ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಬಿತ್ತನೆ ಬೀಜ ಮಾರಾಟ: ಆರೋಪ

ಕೃತಕ ಅಭಾವ ವಿರೋಧಿಸಿ ಪ್ರತಿಭಟನೆ
Last Updated 16 ಜುಲೈ 2013, 6:58 IST
ಅಕ್ಷರ ಗಾತ್ರ

ಲಿಂಗಸುಗೂರ: ತಾಲ್ಲೂಕಿನ ಗುರುಗುಂಟಾ ರೈತ ಸಂಪರ್ಕ ಕೇಂದ್ರದಲ್ಲಿ ಕಳಪೆ ಬಿತ್ತನೆ ಬೀಜ ಮಾರಾಟ ಮಾಡುವ ಮೂಲಕ ರೈತರ ಬದುಕಿನ ಜೊತೆ ಕೃಷಿ ಇಲಾಖೆ ಆಟವಾಡುತ್ತಿದೆ. ತಾಲ್ಲೂಕಿನಾದ್ಯಂತ ಕೃಷಿ ಚಟುವಟಿಕೆ ಚುರುಕುಗೊಂಡಿದ್ದು ಬೀಜ ಗೊಬ್ಬರ ಮಾರಾಟ ಮಾಡುವವರು ಕೃತಕ ಅಭಾವ ಸೃಷ್ಟಿಸಿ ರೈತರಿಂದ ಹೆಚ್ಚುವರಿ ಹಣ ಪಡೆಯುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಳಪೆ ಬೀಜ ಮಾರಾಟದ ಪ್ಯಾಕೇಟ್ ಪ್ರದರ್ಶಿಸುತ್ತ, ಕೃಷಿ ಇಲಾಖೆ ವಿರುದ್ಧ ಧಿಕ್ಕಾರ ಹಾಕುತ್ತ ಉಪವಿಭಾಗ ಕಚೇರಿಗೆ ಆಗಮಿಸಿದ ರೈತರು ಗುರುಗುಂಟಾ ರೈತ ಸಂಪರ್ಕ ಕೇಂದ್ರದಲ್ಲಿ ಖರೀದಿಸಿದ ಲಕ್ಷ್ಮಿ ಸೂರ್ಯಕಾಂತಿ ಬಿತ್ತನೆ ಬೀಜದ 2 ಕೆ.ಜಿ ಪ್ಯಾಕೇಟ್‌ನಲ್ಲಿ ಅಂದಾಜು 800ಗ್ರಾಂ ಕವಚ(ತೊಗಟೆ) ಸುಲಿದ ಬೀಜಗಳಿವೆ. ಬಹುತೇಕ ಜಮೀನುಗಳಲ್ಲಿ ನಾಟಿ ಮಾಡಿದ ಬೀಜ ಸಸಿ ಒಡೆದಿಲ್ಲ ಎಂದು ಆರೋಪಿಸಿದರು.

ಗುರುಗುಂಟಾ ಸೇರಿದಂತೆ ಇತರೆ ರೈತ ಸಂಪರ್ಕ ಕೇಂದ್ರಗಳಲ್ಲಿ ಖರೀದಿ ಮಾಡಿದ ಬೀಜಕ್ಕೆ ರಸೀದಿ ಕೇಳಿದರೆ ಬೀಜ ಇಲ್ಲ ಎಂದು ವಾಪಸು ಕಳುಹಿಸುತ್ತಿದ್ದಾರೆ. ಖಾಸಗಿ ಅಂಗಡಿಗಳಲ್ಲಿ ಬೀಜ ಮತ್ತು ಗೊಬ್ಬರದ ಕೃತಕ ಅಭಾವ ಸೃಷ್ಟಿಸಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಈ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರು ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ಆರೋಪಿಸಿದರು.

ಸಬ್ಸಿಡಿ ದರದಲ್ಲಿ ರೈತರಿಗೆ ವಿತರಿಸುವ ಬೀಜ, ಕೃಷಿ ಪರಿಕರಗಳ ಹಂಚಿಕೆಯಲ್ಲಿ ವ್ಯಾಪಕ ಅವ್ಯವಹಾರ ನಡೆಯುತ್ತಿದೆ. ಸಬ್ಸಿಡಿ ನೀಡುವಲ್ಲಿ ಗೋಲಮಾಲ್ ನಡೆಯುತ್ತಿದೆ. ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು ಬೆಲೆ ನಿಗದಿ ಮಾಡಿ, ಸಬ್ಸಿಡಿ ಹೆಸರಿನಲ್ಲಿ ಹಣ ಮಾಡಲಾಗುತ್ತದೆ. ರೈತರ ಹೆಸರಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿದರು.

ತಹಸೀಲ್ದಾರ ಎಸ್.ಜಿ. ಮಹಾಜನ ಅವರ ಮೂಲಕ ಕೃಷಿ ಸಚಿವರಿಗೆ ಬರೆದ ಮನವಿಯನ್ನು ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ನೇತೃತ್ವದಲ್ಲಿ ಸಲ್ಲಿಸಲಾಯಿತು. ಮುಖಂಡರಾದ ಸಂಗಣ್ಣ ಮುದಗಲ್ಲ, ಅಮರೇಶ ಹೂಗಾರ, ಬಸನಗೌಡ, ಮಲ್ಲೇಶ, ರಾಮಣ್ಣ, ಸಿದ್ಧರಾಮಯ್ಯ, ಅಮರೇಶ, ಸಿದ್ದೇಶ, ಚಂದ್ರಶೇಖರಯ್ಯ, ಹನುಮಂತ ಹೂಗಾರ, ಸಾಹೇಬಗೌಡ, ಶಿವರಾಜ, ಆದಪ್ಪ, ಮುನಿಯಪ್ಪ, ರಸೀದ, ರುದ್ರಣ್ಣ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT