ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲು ಗಣಿಗಾರಿಕೆ ತಂದ ಆತಂಕ

Last Updated 13 ಜನವರಿ 2011, 8:40 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕಣಿವೆ ನಾರಾಯಣಪುರ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಇದರಿಂದ ತುಂಬ ತೊಂದರೆಯಾಗುತ್ತಿದೆ. ಪರಿಸರ ಮಾಲಿನ್ಯ ಮತ್ತು ಪ್ರಾಣಹಾನಿಗೂ ಕಾರಣವಾಗುತ್ತಿದೆ ಎಂದು ಸುತ್ತಮುತ್ತಲಿನ ಗ್ರಾಮಸ್ಥರು ದೂರುತ್ತಿದ್ದಾರೆ.

 ಕಲ್ಲು ಗಣಿಗಾರಿಕೆಯ ಪರಿಣಾಮ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹೆಚ್ಚಿನ ಸಮಸ್ಯೆಗಳನ್ನು ತಲೆದೋರುತ್ತಿದ್ದು, ತಕ್ಷಣವೇ ಕ್ರಮ ಕೈಗೊಳ್ಳದಿದ್ದಲ್ಲಿ ಗಂಭೀರ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಕಲ್ಲು ಗಣಿಗಾರಿಕೆಗಾಗಿ ಸಿಡಿಮದ್ದುಗಳನ್ನು ಮತ್ತು ಇತರ ಅಪಾಯಕಾರಿ ವಸ್ತುಗಳನ್ನು ಬಳಸಲಾಗುತ್ತಿದ್ದು, ಮನೆಗಳು ಬಿರುಕು ಬಿಡುತ್ತಿವೆ. ಸಿಡಿಮದ್ದುಗಳ ಭಾರಿ ಸದ್ದು ಮತ್ತು ಅತ್ಯಾಧುನಿಕ ವಸ್ತುಗಳ ಬಳಕೆಯಿಂದ ಮಕ್ಕಳು ಮತ್ತು ವೃದ್ಧರ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಮಧ್ಯರಾತ್ರಿ ವೇಳೆ ಭಾರಿ ಅತ್ಯಾಧುನಿಕ ಯಂತ್ರಗಳು ಮಾಡುವ ಶಬ್ದ ಮತ್ತು ಇನ್ನಿತರ ಸದ್ದಿನಿಂದ ರಾತ್ರಿ ನಿದ್ದೆ ಕೂಡ ಮಾಡದೇ ಆತಂಕದಲ್ಲೇ ಜೀವನ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ ಎನ್ನುವುದು ಗ್ರಾಮಸ್ಥರ ಅಳಲು.

ಗಣಿಗಾರಿಕೆಯಿಂದ ಉಂಟಾಗುತ್ತಿರುವ ಸಮಸ್ಯೆ ಮತ್ತು ಪರಿಣಾಮಗಳ ಕುರಿತು ಪರಿಸರ ಮತ್ತು ವಾಯುಮಾಲಿನ್ಯ ಇಲಾಖೆ ಸಚಿವರಿಗೆ, ಪ್ರಧಾನ ಕಾರ್ಯದರ್ಶಿಯವರಿಗೆ, ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿಪತ್ರಗಳನ್ನು ಸಲ್ಲಿಸಿ, ಗಣಿಗಾರಿಕೆಯನ್ನು ಸ್ಥಗಿತಗೊಳಿಸುವಂತೆ ಕೋರಿದ್ದಾರೆ. ಪರವಾನಗಿ ಇದೆ ಎಂಬ ಮಾತ್ರಕ್ಕೆ ಮನ ಬಂದಂತೆ ಗಣಿಗಾರಿಕೆ ಪ್ರಕ್ರಿಯೆ ನಡೆದಿದ್ದು, ಇದರಿಂದ ತುಂಬ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಮನವಿಪತ್ರದಲ್ಲಿ ತಿಳಿಸಿದ್ದಾರೆ.

‘ಕಲ್ಲು ಗಣಿಗಾರಿಕೆ ಸರಕು ಸಾಗಣೆಗಾಗಿ ಸುಮಾರು 150 ಲಾರಿಗಳಿದ್ದು, ಅವು 7 ರಿಂದ 8 ಟನ್ ಸರಕು ಸಾಗಣೆ ಮಾಡುವ ಸಾಮರ್ಥ್ಯ ಹೊಂದಿವೆ. ಆದರೆ ಈ ಲಾರಿಗಳಲ್ಲಿ 25 ರಿಂದ 30 ಟನ್‌ಗಳಷ್ಟು ಸರಕುಗಳನ್ನು ತುಂಬಿಸಿ ಸಾಗಣೆ ಮಾಡಲಾಗುತ್ತಿದೆ. ಇದರ ಪರಿಣಾಮ ಗ್ರಾಮಗಳ ಸಂಪರ್ಕ ರಸ್ತೆ, ಚರಂಡಿ, ಮೇಲುಸೇತುವೆ, ಕೆರೆ-ಕಟ್ಟೆಗಳು ಮುಂತಾದವುಗಳಿಗೆ ತೀವ್ರ ಹಾನಿಯಾಗಿದೆ. ಇದಲ್ಲದೇ ಆಗಾಗ್ಗೆ ರಸ್ತೆ ಅಪಘಾತಗಳು ಕೂಡ ಸಂಭವಿಸುತ್ತವೆ. ಇದರ ಬಗ್ಗೆ ಸಂಬಂಧಪಟ್ಟವರಿಗೆ ಹಲವು ಬಾರಿ ದೂರು ನೀಡಿದರೂ ನಿರೀಕ್ಷಿತ ಮಟ್ಟದಲ್ಲಿ ಯಾವುದೇ ರೀತಿಯಲ್ಲಿ ಪ್ರಯೋಜನವಾಗಿಲ್ಲ’ ಎಂದು ಗ್ರಾಮಸ್ಥರಾದ ವೆಂಕಟೇಶಪ್ಪ, ನಾರಾಯಣಸ್ವಾಮಿ ಮುಂತಾದವರು ಹೇಳುತ್ತಾರೆ.

‘ನೈಸರ್ಗಿಕ ಸಂಪತ್ತು ಹೀಗೆ ಹಾನಿಯಾಗಲು ಸರ್ಕಾರ ಯಾವುದೇ ಕಾರಣಕ್ಕೂ ಹೀಗೆ ಅವಕಾಶ ನೀಡಬಾರದು. ಪರವಾನಗಿ ನೀಡುವ ಮುನ್ನ ಗಣಿಗಾರಿಕೆಯಿಂದ ಆಗುವ ದುಷ್ಪರಿಣಾಮಗಳು ಮತ್ತು ಗ್ರಾಮಸ್ಥರ ಮೇಲೆ ಆಗುವ ಪ್ರಭಾವಗಳ ಬಗ್ಗೆ ಚಿಂತನೆ ಮಾಡಬೇಕಿತ್ತು. ಇದ್ಯಾವುದನ್ನು ಮಾಡದೇ ಸರ್ಕಾರವು ಗಣಿಗಾರಿಕೆಗೆ ಅವಕಾಶ ಕೊಟ್ಟಿರುವುದು ಸರಿಯಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಹಲವು ಬಾರಿ ಮನವಿಪತ್ರಗಳನ್ನು ಸಲ್ಲಿಸಿದರೂ ಸೂಕ್ತ ಪ್ರತಿಕ್ರಿಯೆ ನೀಡದೇ ಸಂಬಂಧಪಟ್ಟವರು ನಿರ್ಲಕ್ಷ್ಯ ತೋರುವುದನ್ನು ಮುಂದುವರೆಸಿದ್ದಲ್ಲಿ, ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಮುದ್ದೇನಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಎಲ್ಲರೂ ಒಂದಾಗಿ ಹೋರಾಟಕ್ಕೆ ಇಳಿಯಲಿದ್ದಾರೆ. ಹೋರಾಟಕ್ಕೆ ಜನಾಂದೋಲನ ರೂಪ ನೀಡಿ, ಉಗ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT