ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲುಗಣಿ ಸ್ಫೋಟ; ಬದುಕು ಛಿದ್ರ

Last Updated 7 ಜನವರಿ 2012, 10:25 IST
ಅಕ್ಷರ ಗಾತ್ರ

ದಾವಣಗೆರೆ: ಢಮ್.... ಎಂಬ ಸ್ಫೋಟಕ್ಕೆ ಊರೇ ನಡುಗಿದೆ. ಒಂದೆರಡಲ್ಲ ಸರಣಿ ಸ್ಫೋಟಗಳು. ಸಣ್ಣ ಭೂಕಂಪನವಾದ ಅನುಭವ. ದಿನವೂ ಅದುರಿ ಉದುರಿದ ಮನೆಗಳು. ಇಡೀ ಊರಿಗೆ ಊರೇ ದೂಳು ಹೊದ್ದುಕೊಂಡಂತೆ ಕಾಣುವ ದೃಶ್ಯ. ಗರಗರ ತಿರುಗುವ ಕ್ರಷರ್ ಯಂತ್ರಗಳ ಸದ್ದು, ಕಲ್ಲು ಕ್ವಾರಿ ಮಾಲೀಕರ ಹೊಡೆತ, ಬಡಿತ ದರ್ಪಕ್ಕೆ ನಲುಗಿ ಬಾಯಿ ಬಿಡಲಾಗದೇ ಮೌನವಾಗಿ ರೋದಿಸುತ್ತಿರುವ ಅಸಹಾಯಕ ಜನ...
-ಇದು ಹರಪನಹಳ್ಳಿ ತಾಲ್ಲೂಕು ಚಟ್ನಿಹಳ್ಳಿ ಗ್ರಾಮಪಂಚಾಯ್ತಿಗೆ ಸೇರುವ ಗೌಳೇರಹಟ್ಟಿ ಗ್ರಾಮದ ದೃಶ್ಯ.

ಉಚ್ಚಂಗಿದುರ್ಗ, ಚಟ್ನಹಳ್ಳಿ, ಗೌಳೇರಹಟ್ಟಿ ಈ ಗ್ರಾಮಗಳ ತ್ರಿಕೋನ ವ್ಯಾಪ್ತಿಯ ಭೂಪ್ರದೇಶದಲ್ಲಿ ಕಲ್ಲು ಗಣಿಗಾರಿಕೆಯ ಪರಿಣಾಮ ಸ್ತುತಮುತ್ತಲಿನ ಪ್ರದೇಶದ ಜನರ ಜೀವನ ನಲುಗಿ ಹೋಗಿದೆ. ಸುಮಾರು 40 ವರ್ಷಗಳಿಂದ ಅನುಭವಿಸುತ್ತಿರುವ ಗೋಳಿಗೆ ಯಾರೂ ಕಿವಿಯಾಗಿಲ್ಲ. ಕೆಲವರಂತೂ ದೌರ್ಜನ್ಯಕ್ಕೆ ರೋಸಿಹೋಗಿ ಊರೇಬಿಟ್ಟಿದ್ದಾರೆ. ತಮ್ಮ ಕರುಳ ಕುಡಿಗಳ ಅಗಲುವಿಕೆಯಿಂದ ಹಿರಿಯ ಜೀವಗಳು ಇಂದಿಗೂ ನೋವು ಅನುಭವಿಸುತ್ತಿವೆ. ಆಳವಾದ ಗಣಿ ಕಂದಕಗಳು ಊರವರನ್ನೇ ನುಂಗಲು ಬಾಯ್ತೆರೆದಿವೆ.

ಜಿಲ್ಲೆಯಲ್ಲಿ  ಒಟ್ಟು 162 ಕ್ವಾರಿಗಳಿವೆ. ಹರಪನಹಳ್ಳಿ ತಾಲ್ಲೂಕಿನಲ್ಲಿ 99 ಇವೆ. ಚಟ್ನಿಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ  10.5 ಎಕರೆ ಪ್ರದೇಶದಲ್ಲಿ 9 ಕ್ವಾರಿಗಳನ್ನು ಗುತ್ತಿಗೆಗೆ ನೀಡಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮೂಲಗಳು ತಿಳಿಸಿವೆ.

ಇದು ಕಥೆಯಲ್ಲ ಜೀವನ
ಸ್ಥಳಕ್ಕೆ `ಪ್ರಜಾವಾಣಿ~ ಶುಕ್ರವಾರ ಭೇಟಿ ನೀಡಿದಾಗ ನೂರಾರು ಕಥೆಗಳು ತೆರೆದುಕೊಂಡವು. 80ರ ಹರೆಯದ ಬಸಮ್ಮ ಹೇಳುವುದು ಹೀಗೆ, ನನ್ನ ತಾತನ ಕಾಲದಿಂದಲೂ ಇಲ್ಲಿ ಇದ್ದೀವಿ. ಆದರೆ, ಗಣಿ ಮಾಲೀಕರು ನಾವು ಇಲ್ಲಿನವರೇ ಅಲ್ಲ. ಊರು ಬಿಟ್ಟು ತೊಲಗಿ ಎನ್ನುತ್ತಿದ್ದಾರೆ.

ಗಣಿಯಲ್ಲಿ ಕೆಲಸದ ಕೂಲಿ ಸಾವಿರ ರೂಪಾಯಿ ಕೇಳಿದಾಗ ನನಗೆ, ನನ್ನ ಮಕ್ಕಳಿಗೆ ಮನಬಂದಂತೆ ಹೊಡೆದರು. ಪರಿಣಾಮ ನನ್ನ ಇಬ್ಬರು ಮೊಮ್ಮಕ್ಕಳು ಊರು ಬಿಟ್ಟು ಪರಾರಿಯಾದರು. ನಾನು ಜೀವ ಹಿಡಿದುಕೊಂಡು ಇದ್ದೇನೆ ಎನ್ನುವಾಗ ಅವರ ಕಣ್ಣಾಲಿಗಳು ತುಂಬಿದ್ದವು.

ಮಲ್ಲಪ್ಪ ಅವರ 15 ಎಕರೆ ಜಮೀನನ್ನು ಸಾಲಕ್ಕಾಗಿ ಒತ್ತೆ ಪಡೆದ ಗಣಿ ಮಾಲೀಕರು ಬಡ್ಡಿ ವಸೂಲಿ ಹೆಸರಿನಲ್ಲಿ ಬಹುತೇಕ ಭೂಮಿ ಕಬಳಿಸಿ ಈಗ ಎರಡು ಎಕರೆ ಮಾತ್ರ ಉಳಿಸಿದ್ದಾರೆ. ಇಲ್ಲಿನ ಯಲ್ಲಪ್ಪ ಅವರದೂ ಇದೇ ಕಥೆ. ನ್ಯಾಯ ಕೇಳಿದರೆ ಹೊಡೆತ ಬಡಿತ, ಒದೆತ. ಪೊಲೀಸರಿಗೆ ದೂರು ನೀಡಿದರೆ ಆತನ ಕಥೆ ಮುಗಿದಂತೆ. ಗಣಿ ಮಾಲೀಕರ ಜತೆಗೆ ಪೊಲೀಸರ ಹೊಡೆತವೂ ಸೇರುತ್ತದೆ. ಹಾಗಾಗಿ, ಇಲ್ಲಿನವರ ಧ್ವನಿ ವ್ಯವಸ್ಥಿತವಾಗಿ ಅಡಗಿದೆ ಎನ್ನುತ್ತಾರೆ ರಮೇಶ.

ಗಣಿ ದೂಳು, ಕಣಗಳು ಹೊಲ ಸೇರಿ ಜಮೀನು ಬರಡಾಯಿತು. ನೀರಿನ ಸೆಲೆ ಬತ್ತಿತು. ಎಮ್ಮೆಗಳು ಹಾಲು ಕೊಡುವ ಪ್ರಮಾಣವೂ ಕಡಿಮೆಯಾಯಿತು. ಕೊನೆಗೆ ಗಣಿ ಮಾಲೀಕರ ಬಳಿ ಶರಣಾಗುವುದು ಅನಿವಾರ್ಯವಾಯಿತು. ಜನತೆ ಕೂಲಿಕಾರರಾಗಿ, ಚಾಲಕರಾಗಿ ಇದೇ ಗಣಿಗಳಲ್ಲಿ ಕೆಲಸಕ್ಕೆ ಸೇರಿದರು. ಮತ್ತೆ ಅದೇ ಹಳೇ ಕಥೆಗಳು ಪುನರಾವರ್ತಿಸಿದವು.

ಯಾವುದಾದರೂ ಪ್ರತಿಭಟನೆಯ ಸೊಲ್ಲು ಕೇಳಿದರೆ ಸಾಕು ಗಣಿ ಮಾಲೀಕರು ಅಥವಾ ಅವರ ಕಡೆಯವರು ತೀರಾ ಕೊಳಕು ಭಾಷೆಯಲ್ಲಿ ಬೈಯುತ್ತಾರೆ. ಸ್ಫೋಟದಿಂದ ಗಾಯವಾದರೆ ಬೆದರಿಸಿ ಸುಳ್ಳು ಕಾರಣ ಬರೆಸುತ್ತಾರೆ. ಮನೆಬಿದ್ದರೆ ನೀವು ಕಟ್ಟಿದ್ದೇ ಗಟ್ಟಿಯಾಗಿಲ್ಲ ಎನ್ನುತ್ತಾರೆ. ಹೀಗಿರಬೇಕಾದರೆ ನಾವೇನು ಮಾಡಬೇಕು ಎಂದು ಪ್ರಶ್ನಿಸಿದರು ಎಂ. ಶ್ವೇತಾ.

ಊರು ಒಡೆದರು...
ಒಟ್ಟಾರೆ 200 ಜನರು ಈ ಊರಿನಲ್ಲಿದ್ದಾರೆ. ಬಹುತೇಕರು ಎಮ್ಮೆಕಟ್ಟಿ ಹಾಲು ಮಾರಿ ಬದುಕುವವರು. ಗಣಿ ಮಾಲೀಕರು ಮನೆಯ ಗಂಡಸರಿಗೆ ಕುಡಿತ, ಸಾಲ ಮಾಡುವ ಪ್ರವೃತ್ತಿ ಬೆಳೆಸಿ ಮನೆ ಒಡೆದರು. ಪರಸ್ಪರ ವೈಮನಸ್ಸು ಮೂಡುವಂತೆ ಮಾಡಿದರು. ಇದರಿಂದ ಒಗ್ಗಟ್ಟು ಇಲ್ಲವಾಯಿತು. ಗಣಿ ದೊರೆಗಳ ದರ್ಪವೇ ಮೆರೆಯಿತು ಸಾರ್ ಎಂದರು ಮಲ್ಲೇಶಪ್ಪ.

ಆಶ್ರಯ ಮನೆಗಳಿಗೂ ಖೋತಾ
ಈ ಹಳ್ಳಿಗೆ 8 ಆಶ್ರಯ ಮನೆಗಳು ಮಂಜೂರಾಗಿದ್ದವು. ಆದರೆ, ಗಣಿ ಮಾಲೀಕರ ಚಿತಾವಣೆಯಿಂದ ಅದೂ ಕೈತಪ್ಪಿತು. ಇಲ್ಲಿನವರೆಲ್ಲಾ ವಲಸೆ ಬಂದವರು. ಅವರಿಗೇಕೆ ಮನೆ ಎಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಕಿವಿಯೂದಿದರು. ಸರ್ಕಾರದ ಮನೆಗಳೂ ಕೈತಪ್ಪಿದವು ಎಂದರು ಇಲ್ಲಿನ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಚನ್ನಪ್ಪ.

ಶಾಲೆಯ ಗೋಳು
ಇಲ್ಲಿನ ಕಿರಿಯ ಪ್ರಾಥಮಿಕ ಶಾಲೆಗೆ ಸುಂದರ ವಿನ್ಯಾಸದ ಕಟ್ಟಡವಿದೆ. ಆದರೆ, ಶಾಲೆಯನ್ನು ಗಂಟೆಗೊಮ್ಮೆ ನೀರು ಹಾಕಿ ತೊಳೆಯಬೇಕಾಗುತ್ತದೆ. ಶಾಲೆಯ ಸೂರು, ಕಾಂಪೌಂಡ್, ಎದುರಿಗಿರುವ ಮರ ಎಲ್ಲ ಕಡೆಯೂ ಬೂದಿ ಬಣ್ಣದ ದೂಳು ಆವರಿಸಿದೆ. ಬಿಸಿಯೂಟ ತಯಾರಿಸುವವರು ಎಷ್ಟು ಎಚ್ಚರ ವಹಿಸಿದರೂ ಸಾಲದು. ಊಟದ ತಟ್ಟೆಗೇ ದೂಳು ಬಂದು ಬೀಳುತ್ತದೆ.

ಇನ್ನು ಮಕ್ಕಳು ಇಲ್ಲಿ ನ್ಯೂನತೆಯಿಂದ ಬಳಲುತ್ತಿದ್ದಾರೆ. ಆದರೆ, ವೈದ್ಯಕೀಯ ವರದಿಗಳು ದೃಢಪಡಿಸುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು. ಊರಿನ ಮಕ್ಕಳಲ್ಲಿ ಶ್ವಾಸಕೋಶ ಸಂಬಂಧಿ ತೊಂದರೆಗಳು ಕಾಣಿಸಿಕೊಂಡಿವೆ. ಇಲ್ಲಿನ ಶಿಕ್ಷಕಿ ಟಿ. ಲಕ್ಷ್ಮೀಬಾಯಿ ಅವರೂ ಈ ಸಮಸ್ಯೆಗೆ ಹೊರತಲ್ಲ.

ಮಕ್ಕಳು ಮುಕ್ತವಾಗಿ ಆಟವಾಡುವಂತಿಲ್ಲ. ಅದೇ ವೇಳೆಗೆ ಬಂಡೆ ಸ್ಫೋಟ ನಡೆಯುತ್ತಿದೆ. ಯಾರಾದರೂ ಬಂದು ಸೂಚನೆ ನೀಡುತ್ತಾರೆ. ಅದು ಮುಗಿಯುವವರೆಗೆ ಶಾಲೆಯಿಂದ ಹೊರಬರುವಂತಿಲ್ಲ. ಇದೇ ಸ್ಫೋಟದ ಕಲ್ಲಿನ ಚೂರುಗಳು ನಾಗರಿಕರ ಮೇಲೆ ಬಿದ್ದು ಗಾಯವಾದ ಉದಾಹರಣೆಯೂ ಇದೆ.

ಅಂಗವೈಕಲ್ಯ
ಗಣಿಯಲ್ಲಿ ಕೆಲಸಕ್ಕೆ ಸೇರಿದ ಅನೇಕರು ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆ. ಜಲ್ಲಿ ಕ್ರಷರ್ ಯಂತ್ರದ ಎಡೆಯಲ್ಲಿ ಕಾಲು ಸಿಲುಕಿದ್ದು, ಸ್ಫೋಟದಿಂದಾಗಿ ಕೈಬೆರಳು ಕಳೆದುಕೊಂಡದ್ದು, ಕಾಲು ಮುರಿತಕ್ಕೊಳಗಾದವರಲ್ಲಿ ವೀರೇಶ್, ಬಸವರಾಜ್, ಅಣ್ಣೇಶ್ ಶಂಕರಪ್ಪ ಸೇರಿದಂತೆ ಅನೇಕ ಮಂದಿ ಇದ್ದಾರೆ. ಅಂಗನವಾಡಿಯಲ್ಲಿ ಕೆಲವು ಮಕ್ಕಳು ಬುದ್ದಿಮಾಂದ್ಯತೆಗೆ ಒಳಗಾಗಿದ್ದಾರೆ ಎನ್ನುತ್ತಾರೆ ಇಲ್ಲಿನ ಶಿಕ್ಷಕಿ.

ಆಕ್ರೋಶ ಸ್ಫೋಟ
ಊರವರು ಸುಮ್ಮನಾಗಿಲ್ಲ. ಅವರ ಆಕ್ರೋಶದ ಕಟ್ಟೆ ಒಡೆದಿದೆ. ರೋಸಿ ಹೋದ ಅವರು ಗುರುವಾರ ಗಣಿ ಮತ್ತು ಭೂವಿಜ್ಞಾನ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ರೈತ ಸಂಘ ಹೋರಾಟಕ್ಕೆ ಸಾಥ್ ನೀಡಿದೆ. ಊರಿನ ಮಂದಿಯ ವೈಮನಸ್ಯ ತೊಡೆದುಹಾಕಿ ಒಂದಾಗುತ್ತಿದ್ದಾರೆ. ಪರಿಣಾಮ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಶುಕ್ರವಾರ ಈ ಹಳ್ಳಿಗೆ ಭೇಟಿ ನೀಡಿದ್ದಾರೆ.

ಅಧಿಕಾರಿಗಳು ಹೇಳಿದ್ದು
ಭೂವಿಜ್ಞಾನಿ ಪ್ರದೀಪ್ ಹೇಳುವ ಪ್ರಕಾರ, ನಾವು ಇಲ್ಲಿ ಕ್ವಾರೆ ನಡೆಸಲು ಅನುಮತಿ ಕೊಟ್ಟಿದ್ದೇವೆ. ಆದರೆ, ಸ್ಫೋಟ ನಡೆಸಲು ಅಲ್ಲ. ಇಲಾಖೆ ನಿಯಮ ಪ್ರಕಾರ ಕ್ವಾರೆಗಳು 50 ಮೀಟರ್ ದೂರದಲ್ಲಿ ಇರಬೇಕು. ಈ ಘಟಕಗಳು ಹಾಗೇ ಇವೆ. ಆದರೆ, ಇಲ್ಲಿ ಸ್ಫೋಟ ನಡೆಸುತ್ತಿರುವ ಕಾರಣ ಊರಿನವರಿಗೆ ತೊಂದರೆಯಾಗಿದೆ. ಅದಕ್ಕೆ ಅನುಮತಿ ಇದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು. ಸ್ಫೋಟಕ ಬಳಕೆ ಬಗ್ಗೆ ಪೊಲೀಸರು ನಿಗಾವಹಿಸಬೇಕು ಎಂದು ಹೇಳಿದ್ದಾರೆ. ಇದೇ ಸಂದರ್ಭ ಅಧಿಕಾರಿಗಳು ಗಣಿ ಮಾಲೀಕರ ಬಳಿ ಮಾತನಾಡಿ, ಸ್ಫೋಟಕ ಬಳಕೆ ಮಾಡದಂತೆ ಸೂಚಿಸಿದರು. ಮಾಲೀಕರು ಸರಿಯಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲು ಸಿದ್ಧತೆ ನಡೆಸಿದ್ದಾರೆ.

ಆದರೂ, ಅಧಿಕಾರಿಗಳ ಮಾತಿನಿಂದ ತೃಪ್ತರಾಗದ ಗ್ರಾಮಸ್ಥರು ತಾವೇ ಸ್ಫೋಟ ತಡೆಯಲು ಮುಂದಾಗಲು ಸಂಘಟಿತರಾಗಿದ್ದಾರೆ. ಯಾರು ಹೊಡೆಯಲು ಬಂದರೂ ತಾವು ಎದುರಿಸಲು ಸಿದ್ಧ. ಪೊಲೀಸರು, ಕಾನೂನಿನ ಮೇಲೆ ಭರವಸೆ ಹೊರಟುಹೋಗಿದೆ. ಆಗುವುದಾಗಲಿ ಎಂದು ಎದ್ದು ನಿಂತಿದ್ದಾರೆ.

ಪರಿಸರ ಇಲಾಖೆ ಹೇಳಿಕೆ
ಜಲ್ಲಿ ಕ್ರಷರ್‌ನಿಂದ ಶಬ್ದ ಹಾಗೂ ವಾಯುಮಾಲಿನ್ಯ ಆಗುತ್ತಿರುವ ಬಗ್ಗೆ ನಾಳೆ (ಶನಿವಾರ) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಜಲ್ಲಿ ಕ್ರಷರ್ ಪರಿಸರದಲ್ಲಿ ದೂಳು ಹಾರದಂತೆ ನೀರು ಸಿಂಪಡಿಸಬೇಕು ಹಾಗೂ ತಗಡು ಷೀಟ್ ಅಳವಡಿಸಬೇಕು. ಅಲ್ಲಿ ನಿಯಮ ಉಲ್ಲಂಘನೆ ಆಗಿದ್ದಲ್ಲಿ ಅವರಿಗೆ ನೋಟಿಸ್ ನೀಡಲಾಗುವುದು. ಮುಂದಿನ ಕ್ರಮಕ್ಕಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಶಿಫಾರಸು ಮಾಡಲಾಗುವುದು ಎಂದು ಜಿಲ್ಲಾ ಮಾಲಿನ್ಯ ನಿಯಂತ್ರಣ ಅಧಿಕಾರಿ ಮಹೇಶ್ವರಪ್ಪ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT