ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಧಾನ್ಯ: ಮಹಿಳೆಯರ ಪ್ರತಿಭಟನೆ

Last Updated 4 ಜುಲೈ 2013, 7:04 IST
ಅಕ್ಷರ ಗಾತ್ರ

ಗಂಗಾವತಿ: ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ಕಳಪೆ ಗುಣಮಟ್ಟದ ಆಹಾರ ಧಾನ್ಯ ವಿತರಿಸಲಾಗಿದೆ ಎಂದು ಆರೋಪಿಸಿ 21ನೇ ವಾರ್ಡ್ ಮುರಾರಿನಗರದ ಅಂಗನವಾಡಿ 3ನೇ ಕೇಂದ್ರದ ಮುಂದೆ ಮಹಿಳೆಯರು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆಯಿತು.

ಅಂಗನವಾಡಿ ಕೇಂದ್ರದಿಂದ ಗರ್ಭಿಣಿಯರಿಗೆ ಪೌಷ್ಟಿಕ ಆಹಾರವಾಗಿ ನೀಡಲಾದ ಅಲಸಂದೆ ಮತ್ತು ಹೆಸರುಕಾಳು ಸಂಪೂರ್ಣ ಹುಳು ಹಿಡಿದು ನಿರುಪಯುಕ್ತವಾಗಿವೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಸುದ್ದಿಗಾರರಿಗೆ ಪ್ರತಿಭಟನೆ ನಿರತ ಮಹಿಳೆಯರು ತಿಳಿಸಿದರು.

`ಇದೇ ಧಾನ್ಯವನ್ನು ಎಳೆಯ ಮಕ್ಕಳಿಗೆ ನೀಡಲಾಗುತ್ತಿದ್ದು, ಜಾನುವಾರು ಸಹ ತಿನ್ನಲಾರದಷ್ಟು ಹುಳು ಹಿಡಿದಿವೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುವುದರ ಬಗ್ಗೆ ಅಧಿಕಾರಿಗಳಿಗೆ ಪ್ರಜ್ಞೆ ಇದೆಯೇ' ಎಂದು ಮಂಜುಳಾ, ಶಶಿರೇಖಾ ಪ್ರಶ್ನಿಸಿದರು. 

`ಅಂಗನವಾಡಿ ಕೇಂದ್ರಕ್ಕೆ ಕಳಿಸುವ ಮಕ್ಕಳ ಆರೋಗ್ಯದ ಬಗ್ಗೆ ಅಧಿಕಾರಿಗಳಿಗೆ ಕನಿಷ್ಠಮಟ್ಟದ ಕಾಳಜಿ ಇಲ್ಲ. ಕೊಂಚವಾದರೂ ತಿಳವಳಿಕೆ ಇದ್ದಿದ್ದರೆ ಇಂತಹ ಆಹಾರ ಪದಾರ್ಥ ನೀಡುತಿರಲಿಲ್ಲ' ಎಂದು ಯುವಕರಾದ ಎಂ.ಡಿ. ಮುಸ್ತಾಫ, ಮತೀನ್, ಆರ್‌ಟಿಒ ಜಾವೇದ್ ಆರೋಪಿಸಿದರು.

`ವಾರ್ಡಿನಲ್ಲಿರುವ ಏಳು ಜನ ಗರ್ಭಿಣಿಯರು, ಎಂಟು ಬಾಣಂತಿಯರು ಹಾಗೂ ಇಬ್ಬರು ಕಿಶೋರಿಯರಿಗೆ ತಲಾ ಅರ್ಧ ಕೆಜಿಯಂತೆ ಹಲಸಂದೆ, ಹೆಸರು, ತಲಾ ಕಾಲು ಕಿಲೋ ತೊಗರಿ ಬೇಳೆ, ಶೇಂಗ ನೀಡಲಾಗುತ್ತಿದೆ' ಎಂದು ಅಂಗನವಾಡಿ ಸಿಬ್ಬಂದಿ ತಿಳಿಸಿದರು.

`ಹೆರಿಗೆ ರಜೆಯಿಂದ ಕೇವಲ ಮೊನ್ನೆಯಷ್ಟೆ ಬಂದಿರುವುದರಿಂದ ನನ್ನ ಗಮನಕ್ಕೆ ಬಂದಿಲ್ಲ. ಹೆಸರು ಮತ್ತು ಹಲಸಂದೆ ಸಂಪೂರ್ಣ ಕಳಪೆ ಗುಣಮಟ್ಟದಲ್ಲಿವೆ. ತಕ್ಷಣ ಮೇಲಧಿಕಾರಿಯ ಗಮನಕ್ಕೆ ತರಲಾಗುವುದು' ಎಂದು ಹೆಸರು ಹೇಳಲಿಚ್ಚಸದ ಕೇಂದ್ರದ ಮುಖ್ಯಸ್ಥೆ ತಿಳಿಸಿದರು. 
ಗೀತಾ ಮತ್ತು ಯಶೋಧಾ ಎಂಬ ಗರ್ಭಿಣಿಯರಿಗೆ ಆಹಾರಧಾನ್ಯ ನೀಡಿದಾಗ ಕಳಪೆ ಗುಣಮಟ್ಟದ ಧಾನ್ಯಗಳು ಕಂಡು ಬಂದಿವೆ. ಹಲಸಂದೆ ಪೂರ್ಣ ಹುಳು ಹಿಡಿದಿವೆ ಎಂದು ಗರ್ಭಿಣಿಯರ ತಾಯಂದಿರಾದ ಕಲಾವತಿ ಮತ್ತು ಕಂಟೆಮ್ಮ ಹೇಳಿದರು.

`ತಕ್ಷಣ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ಆಹಾರಧಾನ್ಯ ಬದಲಿಸದಿದ್ದರೆ ಹೋರಾಟ ನಡೆಸಲಾಗುವುದು' ಎಂದು ವಾರ್ಡಿನ ನಿವಾಸಿಗಳಾದ ಶೃತಿ, ಲಕ್ಷ್ಮಿ, ಯುವಕರಾದ ಶಾಮೀದಲಿ, ಕೃಷ್ಣ, ಐರಾಜಪ್ಪ, ಶೇಖರಪ್ಪ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT