ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲು ಹೊತ್ತುಕೊಂಡ ಚಿತ್ರಕಲಾ ಶಿಕ್ಷಕರು

Last Updated 4 ಡಿಸೆಂಬರ್ 2012, 6:20 IST
ಅಕ್ಷರ ಗಾತ್ರ

ಧಾರವಾಡ: ಖಾಸಗಿ ಪ್ರೌಢಶಾಲೆಗಳಲ್ಲಿ ಚಿತ್ರಕಲೆ ಮತ್ತು ವೃತ್ತಿ ಶಿಕ್ಷಕರ ಹುದ್ದೆಗಳನ್ನು ಸಹಾಯಾನುದಾನಕ್ಕೆ ಒಳಪಡಿಸಬೇಕು ಎಂದು ಒತ್ತಾಯಿಸಿ ಚಿತ್ರಕಲೆ ಹಾಗೂ ವೃತ್ತಿ ಶಿಕ್ಷಕರು ನಡೆಸುತ್ತಿರುವ ಪ್ರತಿಭಟನೆ ಸೋಮವಾರ ಎಂಟನೇ ದಿನಕ್ಕೆ ಕಾಲಿಟ್ಟಿದೆ.

ಇಲ್ಲಿಯ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಕಚೇರಿ ಎದುರು ಧರಣಿ ಕುಳಿತಿರುವ ಶಿಕ್ಷಕರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ತಲೆಯ ಮೇಲೆ ಕಲ್ಲು ಇಟ್ಟುಕೊಂಡು ಪ್ರತಿಭಟನೆ ನಡೆಸುವುದರ ಮೂಲಕ ಸರ್ಕಾರದ ಗಮನಸೆಳೆದರು. ಗದಗ, ಬೆಳಗಾವಿ, ಬೆಂಗಳೂರು, ಬಾಗಲಕೋಟೆ ಹಾಗೂ ಮೈಸೂರು ಜಿಲ್ಲೆಗಳು ಸೇರಿದಂತೆ ಅನೇಕ ಕಡೆಗಳಿಂದ ಬಂದಿರುವ ಶಿಕ್ಷಕರು ತಮ್ಮ ತಲೆಯ ಮೇಲೆ ಕಲ್ಲು ಇಟ್ಟುಕೊಂಡು ಪ್ರತಿಭಟಿಸಿದರು. 

2000-2012ರ ಒಳಗೆ ಆರಂಭಗೊಂಡ ಖಾಸಗಿ ಪ್ರೌಢಶಾಲೆಗಳಲ್ಲಿ ಚಿತ್ರಕಲೆ ಮತ್ತು ವೃತ್ತಿ ಶಿಕ್ಷಕರ ಹುದ್ದೆಗಳನ್ನು ಸಹಾಯನುದಾನಕ್ಕೆ ಒಳಪಡಿಸಬೇಕು. 1987-88ರಿಂದ 1994-95ರ ಸಾಲಿಗೆ ಒಳಪಟ್ಟ ಕೆಲವು ಪ್ರೌಢಶಾಲೆಗಳಲ್ಲಿ ಚಿತ್ರಕಲೆ ಹಾಗೂ ವೃತ್ತಿ ಶಿಕ್ಷಕರ ಹುದ್ದೆಗಳನ್ನು ಸಹಾಯನುದಾನಕ್ಕೆ ಒಳಪಡಿಸಿದೆ. ಇನ್ನುಳಿದ ಕೆಲವು ಶಾಲೆಗಳಲ್ಲಿ ಚಿತ್ರಕಲೆ, ವೃತ್ತಿ ಶಿಕ್ಷಕರ ಹುದ್ದೆಗಳನ್ನು ಸಹಾಯನುದಾನಕ್ಕೆ ಒಳಪಡಿಸಿಲ್ಲ.

ಆದ್ದರಿಂದ ಅತೀ ಶೀಘ್ರದಲ್ಲಿ ಈ ಶಾಲೆಗಳನ್ನೂ ಕೂಡ ಸಹಾಯಾನುದಾನಕ್ಕೆ ಒಳಪಡಿಸಬೇಕು ಎಂದು ಚಿತ್ರಕಲಾ ಆಗೂ ವೃತ್ತಿ ಶಿಕ್ಷಕರ (ವಿಶೇಷ ಶಿಕ್ಷಕರ) ರಾಜ್ಯ ಹೋರಾಟ ಸಮಿತಿಯ ಅಧ್ಯಕ್ಷ ಬಸವರಾಜ ಬೆಣ್ಣಿ ಒತ್ತಾಯಿಸಿದರು.

ರಾಜಶೇಖರ ಮೇಲ್ಮಠ, ಮೈಸೂರಿನ ಎಸ್. ಮಲ್ಲೇಶ, ವಿಶ್ವನಾಥ ಮಠದ, ಸಲೀಂ, ಶಂಕರೇಗೌಡ, ಕೆಂಪಣ್ಣ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ನೇಮಕಕ್ಕೆ ಹೊರಟ್ಟಿ ಒತ್ತಾಯ
ಧಾರವಾಡ:
ರಾಜ್ಯ ಸರ್ಕಾರ ಪ್ರತಿ ದಿನ ಹೊಸ ಹೊಸ ಸಮಸ್ಯೆಗಳನ್ನು ಉಂಟು ಮಾಡುತ್ತಿದೆ. ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರ ನೇಮಕಾತಿಗೆ 2002ರಲ್ಲಿ ಎಚ್.ವಿಶ್ವನಾಥ ಅವರು ಶಿಕ್ಷಣ ಸಚಿವರಾಗಿದ್ದಾಗ ತಡೆಯಾಜ್ಞೆ ನೀಡಿದ್ದರು. ತಾವು ಸಚಿವರಾಗಿದ್ದ ವೇಳೆ 2007ರಲ್ಲಿ ಅದನ್ನು ತೆರವು ಗೊಳಿಸಲಾಗಿತ್ತು. ಈಗ ಸರ್ಕಾರ ಚಿತ್ರಕಲಾ ಶಿಕ್ಷಕರ ನೇಮಕ ಮಾಡಿಕೊಳ್ಳಲು ಮುಂದಾಗಬೇಕು ಎಂದು ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಒತ್ತಾಯಿಸಿದರು.

ಶಿಕ್ಷಕರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ತಲೆಯಲ್ಲಿ ಮೆದುಳೇ ಇಲ್ಲ. ಪದೇ ಪದೇ ಶಿಕ್ಷಕರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಲು ಅವರೇ ಕಾರಣ. ಶಿಕ್ಷಕರು ಪ್ರತಿಭಟನೆ ಮಾಡಿದರೆ ಹೊರಟ್ಟಿ ಅವರ ಕೈವಾಡವಿದೆ ಎಂದು ಆರೋಪಿಸುತ್ತಾರೆ. ಶಿಕ್ಷಕರ ಬಗ್ಗೆ ಕಾಳಜಿ ಇರುವುದರಿಂದ ನಾನು ಅವರಿಗೆ ಬೆಂಬಲ ಸೂಚಿಸುತ್ತೇನೆ' ಎಂದರು.

ನೀರು ನೀರು ಸ್ಥಗಿತಕ್ಕೆ ಖಂಡನೆ: ಮಲಪ್ರಭಾ ಬಲದಂಡೆ ಕಾಲುವೆಗೆ ನೀರು ಹರಿಸುವಂತೆ ಒತ್ತಾಯಿಸಿ ಜೆಡಿಎಸ್ ಕಾರ್ಯಕರ್ತರು ನ 30ರಂದು ನವಲಗುಂದದಲ್ಲಿ ಹಾಗೂ ಸವದತ್ತಿ ಹತ್ತಿರ ಇರುವ ಮಲಪ್ರಭಾ ಗೇಟ್ ಬಳಿ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಗೆ ಮಣಿದ ಅಧಿಕಾರಿಗಳು ಆ ಸಂಜೆಯೇ ನೀರನ್ನು ಹರಿಬಿಟ್ಟಿದ್ದರು. ಆದರೆ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಶಂಕರ ಪಾಟೀಲ ಮುನೇನಕೊಪ್ಪ ರಾಜಕೀಯ ಕಾರಣಗಳಿಂದಾಗಿ ಈಗ ಹರಿಯುತ್ತಿರುವ ನೀರನ್ನು ಸ್ಥಗಿತಗೊಳಿಸಿದ್ದಾರೆ. ಇದರಿಂದ ರೈತರಿಗೆ ವಂಚಿಸಿದಂತಾಗಿದೆ ಎಂದು ಹೊರಟ್ಟಿ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT