ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಬೀಜ-ಗೊಬ್ಬರ ಮಾರಾಟ?

Last Updated 2 ಜೂನ್ 2011, 7:00 IST
ಅಕ್ಷರ ಗಾತ್ರ

ಲಿಂಗಸುಗೂರ: ತಾಲ್ಲೂಕಿನಾದ್ಯಂತ ಕಳೆದ ಕೆಲವು ವರ್ಷಗಳಿಂದ ಕಳಪೆ ಬಿತ್ತನೆ ಬೀಜ ಮತ್ತು ಗೊಬ್ಬರ ಮಾರಾಟದಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತ ಬಂದಿದ್ದಾರೆ. ಪ್ರಸಕ್ತ ಮುಂಗಾರು ಆರಂಭಗೊಂಡಿದ್ದು ರೈತ ಸಮೂಹ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಈಗಾಗಲೇ ಪುನಃ ಕಳಪೆ ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ಮಾರಾಟ ಮಾಡುತ್ತಿರುವ ಆರೋಪಗಳು ಕೇಳಿಬರುತ್ತಿವೆ.

ಕಳೆದ ವರ್ಷ ಪಯೊನಿಯರ್ 86 ಎಂ32 ಸಜ್ಜೆ ತಳಿ ಬಿತ್ತನೆ ಮಾಡಿದ್ದ ರೈತರ ಜಮೀನುಗಳಲ್ಲಿ ಬೆಳೆದು ನಿಂತ ಸಜ್ಜೆ ಕಾಳುಕಟ್ಟದೇ ಬರುಡಾಗಿತ್ತು. ಈ ಕುರಿತು ರೈತ ಸಂಘಟನೆಗಳು ತಿಂಗಳು ಗಟ್ಟಲೆ ಹೋರಾಟ ಮುಂದುವರೆಸಿದಾಗ ಎಚ್ಚೆತ್ತುಕೊಂಡ ಕೃಷಿ ಇಲಾಖೆ ಪರಿಶೀಲನೆಗೆ ಮುಂದಾಗಿತ್ತು. ರಾಯಚೂರು ಕೃಷಿ ವಿಶ್ವ ವಿದ್ಯಾಲಯದ ಕೃಷಿ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲಿಸಿ ಅಂತಿಮವಾಗಿ ಕಳಪೆ ಮತ್ತು ರೋಗಗ್ರಸ್ತ ಬಿತ್ತನೆ ಬೀಜವಾಗಿದೆ ಎಂದು 2010ರ ನವೆಂಬರನಲ್ಲಿ ವರದಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಕಳಪೆ ಬಿತ್ತನೆ ಬೀಜ ಪೂರೈಸಿದ ಹಾಗೂ ಮಾರಾಟ ಮಾಡಿರುವುದನ್ನು ಕೃಷಿ ವಿಜ್ಞಾನಿಗಳು ದೃಢಪಡಿಸಿದ್ದರಿಂದ ಈ ಕೆಳಗೆ ಕಾಣಿಸಿದ ಕಂಪೆನಿ ಮತ್ತು ಮಾರಾಟಗಾರರ ವಿರುದ್ಧ ಸ್ಥಳೀಯ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.

ಪಯೋನಿಯರ್ ಕಂಪೆನಿ, ವರದಾ ಆಗ್ರೋ ಸರ್ವಿಸಸ್ ಬಳ್ಳಾರಿ, ಲಿಂಗಸುಗೂರ ಪಟ್ಟಣದ ವೀರಭದ್ರೇಶ್ವರ ಟ್ರೇಡರ್ಸ್‌, ಬಸವೇಶ್ವರ ಆಗ್ರೋ ಕೇಂದ್ರ, ಅಮರೇಶ್ವರ ಆಗ್ರೋ ಕೇಂದ್ರ, ಬಾಲಾಜಿ ಕೃಷಿ ಕೇಂದ್ರ, ಶಿವಲೀಲಾ ಏಜೆನ್ಸಿ, ಈಶ್ವರ ಆಗ್ರೋ ಕೇಂದ್ರ, ರೆಡ್ಡಿ ಟ್ರೇಡರ್ಸ್‌, ಶ್ರೀಶೈಲ ಅಗ್ರೋ ಕೇಂದ್ರಗಳು ಒಳಪಟ್ಟಿವೆ.

ಪ್ರತಿಯೊಬ್ಬ ರೈತ ಎಕರೆಗೆ 5-6ಸಾವಿರ ಹಣ ಖರ್ಚು ಮಾಡಿಕೊಂಡು ಬಿತ್ತನೆ ಮಾಡಿದ್ದ ಸಜ್ಜೆ ಬೆಳೆ ಕಾಳುಕಟ್ಟದೇ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು. ಕೃಷಿ ಇಲಾಖೆ ಏನೋ ಮಾರಾಟಗಾರರ ವಿರುದ್ಧ ಕ್ರಮ ಕೊಂಡಿದೆ. ಆದರೆ, ಸಾವಿರಾರು ರೂಪಾಯಿ ನಷ್ಟಕ್ಕೊಳಗಾದ ರೈತರಿಗೆ ಇಂದಿಗೂ ಪರಿಹಾರ ದೊರೆತಿಲ್ಲ. ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಸರ್ಕಾರ ಪರಿಹಾರ ಕೊಡುವುದೊ? ಅಥವಾ ಸಂಬಂಧಿಸಿದ ಕಂಪೆನಿ ಅಥವಾ ಮಾರಾಟಗಾರರು ನೀಡುವರೊ? ಎಂಬುದು ಜಿಜ್ಞಾಸೆ ಮೂಡಿಸಿದೆ.

ಕಳಪೆ ಬಿತ್ತನೆ ಬೀಜ ಮಾರಾಟ ವ್ಯಾಪಕವಾಗಿ ನಡೆಯುತ್ತಿದೆ ಎಂಬ ಆರೋಪಗಳಿಗೆ ಮೇಲ್ಕಾಣಿಸಿದ ಪ್ರಕರಣ ಜೀವಂತ ನಿದರ್ಶನವಾಗಿದೆ. ಕಳಪೆ ಬಿತ್ತನೆ ಬೀಜದ ಜೊತೆಗೆ ಕಳಪೆ ರಸಗೊಬ್ಬರ ಮಾರಾಟ ಜಾಲವು ಪತ್ತೆಯಾಗಿರುವುದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಕಳಪೆ ಗೊಬ್ಬರ ಮಾರಾಟ ಮಾಡಿದ ಆರೋಪಕ್ಕೆ ಸಂಬಂಧಿಸಿ ಹಟ್ಟಿಯ ಶರಣಬಸವೇಶ್ವರ ಟ್ರೇಡರ್ಸ್‌ ಹಾಗೂ ಲಿಂಗಸುಗೂರಿನ ಶಿವಲೀಲಾ ಏಜೆನ್ಸೀಸ್ ವಿರುದ್ಧ ಸ್ಥಳೀಯ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.

ಕಂಪೆನಿಗಳು ತಾವು ಮಾರಾಟ ಮಾಡುವ ರಸಗೊಬ್ಬರದ ಬ್ಯಾಗ್‌ಗಳ ಮೇಲೆ ಲಗತ್ತಿಸಿದ ಪೋಷಕಾಂಶ ಮತ್ತು ಗುಣಮಟ್ಟದ ಕುರಿತು ಆರೋಪಗಳು ಸಾಕಷ್ಟು ಕೇಳಿಬಂದಿದ್ದವು. ಆರೋಪದ ಜಾಡು ಹಿಡಿದ ಕೃಷಿ ಇಲಾಖೆ ರಸಗೊಬ್ಬರದಲ್ಲಿ ಸಾರಜನಕ, ರಂಜಕ, ಪೊಟ್ಯಾಷ್ ಪೋಷಕಾಂಶಗಳ ಕೊರತೆ ಸಾಕಷ್ಟು ಪ್ರಮಾಣದಲ್ಲಿ ಕೊರತೆ ಇರುವುದನ್ನು ವಡ್ಡರಹಟ್ಟಿಯ ರಸಗೊಬ್ಬರದ ನಿಯಂತ್ರಣ ಪ್ರಯೋಗಾಲಯದ ವರದಿಗಳು ದೃಢಪಡಿಸಿವೆ.

ಲಿಂಗಸುಗೂರಿನ ಅಮರೇಶ್ವರ ಟ್ರೇಡರ್ಸ್‌, ಪಾಟೀಲ ಎಂಟರ್‌ಪ್ರೈಸಸ್, ಬಾಲಾಜಿ ಕೃಷಿ ಕೇಂದ್ರ, ಮಸ್ಕಿಯ ಅಮರೇಶ್ವರ ಟ್ರೇಡರ್ಸ್‌, ಭಾಗ್ಯಲಕ್ಷ್ಮಿ ಟ್ರೇಡಿಂಗ್ ಕಂಪೆನಿ, ಮುದಗಲ್ಲಿನ ಬದರಿನಾಥ ಟ್ರೇಡರ್ಸ್‌, ಗಳಲ್ಲಿ ಕೂಡ ಕಳಪೆ ಗೊಬ್ಬರ ಮಾರಾಟ ಮಾಡಿರುವುದು ಪತ್ತೆಯಾಗಿದೆ. ಈ ಪೈಕಿ ಕೆಲವು ಕಂಪೆನಿಗಳು ಪ್ರಯೋಗಾಲಯದ ವರದಿಯನ್ನು ಪ್ರಶ್ನಿಸಿ ಮೇಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರಿಂದ ಪ್ರಕರಣ ದಾಖಲಿಸಿಲ್ಲ ಎಂದು ಕೃಷಿ ಇಲಾಖೆ ಸ್ಪಷ್ಟಪಡಿಸಿದೆ.

ಪ್ರಸಕ್ತ ಸಾಲಿನಲ್ಲು ಕೂಡ ಮುಗ್ದ ರೈತರನ್ನು ವಂಚಿಸಲು ಬಹುತೇಕ ಕಂಪೆನಿಗಳು ಕಳಪೆ ಬಿತ್ತನೆ ಬೀಜ, ರಸಗೊಬ್ಬರ ಮಾರಾಟ ಮಾಡುತ್ತಿರುವ ಆರೋಪಗಳು ಕೇಳಿಬಂದಿವೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಕೃಷಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ತಜ್ಞ ಅಧಿಕಾರಿಗಳ ನೇತೃತ್ವದಲ್ಲಿ ವ್ಯಾಪಕ ದಾಳಿ ನಡೆಸಿ, ಕಳಪೆ ಮಾರಾಟ ಜಾಲ ಪತ್ತೆ ಹಚ್ಚುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಮುಖಂಡ ಅಮರಣ್ಣ ಗುಡಿಹಾಳ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT