ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕಳಪೆ ಕಾಮಗಾರಿ ತಡೆಗೆ `3ನೇ ಕಣ್ಣು'

Last Updated 5 ಸೆಪ್ಟೆಂಬರ್ 2013, 6:03 IST
ಅಕ್ಷರ ಗಾತ್ರ

ವಿಜಾಪುರ: `ನಗರದಲ್ಲಿ ಕೈಗೊಳ್ಳುವ ಎಲ್ಲ ಕಾಮಗಾರಿಗಳು ಉತ್ತಮ ಗುಣ ಮಟ್ಟ ಹೊಂದಿರಬೇಕು. ಕೇವಲ ನಿಮ್ಮ ವರದಿ-ನೀವು ನಿಯೋಜಿಸುವ ಥರ್ಡ್ ಪಾರ್ಟಿ ವರದಿಗೆ ಸೀಮಿತನಾಗುವುದಿಲ್ಲ. ನಾನು ವೈಯಕ್ತಿಕವಾಗಿ ಖಾಸಗಿ ತಾಂತ್ರಿಕ ತಜ್ಞರಿಂದ ಕಾಮಗಾರಿ ಪರೀಕ್ಷೆ (ಮೂರನೇ ಕಣ್ಣು) ಮಾಡಿಸುತ್ತೇನೆ. ಕಳಪೆ ಕಂಡುಬಂದರೆ ನಿಮ್ಮ ಮೇಲೆ ಕ್ರಮ ಕೈಗೊಳ್ಳುವುದು ಖಚಿತ'.
ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ಅಧಿಕಾರಿಗಳಿಗೆ ನೀಡಿದ ಖಡಕ್ ಎಚ್ಚರಿಕೆ ಇದು.

ವಿಜಾಪುರ ನಗರದ ಅಭಿವೃದ್ಧಿ ಕುರಿತಂತೆ ಇಲ್ಲಿಯ ನಗರಾಭಿವೃದ್ಧಿ ಕಚೇರಿಯಲ್ಲಿ ಬುಧವಾರ ಅಧಿಕಾರಿಗಳ ಸಭೆ ನಡೆಸಿದ ಸಚಿವರು, ನಗರೋತ್ಥಾನ ಯೋಜನೆಯ ರಸ್ತೆ, ಚರಂಡಿ, ಕುಡಿಯುವ ನೀರಿನ ಯೋಜನೆ ಹಾಗೂ ಒಳಚರಂಡಿ ಕಾಮಗಾರಿಗಳಲ್ಲಿ ಕಳಪೆಯಾಗದಂತೆ ಎಚ್ಚರವಹಿಸಬೇಕು ಎಂದು ಸೂಚಿಸಿದರು.

ವಿಜಾಪುರ ನಗರದ 17 ರಸ್ತೆ ಹಾಗೂ ನಾಲ್ಕು ಚರಂಡಿ ಕಾಮಗಾರಿಗೆ ನಗರೋತ್ಥಾನ ಯೋಜನೆಯಡಿ ರೂ. 30 ಕೋಟಿ ಹಣ ಬಂದಿದೆ. ಈ ರಸ್ತೆಗಳು ಕನಿಷ್ಠ 10 ವರ್ಷ ಬಾಳಿಕೆ ಬರುವಂತಿರಬೇಕು ಎಂದ ಸಚಿವರು, ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ರೂ.10 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿರುವ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಷರತ್ತುಗಳನ್ವಯ ಗುತ್ತಿಗೆ ದಾರರಿಂದ ಈ ರಸ್ತೆಗಳನ್ನು ಪುನಃಶ್ಚೇತನ ಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗೆ ಆದೇಶಿಸಿದರು.

ರೂ.130 ಕೋಟಿ ವೆಚ್ಚದ ಒಳ ಚರಂಡಿ ಕಾಮಗಾರಿ ವಿಳಂಬಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.  ನಿಬಂಧನೆ ಅನುಸಾರ ಜುಲೈ 2014ರೊ ಳಗಾಗಿ ಕಾಮಗಾರಿಗಳನ್ನು ಪೂರ್ಣ ಗೊಳಿಸಬೇಕು. ಪ್ರತಿ ತಿಂಗಳಿಗೊಮ್ಮೆ ನಿರ್ವಹಿಸಿದ ಕಾಮಗಾರಿಯ ಪ್ರಗತಿ ಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಗುತ್ತಿಗೆದಾರರು ಮತ್ತು ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ನಿರಂತರ ನೀರು ಪೂರೈಕೆಗೆ ರೂ.195 ಕೋಟಿ ಯೋಜನೆ ರೂಪಿಸ ಲಾಗಿದೆ. ನಗರದ 24 ವಲಯಗಳ ಪೈಕಿ ಮೂರು ವಲಯಗಳಲ್ಲಿ ಕಾಮಗಾರಿ ಆರಂಭಿಸಲಾಗಿದ್ದು, ಈ ತಿಂಗಳಲ್ಲಿ ಒಂದು ವಲಯದ ಕಾಮಗಾರಿ ಪೂರ್ಣ ಗೊಳ್ಳಲಿದೆ ಎಂದು ಜಲಮಂಡಳಿ ಯವರು ತಿಳಿಸಿದರು.

ಪುನರ್ ವಸತಿ ಪ್ಯಾಕೇಜ್ ರೂಪಿಸಿ ನಗರದ ರಾಜಕಾಲುವೆಗಳ ಮೇಲೆ ಹಾಗೂ ರೈಲ್ವೆ ನಿಲ್ದಾಣದ ಮಾರ್ಗ ಗಳಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿ ರುವ ಮನೆಗಳನ್ನು ಆಶ್ರಯ ಕಾಲೊನಿಗೆ ಸ್ಥಳಾಂತರಿಸಿ, ರಾಜಕಾಲುವೆಗಳನ್ನು ಪುನಃಶ್ಚೇತನಗೊಳಿಸಲು ಸೂಚಿಸಿದರು.
ಮನೆಗಳ ರಿಪೇರಿ, ಹೊಸ ಮನೆ ನಿರ್ಮಾಣಕ್ಕೆ ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆ ಮಾರ್ಗಸೂಚಿ ತೊಂದರೆಯಾ ಗಿದೆ. ನಗರದಲ್ಲಿ 80 ಸಂರಕ್ಷಿತ ಸ್ಮಾರಕಗಳು ಬರುತ್ತಿದ್ದು, ಎಲ್ಲ ಸ್ಮಾರಕ ಗಳಿಗೆ ಏಕೀಕೃತ ಮಾರ್ಗಸೂಚಿ ಅನುಸರಿ ಸುವುದು ಸಾಧುವಲ್ಲ. ತ್ವರಿತವಾಗಿ ಎಬಿಸಿಡಿ ಮಾರ್ಗಸೂಚಿಯನ್ನು ಪ್ರಕಟಿ ಸಲು ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ನಗರದ ಕೇಂದ್ರ ಸಾರಿಗೆ ಬಸ್ ನಿಲ್ದಾಣವನ್ನು ಬೇರೆಡೆ ಸ್ಥಳಾಂತರಿ ಸಬೇಕು. ಅದನ್ನು ನಗರ ಸಾರಿಗೆ ಬಸ್ ನಿಲ್ದಾಣವನ್ನಾಗಿ ಮಾಡಬೇಕು. ಅದಕ್ಕೆ ಅಗತ್ಯವಿರುವ ಸ್ಥಳ ಗುರುತಿಸಬೇಕು ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು.

ಇಂಡಿ ರಸ್ತೆ, ಗಾಂಧಿ ಚೌಕ್ ಸೇರಿದಂತೆ ವಿವಿಧೆಡೆ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪಾದಚಾರಿ ಪಥ ನಿರ್ಮಾಣ, ಸಂಚಾರ ನಿಯಮ ಫಲಕಗಳು ಹಾಕುವುದು, ಸಿಗ್ನಲ್ ಲೈಟ್‌ಗಳನ್ನು ಅಳವಡಿಸುವ ಕುರಿತಂತೆ ಎಸ್ಪಿ ಅಜಯ್ ಹಿಲೋರಿ ಪ್ರಸ್ತಾವ ಸಲ್ಲಿಸಿದರು.
ನಗರ ಶಾಸಕ ಡಾ.ಮಕ್ಬೂಲ್ ಬಾಗವಾನ, ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಇತರ ಅಧಿಕಾರಿಗಳು ಸಭೆಯಲ್ಲಿದ್ದರು.

ವಿಜಾಪುರ ಒನ್
ವಿದ್ಯುತ್, ದೂರವಾಣಿ ಬಿಲ್, ಆಧಾರ್ ಕಾರ್ಡ್ ಸೇರಿದಂತೆ ವಿವಿಧ ಸೇವೆಗಳನ್ನು ಒಂದೇ ಕೇಂದ್ರದಲ್ಲಿ ಪಡೆಯುವ ಸೌಲಭ್ಯ ಕಲ್ಪಿಸಲು `ವಿಜಾಪುರ ಒನ್' ಹೆಸರಿನಲ್ಲಿ ಕಿಯೋಸ್ಕ್‌ಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT