ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಕಾಮಗಾರಿ: ಶಿಸ್ತು ಕ್ರಮ ಎಚ್ಚರಿಕೆ

Last Updated 5 ಜನವರಿ 2012, 8:15 IST
ಅಕ್ಷರ ಗಾತ್ರ

ಗಜೇಂದ್ರಗಡ: ಸರ್ಕಾರಿ ಅಭಿವೃದ್ದಿ ಕಾರ್ಯಗಳಲ್ಲಿ ಅಧಿಕಾರಿಗಳು, ಅಭಿಯಂತರು ಹಾಗೂ ಗುತ್ತಿಗೆದಾರರು ಗುಣಮಟ್ಟ ಕಾಯ್ದುಕೊಳ್ಳಬೇಕು. ಕಾಮಗಾರಿಗಳು ಕಳಪೆ ಎಂಬ ದೂರುಗಳು ಕೇಳಿ ಬಂದರೆ ಸಂಬಂಧಿಸಿದವರ ವಿರುದ್ದ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ರಾಜ್ಯ ರಸ್ತೆ ಅಭಿವೃದ್ದಿ ನಿಗಮದ ಅಧ್ಯಕ್ಷ, ಶಾಸಕ ಕಳಕಪ್ಪ ಬಂಡಿ ಹೇಳಿದರು.

ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮ ಯೋಜನೆಯಡಿ ಸೋಮವಾರ ಸಮೀಪದ ಕೊಡಗಾನೂರ ಗ್ರಾಮದಲ್ಲಿ ಅಂದಾಜು 30ಲಕ್ಷ ಅನುದಾನದಲ್ಲಿ ಗ್ರಾಮದ ವಿವಿಧೆಡೆ ಸಿ.ಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ರಸ್ತೆ, ಗಟಾರು, ಚರಂಡಿ, ಆಸ್ಪತ್ರೆ, ಶಾಲಾ-ಕಾಲೇಜು, ಶೌಚಾಲಯ ಸೇರಿದಂತೆ ಬಹುತೇಕ ಸರ್ಕಾರಿ ಕಾಮಗಾರಿಗಳು ಗುಣ ಮಟ್ಟ ಕಾಯ್ದುಕೊಳ್ಳುತ್ತಿಲ್ಲ. ಪರಿಣಾಮ ಅವಧಿಗೂ ಮುನ್ನವೇ ಕಟ್ಟಡಗಳು ನೆಲಕಚ್ಚುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈ ಎಲ್ಲ ಆರೋಪಗಳಿಂದ ಮುಕ್ತವಾದ ಕಾಮಗಾರಿಗಳಿಗೆ ಆದ್ಯತೆ ನೀಡಿ ಅನುದಾನ ಸದ್ಬಳಕೆಗೆ ಶ್ರಮಿಸಬೇಕು ಎಂದರು.

ರೋಣ ತಾಲೂಕಿನ ನಾಗರಿಕರು ಹಲವು ದಶಕಗಳಿಂದ ಪ್ಲೋರೈಡ್ ಯುಕ್ತ ನೀರು ಸೇವಿಸಿ ಮಂಡೆ ನೋವು, ಸ್ನಾಯುಸೆಳೆತ, ಪಾರ್ಶ್ವವಾಯು, ನರದೌರ್ಬಲ್ಯ, ಹಲ್ಲು ಪಾಚುಗಟ್ಟುವಿಕೆ ಇತ್ಯಾದಿ ಸಮಸ್ಯೆಗಳಿಂದ ಬಳಲಿ ನರಕ ಸದೃಷ್ಯ ಬದುಕು ಸಾಗಿಸುತ್ತಿದ್ದರು. ಇದಕ್ಕೆ ಮುಕ್ತಿ ನೀಡಿ ಆರೋಗ್ಯಯುತ ಶುದ್ದ ಕುಡಿಯುವ ನೀರು ದೊರಕಿಸುವ ನಿಟ್ಟಿನಲ್ಲಿ ತಾಲೂಕಿನ ಜಿಗಳೂರ ಗ್ರಾಮದ ಬಳಿ 350 ಎಕರೆ ಜಮೀನಿನಲ್ಲಿ 47 ಕೋಟಿ ವೆಚ್ಚದಲ್ಲಿ ಕೆರೆ ಕಾಮಗಾರಿ ಭರದಿಂದ ಸಾಗಿದ್ದು, ಕೆಲವೇ ತಿಂಗಳಲ್ಲಿ ನಾಗರಿಕರಿಗೆ ಕುಡಿಯಲು ಲಭ್ಯವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ರೋಣ ಮತ ಕ್ಷೇತ್ರದಲ್ಲಿನ ವಸತಿ ಹಾಗೂ ನಿವೇಶನ ರಹಿತ ಕಡು ಬಡವರಿಗೆ ವಾಂಬೆ, ವಾಜಪೇಯಿ, ಇಂದಿರಾ ಆವಾಸ, ಅಂಬೇಡ್ಕರ್ ವಸತಿ ಯೋಜನೆಗಳಲ್ಲಿ ಶಾಶ್ವತ ವಸತಿ ಸೌಕರ್ಯ ನೀಡಲಾಗಿದೆ. ಇದಕ್ಕೆ ಪೂರಕವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸೂಕ್ತ ಜಮೀನು ದೊರೆಯುತ್ತಿದೆ. ಆದರೆ, ಪಟ್ಟಣ ಪ್ರದೇಶಗಳಲ್ಲಿ ಸರ್ಕಾರ ನಿಗದಿ ಪಡಿಸುವ ದರಕ್ಕೆ ಜಮೀನು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮ ನಗರ ಪ್ರದೇಶಗಳಲ್ಲಿ ಅಭಿವೃದ್ದಿ ಕಾರ್ಯಗಳಿಗೆ ಹಿನ್ನಡೆ ಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇಈಓ ತರಾಟೆಗೆ: ಶಾಸಕ ಕಳಕಪ್ಪ ಬಂಡಿ ಕೊಡಗಾನೂರ ಗ್ರಾಮದಲ್ಲಿ ಸಿ.ಸಿ.ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವುದಕ್ಕೂ ಮುನ್ನ ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಎಲ್ಲಿ ಎಂದು ತಾ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ ಅವರನ್ನು ಪ್ರಶ್ನಿಸಿದರು. ತಡವರಿಸಿದ ಇಈಓ ಅವರ ಆರೋಗ್ಯ ಸರಿಯಲ್ಲ ಎಂಬ ಉತ್ತರ ನೀಡಿದರು. ಕೋಪಗೊಂಡ ಶಾಸಕರು, ಜನ ಸಾಮಾನ್ಯರು ತಮ್ಮ ಸಮಸ್ಯೆಗಳನ್ನು ಯಾರಿಗೆ ಹೇಳಬೇಕು ಎಂದು ತರಾಟೆಗೆ ತೆಗೆದುಕೊಂಡರು. ಈ ರೀತಿಯಾಗದಂತೆ ನೋಡಿಕೊಳ್ಳಿ ಎಂದು ಸೂಚಿಸಿದರು.

ಜಿ.ಪಂ ಸದಸ್ಯ ರಮೇಶ ಮುಂದಿನಮನಿ, ತಾ.ಪಂ ಸದಸ್ಯೆ ಲಲಿತಾ ಪೂಜಾರ, ಸಿ.ಜಿ.ಹಿರೇಮಠ. ಯಲ್ಲಪ್ಪ ನಡಕಟ್ಟೀನ, ಪರಸಪ್ಪ ನಡಕಟ್ಟಿಮಠ, ಮಹಾಂತಯ್ಯ ಕಪ್ಲಿಮಠ, ಗ್ರಾ.ಪಂ ಸದಸ್ಯರಾದ ಕೊಟ್ರಪ್ಪ ಹೂಗಾರ, ಶ್ರೀಮತಿ ಕಲ್ಲವ್ವ ಪೂಜಾರ, ಬಾಳು ಗೌಡರ ಹಾಗೂ ಭೂಸೇನಾ ನಿಗಮದ ಅಭಿಯಂತರರು ಉಪಸ್ಧಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT