ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲು ಕ್ವಾರಿ: ಅನುಮತಿಗೆ ಆಗ್ರಹ

Last Updated 5 ಅಕ್ಟೋಬರ್ 2012, 8:30 IST
ಅಕ್ಷರ ಗಾತ್ರ

ಶಿರಸಿ: ಸ್ಥಗಿತಗೊಂಡಿರುವ ಕಲ್ಲು ಕ್ವಾರಿಗಳನ್ನು ಕಾನೂನು ಸಮ್ಮತಗೊಳಿಸಿ ಶೀಘ್ರದಲ್ಲಿ ಪುನರಾರಂಭಿಸಲು ಅವಕಾಶ ಮಾಡಿಕೊಡಬೇಕು, ಕಲ್ಲು, ರೇತಿ, ಜಲ್ಲಿಗಳನ್ನು ಅಗತ್ಯ ವಸ್ತುಗಳೆಂದು ಪರಿಗಣಿಸಿ ಕಲ್ಲು ಕ್ವಾರಿಗಳನ್ನು ಗಣಿಗಾರಿಕೆಯಿಂದ ಬೇರ್ಪಡಿಸಬೇಕು. ಎಂಬ ಮುಖ್ಯ ಆಗ್ರಹದೊಂದಿಗೆ ಹಲವಾರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸಿವಿಲ್ ಗುತ್ತಿಗೆದಾರರ ಸಂಘದ ನೇತೃತ್ವದಲ್ಲಿ ಗುತ್ತಿಗೆದಾರರು, ಕಾರ್ಮಿಕರು ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.

ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ ತಾಲ್ಲೂಕುಗಳ ಸಿವಿಲ್ ಗುತ್ತಿಗೆದಾರರ ಸಂಘಗಳ ಜೊತೆ ತಾಲ್ಲೂಕಿನ ಕ್ರಷರ್ ಮಾಲೀಕರ ಸಂಘ, ಸರಕು ಸಾರಿಗೆ ವಾಹನ ಚಾಲಕರ ಸಂಘ, ಸಹ್ಯಾದ್ರಿ ಮೂಲ ಕಟ್ಟಡ ಸಾಮಗ್ರಿಗಳ ಪೂರೈಕೆದಾರರ ಸಂಘ, ಬಾರ್ ಬೆಂಡರ್ಸ್‌ ಮತ್ತು ಸೆಂಟ್ರಿಂಗ್ ಕಾರ್ಮಿಕರ ಸಂಘ, ಗೃಹ ನಿರ್ಮಾಣ ಕಾರ್ಮಿಕರ ಸಂಘಗಳ ಸದಸ್ಯರು ಸೇರಿದಂತೆ 1500ಕ್ಕೂ ಹೆಚ್ಚು ಜನರು ಮಾರಿಕಾಂಬಾ ದೇವಾಲಯದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿ ಹಳೆ ಬಸ್ ನಿಲ್ದಾಣ ವೃತ್ತದ ಮೂಲಕ ಸಹಾಯಕ ಆಯುಕ್ತರ ಕಚೇರಿಗೆ ತೆರಳಿ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗೆ ಬೇಡಿಕೆ ಪತ್ರ ಸಲ್ಲಿಸಿದರು.
 
ಜಲ್ಲಿ ಕ್ರಷರ್‌ಗಳಿಗೆ ಸುರಕ್ಷಿತ ವಲಯ ನಿಗದಿಗೊಳಿಸಿ ಶೀಘ್ರ ಕ್ರಷರ್ ಪ್ರಾರಂಭಿಸಲು ಅವಕಾಶ ನೀಡಬೇಕು. ಗುತ್ತಿಗೆದಾರರ ಬಿಲ್‌ಗೆ ಸಂಬಂಧಿಸಿದ ದಂಡ ಪ್ರಸ್ತಾವವನ್ನು ರದ್ದುಗೊಳಿಸಬೇಕು. ಅವೈಜ್ಞಾನಿಕ ಪ್ಯಾಕೇಜ್ ಟೆಂಡರ್ ಪದ್ಧತಿ ರದ್ದುಗೊಳಿಸಬೇಕು. ಇ-ಟೆಂಡರ್ ಪದ್ಧತಿ ಸರಳೀಕರಣಗೊಳಿಸಬೇಕು. ಈ ಹಿಂದಿನಂತೆ ರೂ. 20ಲಕ್ಷ ವರೆಗಿನ ಕಾಮಗಾರಿಗಳಿಗೆ ಮ್ಯಾನುವಲ್ ಟೆಂಡರ್ ಪದ್ಧತಿ ಅಳವಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
 
ಕೆಂಪು ಕಲ್ಲು ಕ್ವಾರಿ, ಕ್ರಷರ್ ಸ್ಥಗಿತಗೊಂಡಿದ್ದು, ಸರ್ಕಾರದ ಅಸಮರ್ಪಕ ನೀತಿಯಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ತೀವ್ರ ತೊಂದರೆಯಾಗಿದ್ದು, ಇದನ್ನು ನಂಬಿರುವ ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ. ಈ ಎಲ್ಲ ಅಂಶ ಪರಿಗಣಿಸಿ ಸರ್ಕಾರ ತುರ್ತಾಗಿ ಪ್ರತಿಭಟನಾಕಾರರ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಲಾಯಿತು.

ಸಂಘಟನೆ ಪ್ರಮುಖರಾದ ಶ್ಯಾಮಸುಂದರ ಭಟ್ಟ, ಜಿ.ಎಸ್.ಹಿರೇಮಠ, ನಾಗರಾಜ ವಿಠ್ಠಲಕರ್, ಆರ್.ಸಿ. ಪಾಟೀಲ, ಟಿ.ಟಿ.ರಾಜು, ಮಹೇಶ ಶೆಟ್ಟಿ, ವೆಂಕಟೇಶ ನಾಯ್ಕ, ವಿ.ಎಂ. ಹೆಗಡೆ, ಗಣೇಶ ದಾವಣಗೆರೆ, ಮಹೇಶ ನಾಯ್ಕ, ಪ್ರದೀಪ ಶೆಟ್ಟಿ ಮತ್ತಿತರರು, ಸಿವಿಲ್ ಗುತ್ತಿಗೆದಾರರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ, ರವೀಂದ್ರನಾಥ ನಾಯ್ಕ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT