ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಂಕ ರಹಿತರಾಗಿ ಕೆಲಸ ನಿರ್ವಹಿಸಿ

Last Updated 16 ಆಗಸ್ಟ್ 2011, 9:30 IST
ಅಕ್ಷರ ಗಾತ್ರ

ಮೈಸೂರು: `ಜಿಲ್ಲೆಯ ಎಲ್ಲ ಅಧಿಕಾರಿಗಳು ಕಳಂಕ ರಹಿತರಾಗಿ ಕೆಲಸ ನಿರ್ವಹಿಸುವ ಮೂಲಕ ಭ್ರಷ್ಟಾಚಾರ ತಡೆಗಟ್ಟಲು ಮುಂದಾಗಬೇಕು~ ಎಂದು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ಕರೆ ನೀಡಿದರು.
ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಸೋಮವಾರ ನಡೆದ 65ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

`ವಿವಿಧ ಇಲಾಖೆಯ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತರು ದಾಳಿ ಮಾಡಿದಾಗ ಅಕ್ರಮವಾಗಿ ಸಂಗ್ರಹಿಸಿರುವ ಕೋಟಿಗಟ್ಟಳೆ ಹಣ, ಚಿನ್ನಾಭರಣ ಸಿಗುತ್ತಿದೆ. ಇದರಿಂದ ಸಮಾಜ ಮತ್ತು ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಆದ್ದರಿಂದ ಜಿಲ್ಲೆಯನ್ನು ಭ್ರಷ್ಟಾಚಾರ ಮುಕ್ತವಾಗಿಸಲು ಎಲ್ಲ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು~ ಎಂದರು.

`ಸ್ವಾತಂತ್ರ್ಯಕ್ಕಾಗಿ ಸಾವಿರಾರು ಮಹನೀಯರು ತಮ್ಮ ಪ್ರಾಣವನ್ನು ತ್ಯಾಗ ಮಾಡಿ ಹೋರಾಟ ಮಾಡಿದ್ದಾರೆ. ಆದರೆ ಇಂದಿನ ನಾಯಕರು ದೇಶದ ಅಭದ್ರತೆಗೆ ಭಂಗ ಉಂಟು ಮಾಡುವ ಕೆಲಸ ಮಾಡುತ್ತಿರುವುದು ಶೋಚನೀಯ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಯುವಕರಲ್ಲಿ ದೇಶಭಕ್ತಿ ಬಗ್ಗೆ ಜಾಗೃತಿ ಮೂಡಿಸಬೇಕು. ಭ್ರಷ್ಟಾಚಾರ ಮುಕ್ತ ಸ್ವಾಭಿಮಾನಿ ರಾಷ್ಟ್ರ ಕಟ್ಟಲು ಎಲ್ಲರೂ ಕೈಜೋಡಿಸಬೇಕು~ ಎಂದು ಮನವಿ ಮಾಡಿದರು.

`ಕೇಂದ್ರದಲ್ಲಿ ಲಕ್ಷಾಂತರ ಕೋಟಿ ಅವ್ಯವಹಾರಗಳು ನಡೆದಿವೆ. ವಿದೇಶಿ ಬ್ಯಾಂಕುಗಳಲ್ಲಿ ದೇಶದ * 00 ಲಕ್ಷ ಕೋಟಿ ಹಣ ಇಡಲಾಗಿದೆ. ಆದ್ದರಿಂದ ಜನ ಲೋಕಪಾಲ್ ಮಸೂದೆ ಮಂಡನೆಗೆ ಒತ್ತಾಯಿಸಿ ಅಣ್ಣಾ ಹಜಾರೆ ಹೋರಾಟ ನಡೆಸುತ್ತಿದ್ದಾರೆ. ಆದರೆ ರಾಜಕೀಯ ನಾಯಕರು ಹಜಾರೆ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿರುವುದು ಖಂಡನೀಯ~ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಬಿ.ಎಂ.ಲಕ್ಷ್ಮೀರಾಜಪ್ಪ, ಎಚ್.ಎಂ.ಕೋದಂಡರಾಮಚಂದ್ರ, ಎಚ್.ಎಂ.ಚನ್ನಬಸಪ್ಪ, ಬಿ.ಶ್ರೀಕಂಠಯ್ಯ, ಎಂ.ಆರ್.ರಾಮಶೇಷ ಅವರನ್ನು ಸನ್ಮಾನಿಸಲಾಯಿತು.

ಪರೇಡ್‌ನಲ್ಲಿ ಭಾಗವಹಿಸಿ ಉತ್ತಮ ಪರೇಡ್ ನಿರ್ವಹಿಸಿದ ಪುರುಷರ ಪ್ರೊಬೇಷನರಿ ಪಿಎಸ್‌ಐ ತಂಡ (ಪ್ರಥಮ), ಮಹಿಳೆಯರ ಪ್ರೊಬೇಷನರಿ ಪಿಎಸ್‌ಐ ತಂಡ (ದ್ವಿತೀಯ) ಹಾಗೂ ಕರ್ನಾಟಕ ಸಶಸ್ತ್ರ ಮೀಸಲು ಪಡೆ (ತೃತೀಯ) ಬಹುಮಾನ ಪಡೆದವು.

ಶಸ್ತ್ರ ರಹಿತ ತಂಡಗಳ ವಿಭಾಗದಲ್ಲಿ ಅಶ್ವಾರೋಹಿ ತಂಡ (ಪ್ರಥಮ), ಅಗ್ನಿ ಶಾಮಕ ದಳ (ದ್ವಿತೀಯ) ಹಾಗೂ ಅಬಕಾರಿ ತಂಡ (ತೃತೀಯ) ಬಹುಮಾನ ಗಳಿಸಿದವು.

ವಿದ್ಯಾರ್ಥಿಗಳ ಪರೇಡ್ ವಿಭಾಗದಲ್ಲಿ ಎನ್‌ಸಿಸಿ ಭೂದಳ (ಪ್ರಥಮ) ನೌಕಾದಳ (ದ್ವಿತೀಯ), ಭಾರತ ಸೇವಾದಲ ಬಾಲಕಿಯರ  ವಿಭಾಗ (ತೃತೀಯ) ಬಹುಮಾನ ಪಡೆದವು. ಸಚಿವ ರಾಮದಾಸ್ ಪಾರಿವಾಳ ಹಾಗೂ ಬಲೂನುಗಳನ್ನು ಹಾರಿಬಿಟ್ಟರು.

ಕಾರ್ಯಕ್ರಮದಲ್ಲಿ ಸಂಸದ ಎಚ್.ವಿಶ್ವನಾಥ್, ಶಾಸಕರಾದ ಎಚ್.ಎಸ್.ಶಂಕರಲಿಂಗೇಗೌಡ, ತನ್ವೀರ್ ಸೇಟ್, ಡಾ.ಎಚ್.ಸಿ.ಮಹದೇವಪ್ಪ, ಗೋ.ಮಧುಸೂದನ್, ತೋಂಟದಾರ್ಯ, ಜಿಲ್ಲಾಧಿಕಾರಿ ಪಿ.ಎಸ್.ವಸ್ತ್ರದ್, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಬಿ.ಪಿ.ಮಂಜುನಾಥ್, ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಮೈ.ವಿ.ರವಿಶಂಕರ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ನಂಜುಂಡಸ್ವಾಮಿ, ಮುಡಾ ಅಧ್ಯಕ್ಷ ಎಲ್.ನಾಗೇಂದ್ರ, ಪಾಲಿಕೆ ಆಯುಕ್ತ ಕೆ.ಎಸ್.ರಾಯ್ಕರ್, ಜಿ.ಪಂ. ಅಧ್ಯಕ್ಷೆ ಸುನೀತಾ ವೀರಪ್ಪಗೌಡ, ಮೇಯರ್ ಪುಷ್ಪಲತಾ ಟಿ.ಬಿ.ಚಿಕ್ಕಣ್ಣ ಹಾಗೂ ಉಪಮೇಯರ್ ಜೆ.ಕೆ.ರವಿಕುಮಾರ್ ಹಾಜರಿದ್ದರು.

`ಸಂದೇಶ ಪತ್ರ~ದ ಸಾರಾಂಶ..
* ಉದ್ಯೋಗ ಖಾತ್ರಿ ಯೋನೆಯಡಿ ರೂ.65.76 ಕೋಟಿ ಕ್ರಿಯಾಯೋಜನೆ. ಆ ಮೂಲಕ 6* 98 ಕಾಮಗಾರಿಗಳ ಅನುಷ್ಠಾನ.

* ಕುಡಿಯುವ ನೀರು ವಿತರಣೆಗೆ ಜಿ.ಪಂ.ಗೆ ರೂ.57.07 ಕೋಟಿ ಅನುದಾನ ಬಿಡುಗಡೆ.

 * ಮೈಸೂರು ತಾಲ್ಲೂಕಿನ ಆಯ್ದ ಗ್ರಾಮ, ನಂಜನಗೂಡು ತಾಲ್ಲೂಕಿನ ದೊಡ್ಡಕೌಲಂದೆ, ಹುಣಸೂರು ತಾಲ್ಲೂಕಿನ ಚಿಲ್ಕುಂದ ಮತ್ತು ಹುಣಸೂರು ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ರೂ.10631.56 ಲಕ್ಷ ಅನುದಾನ. ಈ ಪೈಕಿ ರೂ.5271.21 ಲಕ್ಷ ಹಣ ಬಿಡುಗಡೆ ಆಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.

* ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ರೈತರಿಗೆ ಶೇ 50ರಿಯಾಯಿತಿ ದರದಲ್ಲಿ 37,300 ಕ್ವಿಂಟಲ್ ಬಿತ್ತನೆ ಬೀಜ ಹಾಗೂ ರೂ.369 ಲಕ್ಷ ಸಹಾಯಧನ ವಿತರಣೆ.

* ವೈದ್ಯಕೀಯ ಶಿಕ್ಷಣ ಇಲಾಖೆಯನ್ನು `ಶೂನ್ಯ ಕಡತ~ ಇಲಾಖೆಯಾಗಿ ಘೋಷಣೆ. ಅರ್ಜಿ ಸಲ್ಲಿಸಿದ ಏಳು ದಿನಗಳಲ್ಲಿ ಕಡತ ವಿಲೇವಾರಿಗೆ ಸೂಚಿಸಲಾಗಿದೆ.

* ಖಾಸಗಿ ಆಸ್ಪತ್ರೆಗಳ `ನಿಯಂತ್ರಣ ಕಾನೂನು~ ಶೀಘ್ರದಲ್ಲೇ ಜಾರಿ ಮತ್ತು ಶೇ 33ರಷ್ಟು ಕಡುಬಡವರಿಗೆ ಉಚಿತ ಸೌಲಭ್ಯ ನೀಡುವಂತೆ ಕಾನೂನಿನಲ್ಲಿ ಬದಲಾವಣೆ.

* ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ, ಮಧ್ಯಮ ವರ್ಗದವರಿಗೆ ನಿವೇಶನ ಕಲ್ಪಿಸಲು `ವಸತಿ ನೀತಿ~ ಜಾರಿಗೆ ಚಿಂತನೆ.

* ಪಾಲಿಕೆ ಮತ್ತು ಮುಡಾದಲ್ಲಿ ಲಭ್ಯವಿರುವ ನಿವೇಶನದಲ್ಲಿ 10 ಸಾವಿರ ಬಹುಮಹಡಿ ಮನೆ ನಿರ್ಮಾಣಕ್ಕೆ ಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT