ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲು ಗಣಿಗಾರಿಕೆ ಸ್ಥಗಿತಕ್ಕೆ ರೈತರ ಆಗ್ರಹ

Last Updated 23 ಸೆಪ್ಟೆಂಬರ್ 2011, 6:05 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ಕಲ್ಲು ಗಣಿಗಾರಿಕೆ (ಕ್ರಷರ್)ಯಿಂದಾಗಿ ಗ್ರಾಮದ ಜನತೆ ಭೀತಿಯಿಂದ ಜೀವನ ನಡೆಸುವಂತಾಗಿದೆ. ಕೃಷಿ ಚಟುವಟಿಕೆಗಳ ಮೇಲೆ ಮಾರಕ ಪರಿಣಾಮ ಉಂಟು ಮಾಡಿರುವ ಕ್ರಷರ್ ಅನ್ನು ಕೂಡಲೆ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಗುರುವಾರ ತಾಲ್ಲೂಕಿನ ಕಡ್ಲಬಾಳು ಗ್ರಾಮದ ರೈತರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

 ಪಟ್ಟಣದ ಈಶ್ವರ ದೇವಸ್ಥಾನದ ಆವರಣದಿಂದ ನೂರಾರು ಪ್ರತಿಭಟನಾಕಾರರು ಬಸವೇಶ್ವರ ಬಜಾರ್ ಮೂಲಕ ಪ್ರತಿಭಟನಾ ರ‌್ಯಾಲಿಯಲ್ಲಿ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಮುತ್ತಿಗೆ ಹಾಕಿದರು. ಮನವಿ ಸಲ್ಲಿಸುವ ಮೊದಲು ಪ್ರತಿಭಟನಾ ಸಮಾವೇಶ ನಡೆಸಿದರು. 

 ಈ ಸಂದರ್ಭದಲ್ಲಿ ಕೆಪಿಆರ್‌ಎಸ್ ಮುಖಂಡ ರಂಗಪ್ಪ ದಾಸರ್ ಮಾತನಾಡಿ, ಸಣ್ಣ ಗುಡ್ಡದ ಮೇಲಿನ ಕಲ್ಲು ಗಣಿಗಾರಿಕೆಯಿಂದ ಕೂಗಳತೆ ದೂರದಲ್ಲಿರುವ ಗ್ರಾಮದ ಜನತೆಗೆ ಸಮಸ್ಯೆಯಾಗಿ ಪರಿಣಮಿಸಿದೆ. ಗಣಿಗಾರಿಕೆಯ ಪರಿಣಾಮವಾಗಿ ಕಲ್ಲು ಗುಡ್ಡ ನಾಶದ ಹಂತದಲ್ಲಿದೆ.

ಗುಡ್ಡದ ಮೇಲಿನ ಜಾತ್ರೆಯ ಸಂಭ್ರಮ ಕರಗಿದೆ. ಆ ಮೂಲಕ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ದೂರಿದರು. ಗಣಿಗಾರಿಕೆಯ ಹಿನ್ನಲೆಯಲ್ಲಿ ನಡೆಯುವ ಸ್ಫೋಟದಿಂದ ಗ್ರಾಮದ ಪ್ರತಿ ಮನೆಗಳು ನಲುಗಿ ಬಿರುಕುಬಿಟ್ಟಿವೆ. ಏಳುವ ಧೂಳು ಸುತ್ತಮುತ್ತಲಿನ ರೈತರ ಕೃಷಿ ಚಟುವಟಿಕೆಗಳನ್ನು ಅತಂತ್ರಗೊಳಿಸಿದೆ. ಕೊಳವೆ ಬಾವಿಗಳು ಬತ್ತಿಹೋಗಿವೆ ಎಂದು ಆರೋಪಿಸಿದರು.
 
ಗಣಿಗಾರಿಕೆ ಪ್ರಾರಂಭಿಸುವಾಗ ಗ್ರಾಮದ ಜನತೆ ಸೇರಿದಂತೆ ಗ್ರಾ.ಪಂ.ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಗಣಿಗಾರಿಕೆ ನಂತರದ ಪರಿಸರ ಸ್ಥಿತ್ಯಂತರಗಳ ಕುರಿತು ಚರ್ಚೆ ನಡೆಸದೆ ಕಾನೂನು ಬಾಹಿರವಾಗಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ.

ಈ ಹಿನ್ನಲೆಯಲ್ಲಿ ಕಡ್ಲಬಾಳು ಗ್ರಾ.ಪಂ.ಕಾರ್ಯದರ್ಶಿ ಬಸವರಾಜ್ ಅವರನ್ನು ಅಮಾನತುಗೊಳಿಸಬೇಕು ಎಂದು ಅವರು ಆಗ್ರಹಿಸಿದರು.ಗಣಿಗಾರಿಕೆ ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಕ್ರಷರ್ ಮಾಲೀಕರಿಗೆ ನೋಟೀಸ್ ನೀಡಬೇಕು. ಕೂಡಲೆ ಗ್ರಾ.ಪಂ. ಕಾರ್ಯದರ್ಶಿಯವರನ್ನು ಸ್ಥಳಕ್ಕೆ ಕರೆತರಬೇಕು ಎಂದು ಪ್ರತಿಭಟನೆಕಾರರು ಪಟ್ಟು ಹಿಡಿದರು. 
 
ತಾ.ಪಂ.ಕಾರ್ಯ ನಿರ್ವಾಹಕ ಅಧಿಕಾರಿ ಜೆ.ಗೋಪ್ಯಾನಾಯ್ಕ ಪ್ರತಿಭಟನೆ ನಿರತ ರೈತರೊಂದಿಗೆ ಮಾತನಾಡಿ, ಕಾನೂನು ಬಾಹಿರವಾಗಿ ಗಣಿಗಾರಿಕೆಗೆ ಅನುಮತಿ ನೀಡಿರುವ ಕಾರ್ಯದರ್ಶಿ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.

ಗಣಿಗಾರಿಕೆ ಸ್ಥಗಿತಕ್ಕೆ ಕಾನೂನು ತೊಡಕುಗಳಿವೆ. ಕ್ರಷರ್ ಸ್ಥಗಿತಕ್ಕೆ ಕಂದಾಯ ಮತ್ತು ಗಣಿ ಹಾಗು ಭೂವಿಜ್ಞಾನ ಇಲಾಖೆಗೆ ಪತ್ರ  ಬರೆಯಲಾಗುತ್ತದೆ ಎಂದು ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆ ಮುಕ್ತಾಯಗೊಳಿಸಲಾಯಿತು

ಗ್ರಾ.ಪಂ.ಸದಸ್ಯರಾದ ತಿಂದಪ್ಪ, ದೊಡ್ಡಯ್ಯ, ರೇಣುಕಮ್ಮ, ಹುಲಿಗೆಮ್ಮ, ರೈತ ಮುಖಂಡರಾದ ಶರಣಪ್ಪ, ನಂದೆಪ್ಪನವರ ತಿಪ್ಪಣ್ಣ, ಹನಮಂತಪ್ಪ, ಇ.ಮಾಬುಬೇಗ್, ಡಿ.ಶರಣಪ್ಪ, ಉಸ್ಮಾನ್‌ಭಾಷಾ, ಬ್ಯಾಟಿ ಮಲ್ಲೇಶ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಗ್ರಾಮದ ನಾಗರಿಕರು, ರೈತರು, ಕೂಲಿಕಾರರು, ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಸ್ತ್ರೀ ಶಕ್ತಿ ಹಾಗು ಮಹಿಳಾ ಸ್ವಸಹಾಯ ಗುಂಪುಗಳು ಮತ್ತು ಆಟೋಚಾಲಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT