಜಲಧಾರೆ ಸೃಷ್ಟಿಸುವ ನಾದಲೋಕ, ಬೆಡಗು ಪ್ರವಾಸಿಗರ ಮೈನವಿರೇಳಿಸುತ್ತದೆ. ಜಲಪಾತಕ್ಕೆ ಮೈಯೊಡ್ಡಿ ನಿಂತರೆ ಆಗುವ ಅನುಭೂತಿ ಅನನ್ಯ. ಸುಡು ಬಿಸಿಲಿನಿಂದ ಬಸವಳಿದವರಿಗೆ ಮುದ ನೀಡಿ, ತಂಪು ಅಪ್ಪಿಕೊಂಡ ಅನುಭವ. ಮೊಗದಷ್ಟೂ ಮುಗಿಯದ, ಬಣ್ಣಿಸಿದಷ್ಟೂ ತೀರದ ನಿಸರ್ಗ ದೇವತೆಯ ಸಾಕ್ಷಾತ್ಕಾರ.

ಈ ಜಲಪಾತ ಪುರಾಣ ಕಥೆಗಳೊಂದಿಗೆ ನಂಟು ಹೊಂದಿದೆ. ಕುಮಾರರಾಮನು ಸಂಡೂರಿನ ರಾಮಗಡದಿಂದ ಬರಗಾಲದ ಸಮಯದಲ್ಲಿ ತನ್ನ ಪ್ರಜೆಗಳು, ಸಾಕು ಪ್ರಾಣಿಗಳೊಂದಿಗೆ ಮೇವು ಹುಡುಕಿಕೊಂಡು ಕಮಲಾಪುರ ಮಾರ್ಗವಾಗಿ ಕಂಪ್ಲಿಗೆ ಹೋಗುವ ಕಾಲಕ್ಕೆ ಈ ಜಲಪಾತವನ್ನು ಕಂಡನೆಂಬ ಐತಿಹ್ಯವಿದೆ. ಹಾಗಾಗಿ ಈ ಜಲಪಾತಕ್ಕೆ ಸ್ಥಳೀಯರು `ಕುಮಾರರಾಮ ಜಲಪಾತ' ಎಂದು ಕರೆಯುತ್ತಾರೆ.

ಇಲ್ಲಿ ಕಲ್ಲುಬಂಡೆಗಳೇ ಅಧಿಪತ್ಯ ಸ್ಥಾಪಿಸಿರುವುದರಿಂದ ಮಳೆಗಾಲದಲ್ಲಿ ಬಿದ್ದ ನೀರು ಹಲವು ತೊರೆಗಳಾಗಿ ಹರಿದು ಒಂದೆಡೆ ಸೇರುತ್ತದೆ. ಹೀಗೆ ಸೇರಿದ ನೀರು ತಗ್ಗಿನ ಪ್ರದೇಶದ ಕಡೆ ರಭಸದಿಂದ ಬಂದು ಜಲಪಾತ ಸೃಷ್ಟಿಸುತ್ತಿದೆ. ಬಿರು ಬಿಸಿಲ ನಾಡಿನಲ್ಲಿ ಮನಮೋಹಕ ಜಲಧಾರೆ ಸೃಷ್ಟಿಯಾಗುವ ಮೂಲಕ ಇದು ಈ ಭಾಗದ ಮಂದಿಗೆ ಅಚ್ಚರಿಯ, ಮನರಂಜನೆಯ ತಾಣವಾಗಿದೆ. ನೀರಿನ ಕೊರೆತಕ್ಕೆ ಬಂಡೆಗಳ ಮೇಲೆ ಅಲ್ಲಲ್ಲಿ ಕಲೆ ಮೈದಳೆದು ಹಂಪಿಯ ಶಿಲ್ಪಕಲೆಗೆ ಸಂವಾದಿಯಂತಿದೆ.

ಈ ಜಲಪಾತದ ದೃಶ್ಯ ವೈಭವವನ್ನು ಕಣ್ಣುತುಂಬಿಕೊಳ್ಳಲು ಮಳೆಗಾಲದಲ್ಲಿ ಮಾತ್ರ ಸಾಧ್ಯ. ಕಮಲಾಪುರದಿಂದ ಕಂಪ್ಲಿ ಮಾರ್ಗವಾಗಿ ಬಂದರೆ ಬುಕ್ಕಸಾಗರ ಗ್ರಾಮ ಬರುತ್ತದೆ. ಈ ಗ್ರಾಮಕ್ಕೆ ಮೊದಲು ಒಂದು ಮಂಟಪ ಸಿಗುತ್ತದೆ. ಈ ಮಂಟಪದಿಂದ ಬಲಕ್ಕೆ ಕಾಡು ರಸ್ತೆಯಲ್ಲಿ ಸುಮಾರು 2 ಕಿ.ಮೀ. ಸಾಗಿದರೆ ಗೌಡರ ಮೂಲೆ ಎಂಬ ಸ್ಥಳವಿದೆ. ಅಲ್ಲಿಯೇ ಈ ಜಲಪಾತದ ಅಸೀಮ ಸೌಂದರ್ಯ ತೆರೆದುಕೊಳ್ಳುತ್ತದೆ.
`ಕುಮಾರರಾಮ ಜಲಪಾತ' ಬುಕ್ಕಸಾಗರ ಕಾದಿಟ್ಟ ಅರಣ್ಯ ಪ್ರದೇಶದಲ್ಲಿದೆ. ಇಲ್ಲಿಗೆ ಹೋಗಲು ಪ್ರವಾಸಿಗರು ತಮ್ಮ ಸ್ವಂತ ವಾಹನಗಳನ್ನು ಆಶ್ರಯಿಸಬೇಕು.
ಮುಂಗಾರಿನ ಮೊದಲ ಪಾದ ಶುರುವಾಗಿದೆ. ಹಂಪಿಯತ್ತ ಹೋಗುವವರು ಒಂದಿಷ್ಟು ಸಮಯವನ್ನು `ಕುಮಾರರಾಮ ಜಲಪಾತ' ನೋಡಲಿಕ್ಕೂ ಹೊಂದಿಸಿಕೊಂಡರೆ ಸ್ಮರಣೀಯ ಅನುಭವವೊಂದಕ್ಕೆ ತಮ್ಮನ್ನು ಒಡ್ಡಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT