ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಪ್ಲಾಸ್ಟಿಕ್ ಚೀಲ ಅಪಾಯಗಳೇನು?

Last Updated 1 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಕೇಂ ದ್ರ ಪರಿಸರ ಇಲಾಖೆ ಕಳೆದ ಫೆಬ್ರುವರಿ 4 ರಂದು ಕಾನೂನು ಜಾರಿಗೊಳಿಸಿ ಹೊಸ ಮತ್ತು ಮರು ಬಳಕೆಯ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಗುಣಮಟ್ಟವನ್ನು 40 ಮೈಕ್ರಾನ್‌ಗಿಂತ ಕಡಿಮೆ ಇರಕೂಡದೆಂದು ತಯಾರಕರಿಗೆ ಆದೇಶಿಸಿದೆ.  ಗುಣಮಟ್ಟವಲ್ಲದವುಗಳ ಸರಬರಾಜು ಹಾಗೂ ಮಾರಾಟವನ್ನು ನಿಷೇಧಿಸಿದೆ. ಈ ಕಾನೂನು ಕರ್ನಾಟಕದಲ್ಲಿ ಮಾರ್ಚ್ 15 ರಿಂದ ಜಾರಿ ಆಗಿದೆ. ಕಾನೂನು ಪಾಲಿಸದ ತಯಾರಕರಿಗೆ 7 ವರ್ಷ ಜೈಲು, ಒಂದು ಲಕ್ಷ ರೂಪಾಯಿ ದಂಡವಿದೆ.

ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಉಪಯೋಗ ಯಾವುದಕ್ಕೆ ಎನ್ನುವುದಕ್ಕಿಂತ ಯಾವುದಕ್ಕಿಲ್ಲ ಎನ್ನುವ ಪ್ರಶ್ನೆಗೆ ಉತ್ತರ ಎಲ್ಲದಕ್ಕೂ ಎನ್ನಬೇಕಾಗುತ್ತದೆ. ಶೇ 70 ಚೀಲಗಳು ಆಹಾರ ಪದಾರ್ಥ ಒಯ್ಯಲು ಬಳಕೆಯಲ್ಲಿವೆ. ಚೀಲದೊಳಗಿನ ವಸ್ತು ಇತರರಿಗೆ ಕಾಣಬಾರದೆಂದು ಕಪ್ಪು ಬಣ್ಣದ ಚೀಲದಲ್ಲಿ ಮಾಂಸ, ಮೀನು ತರುತ್ತೇವೆ. ದೈನಿಕ, ನಿಯತಕಾಲಿಕ ಮತ್ತು ಪುಸ್ತಕಗಳು ಚಂದಾದಾರರಿಗೆ ಅಂಚೆ ಮೂಲಕ ಪ್ಲಾಸ್ಟಿಕ್ ಲಕೋಟೆಯಲ್ಲಿ ರವಾನೆ ಆಗುತ್ತಿವೆ.

ಪ್ರಯಾಣದಲ್ಲಿ ಮಕ್ಕಳು ವಾಂತಿ, ಮಲಮೂತ್ರವಿಸರ್ಜನೆ ಎಂದಾಗ ಬಸ್ ನಿಲ್ಲಿಸುವ ಅಗತ್ಯವಿಲ್ಲ. ಏಕೆಂದರೆ ಪ್ಲಾಸ್ಟಿಕ್ ಚೀಲದಲ್ಲಿ ಇವುಗಳನ್ನು ಸಂಗ್ರಹಿಸಿ ಕಿಟಕಿಯಿಂದ ದೂರ ಎಸೆದು ಸುಖ ಪ್ರಯಾಣ ಮಾಡುತ್ತಾರೆ ಈಗಿನ ತಾಯಂದಿರು.

ಈ ಚೀಲಗಳ ಪ್ರಸಿದ್ಧಿಗೆ ಕಾರಣ ಇವು ನೋಡಲು ಚೆಂದ. ದುಬಾರಿ ಅಲ್ಲ. ಭಾರವಿಲ್ಲ. ವರ್ತಕರಿಗೆ ತೂಕ ಹಾಗೂ ಪ್ಯಾಕ್ ಮಾಡಲು ಸುಲಭ. ಪೇಪರ್ ಅಥವಾ ಬಟ್ಟೆ ಕೈ ಚೀಲಕ್ಕಿಂತ ಅಗ್ಗ.

ಇಂಥಹ ನಿತ್ಯ ಅವಶ್ಯವಾದ ಕ್ಯಾರಿಬ್ಯಾಗ್ ಮೇಲೆ ಹೊಸ ಕಾನೂನು ಏಕೆ?
ಅಪ್ಪಟ, ಮರು ಉತ್ಪಾದಿತ:

ಕ್ಯಾರಿ ಬ್ಯಾಗ್‌ಗಳಲ್ಲಿ ಅಪ್ಪಟ ಮತ್ತು ಪುನರ್ ಉತ್ಪಾದಿತವೆಂದು ಎರಡು ವಿಧ. ಕಲ್ಲಿದ್ದಲು, ಸುಣ್ಣದ ಕಲ್ಲು, ಪೆಟ್ರೋಲಿಯಂ  ಮಿಶ್ರಣದಿಂದ ತಯಾರಾದ ಚೀಲಗಳಿಗೆ ಅಪ್ಪಟ ಎಂದು ಹೆಸರು.

ಆದರೆ ಕೆಲವು ವ್ಯಾಪಾರಿಗಳ ದುರಾಶೆಯಿಂದಾಗಿ, ಕ್ಯಾರಿಬ್ಯಾಗ್‌ಗಳನ್ನು ಕೆಲಸಕ್ಕೆ ಬಾರದ ಮುರುಕು, ತುಣುಕು, ಚೂರು ಪ್ಲಾಸ್ಟಿಕ್‌ನಿಂದ ಮತ್ತು ಹಳೆ ಬೂಟಿನ ರಬ್ಬರ್, ಖಾಲಿಯಾದ ಎಣ್ಣೆ, ಹಾಲಿನ ಚೀಲ, ಶಾಂಪುಗಳ ಪ್ಲಾಸ್ಟಿಕ್ ಸೀಸೆಯನ್ನು ಕರಗಿಸಿ ತಯರಿಸುತ್ತಾರೆ. ಇವುಗಳಿಗೆ ಅಪಾಯಕಾರಿ ಬಣ್ಣ,ರಾಸಾಯನಿಕ ಸಹ ಸೇರಿಸುತ್ತಾರೆ. ಉತ್ಪಾದನೆ ಸಂಖ್ಯೆಯನ್ನು ಹೆಚ್ಚಿಸಲು ಅತಿ ತೆಳುವಾದ (20 ಮೈಕ್ರಾನ್‌ಗಿಂತ ಕಡಿಮೆ), ಕಡಿಮೆ ತೂಕದ ಚೀಲ ಸಿದ್ಧಪಡಿಸುತ್ತಾರೆ. ಈ ರೀತಿ ಎರಡನೆ ದರ್ಜೆಯ ಪ್ಲಾಸ್ಟಿಕ್‌ನಿಂದ ತಯಾರಾದ ಕ್ಯಾರಿ ಬ್ಯಾಗ್‌ಗಳಿಗೆ ಮರು ಸಂಸ್ಕರಿಸಿದ, ಮರು ಉತ್ಪಾದಿತ (ರಿಸೈಕಲ್) ಎಂದು ಹೆಸರು. ಪುನರ್ ಉತ್ಪಾದಿತಗೊಂಡವು ಅಪ್ಪಟ ಚೀಲಕ್ಕಿಂತ ಹೆಚ್ಚು ಅಪಾಯಕಾರಿ ಹಾಗೂ ಅರ್ಧದಷ್ಟು ಅಗ್ಗ. ಅತಿ ತೆಳುವಾದ ಚೀಲಗಳನ್ನು ಪುನರ್ ಉತ್ಪಾದಿಸಲು ತಾಂತ್ರಿಕ ಹಾಗೂ ವ್ಯಾಪಾರಿಕವಾಗಿ ಸಾಧ್ಯವಾಗುವುದಿಲ್ಲವಾದ್ದರಿಂದ, ಬಳಕೆ ನಂತರ ಇವು ಪರಿಸರದಲ್ಲಿ ಉಳಿಯುತ್ತವೆ. ಇದಲ್ಲದೆ ಕಾಗದ ಅಥವಾ ಎಲೆಗಳ ಹಾಗೆ  ಈ ಪ್ಲಾಸ್ಟಿಕ್  ಕೊಳೆತು ಮಣ್ಣಿನಲ್ಲಿ ಲೀನವಾಗುವುದಿಲ್ಲ. ಇದರ ಪರಿಣಾಮ ಅನಾರೋಗ್ಯ ಮತ್ತು ಪರಿಸರ ಮಾಲಿನ್ಯ.

ಗರ್ಭಸ್ಥ ಶಿಶುವಿಗೂ ಅಪಾಯ
* ಕಳಪೆಮಟ್ಟದ ಕ್ಯಾರಿಬ್ಯಾಗ್‌ನಲ್ಲಿ ಆಹಾರ ವಸ್ತುಗಳನ್ನು ಕೊಂಡೊಯ್ಯುವಾಗ ಪ್ಲಾಸ್ಟಿಕ್‌ನಲ್ಲಿರುವ ಅಪಾಯಕಾರಿ ವಸ್ತುಗಳು ಆಹಾರದಲ್ಲಿ ಬೆರೆತು ದೇಹ ಸೇರಿದಾಗ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಬಣ್ಣಗಳು ಮೂತ್ರಕೋಶ, ಶ್ವಾಶಕೋಶಕ್ಕೆ ಅಪಾಯಕಾರಿ. ಅಧಿಕ ರಕ್ತದೊತ್ತಡ, ರಕ್ತನಾಳಗಳ ರೋಗಗಳು ಸಾಮಾನ್ಯ.

* ಕೆಂಪು ಬಣ್ಣದ ಚೀಲಗಳಿಂದ ಮಕ್ಕಳ ಮೂಳೆ ವಿಕಲತೆ ಆಗುತ್ತದೆ. ಕಪ್ಪು ಬಣ್ಣದ ಚೀಲ ಇತರ ಎಲ್ಲ ಬಣ್ಣದ ಚೀಲಕ್ಕಿಂತ ಹೆಚ್ಚು ಅಪಾಯಕಾರಿ. ಏಕೆಂದರೆ ತಪ್ಪು ಬಣ್ಣದಲ್ಲಿನ ಸೀಸ ಎಂಬ ವಸ್ತು ರಕ್ತಹೀನತೆ, ಮೆದುಳು ರೋಗಕ್ಕೆ ಕಾರಣವಾಗುತ್ತದೆ.

* ಬಳಸಿದ ಚೀಲಗಳನ್ನು ಪರಿಸರದಲ್ಲಿ ಇಲ್ಲದಂತೆ ಮಾಡುವ ಒಂದೆ ವಿಧಾನವೆಂದರೆ ಸುಡುವುದು. ಆದರೆ ಸುಡಬಾರದು. ಸುಟ್ಟರೆ ಪೊಸಜೀನ್, ಕ್ಲೊರಿನ್, ಗಂಧಕ ಸಾರಜನಕಗಳಂತಹ ವಿಷ ಅನಿಲಗಳು ಉತ್ಪತ್ತಿ ಆಗಿ ಇವುಗಳಿಂದ ಬಂಜೆತನ, ಕ್ಯಾನ್ಸರ್, ಗರ್ಭಸ್ಥ ಶಿಶುವಿಗೆ ಮಾರಣಾಂತಿಕ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಕಾರ್ಬನ್ ಮೊನಾಕ್ಸ್‌ಡ್ ಎಂಬ ಇನ್ನೊಂದು ಅನಿಲ ಬಸ್ ಹಾಗೂ ಲಾರಿಯಿಂದ ಹೊರಹೊಮ್ಮುವ ಹೊಗೆಗಿಂತ ಹೆಚ್ಚು ಅಪಾಯಕಾರಿ, ಸೂರ್ಯನ ನೇರ ಕಿರಣಗಳಿಂದ ನಮ್ಮನ್ನು ರಕ್ಷಿಸುವ ಪರಿಸರದಲ್ಲಿರುವ ‘ಓ ಜೋನ್’ ಎಂಬ ವಸ್ತುವನ್ನು ಈ ವಿಷಾನಿಲಗಳು ಕಡಿಮೆ ಮಾಡುವುದರಿಂದ ಸೂರ್ಯನ ಕಿರಣಗಳು ಅಪಾಯವಾಗುತ್ತವೆ.

ಪ್ರಾಣಿಗಳಿಗೂ ಅಪಾಯ:
ಬಳಸಿ ಉಳಿದ ಹಾಗೂ ಹಾಳಾದ ಆಹಾರವನ್ನು ಕ್ಯಾರಿಬ್ಯಾಗ್‌ನಲ್ಲಿ ತುಂಬಿ ತಿಪ್ಪೆಗೆ ಎಸೆಯುವುದು ಸಾಮಾನ್ಯ. ಆಹಾರಕ್ಕಾಗಿ ಜಾನುವಾರು ಈ ಚೀಲವನ್ನು ನುಂಗಿದಾಗ ಉಸಿರುಗಟ್ಟಿ ಸಾಯುತ್ತವೆ. ಇವು ಕರುಳು ಸೇರಿದಾಗ ಜೀರ್ಣವಾಗದೆ ದ್ರವರೂಪಕ್ಕೆ ಬದಲಾವಣೆ ಆಗದಿರುವುದರಿಂದ ಕರುಳಿನಲ್ಲಿ ಸಿಕ್ಕಿಕೊಂಡು, ತಡೆ ಆಗಿ ಮಾರಣಾಂತಿಕವಾಗಬಹುದು. ಒಂದು ಸಮೀಕ್ಷೆ ಪ್ರಕಾರ ದೊಡ್ಡ ನಗರಗಳಲ್ಲಿ ಶೇ 60 ಜಾನುವಾರು ಕ್ಯಾರಿ ಬ್ಯಾಗ್ ತಿಂದು 3 ರಿಂದ 6 ತಿಂಗಳಲ್ಲಿ ಸಾಯುತ್ತವೆ.

ಸಮುದ್ರ ತೀರದಲ್ಲಿನ ಚೀಲಗಳು ಮಳೆಗಾಳಿಯಿಂದಾಗಿ ಸಮುದ್ರ ಸೇರುತ್ತದೆ. ಈ ಚೀಲ ನುಂಗಿದ ಮೀನು ಹಾಗೂ ಇತರೆ ಜಲಚರ ಸಂತತಿಗೂ ಅಪಾಯ. ಹೀಗೆಯೇ ಪ್ರಾಣಿ ಸಂಗ್ರಹಾಲಯದಲ್ಲಿನ ಪ್ರಾಣಿಗಳಿಗೂ ಅಪಾಯವಾಗಬಹುದು.

ಪರಿಸರ ಮಾಲಿನ್ಯ:
ಪ್ಲಾಸ್ಟಿಕ್ ಕೊಳೆಯುವುದಿಲ್ಲವಾದ್ದರಿಂದ ಕ್ಯಾರಿ ಬ್ಯಾಗ್‌ಗಳು ಒಳಚರಂಡಿಯಲ್ಲಿ ಸಿಕ್ಕಿಹಾಕಿಕೊಂಡು ಕೊಳಕು ನೀರಿನ ಸುಲಭ ಚಲನೆಗೆ ತಡೆ ಮಾಡುತ್ತವೆ ಹಾಗೂ ಮಳೆಗಾಲದಲ್ಲಿ ಕೊಳಕು ನೀರಿನ ಸಂಗ್ರಹಕ್ಕೆ ಕಾರಣವಾಗುತ್ತವೆ. ಬಹಳ ದಿನ ಒಳಚರಂಡಿಯಲ್ಲಿ ಮಲಿನ ನೀರು ಚಲಿಸದೆ ನಿಂತರೆ ಈ ನೀರಿನಿಂದ ‘ಮಿಥೇನ್’ ಅನಿಲ ಉತ್ಪತ್ತಿಯಿಂದ ಒಳಚರಂಡಿಯ ಪೈಪು ಒಡೆಯುವ ಸಾಧ್ಯತೆ ಇದೆ.

ಸಮಸ್ಯೆಗೆ ತಡೆ ಹೇಗೆ?
*30 ವರ್ಷಗಳ ಹಿಂದೆ ಬಟ್ಟೆಯ ಮತ್ತು ಬಣ್ಣ ಬಣ್ಣದ ದಾರದ ಕಸೂತಿಯ ಕೈಚೀಲಗಳ ಬಳಕೆ ಸಂಸ್ಕೃತಿ, ಪ್ರತಿಷ್ಠೆಯ ಪ್ರತೀಕ ಆಗಿತ್ತು. ಇವುಗಳನ್ನು ಸುರಕ್ಷಿತವಾಗಿ ಮರು ಬಳಸಬಹುದು. ಇಂಥಹ ಉತ್ತಮ ಸಂಪ್ರದಾಯ ಮತ್ತೆ ರೂಢಿಯಾಗಲಿ.

* ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಅನಿವಾರ್ಯವಾದರೆ ಇವು 40 ಮೈಕ್ರಾನ್‌ಗಿಂತ ದಪ್ಪವಾಗಿರಲಿ. ತಯಾರಕರ ವಿಳಾಸ, ತಯಾರಿಸಲು ಬಳಸಿದ ಕಚ್ಚಾವಸ್ತುಗಳು, ಅಪ್ಪಟ ಅಥವಾ ಮರುಉತ್ಪಾದಿತ, ಪರಿಸರ ಇಲಾಖೆಯ ಪರವಾನಿಗೆ ವಿವರಗಳು ಚೀಲದ ಮೇಲಿರಬೇಕು.

* ಪುನರ್ ಉತ್ಪಾದಿತ ಬ್ಯಾಗ್ ಮೇಲೆ ಐಸ್ 14534:1998 ಎಂಬ ಸಂಖ್ಯೆ ಇರಬೇಕು.

* ಸಾಮಾನು ಸಾಗಿಸಲು ಅಂಗಡಿಗಳಲ್ಲಿ ನೀಡುವ ಉಚಿತ ಆದರೆ ಕಡಿಮೆ ಗುಣಮಟ್ಟದ ಚೀಲ ಸ್ವೀಕರಿಸದಿರಿ. ಬದಲಾಗಿ ಗುಣಮಟ್ಟದ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಅಥವಾ ಕಾಗದ ಕೈಚೀಲ ಖರೀದಿಸಿರಿ.

* ಭಾರತದಲ್ಲಿ ಸುಮಾರು 10 ಸಾವಿರ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ತಯಾರಕರಿದ್ದು ಕಾನೂನು ಪಾಲಿಸದವರ ವಿರುದ್ಧ ಕಠಿಣ ಕ್ರಮ ಅವಶ್ಯ.

* ಕಾಗದ ಕೈ ಚೀಲಗಳು ರಿಯಾಯಿತಿ ದರದಲ್ಲಿ ಲಭ್ಯವಾಗಲು ಚಿಂತನೆಯಾಗಬೇಕು.

* ಅಪಾಯವಿಲ್ಲದೆ ಪ್ಲಾಸ್ಟಿಕ್ ನಾಶಪಡಿಸುವ ತಂತ್ರಜ್ಞಾನದ ಸಂಶೋಧನೆ ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT