ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲು ಗಣಿಗಾರಿಕೆ ಗ್ರಾಮದ ಬೆಟ್ಟದಷ್ಟು ನಿರೀಕ್ಷೆ

Last Updated 3 ಸೆಪ್ಟೆಂಬರ್ 2011, 6:45 IST
ಅಕ್ಷರ ಗಾತ್ರ

ಕಲ್ಲು ಗಣಿಗಾರಿಕೆಯ ಕರಾಳ ಮುಖ ನೋಡಲು ನೀವು ಈ ಹಳ್ಳಿಗೆ ಬರಬೇಕು. ಒಂದು ಕಾಲಕ್ಕೆ ಗಗನಚುಂಬಿಯಂತೆ ಕಾಣುತ್ತಿದ್ದ ಬೆಟ್ಟಗಳು ಈಗ ಬೋಳು ಬೋಳಾಗಿ ಅಲ್ಲಿ ಪ್ರಪಾತ ಸೃಷ್ಟಿಯಾಗಿದೆ. ಆದರೂ ಕಲ್ಲು ಸ್ಫೋಟಿಸುವ ಸದ್ದು ನಿಂತಿಲ್ಲ. ಇದಿಷ್ಟು ಊರಾಚೆಗೆ ನಡೆಯುವ ಚಟುವಟಿಕೆಯಾದರೆ ಇತ್ತ ಆ ಪುಟ್ಟ ಗ್ರಾಮದ ಜನರು ಕರಗುವ ಬೆಟ್ಟಗಳನ್ನು ನೋಡುತ್ತಲೇ ಬಂದಿದ್ದಾರೆ.

ದಾವಣಗೆರೆ ತಾಲ್ಲೂಕಿನ `ಕುರ್ಕಿ~ ಗ್ರಾಮದ ಬಗ್ಗೆ ಇದು ಪೀಠಿಕೆ. ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಹತ್ತಿರದಲ್ಲೇ ಇರುವ ಈ ಊರಿಗೆ 300 ವರ್ಷಗಳ ಇತಿಹಾಸವಿದೆ ಎನ್ನಲಾಗಿದೆ. ಈ ಭಾಗ ಮೊದಲು ಗುಡ್ಡ-ಕಾಡು ಪ್ರದೇಶದಿಂದ ಆವೃತವಾಗಿತ್ತು. ಆಗ ಅಲ್ಲಿ ಜನರು ವಾಸವಾಗಿರಲಿಲ್ಲ. ಕಾಲಕ್ರಮೇಣ ಬೇರೆ ಕಡೆಗಳಿಂದ ಜನರು ಬಂದು ನೆಲೆಸಿದರು. ನಾಲ್ಕೈದು ಕುಟುಂಬಗಳಿಂದ ಆರಂಭವಾದ ಹಳ್ಳಿ ಈಗ ಬೆಳೆದು ನಿಂತಿದೆ.
ಆರಂಭದಲ್ಲಿ ಬಂದವರು ಜೀವನ ನಿರ್ವಹಣೆಗಾಗಿ ಗುಡ್ಡದಲ್ಲಿ ಬಂಡೆ ಒಡೆಯುವ ಕೆಲಸ ಮಾಡುತ್ತಿದ್ದರು. ಅವರು ಕಲ್ಲನ್ನು ಕುಟ್ಟಲು ಹೋಗುತ್ತಿದ್ದುದರಿಂದ ಈ ಊರನ್ನು `ಕುಟಿಗಿ~ ಎಂದು ಕರೆಯುತ್ತಿದ್ದರು, ಕ್ರಮೇಣ ಆ ಹೆಸರು `ಕುರ್ಕಿ~ ಎಂದಾಯಿತು ಎನ್ನುವುದು ಒಂದು ವಿಶ್ಲೇಷಣೆ.

ಹಳ್ಳಿಗಳಲ್ಲಿ ಸಾಮಾನ್ಯವಾಗಿರುವಂತೆ ಈ ಊರಲ್ಲೂ ಅವಿಭಕ್ತ ಕುಟುಂಬಗಳು ಹೆಚ್ಚು ಸಂಖ್ಯೆಯಲ್ಲಿವೆ. ಲಿಂಗಾಯತರು, ನಾಯಕರು, ಪರಿಶಿಷ್ಟ ಜಾತಿ, ಕುಂಬಾರರು, ಬಡಿಗರು, ಭೋವಿ ಮುಂತಾದ ಜನಾಂಗದವರು ವಾಸವಾಗಿದ್ದು ಸೌಹಾರ್ದ ನೆಲೆಸಿದೆ. ಈ ಗ್ರಾಮಕ್ಕೆ ಸೇರಿರುವ ವೆಂಕಟೇಶ್ವರ ಕ್ಯಾಂಪ್‌ನಲ್ಲಿ 33 ಕುಟುಂಬಗಳಿವೆ.

ಧಾರ್ಮಿಕ ಆಚರಣೆ
ಗ್ರಾಮದಲ್ಲಿ ಆಂಜನೇಯ, ಗಣೇಶ, ಗಂಗಮ್ಮ, ಬಸವೇಶ್ವರ, ಈಶ್ವರ, ದುರ್ಗಮ್ಮ ಮುಂತಾದ ದೇವಸ್ಥಾನಗಳಿವೆ. ಐದು ವರ್ಷಕ್ಕೊಮ್ಮೆ ನಡೆಯುವ ಚೌಡಮ್ಮನ ಹಬ್ಬದಲ್ಲಿ ಕೋಣ, ಕುರಿಗಳನ್ನು ಬಲಿಕೊಡುವ ಸಂಪ್ರದಾಯವಿದೆ. ಇದಲ್ಲದೇ ಇತ್ತೀಚಿನ ಕೆಲವು ವರ್ಷಗಳಿಂದ `ಮಾರುತಿ ತಿಥಿ~ ಆಚರಿಸಿಕೊಂಡು ಬರಲಾಗುತ್ತಿದೆ. ಈ ಗ್ರಾಮಕ್ಕೆ ಕೋತಿಯೊಂದು ಬಂದಿತ್ತು. ಅದು 2005 ಜ. 1ರಂದು ನಾಯಿ ಕಚ್ಚಿ ಸಾವನ್ನಪ್ಪಿತು.

ಗ್ರಾಮಸ್ಥರು ಆ ಕೋತಿಯನ್ನು ಆಂಜನೇಯ ದೇವಸ್ಥಾನದ ಪಕ್ಕ ಅಂತ್ಯಸಂಸ್ಕಾರ ಮಾಡಿ ಸಮಾಧಿ ಮಾಡಿದರು. ಅಂದಿನಿಂದ ಪ್ರತಿ ವರ್ಷ ಮಾರುತಿ ತಿಥಿ ಮಾಡುತ್ತ ಬಂದಿದ್ದಾರೆ. ಅಂದಿನ ದಿನ ಗ್ರಾಮದ ಜನರೆಲ್ಲ ಒಟ್ಟಾಗಿ ಎಲ್ಲಾ ಮನೆಯಿಂದಲೂ ಧಾನ್ಯ, ಹಣ ಸಂಗ್ರಹಿಸಿ ದೇವಸ್ಥಾನ ಮುಂಭಾಗದಲ್ಲಿ ಅಡುಗೆ ಮಾಡಿ ದೇವರಿಗೆ ನೈವೇದ್ಯ ಸಮರ್ಪಿಸಿ ಒಟ್ಟಾಗಿ ಕುಳಿತು ಊಟ ಮಾಡುವುದು ವಿಶೇಷ. ಆ ದಿನ ಸಾಮೂಹಿಕ ವಿವಾಹವನ್ನೂ ಮಾಡಲಾಗುತ್ತದೆ.

ಭದ್ರಾ ನಾಲೆ ಹಾದುಹೋಗುವ ಈ ಗ್ರಾಮ ಹೆಚ್ಚು ನೀರಾವರಿ ಪ್ರದೇಶವನ್ನು ಒಳಗೊಂಡಿದ್ದು ಸುತ್ತಮುತ್ತ ಮಳೆಯಾಶ್ರಿತ ಭೂಮಿಯೂ ಇದೆ. ಬಹುತೇಕರು ಕೃಷಿಯನ್ನೇ ಅವಲಂಬಿಸಿದ್ದಾರೆ. ಬತ್ತ, ತೆಂಗು, ಅಡಿಕೆ, ಜೋಳ, ರಾಗಿ ಬೆಳೆಯುತ್ತಾರೆ. ಕೂಲಿ ಕೆಲಸವೂ ಸಿಕ್ಕುತ್ತದೆ. ಇಲ್ಲಿ ವಿದ್ಯಾವಂತರಿದ್ದು ಸರ್ಕಾರಿ ಮತ್ತು ಖಾಸಗಿ ನೌಕರರು, ವ್ಯಾಪಾರಸ್ಥರೂ ವಾಸವಾಗಿದ್ದಾರೆ. ಹಾಲು ಉತ್ಪಾದನಾ ಕೇಂದ್ರವಿದ್ದು ಪ್ರತಿ ದಿನ 600ರಿಂದ 900 ಲೀ. ಹಾಲು ಉತ್ಪಾದನೆಯಾಗುತ್ತದೆ. ಪೇಡಾ ಮಾಡುವವರು, ಗ್ಯಾರೇಜ್, ಹೋಟೆಲ್ ಮುಂತಾದ ಉದ್ಯೋಗ ಆಶ್ರಯಿಸಿದವರೂ ಇದ್ದಾರೆ. ಒಟ್ಟಾರೆ ಆರ್ಥಿಕ ಪರಿಸ್ಥಿತಿ ಆಶಾದಾಯಕವಾಗಿದೆ.

ಜತೆಗೆ ಬಡತನವೂ ಬಿಟ್ಟಿಲ್ಲ. ಮನೆ, ನಿವೇಶನಕ್ಕಾಗಿ ಕಾಯುತ್ತಿರುವ ವರ್ಗವೂ ಇದೆ. ಅಭಿವೃದ್ಧಿ ವಿಷಯಕ್ಕೆ ಬಂದರೆ ಇಲ್ಲಿ ಸಾಕಷ್ಟು ಕೆಲಸ ಆಗಬೇಕಿದೆ. ಮುಖ್ಯವಾಗಿ ರಸ್ತೆಗಳು. ಒಂದು ರಸ್ತೆಗೆ ಕಾಂಕ್ರಿಟ್ ಹಾಕಿರುವುದು ಬಿಟ್ಟರೆ ಉಳಿದ ಕಡೆ ಉತ್ತಮ ರಸ್ತೆಯಿಲ್ಲ. ಚರಂಡಿ ವ್ಯವಸ್ಥೆ ಸುಧಾರಣೆಯಾಗಬೇಕು. ಎರಡು ಅಂಗನವಾಡಿ ಕೇಂದ್ರಗಳು, ಸರ್ಕಾರಿ ಪ್ರಾಥಮಿಕ ಶಾಲೆ, ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಿದೆ.

ಕುರ್ಕಿಯಲ್ಲಿ ಗ್ರಾಮ ಪಂಚಾಯ್ತಿಯಿದೆ. ಆನಗೋಡು ತಾಲ್ಲೂಕು ಪಂಚಾಯ್ತಿ ಹಾಗೂ ಲೋಕಿಕೆರೆ ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳ ವ್ಯಾಪ್ತಿಗೆ ಬರುತ್ತದೆ.

ಅಭಿವೃದ್ಧಿ ವಿಚಾರದಲ್ಲಿ ಜನರು ಅನೇಕ ನಿರೀಕ್ಷೆ ಇಟ್ಟುಕೊಂಡಿದ್ದಾರೆ. `ಹೊಸ ಬಡಾವಣೆಗಳಿಗೆ ಚರಂಡಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಸೇರಿದಂತೆ ಬಡವರಿಗೆ ಮನೆಗಳು ಸಿಗಬೇಕು. ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುವವರಿಗೆ ಆಶ್ರಯ ಸಿಗಬೇಕು~ ಎಂದು ಗ್ರಾ.ಪಂ. ಮಾಜಿ ಸದಸ್ಯ ಬಿ.ಆರ್. ಪರ್ವತಪ್ಪ ಅಭಿಪ್ರಾಯಪಟ್ಟರು.

ಆಸ್ಪತ್ರೆ ಬೇಕು
ಯುವ ರೈತ ಪುಟ್ಟರಾಜು ಅವರ ಪ್ರಕಾರ ಗ್ರಾಮಕ್ಕೆ ತುರ್ತಾಗಿ ಆಸ್ಪತ್ರೆ ಬೇಕಾಗಿದೆ. `ಚಿಕಿತ್ಸೆ ಪಡೆಯಲು ದೂರದ ದಾವಣಗೆರೆ ಇಲ್ಲವೇ ರಾಮಗೊಂಡನಹಳ್ಳಿ, ತೊಳಹುಣಸೆ ಮುಂತಾದ ಗ್ರಾಮಕ್ಕೆ ಹೋಗಬೇಕು. ಹೆಣ್ಣುಮಕ್ಕಳು ಆಪರೇಷನ್ ಮಾಡಿಸಿಕೊಳ್ಳಲು ವ್ಯವಸ್ಥೆಯಿಲ್ಲ~ ಎನ್ನುತ್ತಾರೆ. ಊರಿನಲ್ಲಿ ಒಂದು ಎಎನ್‌ಎಂ ಕೇಂದ್ರವಿದೆ, ಆದರೆ, ಸಿಬ್ಬಂದಿ ಜನತೆಗೆ ಲಭ್ಯವಾಗುವುದಿಲ್ಲ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿಬಂತು.

`ಊರಾಗ ರೋಡುಗಳು ಭಾಳ ಹಾಳಾಗ್ಯಾವರಿ. ಹೊಲಕ್ಕ ಹೋಗುವ ರಸ್ತೆನೂ ಸರಿಯಿಲ್ಲ. ಕುಡಿಯುವ ನೀರಿಗೆ ಇನ್ನೊಂದು ಬೋರ್‌ವೆಲ್ ಹಾಕಬೇಕು. ಕರೆಂಟ್ ಹೋದಾಗ ಭಾಳ ಸಮಸ್ಯೆ ಆಗತೈತೆ~ ಎಂದು ಹಿರಿಯರಾದ ರೇಣುಕಯ್ಯ ತಿಳಿಸಿದರು.

ಕಿರಿಯ ಆರೋಗ್ಯ ಸಹಾಯಕರ ಕೇಂದ್ರವಿದ್ದರೂ ಉಪಯೋಗವಾಗಿಲ್ಲ. ಜನರಿಗೆ ಸಿಬ್ಬಂದಿ ಲಭ್ಯವಾಗುತ್ತಿಲ್ಲ ಎಂದು ಗ್ರಾ.ಪಂ. ಮಾಜಿ ಸದಸ್ಯ ಎ.ಡಿ. ರೇವಣಸಿದ್ದಪ್ಪ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT