ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಕಾಮಗಾರಿ- ಬೇಗನೇ ಹದಗೆಟ್ಟ ರಸ್ತೆ

Last Updated 21 ಜನವರಿ 2012, 19:45 IST
ಅಕ್ಷರ ಗಾತ್ರ

ಮಹದೇವಪುರ:  ಕ್ಷೇತ್ರದ ಬೆಳ್ಳಂದೂರು ಸಮೀಪದ ಹಾಲ ನಾಯಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಚಿಕ್ಕನಾಯಕನಹಳ್ಳಿ ಗ್ರಾಮದಲ್ಲಿ ಕೆಲ ತಿಂಗಳ ಹಿಂದೆಯಷ್ಟೇ ನಿರ್ಮಾಣಗೊಂಡ ಮುಖ್ಯ ರಸ್ತೆ ತೀವ್ರ ಹದಗೆಟ್ಟಿದೆ. ರಸ್ತೆಯ ನಡುವೆ ಸಾಕಷ್ಟು ಹೊಂಡಗಳು ನಿರ್ಮಾಣಗೊಂಡಿವೆ. ಇದರಿಂದಾಗಿ ವಾಹನಗಳ ಸಂಚಾರಕ್ಕೆ ತೀವ್ರ ಅನಾನುಕೂಲವಾಗಿದೆ.

ಸರ್ಜಾಪುರ ಮುಖ್ಯ ರಸ್ತೆ ಹಾಗೂ ದೊಡ್ಡಕನ್ನಳ್ಳಿ ಗ್ರಾಮಕ್ಕೆ ಈ ಚಿಕ್ಕನಾಯಕನಹಳ್ಳಿ ಮುಖ್ಯ ರಸ್ತೆ ಸಂಪರ್ಕ ಕೊಂಡಿಯಾಗಿದೆ. ಅಲ್ಲದೆ, ಆನೇಕಲ್‌ಗೆ ಕೂಡ ಇದು ಸಂಪರ್ಕ ರಸ್ತೆಯಾಗಿದೆ. ಈ ರಸ್ತೆಯನ್ನು ಐದಾರು ತಿಂಗಳ ಹಿಂದೆಯಷ್ಟೇ ಡಾಂಬರೀಕರಣಗೊಳಿಸಲಾಗಿತ್ತು. ಆದರೆ, ಕಾಮಗಾರಿ ಗುಣಮಟ್ಟ ಕಳಪೆಯಾಗಿರುವ ಹಿನ್ನೆಲೆಯಲ್ಲಿ ರಸ್ತೆಯ ನಡುವೆ ಜಲ್ಲಿ ಕಲ್ಲುಗಳು ಮೇಲೆದ್ದು ಬಂದಿವೆ. ಅಷ್ಟೇ ಅಲ್ಲ. ಅಲ್ಲಲ್ಲಿ ಸಾಕಷ್ಟು ಹೊಂಡಗಳು ಬಿದ್ದಿವೆ. ರಾತ್ರಿ ವೇಳೆ ವಾಹನ ಸವಾರರು ಪ್ರಯಾಸದಿಂದ ಓಡಾಡುವಂತಾಗಿದೆ ಎಂದು ಸ್ಥಳೀಯರಾದ ಎಚ್. ಪಿಳ್ಳಾರೆಡ್ಡಿ `ಪ್ರಜಾವಾಣಿ~ಗೆ ದೂರಿದರು.

ಈ ರಸ್ತೆಯಲ್ಲಿ ವ್ಯವಸ್ಥಿತವಾಗಿ ಬೀದಿ ದೀಪಗಳನ್ನು ಅಳವಡಿಸಿಲ್ಲ. ಅನೇಕ ಬೈಕ್ ಸವಾರರು ರಾತ್ರಿ ವೇಳೆ ರಸ್ತೆ ನಡುವಿನ ಹೊಂಡಗಳಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಇನ್ನು ಹಗಲು ವೇಳೆಯಲ್ಲಿಯೂ ರಸ್ತೆಯಲ್ಲಿನ ಜಲ್ಲಿ ಕಲ್ಲುಗಳ ಮೇಲೆ ಸರಾಗವಾಗಿ ಚಲಿಸಲಾಗದೆ ಜಾರಿ ಬಿದ್ದು ಆಸ್ಪತ್ರೆ ಸೇರಿದವರು ಅನೇಕರಿದ್ದಾರೆ ಎಂದು ಅವರು ದೂರಿದ್ದಾರೆ.

ಈ ರಸ್ತೆಯನ್ನು ಪಂಚಾಯಿತಿ ವತಿಯಿಂದ ಮತ್ತು ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಕಳಪೆ ಕಾಮಗಾರಿ ಬಗ್ಗೆ ಸೂಕ್ತ ತನಿಖೆ ಆಗಬೇಕು. ಅನವಶ್ಯಕವಾಗಿ ಸರ್ಕಾರದ ಹಣ ವ್ಯಯವಾಗಬಾರದು. ಆದಷ್ಟು ಬೇಗನೆ ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗುವಂತಹ ರಸ್ತೆಯನ್ನು ಹೊಸದಾಗಿ ನಿರ್ಮಿಸಬೇಕು ಎಂದು ಪಿಳ್ಳಾರೆಡ್ಡಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT