ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಆಹಾರ: ಪ್ರತಿಭಟನೆ

Last Updated 10 ಸೆಪ್ಟೆಂಬರ್ 2011, 11:05 IST
ಅಕ್ಷರ ಗಾತ್ರ

ಗಂಗಾವತಿ: ವಸತಿ ನಿಲಯದಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ಎಸ್.ಎಫ್.ಐ. ನೇತೃತ್ವದಲ್ಲಿ ನಗರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಶುಕ್ರವಾರ ಇಲ್ಲಿನ ತಾ.ಪಂ. ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಮುಂಜಾನೆಯ ಉಪಹಾರ ಮತ್ತು ಮಧ್ಯಾಹ್ನದ ಊಟಕ್ಕೆ ವಿದ್ಯಾರ್ಥಿನಿಯರಿಗೆ ವಿತರಿಸಲೆಂದು ಮಾಡಲಾಗಿದ್ದ ಅಡುಗೆ ಸಮೇತ ತಾಲ್ಲೂಕು ಪಂಚಾಯಿತಿ ಕಾರ್ಯಾಲಯಕ್ಕೆ ಆಗಮಿಸಿದ ವಿದ್ಯಾರ್ಥಿಗಳು, ಇಲಾಖೆಯ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ಮಾರುಕಟ್ಟೆಯಿಂದ ಕೊಳೆತ ತರಕಾರಿ ತಂದು ಅಡುಗೆ ಮಾಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿನಿಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಶುಕ್ರವಾರ ಬೆಳಗ್ಗೆಯಷ್ಟೆ ಪ್ರತಿಭಾ ಎಂಬ ವಿದ್ಯಾರ್ಥಿನಿ ತಲೆಸುತ್ತಿ ಬಿದ್ದಳು ಎಂದು ವಿದ್ಯಾರ್ಥಿನಿಯರು ದೂರಿದರು.

ಗಂಟೆಗಳ ಕಾಲ: ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ವಿದ್ಯಾರ್ಥಿನಿಯರು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರೂ ತಕ್ಷಣಕ್ಕೆ ಸ್ಪಂದಿಸುವ ಅಧಿಕಾರಿಗಳಿಗೆ ದಿಕ್ಕಿಲ್ಲದಂತಾಗಿತ್ತು. ತಾ.ಪಂ.ನ ಕಾರ್ಯ ನಿರ್ವಾಹಕ ಅಧಿಕಾರಿ ತಿಮ್ಮಣ್ಣ, ಸೇರಿದಂತೆ ಇಲಾಖೆಯ ಅಧಿಕಾರಿಗಳಿಂದ ಸಕಾಲಕ್ಕೆ ಸ್ಪಂದನೆ ದೊರೆಯಲಿಲ್ಲ.

ಎದ್ದು ಹೋದರು: ವಿದ್ಯಾರ್ಥಿಗಳು ತಾ.ಪಂ. ಆವರಣಕ್ಕೆ ಕಾಲಿಡುವವರೆಗೂ ಕಚೇರಿಯಲ್ಲಿದ್ದ ತಾ.ಪಂ. ಇ.ಒ. ತಿಮ್ಮಣ್ಣ ನಾಯಕ್, ಮನವಿ ಸ್ವೀಕರಿಸಿ ವಿದ್ಯಾರ್ಥಿಗಳಿಗೆ ಸೌಜನ್ಯ ತೋರದೇ ನುಣಚಿಕೊಳ್ಳುವ ಉದ್ದೇಶಕ್ಕೆ ಎದ್ದು ಹೋದರು ಎಂದು ಎಸ್.ಎಫ್.ಐ ಸಂಘಟನೆಯ ದುರುಗೇಶ ಡಗ್ಗಿ ಆರೋಪಿಸಿದರು.

ಸ್ಥಳಕ್ಕೆ ಆಗಮಿಸಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮಹಾಂತೇಶ, ವಿದ್ಯಾರ್ಥಿಗಳನ್ನು ಸಮಾಧಾನ ಪಡಿಸಲು ಯತ್ನಿಸಿ ತರಾಟೆಗೊಳಗಾದರು. ವಸತಿ ನಿಲಯದ ವಾರ್ಡನ್ ಸುಮಂಗಲ ಅವರನ್ನು ಅಧಿಕಾರಿಯ ಎದುರಲ್ಲಿಯೇ ವಿದ್ಯಾರ್ಥಿನಿಯರು ತರಾಟೆಗೆ ತೆಗೆದುಕೊಂಡರು.

ವಿವಿಧ ಬೇಡಿಕೆ ಮುಂದಿಟ್ಟ ವಿದ್ಯಾರ್ಥಿಗಳು, ಸಮಸ್ಯೆ ಇತ್ಯರ್ಥದವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ತಾ.ಪಂ. ಆವರಣದಲ್ಲಿ ಸುಮಾರು ಮೂರು ತಾಸು ಧರಣಿ ನಡೆಸಿದರು. ಕೊನೆಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯ ಭರವಸೆ ಮೇರೆಗೆ ಧರಣಿ ಕೈಬಿಡಲಾಯಿತು. 

ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ದುರುಗೇಶ ಡಗ್ಗಿ, ಬಾಳಪ್ಪ, ಹನುಮಂತಪ್ಪ ಭಜಂತ್ರಿ, ದೇವಪ್ಪ ಸಗಾಪುರ, ಗ್ಯಾನೇಶ ಕಡಗದ ವಸತಿ ನಿಲಯದ ವಿದ್ಯಾರ್ಥಿನಿಯರಾದ ಅಂಜನಮ್ಮ, ರೇಣುಕಾ, ಸವಿತಾ, ಲಕ್ಷ್ಮಿ, ಹುಲಿಗೆಮ್ಮ ಅನಿತಾ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT