ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಪಿಚ್: ಕುಂಬ್ಳೆ ಅತೃಪ್ತಿ

Last Updated 6 ಜನವರಿ 2011, 5:50 IST
ಅಕ್ಷರ ಗಾತ್ರ

ಬೆಂಗಳೂರು:   ಕರ್ನಾಟಕ ಹಾಗೂ ಬರೋಡಾ ನಡುವೆ ರಣಜಿ ಟ್ರೋಫಿ ಕ್ರಿಕೆಟ್ ಸೆಮಿಫೈನಲ್ ಪಂದ್ಯ ನಡೆದ ಪಿಚ್ ‘ಕಳಪೆ’ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಅಧ್ಯಕ್ಷ ಅನಿಲ್ ಕುಂಬ್ಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ತಂಡದ ಆಡಳಿತ ಪಂದ್ಯದ ರೆಫರಿ ಮನು ನಾಯರ್‌ಗೆ ದೂರು ನೀಡಿದೆ. ಅವರು ವರದಿಯನ್ನು ಬಿಸಿಸಿಐಗೆ ಸಲ್ಲಿಸಬೇಕು. ನಂತರ ವರದಿ ಪರಿಶೀಲಿಸಿ ಬಿಸಿಸಿಐ ಯಾವ ನಿರ್ಧಾರ ಕೈಗೊಳ್ಳುತ್ತದೆ ಕಾದು ನೋಡಬೇಕು. ಆದರೆ ಪಿಚ್ ಸಂಬಂಧ ನಮಗೆ ತುಂಬಾ ಅಸಮಾಧಾನವಾಗಿದೆ’ ಎಂದು ಕುಂಬ್ಳೆ ‘ಪ್ರಜಾವಾಣಿ’ಗೆ ಬುಧವಾರ ತಿಳಿಸಿದ್ದಾರೆ.

‘ಒಂದು ಪಂದ್ಯ ಕೇವಲ ಐದು ಅವಧಿ (ಸೆಷನ್ಸ್)ಗಳಲ್ಲಿ ಮುಗಿದು ಹೋಗುತ್ತದೆ ಎಂದರೆ ಅದು ಖಂಡಿತ ಅಚ್ಚರಿ. ನಮ್ಮ ಆಟಗಾರರು ಈ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಆದರೆ ಇಂತಹ ಪಿಚ್‌ನಲ್ಲಿ ಆಡುವುದು ಕಷ್ಟ’ ಎಂದು ಭಾರತ ತಂಡದ ಮಾಜಿ ನಾಯಕ ಕುಂಬ್ಳೆ ವಿವರಿಸಿದ್ದಾರೆ.

ವಡೋದರಾ ರಿಲಯನ್ಸ್ ಕ್ರೀಡಾಂಗಣದಲ್ಲಿ ಬರೋಡಾ ವಿರುದ್ಧ ನಡೆದ ಸೆಮಿಫೈನಲ್‌ನಲ್ಲಿ ಕರ್ನಾಟಕ ಕ್ರಮವಾಗಿ 107 ಹಾಗೂ 88 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಪಂದ್ಯಕ್ಕೆ ಕೇವಲ 3 ದಿನ ಇದ್ದಾಗ ಕ್ರೀಡಾಂಗಣ ಬದಲಾಯಿಸಿದ್ದು ಅಚ್ಚರಿ ಉಂಟು ಮಾಡಿತ್ತು.

 ಮೊದಲು ನಿಗದಿಯಾದ ಪ್ರಕಾರ ಈ ಪಂದ್ಯ ಬರೋಡಾ ಕ್ರಿಕೆಟ್ ಸಂಸ್ಥೆಯ ಮೋತಿ ಬಾಗ್ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಆದರೆ ಯಾವುದೇ ನಿರ್ದಿಷ್ಟ ಕಾರಣ ನೀಡದೆ ಕ್ರೀಡಾಂಗಣ ಬದಲಾಯಿಸಲಾಗಿತ್ತು. ಈ ಪಿಚ್‌ಅನ್ನು ಸರಿಯಾಗಿ ರೂಪಿಸಿರಲಿಲ್ಲ. ಬಿರುಕಿನಿಂದ ಕೂಡಿದ್ದ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಸಂಕಟ ತಂದೊಡ್ಡಿತ್ತು.

ನಾಕ್‌ಔಟ್ ಹಂತದ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸಬೇಕೇ ಎಂಬುದರ ಬಗ್ಗೆ ಪ್ರತಿಕ್ರಿಯಿಸಿದ ಕುಂಬ್ಳೆ, ‘ತಟಸ್ಥ ಸ್ಥಳದಲ್ಲಿ ಪಂದ್ಯ ಆಯೋಜಿಸುವುದು ಅಸಾಧ್ಯದ ಮಾತು. ಕರ್ನಾಟಕ ಹಾಗೂ ಬರೋಡಾ ನಡುವಿನ ಪಂದ್ಯವನ್ನು ನಾಗ್ಪುರದಲ್ಲಿ ಆಯೋಜಿಸಿದರೆ ಅದನ್ನು ವೀಕ್ಷಿಸಲು ಜನರು ಬರುವುದಿಲ್ಲ’ ಎಂದರು.

ಪಿಚ್‌ಅನ್ನು ಆತಿಥೇಯ ತಂಡಗಳು ತಮಗೆ ಬೇಕಾದಂತೆ ರೂಪಿಸಿಕೊಳ್ಳುತ್ತವೆ ಎಂಬ ಕಾರಣಕ್ಕೆ ಬಿಸಿಸಿಐ 2008-09ರಲ್ಲಿ ರಣಜಿ ನಾಕ್‌ಔಟ್ ಹಂತದ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸಿತ್ತು. ಆದರೆ ಈ ಕ್ರಮದ ಬಗ್ಗೆ ಸಚಿನ್ ತೆಂಡೂಲ್ಕರ್ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನಿರ್ಧಾರ ಹಿಂಪಡೆದಿತ್ತು.

ತಂಡದೊಂದಿಗೆ ಚರ್ಚಿಸಿ ಕ್ರಮ: ಆರ್.ವಿನಯ್ ಕುಮಾರ್ ಬಳಗ ಬುಧವಾರ ಮಧ್ಯಾಹ್ನವಷ್ಟೆ ಬೆಂಗಳೂರಿಗೆ ಆಗಮಿಸಿದೆ. ತಂಡದೊಂದಿಗೆ ಚರ್ಚಿಸಿದ ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಕೆಎಸ್‌ಸಿಎ ಕಾರ್ಯದರ್ಶಿ ಜಾವಗಲ್ ಶ್ರೀನಾಥ್ ನುಡಿದಿದ್ದಾರೆ.

‘ತಂಡದೊಂದಿಗೆ ಇನ್ನೂ ಚರ್ಚಿಸಿಲ್ಲ. ಈ ರೀತಿಯ ಪ್ರದರ್ಶನಕ್ಕೆ ಕಾರಣ ಏನು ಎಂಬುದನ್ನು ಆಟಗಾರರು ಹಾಗೂ ತಂಡದ ಸಿಬ್ಬಂದಿಯಿಂದ ತಿಳಿದುಕೊಳ್ಳಬೇಕು. ಆಮೇಲೆ ಏನು ಮಾಡಬೇಕು ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ’ ಎಂದು ಶ್ರೀನಾಥ್ ಹೇಳಿದ್ದಾರೆ.

ಆದರೆ ಪಂದ್ಯಗಳನ್ನು ಎಲ್ಲಿ ಆಯೋಜಿಸಬೇಕು ಎಂಬ ತೀರ್ಮಾನ ತೆಗೆದುಕೊಳ್ಳುವುದು ಆತಿಥೇಯ ರಾಜ್ಯದ ಕ್ರಿಕೆಟ್ ಮಂಡಳಿಗೆ ಬಿಟ್ಟಿದ್ದು ಎಂದು ಅವರು ನುಡಿದಿದ್ದಾರೆ.
ಪಿಚ್ ಬಗ್ಗೆ ಅನುಮಾನ: ‘ಕರ್ನಾಟಕ ಎರಡನೇ ಇನಿಂಗ್ಸ್‌ನಲ್ಲಿ ಒಂದು ಹಂತದಲ್ಲಿ 66 ರನ್‌ಗೆ 4 ವಿಕೆಟ್ ಕಳೆದುಕೊಂಡಿತ್ತು. ಆದರೆ 22 ರನ್ ಗಳಿಸುವಷ್ಟರಲ್ಲಿ ಕೊನೆಯ 6 ವಿಕೆಟ್‌ಗಳು ಪತನವಾದವು. ಒಂದೂವರೆ ದಿನದಲ್ಲಿ ಪಂದ್ಯ ಮುಗಿದು ಹೋಯಿತು. ಪಿಚ್‌ಅನ್ನು ಸರಿಯಾಗಿ ರೂಪಿಸಿರಲಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಈ ಬಗ್ಗೆ ವಿಚಾರಣೆ ನಡೆಸಬೇಕು’ ಎಂದು ಬ್ಯಾಟಿಂಗ್ ದಂತಕತೆ ಜಿ.ಆರ್.ವಿಶ್ವನಾಥ್ ಅಭಿಪ್ರಾಯಪಟ್ಟಿದ್ದಾರೆ.

‘ಪಂದ್ಯ ಕೇವಲ ಒಂದೂವರೆ ದಿನದಲ್ಲಿ ಮುಗಿದಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ರೆಫರಿ ನೀಡುವ ವರದಿ ಬಗ್ಗೆ ಬಿಸಿಸಿಐ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದಿದ್ದಾರೆ.

ಪಂದ್ಯ ಆಡಲು ಪಿಚ್ ಕೊಂಚವೂ ಫಿಟ್ ಆಗಿರಲಿಲ್ಲ ಎಂದು ಕರ್ನಾಟಕ ತಂಡ ರೆಫರಿಗೆ ದೂರು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT