ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲು ಗಣಿಗಾರಿಕೆಗೆ ನಲುಗಿರುವ ಬದುಕು

Last Updated 2 ಫೆಬ್ರುವರಿ 2013, 4:33 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: `ಢಮ್' ಎಂಬ ಕಿವಿಗಡಚಿಕ್ಕುವ ಸದ್ದು. ದಿನವಿಡೀ ನಿರಂತರ ಸ್ಫೋಟದ ಬೆಚ್ಚಿ ಬೀಳಿಸುವ ಸದ್ದು ಸುತ್ತಲಿನ ಪ್ರದೇಶದಲ್ಲಿ ಭೂಕಂಪದ ಅನುಭವ ನೆನಪಿಸುತ್ತದೆ. ಶಬ್ದದ ರಭಸಕ್ಕೆ ಸಣ್ಣಗೆ ಬಿರುಕು ಬಿಟ್ಟ ಮನೆಗಳು, ಕುಸಿದ ಅಂತರ್ಜಲ ಮಟ್ಟ, ಧೂಳುಮಯವಾದ ಜಮೀನಿನಲ್ಲಿ ಬೆಳೆದ ಬೆಳೆ, ಕ್ರಷರ್ ಯಂತ್ರಗಳು ಕರ್ಕಶ ದನಿ ಸುತ್ತಲಿನ ಪ್ರದೇಶವನ್ನು ಬರಡು ಮಾಡಿದೆ. ಇವುಗಳ ನಡುವೆ ಕಲ್ಲು ಗಣಿಗಾರಿಕೆಗೆ ನಲುಗಿ ಬಾಯಿ ಬಿಡಲಾಗದೇ ಮೌನವಾಗಿ ರೋದಿಸುವ ಜನರ ಅಸಹಾಯಕತೆ ಕಣ್ಣಿಗೆ ರಾಚುತ್ತದೆ.

ತಾಲ್ಲೂಕಿನ ಅಂಕಸಮುದ್ರ ಹಾಗೂ ಅಡವಿ ಆನಂದದೇವನಹಳ್ಳಿ ಅಕ್ಕಪಕ್ಕದ ಗ್ರಾಮಗಳಲ್ಲಿ ಕಾಲಿಟ್ಟರೆ ಸಾಕು, ಇಂಥ ಚಿತ್ರಣ ಸಾಮಾನ್ಯವಾಗಿವೆ. ಎರಡೂ ಗ್ರಾಮಗಳಿಂದ ಕೂಗಳತೆ ದೂರದಲ್ಲಿರುವ ಚಿಲವಾರ ಬಂಡಿ ಎಂಬ ಕಲ್ಲಿನ ಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಪರಿಣಾಮವಾಗಿ ಜನರ ಜೀವನ ನಲುಗಿದೆ. ಕಳೆದ ಐದು ವರ್ಷದಿಂದ ಗ್ರಾಮಸ್ಥರು ಗೋಳು ಅನುಭವಿಸುತ್ತಿದ್ದಾರೆ. ಅವರ ನೋವಿಗೆ ಸ್ಪಂದಿಸುವ ಮನಸ್ಸು, ಆಕ್ರಂದನ ಕೇಳುವ ಕಿವಿಗಳಿಲ್ಲ.

ತುಂಗಭದ್ರ ಹಿನ್ನೀರಿನ ಅಚ್ಚುಕಟ್ಟು ಪ್ರದೇಶದ  ಸಮೃದ್ಧ ಜಮೀನು ಗ್ರಾಮಗಳಲ್ಲಿವೆ. ನೂರಾರು ವರ್ಷದಿಂದ ಇಲ್ಲಿಯ ಜನರಿಗೆ ಈ ಜಮೀನು ಆಸರೆಯಾಗಿತ್ತು. ಆದರೆ ಕಲ್ಲು ಗಣಿಗಾರಿಕೆಯಿಂದ ಧೂಳು ಆವರಿಸಿ ಬೆಳೆ ಸಂಪೂರ್ಣ ನಾಶವಾಗಿದೆ. ಗಣಿಗಾರಿಕೆ ಪ್ರದೇಶದ ಸುತ್ತಲಿನ ಹಳ್ಳಿಗಳ ನೂರಕ್ಕೂ ಹೆಚ್ಚು ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಸಾಕಷ್ಟು ಕುಸಿದಿದೆ. ಕೆಲವು ಕೊಳವೆ ಬಾವಿಗಳಲ್ಲಿ ನೀರಿನ ಮೂಲ ಬತ್ತಿದರೆ, ಎಮ್ಮೆಗಳು ಕೊಡುವ ಹಾಲಿನ ಪ್ರಮಾಣದಲ್ಲಿ ಗಮನಾರ್ಹವಾಗಿ ಇಳಿಕೆಯಾಗಿದೆ.

ಗಣಿಗಾರಿಕೆ ಧೂಳು ಬೆಳೆಗಳ ಜೈವಿಕ ಕ್ರಿಯೆಗಳಾದ ಧ್ಯುತಿ ಸಂಶ್ಲೇಷಣೆ ಹಾಗೂ ಭಾಷ್ಪ ವಿಸರ್ಜನೆ ಕ್ರಿಯೆಗಳಿಗೆ ತೊಡಕು ಮಾಡಿದೆ. ಕೃಷಿ ಭೂಮಿಗಳನ್ನು ಪಾಳು ಬಿಟ್ಟಿರುವ ರೈತರು ಕೆಲಸ ಅರಸಿ ಮಹಾ ನಗರಗಳಿಗೆ, ಕಾಫಿ ಸೀಮೆಗಳಿಗೆ ವಲಸೆ ಹೋಗಲು ಮುಂದಾಗಿದ್ದಾರೆ.

ಒಂದೆಡೆ ರೈತರ ಬಹುದಿನದ ಬೇಡಿಕೆಯಾದ ಚಿಲವಾರ ಬಂಡಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಶಾಸಕ ನೇಮಿರಾಜನಾಯ್ಕ ಶ್ರಮಿಸುತ್ತಿದ್ದರೆ, ಇನ್ನೊಂದೆಡೆ ಗುರುತ್ವಾಕರ್ಷಣ ಬಲದ ಮೂಲಕ ಸುತ್ತಲಿನ 8000 ಎಕರೆ ಕೃಷಿ ಜಮೀನಿಗೆ ನೀರುಣಿಸುವ ಜಲಾಶಯ ಪ್ರದೇಶ ವ್ಯಾಪ್ತಿಯ ಚಿಲವಾರ ಬಂಡಿ ಸಮೀಪದ ಕಲ್ಲಿನ ಬೆಟ್ಟ ಕರ್ಪೂರದಂತೆ ಕರಗುತ್ತಿದೆ. ಕೆಲವೇ ದಿನಗಳಲ್ಲಿ ಕಲ್ಲಿನ ಬೆಟ್ಟದ ಸಂಪೂರ್ಣ ಕರಗಿ ಆಳವಾದ ಹೊಂಡವಾಗಿ ಪರಿವರ್ತಿತವಾಗುವ ಆತಂಕ ಇಲ್ಲಿಯ ಜನರನ್ನು ಕಾಡುತ್ತಿದೆ.

ಗಣಿಗಾರಿಕೆಯ ಸ್ಫೋಟಕ್ಕೆ ಎರಡೂ ಗ್ರಾಮದ ಹತ್ತಾರು ಮನೆಗಳು ಬಿರುಕು ಬಿಟ್ಟಿವೆ. ಮನೆ ಕುಸಿಯುವ ಭೀತಿಯಿಂದ ಗ್ರಾಮಸ್ಥರು ರಾತ್ರಿ ಮನೆಯ ಹೊರಗೆ ಮಲಗುತ್ತಿದ್ದಾರೆ. ಗಣಿಯಿಂದ ಉತ್ಪಾದನೆಗೊಂಡ ಕಲ್ಲುಗಳನ್ನು ಸಾಗಿಸುವ ನೂರಾರು ಲಾರಿಗಳ ಓಡಾಟದಿಂದ ರಸ್ತೆಗಳು ಹದಗೆಟ್ಟು ಜನಸಾಮಾನ್ಯರ ಸಂಚಾರಕ್ಕೆ ಅಡ್ಡಿಯಾಗಿದೆ. ಹದಗೆಟ್ಟ ರಸ್ತೆಯಿಂದಾಗಿ ರಾಜ್ಯ ಸಾರಿಗೆ ಸಂಸ್ಥೆ ಈ ಮಾರ್ಗದಲ್ಲಿ ಬಸ್ ಸಂಚಾರ ರದ್ದುಪಡಿಸಿದೆ.

ತಾಲ್ಲೂಕಿನ ಆನೇಕಲ್ಲು ಗ್ರಾಮದ ಸುತ್ತಲಿನ ಪ್ರದೇಶ ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಯಾರೂ ಕಲ್ಲಿನ ಗಣಿಗಾರಿಕೆ ನಡೆಸದಂತೆ ಸುರಕ್ಷಿತ ವಲಯ ಎಂದು ಗಣಿ ಭೂ ವಿಜ್ಞಾನ ಇಲಾಖೆ ಘೋಷಿಸಿದೆ. ಆದರೆ ಸುರಕ್ಷಿತ ವಲಯದಲ್ಲಿಯೇ ಬೃಹತ್ ಪ್ರಮಾಣದಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಸ್ಫೋಟಕ ವಸ್ತುಗಳನ್ನು ಬಳಸದಂತೆ ನಿರ್ಬಂಧವಿದ್ದರೂ ಸ್ಫೋಟ ನಿರಂತರವಾಗಿ ನಡೆಯುತ್ತಿದೆ ಎನ್ನುತ್ತಾರೆ ಗ್ರಾಮದ ವೆಂಕಟೇಶ್.

ಗಣಿಗಾರಿಕೆಯಿಂದ ಗ್ರಾಮಸ್ಥರ ಬದುಕು ಛಿದ್ರವಾಗುತ್ತಿದ್ದು, ಗಣಿಗಾರಿಕೆಯನ್ನು ನಿಲ್ಲಿಸುವಂತೆ ಇತ್ತೀಚೆಗೆ ಗ್ರಾಮಸ್ಥರು ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. ಆದರೆ ಗಣಿಗಾರಿಕೆಯ ನಿಯಂತ್ರಣ ತಮ್ಮ ವ್ಯಾಪ್ತಿಯಲ್ಲಿ ಇಲ್ಲ ಎಂದು ಅಧಿಕಾರಿಗಳು ಕೈ ಚೆಲ್ಲಿದ್ದಾರೆ. ಕಲ್ಲು ಗಣಿಗಾರಿಕೆಯಿಂದ ಆಗುವ ಆತಂಕ ನಿವಾರಿಸಲು ಸುದೀರ್ಘ ಹೋರಾಟಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT